ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ: ಬದುಕು ತತ್ತರ

4ಕುಸಿದ ಮನೆ ಗೋಡೆಗಳು *ಒಡೆದ ಕೆರೆ ಏರಿ *ಶಾಲೆಗಳಿಗೆ ರಜೆ ಮುಂದುವರಿಕೆ
Last Updated 27 ಜುಲೈ 2013, 10:07 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರವೂ ಕೂಡ ಮಳೆ ಮುಂದುವರೆದಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಹಾಗೂ ಶಾಲಾ-ಕಾಲೇಜುಗಳಿಗೆ ಶನಿವಾರ ಕೂಡ ರಜೆ ಘೋಷಣೆ ಮಾಡಲಾಗಿದೆ.

ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವೀರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಬಾಳೆಲೆ, ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ, ಕುಶಾಲನಗರ, ಸುಂಟಿಕೊಪ್ಪ ಸೇರಿದಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದೆ.

ಮಡಿಕೇರಿಯಲ್ಲಿ ಸಾಧಾರಣ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ಆಗಾಗ ಕೊಂಚ ಬಿಡುವು ನೀಡಿತ್ತು. ಪುನಃ ಸಂಜೆಯ ವೇಳೆಗೆ ಮಳೆಯ ಆರ್ಭಟ ಹೆಚ್ಚಾಗಿತ್ತು.

ರಭಸವಾಗಿ ಮಳೆ ಸುರಿಯುವ ಜೊತೆಗೆ ಗಾಳಿಯ ರಭಸ ಕೂಡ ಹೆಚ್ಚಾಗ ತೊಡಗಿದೆ. ಇದೀಗ ಜನರಿಗೆ ಚಳಿಯ ಅನುಭವ ಹೆಚ್ಚಾಗಿದ್ದು, ಚಳಿಯಿಂದ ರಕ್ಷಣೆ ಪಡೆಯಲು ಸ್ವೆಟರ್ ಕೊಳ್ಳಲು ಜನರು ಮುಗಿ ಬಿದ್ದರು.

ಮಳೆ ಹಾನಿ: ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ರೈತಾಪಿ ವರ್ಗ ಸಂಕಷ್ಟ ಪಡುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ ಬಹುತೇಕ ಪ್ರದೇಶದಲ್ಲಿ ಕಾಫಿ, ಮೆಣಸು, ಬತ್ತ, ಜೋಳ ಸೇರಿದಂತೆ ಮತ್ತಿತರರ ಬೆಳೆಗಳಿಗೆ ಅಪಾರ ಹಾನಿ ಉಂಟಾಗಿದೆ.

ಇದರ ಜೊತೆಗೆ ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಮನೆಗಳು ಜಖಂಗೊಂಡು ಜನರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.
ಮಡಿಕೇರಿಯ ಮಂಗಳೂರು ರಸ್ತೆಯ ನಿವಾಸಿ ಪ್ರಶಾಂತ್, ತ್ಯಾಗರಾಜ ಕಾಲೋನಿಯ ದಿನೇಶ್, ಮಲ್ಲಿಕಾರ್ಜುನ ನಗರದ ದೇವರಾಜು, ಕನ್ನಂಡ ಬಾಣೆಯ ನಿವಾಸಿ ಕೆ. ಮನೋಹರ್ ಎಂಬುವವರ ಮನೆಗಳು ಮಳೆಯ ಆರ್ಭಟಕ್ಕೆ ಜಖಂಗೊಂಡಿವೆ.

ಮಡಿಕೇರಿ ಹೋಬಳಿ ಮಕ್ಕಂದೂರಿನ ಜಾನಕಮ್ಮ ಅವರ ಮನೆ ಮೇಲೆ ಮರ ಬಿದ್ದಿದೆ. ಹೊದವಾಡದ ಎ.ಡಿ. ದೇಚಮ್ಮ ಅವರ ಮನೆಗೋಡೆ ಕುಸಿದಿದೆ. ಇದೇ ಗ್ರಾಮದ ಎಂ.ಕೆ. ಉಸ್ಮಾನ್ ಅವರ ಮನೆ ಗೋಡೆ ಕುಸಿತಗೊಂಡು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ.

ಸೋಮವಾರಪೇಟೆ ತಾಲ್ಲೂಕಿನ ಪಡವನಹಳ್ಳಿಯ ಬಾಲಚಂದ್ರ ಅವರ ಮನೆ, ಹೆಡೆಹಳ್ಳಿಯ ವೇದಮೂರ್ತಿ ಅವರ ವಾಸದ ಮನೆ, ಚೌಡ್ಲು ಗ್ರಾಮದ ಎಚ್.ಜಿ. ವೀರಪ್ಪ ಅವರ ಮನೆ ಗೋಡೆ, ರೇಂಜರ್ ಬ್ಲಾಕ್‌ನ ನಿವಾಸಿ ದಿನೇಶ್ ಅವರ ಮನೆಯ ಗೋಡೆ ಕುಸಿದು ಮನೆ ಜಖಂಗೊಂಡು, ಸಾವಿರಾರು ರೂಪಾಯಿಗಳ ನಷ್ಟ ಉಂಟಾಗಿದೆ.

ಸೋಮವಾರಪೇಟೆ ಹೋಬಳಿಯ ಯಡೂರು ಗ್ರಾಮದ ಮೋಹಿದ್, ಕಲಗಂದೂರಿನ ಎಂ.ಕೆ. ರಾಮಕೃಷ್ಣ ಅವರ ಜಾಗದಲ್ಲಿ ಬರೆ ಕುಸಿತ ಉಂಟಾಗಿದೆ.

ಐಗೂರು ಗ್ರಾಮದ ಡಿ.ಕೆ. ಶಿವಪ್ಪ ಹಾಗೂ ಡಿ.ಕೆ. ಮೂಗಪ್ಪ ಇವರ ಕಾಫಿ ತೋಟದ ಪಕ್ಕದ ಕೆ.ಎಂ. ಪ್ರಸನ್ನ ಅವರ ಕೆರೆ ಒಡೆದು ಎರಡು ಎಕರೆಯಷ್ಟು ಕಾಫಿ ಬೆಳೆಗೆ ಹಾನಿ ಉಂಟಾಗಿದೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತೆ 24 ಗಂಟೆಯಲ್ಲಿ 52.43 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 22.38 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2112.87 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 848.49 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 67.2 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 43.28 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 46.8 ಮಿ.ಮೀ. ಮಳೆ ಸುರಿದಿದೆ.

ಮಡಿಕೇರಿ ಕಸಬಾ 61 ಮಿ.ಮೀ., ನಾಪೋಕ್ಲು 41.2 ಮಿ.ಮೀ., ಸಂಪಾಜೆ 50.8 ಮಿ.ಮೀ., ಭಾಗಮಂಡಲ 115.8 ಮಿ.ಮೀ., ವೀರಾಜಪೇಟೆ ಕಸಬಾ 49.4 ಮಿ.ಮೀ., ಹುದಿಕೇರಿ 58.6 ಮಿ.ಮೀ., ಶ್ರಿಮಂಗಲ 42.2 ಮಿ.ಮೀ., ಪೊನ್ನಂಪೇಟೆ 52 ಮಿ.ಮೀ., ಅಮ್ಮತ್ತಿ 27.5 ಮಿ.ಮೀ., ಬಾಳಲೆ 30 ಮಿ.ಮೀ., ಸೋಮವಾರಪೇಟೆ ಕಸಬಾ 48 ಮಿ.ಮೀ., ಶನಿವಾರಸಂತೆ 34.8 ಮಿ.ಮೀ., ಶಾಂತಳ್ಳಿ 116.2 ಮಿ.ಮೀ., ಕೊಡ್ಲಿಪೇಟೆ 53 ಮಿ.ಮೀ., ಕುಶಾಲನಗರ 6.8 ಮಿ.ಮೀ., ಸುಂಟಿಕೊಪ್ಪ 22 ಮಿ.ಮೀ. ಮಳೆಯಾಗಿದೆ.
 
ಹಾರಂಗಿ :ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2,854.99 ಅಡಿಗಳು, ಕಳೆದ ವರ್ಷ ಇದೇ ದಿನ 2,841.96 ಅಡಿ ನೀರಿತ್ತು.

ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 7.6 ಮಿ.ಮೀ. ಮಳೆ ಸುರಿದಿದೆ. ಜಲಾಶಯಕ್ಕೆ 10345 ಕ್ಯೂಸೆಕ್ ನೀರು ಒಳ ಹರಿದು ಬರುತ್ತಿದೆ. ಜಲಾಶಯದಿಂದ ನದಿಗೆ 9,200, ನಾಲೆಗೆ 700 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT