ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆಯಲ್ಲೂ ಸಮೃದ್ಧ ತೊಗರಿ

Last Updated 11 ಡಿಸೆಂಬರ್ 2013, 8:45 IST
ಅಕ್ಷರ ಗಾತ್ರ

ಜಗಳೂರು: ಮಳೆ ಕೊರತೆಯ ನಡುವೆಯೂ ತಾಲ್ಲೂಕಿನಲ್ಲಿ ತೊಗರಿ ಅಕ್ಕಡಿ ಬೆಳೆಯ ಇಳುವರಿ ಸಮೃದ್ಧವಾಗಿದ್ದು, ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಮುಂಗಾರು ಹಂಗಾಮಿನಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಹಿಂಗಾರಿನಲ್ಲಿ ಒಂದೂ ಹನಿ ಮಳೆ ಬಿದ್ದಿಲ್ಲ. ಆದರೂ, ಮೆಕ್ಕೆಜೋಳ, ಶೇಂಗಾ, ಹತ್ತಿ ಮುಂತಾದ ಬೆಳೆಗಳ ಮಧ್ಯೆ ಅಕ್ಕಡಿಯಾಗಿ  ಬೆಳೆಯಲಾಗಿರುವ ತೊಗರಿ ಇಳುವರಿ ಉತ್ತಮವಾಗಿ ಬಂದಿದೆ. ತಾಲ್ಲೂಕಿನಲ್ಲಿ 3,118 ಹೆಕ್ಟೇರ್‌ ಪ್ರದೇಶದಲ್ಲಿ ಹೈಬ್ರಿಡ್‌ ಹಾಗೂ ಜವಾರಿ ತಳಿಯ ತೊಗರಿ ಬೆಳೆಯಲಾಗಿದೆ.

ಪ್ರತಿವರ್ಷ ಕೀಟಬಾಧೆಗೆ ಸಿಲುಕಿ ಬಹುತೇಕ ತೊಗರಿ ಬೆಳೆಗೆ ಹಾನಿಯಾಗುತ್ತಿತ್ತು. ಹೂ ಮತ್ತು ಕಾಯಿಕಟ್ಟುವ ಮಹತ್ವದ ಹಂತದಲ್ಲಿ ಕಾಯಿಕೊರಕ ಕೀಟದ ಹಾವಳಿಗೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚಿನ ಕೀಟಬಾಧೆ ಕಂಡುಬಂದಿಲ್ಲ. ಹಾಗಾಗಿ, ಗಿಡಗಳಲ್ಲಿ ಸಮೃದ್ಧವಾಗಿ ಕಾಯಿಕಟ್ಟಿದ್ದು, ಕಾಯಿ ಗೊಂಚಲಿನ ಭಾರಕ್ಕೆ ಗಿಡಗಳು ನೆಲಕ್ಕೆ ಬಾಗಿ ನಿಂತಿವೆ.

‘ತೊಗರಿ ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು, ಸಕಾಲದಲ್ಲಿ ಕೀಟಬಾಧೆ ಹತೋಟಿಗೆ ಕ್ರಮಕೈಗೊಳ್ಳದೇ ಇದ್ದಲ್ಲಿ ಬೆಳೆ ಹಾನಿ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ‘ತೊಗರಿ ಉಳಿಸಿ’ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಇದು ಫಲ ಕೊಟ್ಟಿದ್ದು, ಎಲ್ಲೆಡೆ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶನಾಯ್ಕ ‘ಪ್ರಜಾವಾಣಿ‘ಗೆ ತಿಳಿಸಿದರು.

ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಮುಂಗಾರು ಹಂಗಾಮಿನಲ್ಲಿ 39 ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿತ್ತು. ರೈತರು ಹೊರ ಭಾಗಗಳಿಂದ ಹಾಗೂ ಮನೆಯಲ್ಲಿ ಸಂಗ್ರಹಿಸಿದ ಬೀಜವನ್ನು ಬಳಸಿದ್ದಾರೆ. ಅಕ್ಕಡಿ ಪದ್ಧತಿಯಲ್ಲಿ ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಯಿ ಕೊರಕ ಹುಳುಬಾಧೆ ಕಂಡುಬಂದಿದೆ. ಕೂಡಲೇ, ಫ್ರೋಫೈನೊಫಾಸ್‌ ಔಷಧ ಸಿಂಪಡಿಸಬೇಕು. ಅಕ್ಕಡಿಯಾಗಿ ತೊಗರಿ ಬೆಳೆಯುವುದರಿಂದ ಹೆಚ್ಚು ಎಲೆಗಳು, ಬೇರುಗಳಿಂದಾಗಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದು ಅವರು ವಿವರಿಸಿದರು.

ಲಿಂಗರಾಜ್‌ಗೆ ಕಲಾಶ್ರೀ ಪ್ರಶಸ್ತಿ
ನ್ಯಾಮತಿ: ಗ್ರಾಮದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸುರಹೊನ್ನೆಯ ಹತ್ತನೆ ತರಗತಿ ವಿದ್ಯಾರ್ಥಿ ಜಿ.ಸಿ. ಲಿಂಗರಾಜನಿಗೆ ಹೊನ್ನಾಳಿ ತಾಲ್ಲೂಕು ಕಲಾಶ್ರೀ ಪ್ರಶಸ್ತಿ ಲಭಿಸಿದೆ.

ಈಚೆಗೆ ಬಾಲವಿಕಾಸ ಕೇಂದ್ರದ ವತಿಯಿಂದ  ಈಚೆಗೆ ನಡೆದ ತಾಲ್ಲೂಕುಮಟ್ಟದ ಬಾಲಪ್ರತಿಭೆ ಸ್ಪರ್ಧೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ಪ್ರಥಮಸ್ಥಾನ ಗಳಿಸಿದ್ದು, ಹಿರೇಕಲ್ಮಠದ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವ ಕಾಲೇಜಿನ ನಡೆದ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರುದ್ರಪ್ಪ ಕಲಾಶ್ರಿ ಪ್ರಶಸ್ತಿ ನೀಡಿ ಸನ್ಮಾನಿಸಿದರು, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಬಾಲಭವನ ಸಮಿತಿ ವತಿಯಿಂದ ಈ ಪ್ರಶಸ್ತಿ ನೀಡಲಾಗಿದೆ  ಎಂದು ಪೋಷಕ ಜಿ. ಚನ್ನರಾಜ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT