ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆಯಲ್ಲೂ ಮೆಕ್ಕೆಜೋಳ ಮೊಳಕೆ

Last Updated 26 ಜುಲೈ 2012, 10:10 IST
ಅಕ್ಷರ ಗಾತ್ರ

ಶಿವಮೊಗ್ಗ: ಮಳೆ ಕೊರತೆಯಲ್ಲೂ ಮೊಳಕೆ ಒಡೆದ ಮೆಕ್ಕೆಜೋಳ ಉಳಿಸಿಕೊಳ್ಳಲು ಕೃಷಿ ಇಲಾಖೆ ಮುಂದಾಗಿದೆ. ಮಳೆ ಇಲ್ಲದೆ ಬಾಡಿ ಬೆಂಡಾದ ಮೆಕ್ಕೆ ಜೋಳದ `ಜೀವ~ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ರೈತರೊಂದಿಗೆ ಇಲಾಖೆಯೂ ಕೈ ಜೋಡಿಸಿದೆ. ಬೆಳೆಗೆ ಬೋರ್‌ವೆಲ್‌ಗಳಿಂದ ನೀರು ಒದಗಿಸಲು ಸಬ್ಸಿಡಿ ದರದಲ್ಲಿ ರೈತರಿಗೆ ಸ್ಪ್ರಿಂಕ್ಲರ್ ಪೂರೈಕೆಗೆ ಕೃಷಿ ಇಲಾಖೆ ಸಜ್ಜಾಗಿದೆ.  

ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಮಳೆ ಕೊರತೆಯಿಂದಾಗಿ ಜಿಲ್ಲಾದ್ಯಂತ ಜುಲೈ ಮೂರನೇ ವಾರದವರೆಗೆ ಶೇ 40ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಬತ್ತದ ನಾಟಿ ಶೇಕಡಾ 6.28 ಆಗಿದ್ದರೆ,  ವೆುಕ್ಕೆಜೋಳ ಶೇ 72.77ರಷ್ಟು ಬಿತ್ತನೆ ಆಗಿದೆ. ಆದರೆ, ಮಳೆಯ ಕೊರತೆಯಿಂದ ಈ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದ್ದು, ಬಹಳಷ್ಟು ಬಾಡುತ್ತಿದೆ. ಇದರಲ್ಲಿ ಅಲ್ಪಸ್ವಲ್ಪವಾದರೂ ಉಳಿಸಿಕೊಳ್ಳಲು ಇಲಾಖೆ, ರೈತರಿಗೆ ಸ್ಪ್ರಿಂಕ್ಲರ್ ಪೂರೈಸಲಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕಾರಿಪುರ, ನಂತರದಲ್ಲಿ ಸೊರಬ, ಶಿವಮೊಗ್ಗ, ಭದ್ರಾವತಿ, ಹೊಸನಗರ, ಸಾಗರ ತಾಲ್ಲೂಕುಗಳಲ್ಲಿ ಮೆಕ್ಕೆಜೋಳ ಬಿತ್ತನೆ ನಡೆದಿದೆ. ಮೆಕ್ಕೆ ಜೋಳ ಬಿತ್ತಿದ ರೈತರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 90ದರದಲ್ಲಿ ಹಾಗೂ ಉಳಿದವರಿಗೆ ಶೇ 75ರ ದರದಲ್ಲಿ ಸ್ಪ್ರಿಂಕ್ಲರ್ ಪೂರೈಕೆಗೆ ಸರ್ಕಾರ ಯೋಜನೆ ರೂಪಿಸಿದೆ. ಇದರನ್ವಯ ಜಿಲ್ಲೆಗೆ ಸುಮಾರು ್ಙ 7 ಕೋಟಿ ಸಬ್ಸಿಡಿ ಬಿಡುಗಡೆಯಾಗಿದೆ.

ಈಗಾಗಲೇ ಜಿಲ್ಲಾದ್ಯಂತ ಸ್ಪ್ರಿಂಕ್ಲರ್‌ಗಾಗಿ ರೈತರಿಂದ 5,500 ಅರ್ಜಿಗಳು ಬಂದಿದ್ದು, ಶಿಕಾರಿಪುರದಲ್ಲಿ ರೈತ ಸಂಪರ್ಕ ಕೇಂದ್ರಗಳಿಂದ ಸ್ಪ್ರಿಂಕ್ಲರ್‌ಸೆಟ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಸೊರಬ, ಸಾಗರ ಸೇರಿದಂತೆ ಉಳಿದ ತಾಲ್ಲೂಕುಗಳಲ್ಲಿ ಇನ್ನಷ್ಟೇ ಈ ಪ್ರಕ್ರಿಯೆ ಆರಂಭವಾಗಬೇಕಿದೆ.

ಜಿಲ್ಲೆಯಲ್ಲಿ 62,830 ಹೆಕ್ಟೇರ್ ಮುಸುಕಿನ ಜೋಳ ಪ್ರದೇಶವಿದ್ದು, ಇದುವರೆಗೆ 45,720 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಶಿಕಾರಿಪುರ ತಾಲ್ಲೂಕಿನಲ್ಲೇ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸಹಜವಾಗಿಯೇ ಈ ತಾಲ್ಲೂಕಿನಿಂದ ಅತಿ ಹೆಚ್ಚು ಅರ್ಜಿಗಳು ಬರುತ್ತಿವೆ ಎನ್ನುತ್ತಾರೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಶಿವಮೂರ್ತಪ್ಪ.

ಜಿಲ್ಲಾದ್ಯಂತ ಸ್ಪ್ರಿಂಕ್ಲರ್‌ಗಾಗಿ ಹೆಚ್ಚುವರಿಯಾಗಿ 5ಸಾವಿರ ಅರ್ಜಿಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಕನಿಷ್ಠ ಪಕ್ಷ ಇನ್ನೂ ್ಙ 5 ಕೋಟಿ ಸಬ್ಸಿಡಿ ಅನುದಾನದ ಅಗತ್ಯವಿದೆ. ಸರ್ಕಾರ ಈ ಹಣ ಬಿಡುಗಡೆ ಮಾಡಬೇಕು. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿದ್ದೇವೆ ಎಂಬ ಮಾತು ಅವರದ್ದು.

ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಉಪ ಮುಖ್ಯಮಂತ್ರಿಗಳೂ ಆದ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್. ಗುರುಮೂರ್ತಿ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಸ್ಪ್ರಿಂಕ್ಲರ್ ನೀಡಬೇಕು ಎಂದು ಸಲಹೆ ನೀಡಿದ್ದರು.

ಬರ ಪರಿಹಾರಕ್ಕಾಗಿ ಸರ್ಕಾರದಿಂದ ಕೋಟ್ಯಂತರ ಹಣ  ಖರ್ಚು ಮಾಡಲಾಗುತ್ತದೆ. ಮಳೆ ನಿರೀಕ್ಷೆಯಲ್ಲಿ ರೈತ ಬಿತ್ತಿದ ಮೆಕ್ಕೆಜೋಳವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಬೇಡಿಕೆ ಸಲ್ಲಿಸಿದ ರೈತರಿಗೆ ಸ್ಪ್ರಿಂಕ್ಲರ್ ನೀಡಬೇಕು ಎಂಬ ಒತ್ತಾಯ ಅವರಿಂದ ಬಂದಿತ್ತು. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆ ತೀರ್ಮಾನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT