ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಜನ-ಜಾನುವಾರು ತತ್ತರ

Last Updated 6 ಜುಲೈ 2012, 9:15 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬರಗಾಲ ತಲೆದೋರಿದ್ದು, ಜನ- ಜಾನುವಾರು ತತ್ತರಿಸಿವೆ. ಕುಡಿಯುವ ನೀರು, ಮೇವಿಗೆ ತೊಂದರೆಯಾಗಿದೆ. ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿಯವರೆಗೂ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿಲ್ಲ. ಅಂತರ್ಜಲ ಕುಸಿತದ ಪರಿಣಾಮ ಹನೂರು, ಬಂಡಳ್ಳಿ, ಶಾಗ್ಯ, ಇಕ್ಕಡಹಳ್ಳಿ, ಮಾರ್ಟಳ್ಳಿ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ನಿತ್ಯವೂ ಕುಡಿಯುವ ನೀರು ಸಂಗ್ರಹಿಸುವುದು ತ್ರಾಸದಾಯಕವಾಗಿದೆ. ಪ್ರಾರಂಭದಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿಯಿತು. ಇದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿತು. ಈಗ ಮಳೆರಾಯನ ಮುನಿಸಿನಿಂದ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 5,361 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮಳೆ ಇಲ್ಲದೆ ಸಂಪೂರ್ಣವಾಗಿ ಬೆಳೆ ಒಣಗಿ ಹೋಗಿದ್ದು, ಸುಮಾರು 1.27 ಕೋಟಿ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಿತ್ಯವೂ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತದೆ. ಮಳೆ ಬರುವ ನಿರೀಕ್ಷೆಯಲ್ಲಿ ರೈತರು ಮುಗಿಲು ನೋಡುತ್ತಾರೆ. ಆದರೆ, ಆಷಾಢದ ಗಾಳಿಯ ರಭಸಕ್ಕೆ ರೈತರ ಲೆಕ್ಕಾಚಾರವೂ ತಲೆಕೆಳಗಾಗುತ್ತಿದೆ.

ಕೃಷಿ ಇಲಾಖೆಯಿಂದ ಪೂರ್ವ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಡಿ ಬಿತ್ತನೆಬೀಜ ವಿತರಿಸಲಾಗಿತ್ತು. ಮುಗಿಬಿದ್ದು ಬಿತ್ತನೆಬೀಜ ಖರೀದಿಸಿದ್ದ ರೈತರು ಬಿತ್ತನೆ ಕೂಡ ಮಾಡಿದ್ದರು. ಈಗ ಬಿತ್ತನೆಯ ವೆಚ್ಚವೂ ಇಲ್ಲದೆ ಅನ್ನದಾತರು ದಿಕ್ಕೆಟ್ಟಿದ್ದಾರೆ.

`ಮುಂಗಾರು ಹಂಗಾಮಿನಲ್ಲಿ ಮಳೆ ಬಿದ್ದಿಲ್ಲ. ಹೀಗಾಗಿ, ಪೂರ್ವ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಎಲ್ಲ ಬೆಳೆಗಳು ಒಣಗಿ ಹೋಗಿವೆ.

 ಜುಲೈ, ಆಗಸ್ಟ್ ತಿಂಗಳಿನಲ್ಲಿ ಮಳೆ ಬಂದರಷ್ಟೇ ರಾಗಿ, ಮುಸುಕಿನಜೋಳ ಬಿತ್ತನೆ ಮಾಡಬಹುದು. ಆಗ ಜಾನುವಾರುಗಳಿಗೂ ಸ್ವಲ್ಪ ಮೇವು ಸಿಗುತ್ತದೆ. ಆದರೆ, ಮಳೆ ಬೀಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕಳೆದ ವರ್ಷ ಕಾಣಿಸಿಕೊಂಡ ಬರಗಾಲದ ಪರಿಣಾಮ ಇಂದಿಗೂ ಸುಧಾರಿಸಿಕೊಳ್ಳಲು ಆಗುತ್ತಿಲ್ಲ.

ಈಗ ಮಳೆಯೂ ಬೀಳದಿದ್ದರೆ ಉದ್ಯೋಗ ಹುಡುಕಿಕೊಂಡು ಗುಳೆ ಹೋಗುವುದೊಂದೇ ಬಾಕಿ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕನಿಷ್ಠ ಜಾನುವಾರುಗಳಿಗೆ ಮೇವು ಪೂರೈಸಲು ಮುಂದಾಗಿಲ್ಲ~ ಎಂದು ದೂರುತ್ತಾರೆ ರೈತ ಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT