ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಸಾವಿರಾರು ಎಕರೆ ಬೆಳೆ ನಾಶ

ಮಲಪ್ರಭಾ ಬಲದಂಡೆ ಕಾಲುವೆ ಒಡೆದಿದ್ದೂ ಕಾರಣ
Last Updated 27 ಡಿಸೆಂಬರ್ 2012, 9:20 IST
ಅಕ್ಷರ ಗಾತ್ರ

ಧಾರವಾಡ: ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಅಲ್ಪ ಸ್ವಲ್ಪ ಹಿಂಗಾರಿ ಬೆಳೆದಿದ್ದ ರೈತರೂ ಇದೀಗ ಬೆಳೆಯನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ತಾಲ್ಲೂಕಿನ ಸಾವಿರಾರು ಎಕರೆ ಜಮೀನಿನಲ್ಲಿ ಬಿತ್ತಲಾದ ಕಡಲೆ, ಜೋಳ, ಗೋದಿ, ಹತ್ತಿ, ಉಳ್ಳಾಗಡ್ಡಿ ಬೆಳೆಗಳು ಒಣಗಲು ಆರಂಭಿಸಿವೆ.

ಜಿಲ್ಲೆಯ ಹಿಂಗಾರಿ ಬಿತ್ತನೆಯ ಇತಿಹಾಸದಲ್ಲೇ ಜಿಲ್ಲೆಯಲ್ಲಿ ಈ ಬಾರಿ ಶೇ 91.1ರಷ್ಟು ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆಯ ಅಂಕಿ-ಅಂಶಗಳು ಹೇಳುತ್ತವೆ. ಬಿತ್ತನೆ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಸಂಭ್ರಮಪಟ್ಟಿದ್ದಷ್ಟೇ ಬಂತು. ಕರಿ ಮಣ್ಣಿನಲ್ಲಿ ಬಿತ್ತಲಾದ ಬೆಳೆ ಒಣಗಿ ನಾಶವಾಗುವ ಹಂತ ತಲುಪಿದೆ.

ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ, ಶಿರೂರ, ಆಯಟ್ಟಿ, ಕಬ್ಬೇನೂರ, ಕಲ್ಲೆ, ಉಪ್ಪಿನ ಬೆಟಗೇರಿ, ಯಾದವಾಡ, ಪುಡಕಲಕಟ್ಟಿ, ನರೇಂದ್ರ, ಗರಗ ಸುತ್ತಮುತ್ತಲಿನ ಜಮೀನುಗಳಲ್ಲಿ ಸಂಕ್ರಾಂತಿ ವೇಳೆಗೆ ಹಸಿರಿನಿಂದ ಕಂಗೊಳಿಸಬೇಕಿದ್ದ ಭೂರಮೆ ಈಗಲೇ ಭಣಗುಡುತ್ತಿದೆ. ಎರಡು ತಿಂಗಳ ಹಿಂದೆ ಬೀಸಿದ ಚಂಡಮಾರುತದಿಂದ ಬಿದ್ದ ಮಳೆಯನ್ನೇ ನಂಬಿಕೊಂಡು ಜಿಲ್ಲೆಯ ರೈತರು ಬಿತ್ತನೆಯನ್ನು ಕೈಗೊಂಡಿದ್ದರು. ಆದರೆ ಈ ಬಾರಿ ಚಳಿ ಗಾಳಿಯೂ ಬೀಸದಿರುವುದರಿಂದ ತಂಪಿನ ಆಧಾರದಲ್ಲೇ ಜೀವ ಹಿಡಿಯಬೇಕಿದ್ದ ಕಡಲೆಯಂತಹ ಬೆಳೆಯೂ ಒಣಗಿ ಹೋಗಿದೆ. ಇದರಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದ್ದು, ಹೊಟ್ಟೆಗೆ ತಿನ್ನಲು ದವಸ ಧಾನ್ಯಗಳಿಲ್ಲದೇ ಮತ್ತೊಂದು ಭೀಕರ ಬರಗಾಲಕ್ಕೆ ತುತ್ತಾಗುತ್ತೇವೆ ಎಂಬ ಭೀತಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಬಿತ್ತನೆಗೆ ಯೋಗ್ಯವಾದ 2,48,200 ಹೆಕ್ಟೇರ್ ಪ್ರದೇಶದ ಪೈಕಿ ಈ ಬಾರಿ 2,35,835 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರಿ ಬಿತ್ತನೆ ಆಗಿತ್ತು. ಕೇವಲ ತೇವಾಂಶದ ಆಧಾರದಲ್ಲಿಯೇ ಬೆಳೆಯುತ್ತದೆ ಎಂಬ ನಂಬಿಕೆಯಿಂದ ತಾಲ್ಲೂಕಿನ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆಯನ್ನು ಬಿತ್ತಲಾಗಿತ್ತು. ಆದರೆ ಸವದತ್ತಿಯತ್ತ ತೆರಳುವ ಹಾದಿಯಂಚಿನಲ್ಲಿ ಕಾಣುವ ಜಮೀನುಗಳಲ್ಲಿ ಒಣಗಿ ನಿಂತ ಕಡಲೆ ಕಾಣಿಸುತ್ತದೆ.

ಮೊದಲೇ ಮಳೆಯಿಲ್ಲದೇ ಕಂಗೆಟ್ಟಿದ್ದ ಜಿಲ್ಲೆಯ ನವಲಗುಂದ, ಗದಗ ಜಿಲ್ಲೆಯ ಗದಗ, ನರಗುಂದ, ರೋಣ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿ ಬೆಳೆಗಳು ಒಣಗುತ್ತಿವೆ. ಏಕೆಂದರೆ, ಕಳೆದ 19ರಂದು ನವಲಗುಂದ ತಾಲ್ಲೂಕಿನ ಆಯಟ್ಟಿ ಗ್ರಾಮದ ಬಳಿಯ ಮಲಪ್ರಭಾ ಬಲದಂಡೆಯ 24ನೇ ಕಿ.ಮೀ. ಬಳಿ ಕಾಲುವೆ ಒಡೆದ ಪರಿಣಾಮ ನೀರು ಪೂರೈಕೆ ಸ್ಥಗಿತಗೊಂಡಿದೆ. ಪ್ರತಿ ದಿನ ಹರಿಯುತ್ತಿದ್ದ 1200 ಕ್ಯುಸೆಕ್ ನೀರು ಒಂದು ವಾರದಿಂದ ನಿಂತು ಹೋಗಿದೆ. ತಾತ್ಕಾಲಿಕವಾಗಿ ರಿಪೇರಿ ಮಾಡಲಾಗುತ್ತಿದೆ. ಅದರ ಬಳಿಕವೂ ಕೇವಲ 400 ಕ್ಯುಸೆಕ್ ನೀರನ್ನು ಬಿಡಲು ಮಾತ್ರ ಸಾಧ್ಯವಾಗಲಿದ್ದು, ಇದು ಈ ತಾಲ್ಲೂಕುಗಳ ಜನರಿಗೆ ಕುಡಿಯುವ ನೀರಿಗಷ್ಟೇ ಸಾಕಾಗಬಹುದೇ ಹೊರತು ನೀರಾವರಿಗಲ್ಲ' ಎಂದು ಮಲಪ್ರಭಾ ನೀರಾವರಿ ಯೋಜನಾ ವಲಯದ ಮುಖ್ಯ ಎಂಜಿನಿಯರ್ ಶರಣಪ್ಪ ಸುಲಗಂಟೆ `ಪ್ರಜಾವಾಣಿ'ಗೆ ತಿಳಿಸಿದರು.

`ಮೊದಲೇ ಮಳೆ ಇಲ್ಲದೇ ಕಂಗೆಟ್ಟೀವಿ. ಮಲಪ್ರಭಾ ಕ್ಯಾನಲ್ ಒಡದ ಮ್ಯಾಲ ಹೊಲಗಳಿಗೆ ಹಾಯಿಸಲು ನೀರೂ ಸಿಗುವುದಿಲ್ಲ. ಇನ್ನು ಮುಂದೆ ರೈತರು ಏನು ತಿನ್ನಬೇಕು. ನಮಗಂತೂ ಗೊತ್ತಾಗೂವಲ್ದಾಗೈತ್ರಿ...' ಎಂದು ಮೊರಬದ ರೈತ ರಾಮಣ್ಣ ಗೋಳಿಟ್ಟರು. ಜಿಲ್ಲೆಯ ರೈತರ ಪರಿಸ್ಥಿತಿ ಹೆಚ್ಚೂ ಕಡಿಮೆ ಇದೆ ರೀತಿ ಇದೆ.

`15 ದಿನದಲ್ಲಿ ರಿಪೇರಿ'

`ಮಲಪ್ರಭಾ ಬಲದಂಡೆ ಕಾಲುವೆಯ ಒಡೆದ ಭಾಗದ ರಿಪೇರಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ 15 ದಿನಗಳಲ್ಲಿ ಕಾಲುವೆಗೆ ನೀರು ಹರಿಸಲಾಗುವುದು. ಕಾಲುವೆಗೆ ಅತಿ ಹೆಚ್ಚು ನೀರು ಬಿಟ್ಟಿದ್ದು ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಲು ಉದ್ದೇಶಿಸಲಾಗಿದೆ. ಕಾಲುವೆ ನಿರ್ಮಿಸಿ 30 ವರ್ಷಗಳಾದ್ದರಿಂದ ಸಹಜವಾಗಿಯೇ ಕುಸಿದಿದೆ. ಕಳಪೆ ಕಾಮಗಾರಿಯ ಪ್ರಶ್ನೆಯೇ ಇಲ್ಲ. 300 ಕೋಟಿ ರೂಪಾಯಿ ವೆಚ್ಚದಲ್ಲಿ ಮಲಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಆಧುನೀಕರಣ ಕಾರ್ಯ ಕೈಗೊಳ್ಳಲಾಗಿದೆ'.
ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT