ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಭಾವ ಪಟ್ಟಿಗೆ 9 ಹೋಬಳಿ

Last Updated 4 ಅಕ್ಟೋಬರ್ 2011, 6:00 IST
ಅಕ್ಷರ ಗಾತ್ರ

ಚಾಮರಾಜನಗರ: ವಾರ್ಷಿಕ ಸರಾಸರಿಗಿಂತ ಅತಿಕಡಿಮೆ ಮಳೆಯಾಗಿರುವ ಜಿಲ್ಲೆಯ ನಾಲ್ಕು ತಾಲ್ಲೂಕಿನ 9 ಹೋಬಳಿಗಳಲ್ಲಿ ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇವಿನ ಕೊರತೆ ಇರುವ ಪ್ರದೇಶದಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಅಗತ್ಯ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಯ(ವಿಪತ್ತು ನಿರ್ವಹಣೆ) ಕಾರ್ಯದರ್ಶಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಹರವೆ, ಸಂತೇಮರ ಹಳ್ಳಿ, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ, ಹಂಗಳ, ಕಸಬಾ ಹೋಬಳಿ, ಕೊಳ್ಳೇಗಾಲ ತಾಲ್ಲೂಕಿನ ಹನೂರು, ರಾಮಾಪುರ ಹೋಬಳಿ, ಯಳಂದೂರು ತಾಲ್ಲೂಕಿನ ಅಗರ ಹಾಗೂ ಕಸಬಾ ಹೋಬಳಿಗಳಲ್ಲಿ ಮಳೆ ಕಡಿಮೆಯಾಗಿದೆ. ಲಭ್ಯವಿರುವ ಅನುದಾನ ಬಳಸಿಕೊಂಡು ತಕ್ಷಣವೇ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಕಾರ್ಯದರ್ಶಿ ತಿಳಿಸಿದ್ದಾರೆ.

4 ಹೋಬಳಿ ಸೇರ್ಪಡೆಗೆ ಪ್ರಸ್ತಾವ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವದಿಂದ ಬೆಳೆ ನಷ್ಟವಾಗಿರುವ ಬಗ್ಗೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ವರದಿ ಸಲ್ಲಿಸಿದ್ದಾರೆ. ಈಗಾಗಲೇ, ಗುರುತಿಸಿರುವ 9 ಹೋಬಳಿಗಳ ಜತೆಗೆ ಇನ್ನೂ 4 ಹೋಬಳಿ ಸೇರ್ಪಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಿದ್ದಾರೆ.

ಮಳೆ ಅಭಾವವಿದೆ ಎಂದು ಗುರುತಿಸಿರುವ ಜಿಲ್ಲೆಯ 9 ಹೋಬಳಿಗಳ ಪೈಕಿ ಯಳಂದೂರು ತಾಲ್ಲೂಕು ಕಸಬಾ ಹೋಬಳಿ ಮಳೆ ಅಭಾವದ ವ್ಯಾಪ್ತಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಕೈಬಿಡಬೇಕು. ಜತೆಗೆ, ವಾರ್ಷಿಕ ಸರಾಸರಿಗಿಂತ ಅತಿ ಕಡಿಮೆ ಮಳೆಯಿಂದ ಬೆಳೆ ನಷ್ಟ ಉಂಟಾಗಿರುವ ಚಾಮರಾಜನಗರ ತಾಲ್ಲೂಕಿನ ಕಸಬಾ, ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ, ಪಾಳ್ಯ ಹೋಬಳಿ(ಭಾಗಶಃ 9 ಗ್ರಾಮ) ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಹೋಬಳಿಯನ್ನು ಸಹ ಮಳೆ ಅಭಾವ ಪ್ರದೇಶದ ವ್ಯಾಪ್ತಿಯ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ತಹಶೀಲ್ದಾರ್‌ಗಳಿಗೆ ಸೂಚನೆ: ಮಳೆ ಅಭಾವ ಪ್ರದೇಶವೆಂದು ಗುರುತಿಸಿರುವ ಹೋಬಳಿಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ಆಯಾ ತಾಲ್ಲೂಕು ಕಾರ್ಯಪಡೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ತೋಟಗಾರಿಕೆ, ಕೃಷಿ, ಪಶು ಸಂಗೋಪನೆ, ರೇಷ್ಮೆ ಸೇರಿದಂತೆ ಇತರೇ ಇಲಾಖೆಗಳಿಗೆ ತಕ್ಷಣವೇ ಕ್ರಮತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ. ಅ. 10ರೊಳಗೆ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಾರ್ಯಪಡೆ ಸಭೆ ಕರೆಯಬೇಕು. ಮಳೆ ಅಭಾವ ಪರಿಹಾರ ಕಾಮಗಾರಿಗಳ ಸಂಬಂಧ ವರದಿ ಮಾಡಬೇಕು. ಸಿಆರ್‌ಎಫ್ ಮಾರ್ಗಸೂಚಿ ಅನ್ವಯ ಮಳೆ, ಬೆಳೆ, ಕುಡಿಯುವ ನೀರು, ಮೇವು ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಬೇಕು ಎಂದು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT