ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಭಾವ: ಆತಂಕದಲ್ಲಿ ರೈತ

Last Updated 14 ಜುಲೈ 2012, 10:05 IST
ಅಕ್ಷರ ಗಾತ್ರ

ಬೆಳಗಾವಿ: ಹಸಿರಿನಿಂದ ಕಂಗೊಳಿಸ ಬೇಕಿದ್ದ ಪ್ರದೇಶವು ಮಳೆಯ ಅಭಾವ ದಿಂದ ಬಟ್ಟ ಬಯಲಾಗಿದೆ. ದಾರಿ ಹೋಕರ ಕಣ್ಮನಗಳನ್ನು ಕೈ ಬೀಸಿ ಕರೆ ಯುತ್ತಿದ್ದ ಪೈರುಗಳು ಭೂಮಿಯಿಂದ ಮೇಲೆದ್ದಿಲ್ಲ. ಮಳೆಗಾಲದಲ್ಲೂ ಬರದ ಛಾಯೆ ಆವರಿಸಿಕೊಂಡಿದೆ.

ಬೆಳಗಾವಿ ಜಿಲ್ಲೆಯ ವಿಚಿತ್ರವೇ ಹೀಗಿರ ಬಹುದು. ಬಯಲು ಸೀಮೆ, ಮಲೆನಾಡಿ ನಿಂದ ಕೂಡಿರುವ ಈ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಬಯಲು ಸೀಮೆಯಷ್ಟೇ ಅಲ್ಲ, ಮಲೆನಾಡು ಸಹ ತತ್ತರಿಸಿದೆ. ಕೆರೆಯ ಅಂಗಳಗಳು ಬರಿದಾ ಗಿದ್ದು, ಮಳೆಯ ಅಭಾವದ ಬದುಕಿಗೆ ಕನ್ನಡಿ ಹಿಡಿದಿವೆ.

ಬೆಳಗಾವಿಯಿಂದ ಜಾಂಬೋಟಿ, ಹಂಗರಗಾ, ಖಾನಾಪುರ ಕಡೆಗೆ ಹೋಗುವ ದಾರಿ- ದಿಕ್ಕುಗಳಲ್ಲಿ ಭತ್ತದ ಪೈರುಗಳು ತೂಗಾಡಬೇಕಿದ್ದ ಕಾಲವಿದು. ಆದರೆ ಎಲ್ಲಿ ನೋಡಿದರೂ ಭೂಮಿ ಬಿಟ್ಟು ಪೈರುಗಳು ಮೇಲೆದ್ದಿಲ್ಲ. ರಾಗಿ ಬೆಳೆಯಂತೂ ಬತ್ತಿ ಬಾಡಿದೆ. ಮಳೆ ಯಿಲ್ಲದೆ ಬಿತ್ತಿದ ಬೀಜ ಮಣ್ಣು ಪಾಲಾ ಗುವ ಸ್ಥಿತಿಯಲ್ಲಿದ್ದು, ರೈತ ಸಮುದಾಯ ಆತಂಕಕ್ಕೀಡಾಗಿದೆ.

ಮಲೆನಾಡಿನಲ್ಲಿ ಇಂಥ ಪರಿಸ್ಥಿತಿ ಯಿದ್ದರೆ, ಬಯಲು ಸೀಮೆ ಪ್ರದೇಶವಾದ ಸವದತ್ತಿ, ರಾಮದುರ್ಗ, ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕಗಳಲ್ಲಿ ರೈತರ ಬದುಕು ದುರ್ಭರವಾಗಿದೆ. ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದ ಹಿಂದೆ ಮಳೆ ಸುರಿದಿದ್ದರಿಂದ ಹಿರಣ್ಯ ಕೇಶಿ, ದೂಧಗಂಗಾ, ಘಟಪ್ರಭಾ, ಕೃಷ್ಣಾ ನದಿಗೆ ನೀರು ಹರಿದು ಬಂದಿತ್ತು. ನದಿಗಳೆಲ್ಲವೂ ಮೈದುಂಬಿಕೊಂಡಿದ್ದವು. ಆದರೆ ಈಗ ಪಕ್ಕದ ರಾಜ್ಯದಲ್ಲೂ ಮಳೆ ಇಲ್ಲದ್ದರಿಂದ ನದಿ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾ ಗಿದೆ. ನೀರಾವರಿ ನಂಬಿರುವ ರೈತರು ಸಹ ಚಿಂತೆಯಲ್ಲಿ ಮುಳುಗುವಂತಾಗಿದೆ.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸರಾಸರಿ 166 ಮಿ.ಮೀ. (ವಾಡಿಕೆ- 116.5 ಮಿ.ಮೀ.) ಹಾಗೂ ಜುಲೈನಲ್ಲಿ 152.5 ಮಿ.ಮೀ. (ವಾಡಿಕೆ- 205.9 ಮಿ.ಮೀ.) ಮಳೆ ಸುರಿದಿತ್ತು. ಆದರೆ ಈ ವರ್ಷ ಜೂನ್‌ನಲ್ಲಿ 42.8 ಮಿ.ಮೀ. ಮತ್ತು ಜುಲೈನ ಇಂದಿನವರೆಗೆ ಕೇವಲ 30.4 ಮಿ.ಮೀ. ಮಳೆ ಸುರಿದಿದೆ.

`ಜಿಲ್ಲೆಯಲ್ಲಿ 6.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾ ಗಿತ್ತು. ಮಳೆಯಾಶ್ರಿತ ಪ್ರದೇಶದಲ್ಲಿ 1.01 ಹೆಕ್ಟೇರ್ ಪ್ರದೇಶದಲ್ಲಿ (ಶೇ. 31) ಮಾತ್ರ ಬಿತ್ತನೆ ಆಗಿದೆ. ನೀರಾವರಿ ಪ್ರದೇಶದಲ್ಲಿ 2.24 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಈ ಪೈಕಿ 2.12 ಹೆಕ್ಟೇರ್‌ನಲ್ಲಿ ಕಬ್ಬು ಬಿತ್ತನೆ ಮಾಡಲಾ ಗಿದೆ.  ಜಿಲ್ಲೆಯಲ್ಲಿ 65,000 ಹೆಕ್ಟೇರ್‌ನಲ್ಲಿ ಭತ್ತದ ಬಿತ್ತನೆ ಗುರಿ ಹೊಂದ ಲಾಗಿದ್ದು, ಸಧ್ಯ 49,000 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ~ ಎನ್ನುತ್ತಾರೆ ಕೃಷಿ ಅಧಿಕಾರಿ ಎಂ.ಎಸ್.ಪಟಗುಂದಿ.

`ಹಿಂದೆಂದೂ ಇಂಥ ಪರಿಸ್ಥಿತಿಯನ್ನು ಕಂಡಿರಲಿಲ್ಲ. ಇಂಥ ಸ್ಥಿತಿ ಬಂದೊದಗಿದ್ದಕ್ಕೆ ಯಾರನ್ನು ದೂಷಿಸಬೇಕು. ಮಳೆ ಇಲ್ಲದೇ ಬಿತ್ತಿದ ಭತ್ತ ಒಣಗುತ್ತಿದೆ. ರಾಗಿ ಬೆಳೆಯಂತೂ ಈಗಾಗಲೇ ಒಣಗಿದೆ. ದೇವರೇ ನಮ್ಮನ್ನು ಕಾಪಾಡಬೇಕು~ ಎನ್ನುತ್ತಾರೆ ಹಂಗರಗಾ ಗ್ರಾಮದ ರೈತ ಬಾಳು ಪಾಟೀಲ.

`ಕಳೆದ ವರ್ಷಕ್ಕಿಂತ ಮಳೆ ಈ ವರ್ಷ ಬಾಳ ಕಡಿಮೆ ಆಗೇತ್ರಿ. ಒಂದು ವಾರದಾಗ ಮಳಿ ಬರಲಿಲ್ಲ ಅಂದ್ರ ನಮ್ಮ ಬದುಕು ಮುರಾಬಟ್ಟಿ ಆಗ್ತೇತ್ರಿ. ಬೋರ್ ಹಾಗೂ ತೆರೆದ ಬಾವಿಯಿಂದ ಕುಡ್ಯಾಕ ನೀರ ತರ‌್ತೇವ್ರಿ~ ಎಂದು ಮಂಡೋಳಿ ಗ್ರಾಮದ ಮಾರುತಿ ಪಾಟೀಲ ಗೋಳಿಡುತ್ತಾರೆ.

`ಇಷ್ಟೊತ್ತಿಗೆ ಭತ್ತ ಬೆಳೆ ಎರಡು ಅಡಿ ಎತ್ತರಕ್ಕೆ ಬೆಳೆಯಬೇಕಿತ್ತು. ಆದರೆ ಭತ್ತದ ಬೆಳೆ ನಾಟಿ ಮಾಡಲು ಸಹ ಆಗುತ್ತಿಲ್ಲ~ ಎಂದು ಸಂತಿಬಸ್ತವಾಡ ಗ್ರಾಮದ ಯುವ ರೈತ ನಾಗೇಶ  ನಾಯ್ಕ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT