ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ; ಅಲ್ಪಾವಧಿ ಬೆಳೆಗೆ ಸೂಚನೆ

Last Updated 12 ಜುಲೈ 2012, 4:30 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಸಕ್ತ ಜೂನ್-ಜುಲೈ ಬಿತ್ತನೆ ಸಂದರ್ಭದಲ್ಲಿ ಶೇಕಡ 62ರಷ್ಟು ಮಳೆ ಕೊರತೆ ಇರುವುದರಿಂದ ಅಲ್ಪಾವಧಿ ಬೆಳೆ ಬೆಳೆಯಲು ರೈತರಿಗೆ ಮಾಹಿತಿ ನೀಡುವಂತೆ ಕೃಷಿ ಇಲಾಖೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಸೂಚಿಸಿದರು.

 ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಯ ಕೊರತೆ ಸಂದರ್ಭದಲ್ಲಿ ಸಾಂಪ್ರದಾಯಿಕ ತಳಿಗಳಿಗಿಂತಲೂ ಮಧ್ಯಮ ಅವಧಿ ಮತ್ತು ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಪ್ರಯೋಜನ ಆಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಂದ ರೈತರಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.

 ಮಳೆ ಕೊರತೆಯಿಂದ ಕೈಗೊಂಡ ಪರ್ಯಾಯ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಮೂರ್ತಪ್ಪ, ಜಿಲ್ಲೆಯಲ್ಲಿ ಶೇಕಡ 62ರಷ್ಟು ಮಳೆ ಕೊರತೆ ಇದ್ದು, ರೈತರು ಪರ್ಯಾಯ ಬೆಳೆಗಳನ್ನು ಬೆಳೆಯಲು ಎಲ್ಲ ಅಗತ್ಯಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಜಿಲ್ಲೆಯ ಆನವಟ್ಟಿ, ಜಡೆ ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆ ಆಗಿದ್ದು, ಶಿಕಾರಿಪುರ ಸೇರಿದಂತೆ ಇನ್ನೂ ಕೆಲವು ಭಾಗಗಳಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿದೆ ಎಂದರು.


ನ್ಯಾಯಬೆಲೆ ಅಂಗಡಿಗಳಲ್ಲಿ ಪದಾರ್ಥಗಳ ಅಕ್ರಮ ಮಾರಾಟ ಹಾಗೂ ಚಿಲ್ಲರೆ ಸೀಮೆಎಣ್ಣೆ ಮಾರಾಟ ಸಂಬಂಧ ತಪ್ಪಿತಸ್ಥರಿಗೆ ದಂಡ ವಿಧಿಸಲಾಗಿದೆ. ಅಲ್ಲದೇ, 16 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಮಂಜುನಾಥ ಮಾರ್ಪಳ್ಳಿ ತಿಳಿಸಿದರು.

ಅಕ್ರಮಗಳು ನಡೆಯದಂತೆ ಆಯಾ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪದೇಪದೇ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಶಾಶ್ವತ ಪಡಿತರ ಚೀಟಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮೊಳಕೆ ಬಂದಿಲ್ಲ
ಹೊಸನಗರ ನಿಟ್ಟೂರು ಗ್ರಾಮ ಪಂಚಾಯ್ತಿಗೆ ಪಶುಸಂಗೋಪನೆ ಇಲಾಖೆ ಜಾನುವಾರುಗಳ ಮೇವಿಗಾಗಿ ಪೂರೈಸಿದ ಹುಲ್ಲಿನ ಬೀಜ ಮೊಳಕೆ ಬಂದಿಲ್ಲ ಎಂದು ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಉಪ ನಿರ್ದೇಶಕ ಡಾ.ಬಸವರಾಜ್ ಅವರ ಗಮನಕ್ಕೆ ತಂದರು.

ಸಮರ್ಥನೆ 
`ಶಿಮುಲ್~ ಹಾಲಿನ ಖರೀದಿ ದರ ಕಡಿತಗೊಳಿಸಿರುವುದಕ್ಕೆ ಅಧಿಕಾರಿಗಳನ್ನು ಉಪಾಧ್ಯಕ್ಷ ಎಚ್. ಗಂಗಾಧರಪ್ಪ ಸ್ಪಷ್ಟನೆ ಕೇಳಿದರು. ಪ್ರತಿದಿನ ಅಂದಾಜು 1.25 ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಹಾಲಿನಪುಡಿಗೆ ಕಳುಹಿಸುತ್ತಿರುವುದರಿಂದ ಪ್ರತಿ ದಿನ ಅಂದಾಜು ್ಙ 6.48 ಲಕ್ಷ ನಷ್ಟ ಸರಿದೂಗಿಸಲು `ಶಿಮುಲ್~ ಈ ಕ್ರಮಕ್ಕೆ ಮುಂದಾಗಿದೆ. ಪ್ರತಿ ವರ್ಷದ ಸುಗ್ಗಿಯಲ್ಲಿ ಈ ಕ್ರಮ ಅನಿವಾರ್ಯ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು.

`ಸಕಾಲಕ್ಕೆ ಪಾವತಿಸಿ~
ಅಂಗನವಾಡಿಗೆ ಆಹಾರ ಪೂರೈಸುವ ಮಹಿಳಾ ಸಂಘಗಳಿಗೆ ಸಕಾಲಕ್ಕೆ ಹಣ ಪಾವತಿಸುತ್ತಿಲ್ಲ ಎಂಬ ದೂರುಗಳಿವೆ. ಅವರಿಗೆ ಕಾಲ-ಕಾಲಕ್ಕೆ ಹಣ ಪಾವತಿಸಬೇಕು. ಇಲ್ಲದಿದ್ದರೆ ಪೂರೈಕೆಗೆ ತೊಂದರೆಯಾಗುತ್ತದೆ ಎಂದು ಸಿಇಒ ಡಾ.ಸಂಜಯ್ ಬಿಜ್ಜೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಲಕ್ಷ್ಮೀಕಾಂತಮ್ಮ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ್‌ಕುಮಾರ್ ಉಪಸ್ಥಿತರಿದ್ದರು.
 

ಶಾಲೆಗಳಲ್ಲಿ ಕಳವು!

ಶಿವಮೊಗ್ಗ: ಜಿಲ್ಲೆಯಲ್ಲಿ 2003ರಿಂದ ಇಲ್ಲಿಯವರೆಗೆ ಅಕ್ಷರ ದಾಸೋಹ ಯೋಜನೆಯಡಿ ಶಾಲೆಗಳಲ್ಲಿ ಒದಗಿಸಿದ ಆಹಾರ ಪದಾರ್ಥ ಸೇರಿದಂತೆ ಸಲಕರಣೆಗಳ ಕಳವು ಪ್ರಕರಣ ಒಟ್ಟು 86. ಇದರಲ್ಲಿ 40 ಪೊಲೀಸ್ ಪ್ರಕರಣಗಳಾಗಿವೆ. ಅಕ್ಕಿ, ಬೇಳೆ, ಸಿಲಿಂಡರ್‌ಗಳ ಕಳ್ಳತನವಾಗಿದೆ. ಅಲ್ಪಪ್ರಮಾಣದ ವಸ್ತುಗಳು ಕಳ್ಳತನವಾದಾಗ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸುತ್ತಾರೆ ಎಂದು ಸಭೆಗೆ ಅಕ್ಷರ ದಾಸೋಹ ಯೋಜನೆ ಅಧಿಕಾರಿ ತಿಳಿಸಿದರು.

ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದರೆ ತಮ್ಮ ಗಮನಕ್ಕೆ ತರಬೇಕು ಎಂದು ಇದೇ ಸಂದರ್ಭದಲ್ಲಿ ಸಿಇಒ ಸೂಚನೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT