ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಬತ್ತಿದ ಬೆಳೆ

Last Updated 15 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಮುಂಗಾರು ಬಿತ್ತನೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಬಿತ್ತನೆ ಆಗಿರುವ ಪ್ರದೇಶದ ಬೆಳೆಗಳು ಒಣಗುತ್ತಿವೆ. ತಡವಾಗಿ ಬಿತ್ತನೆ ಮಾಡಲಾಗಿರುವ ರಾಗಿ ಮೊಳಕೆ ಬರದೆ ಬಯಲಾಗಿ ಉಳಿದುಕೊಂಡಿದೆ.

ತಾಲ್ಲೂಕಿನಲ್ಲಿ ಈ  ಬಾರಿ ಮಳೆ ಆಧಾರಿತ ಕೃಷಿ ಮಳೆಯ ಏರುಪೇರಿ ನಿಂದ ತಾಳ ತಪ್ಪಿದೆ. ಕಸಬಾ, ಯಲ್ದೂರು, ರೋಣೂರು, ನೆಲವಂಕಿ, ರಾಯಲ್ಪಾಡ್ ಹೋಬಳಿಗಳಲ್ಲಿ ನೀರಾವರಿ ಮತ್ತು ಮಳೆ ಆಶ್ರಯ ಸೇರಿದಂತೆ ಒಟ್ಟಾರೆ ಶೇ. 79 ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆ ಪೈಕಿ ರಾಯಲ್ಪಾಡ್ ಮತ್ತು ನೆಲವಂಕಿ ಹೋಬಳಿಗಳಲ್ಲಿ ನೆಲಗಡಲೆ ಮತ್ತು ತೊಗರಿಯನ್ನು ಹೆಚ್ಚಾಗಿ ಬೆಳೆಯಲಾಗಿದ್ದು, ಬೆಳೆ ಬೀಜ ಕಟ್ಟುವ ಹಂತದಲ್ಲಿದೆ.

ಕಸಬಾ, ಯಲ್ದೂರು ಮತ್ತು ರೋಣೂರು ಹೋಬಳಿಗಳಲ್ಲಿ ಹೆಚ್ಚಾಗಿ ರಾಗಿ ಬೆಳೆಯಲಾಗಿದೆ. ಅವರೆ ಮತ್ತು ತೊಗರಿಯನ್ನು ಅಕ್ಕಡಿ ಬೆಳೆಯಾಗಿ ಬೆಳೆಯಲಾಗಿದೆ. ತಾಲ್ಲೂಕಿನ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಉತ್ತರ ಭಾಗದಲ್ಲಿ ಬೆಳೆ ಪರಿಸ್ಥಿತಿ ತೃಪ್ತಿಕರ.
 
ಹೆಚ್ಚಿನ ವಿಸ್ತೀರ್ಣದಲ್ಲಿ ಮಾವು ಬೆಳೆಯುವ ದಕ್ಷಿಣ ಭಾಗದಲ್ಲಿ ಮೊದಲ ಮಳೆಗೆ ಉಳುಮೆ ಸಾಧ್ಯವಾಗದ ಪರಿಣಾಮ ರಾಗಿ ಬಿತ್ತನೆ ತಡವಾಗಿದೆ. ಮಾವಿನ ಸುಗ್ಗಿ ಮುಗಿದ ಮೇಲೆ ಸಕಾಲಕ್ಕೆ ಮಳೆ ಆಗಲಿಲ್ಲ. ತಡವಾಗಿ ಸುರಿದ ಅಲ್ಪ ಮಳೆಗೆ ಬಿತ್ತಲಾದ ರಾಗಿ ಕೆಲವು ಕಡೆ ಮೊಳಕೆ ಬಂದರೆ ಇನ್ನು ಕೆಲವು ಕಡೆ ತೇವಾಂಶದ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಮೊಳಕೆ ಬರಲಿಲ್ಲ.

ಈ ಬಾರಿ ಮಳೆ ವ್ಯಾಪಕವಾಗಿ ಸುರಿಯಲಿಲ್ಲ. ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಸುರಿದ ಪರಿಣಾಮ ಬೆಳೆಯೂ ವಿವಿಧ ಹಂತಗಳಲ್ಲಿದೆ. ಅಂತರ ಬೇಸಾಯ ನಡೆಯುತ್ತಿದೆ. ಬೆಳೆಗಳು ಅಲ್ಲಲ್ಲಿ ಬಾಡುತ್ತಿದ್ದರೂ, ಇನ್ನು ಒಂದು ವಾರದಲ್ಲಿ ಮಳೆಯಾದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ತಾಲ್ಲೂಕು ಕೃಷಿ ಅಧಿಕಾರಿ ರವಿ `ಪ್ರಜಾವಾಣಿ~ಗೆ ತಿಳಿಸಿದರು.

ಇನ್ನು ಕೆರೆಗಳಿಗೆ ನೀರು ಬಾರದ ಪರಿಣಾಮ ಗದ್ದೆ ಬಯಲಿನ ಬೇಸಾಯ ಪೂರ್ಣ ಪ್ರಮಾಣದಲ್ಲಿ ಸ್ಥಗಿತ ಗೊಂಡಿದೆ. ಕೆಲವು ಕಡೆಗಳಲ್ಲಿ ಕೊಳವೆ ಬಾವಿಗಳ ಆಶ್ರಯದಲ್ಲಿ ಭತ್ತದ ಪೈರನ್ನು ನಾಟಿ ಮಾಡಲಾಗಿದೆ. ಜಾನುವಾರು ಮೇವಿಗಾಗಿ ಬಿತ್ತಲಾಗಿರುವ ಗೋವಿನ ಜೋಳ ಮತ್ತಿತರ ಬೆಳೆಗಳೂ ಒಣಗುತ್ತಿವೆ. ಮಳೆ ಮತ್ತಷ್ಟು ತಡವಾದರೆ ಗತಿಯೇನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT