ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಬತ್ತದ ಅನ್ನದಾತನ ಉತ್ಸಾಹ

Last Updated 14 ಜುಲೈ 2012, 8:30 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ವರ್ಷ ಮಳೆ ಇಲ್ಲದೇ ಬರದ ಛಾಯೆಯಲ್ಲಿ ನಲುಗಿದ ರೈತರಿಗೆ, ಈ ಬಾರಿಯೂ ವರುಣನ ಅವಕೃಪೆ ಎದುರಾಗಿದೆ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಹೆಸರು ಬಿತ್ತನೆಯ ಕಾರ್ಯ ಕುಂಠಿತಗೊಂಡಿದ್ದು, ಕೆಲವೆಡೆ ರೈತರು ಮಳೆಯನ್ನೇ ನಂಬಿ ಬಿತ್ತನೆಯನ್ನೂ ಮಾಡಿದ್ದಾರೆ.

ಈ ಬಾರಿ ಮುಂಗಾರು ಮಳೆ 15-20 ದಿನಗಳ ನಂತರ ಪ್ರವೇಶಿಸಿದ್ದು, ನಿರೀಕ್ಷೆಯಂತೆ ಧಾರಾಕಾರ ಮಳೆ ಸುರಿದೇ ಇಲ್ಲ. ಅಲ್ಪ ಮಳೆಯಾಗಿದ್ದರೂ, ರೈತರು ಹೆಸರು, ತೊಗರಿ, ಹತ್ತಿ ಬೀಜಗಳ ಬಿತ್ತನೆ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ರೈತರಲ್ಲಿ ಸ್ವಲ್ಪ ಆಸೆ ಚಿಗುರಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ. ಶಹಾಪುರ ತಾಲ್ಲೂಕಿನ ಗ್ರಾಮಗಳಾದ ಖಾನಾಪುರ, ಕುರುಕುಂದಾ, ತೇಕರಾಳ, ನಾಯ್ಕಲ್, ಗುರುಸುಣಿಗಿ, ತಡಿಬಿಡಿ, ಗುಂಡಳ್ಳಿ, ದೋರನಳ್ಳಿ ಮುಂತಾದ ಗ್ರಾಮಗಳಲ್ಲಿ ರೈತರು ಕುಟುಂಬ ಸಮೇತ ಹೊಲಗಳಲ್ಲಿ ಎಡೆ ಹೊಡೆಯುವ ದೃಶ್ಯ ಕಾಣುತ್ತದೆ.
“ಏನೋ ಮಾಡುದ್ರೀ, ಇರುವ ಎರಡು ಎಕರೆಯಲ್ಲಿ ಹೆಸರು ಬಿತ್ತನೆ ಮಾಡೀವ್ರೀ. ಮಳೆರಾಯ ಕೈಹಿಡದಾನು ಅಂತ ಆಸೆದ ಮ್ಯಾಲ ದೇವರ ಮ್ಯಾಲ ಭಾರ ಹಾಕೀವ್ರಿ. ಬೀಜಾನೂ ಮ್ಯಾಕ ಎದ್ದಾವ.

ಈಗ ಎಡೆ ಹೊಡಿಲಾಕತ್ತೇವಿ. 45 ದಿನದಾಗ ಹೆಸರ ಕೈಗೆ ಬರತೈತಿ. ಮುಂದಿನ ಹಂಗಾಮಿಗೆ ಖರ್ಚ ಆಕ್ಕೇತಿ. ಆದರ ಈ ಸಲಾ ಮಳಿನೂ ಕಡಿಮಿ ಆಗೇತಿ. ಹೆಸರಿಗೆ ಈ ಸಲ ಸೆಗಣಿ ಹುಳುದ್ದ ಕಾಟ ಹೆಚ್ಚಾಗೇತಿ” ಎಂದು ಗುರಸುಣಿಗಿ ಬಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ರೈತ ಶರಣಪ್ಪ ದೊಡ್ಮನಿ ಹೇಳುತ್ತಾರೆ.

ಮೃಗಶಿರಾ ಮಳೆ ಆರಂಭವಾಗುತ್ತಿದ್ದಂತೆಯೇ ಹೆಸರು ಬಿತ್ತನೆಯ ಕಾರ್ಯವೂ ಆರಂಭವಾಗುವುದು ವಾಡಿಕೆ. ಅದರಂತೆ ಈ ಬಾರಿಯೂ ರೈತರು ಮೇ ಕೊನೆಯ ವಾರದಲ್ಲಿಯೇ ಹೊಲವನ್ನು ಸ್ವಚ್ಛ ಮಾಡಿಟ್ಟುಕೊಂಡು, ಬಿತ್ತನೆಗೆ ಸಜ್ಜಾಗಿದ್ದರು. ಈಗಾಗಲೇ ಜುಲೈ ಆರಂಭವಾಗಿದ್ದು, ಹೆಸರು ಬಿತ್ತನೆಯ ಹಂಗಾಮು ಮುಗಿದಂತಾಗಿದೆ.

ಬೆಲೆ ಹೆಚ್ಚುವ ಸಾಧ್ಯತೆ: ಬಿತ್ತನೆ ಪ್ರಮಾಣದಲ್ಲಿ ಕುಂಠಿತ ಆಗಿರುವುದರಿಂದ ಇಳುವರಿಯ ಪ್ರಮಾಣದ ಕಡಿಮೆ ಆಗಲಿದೆ. ಇದರಿಂದಾಗಿ ಬೇಡಿಕೆ ಹೆಚ್ಚಾಗಲಿದ್ದು, ಸಹಜವಾಗಿ ಹೆಸರಿನ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಕಳೆದ ವರ್ಷ ಹೆಸರಿನ ಇಳುವರಿಯೂ ಚೆನ್ನಾಗಿತ್ತು. ಸಾಕಷ್ಟು ಪ್ರಮಾಣದಲ್ಲಿ ಹೆಸರು ಕಾಳು ಇಲ್ಲಿನ ಎಪಿಎಂಸಿಯಲ್ಲಿ ಮಾರಾಟವಾಗಿತ್ತು. 2010-11 ರಲ್ಲಿ ಪ್ರತಿ ಕ್ವಿಂಟಲ್‌ಗೆ ಹೆಸರಿಗೆ ರೂ.2,829 ದಿಂದ ರೂ. 4182 ಬೆಲೆ ಸಿಕ್ಕಿತ್ತು. ಈ ವರ್ಷ ಕೊಳವೆಬಾವಿಯಿಂದ ನೀರಾವರಿ ಸೌಲಭ್ಯ ಪಡೆದಿರುವ ರೈತರು ಈಗಾಗಲೇ ಹೆಸರು ಬಿತ್ತನೆ ಮಾಡಿದ್ದು, ಹೆಚ್ಚಿನ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಒಂದು ತಿಂಗಳಿಂದ ಹೆಸರು ಬಿತ್ತನೆ ಮಾಡಲು ಕಾಯುತ್ತ ಕುಳಿತಿದ್ದ ರೈತರು ಇದೀಗ, ತೊಗರಿ, ಸೂರ್ಯಪಾನ, ಸಜ್ಜೆ ಮುಂತಾದ ಬೀಜಗಳ ಬಿತ್ತನೆಗೆ ಚಿಂತನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT