ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕ್ಷೀಣ: ನಾಲೆಗಳಿಗೆ ಹೆಚ್ಚಿನ ನೀರು

Last Updated 14 ಜುಲೈ 2013, 6:15 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಮುಂಗಾರಿನ ಮಳೆ ಶನಿವಾರ ಕೂಡ ಮುಂದುವರೆದಿದೆ. ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಶ್ರಿಮಂಗಲ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆಯಲ್ಲಿ ಸಾಧಾರಣ ಮಳೆ ಸುರಿದಿದೆ.

ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಸುರಿಯುತ್ತಿ ರುವ ಹಿನ್ನೆಲೆಯಲ್ಲಿ ಇಲ್ಲಿನ ನದಿ, ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗತೊಡಗಿದೆ. ಈಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ನದಿ ಹಾಗೂ ನಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ.

ಮಡಿಕೇರಿಯಲ್ಲೂ ಶನಿವಾರ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ಆಗಾಗ ಕೊಂಚ ಬಿಡಿದ್ದನ್ನು ಬಿಟ್ಟರೆ ಉಳಿದಂತೆ ತುಂತುರು ಮಳೆ ಸುರಿಯುತ್ತಿತ್ತು.

ಮಳೆ ಹಾನಿ: ಮಳೆಯಿಂದಾಗಿ ರಸ್ತೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ರಸ್ತೆಯ ಮೇಲೆ ನೀರು ಹರಿಯುವ ಪರಿಸ್ಥಿತಿ ಉಂಟಾಗಿದೆ. ಜತೆಗೆ ರಸ್ತೆಯ ಮೇಲೆ ನೀರು ಹರಿದು ಹಲವಾರು ಭಾಗಗಳಲ್ಲಿ ರಸ್ತೆ ಜಖಂಗೊಂಡಿವೆ. ಮಳೆಯ ಮುಂದುವರೆದಿರುವ ಬೆನ್ನೆಲ್ಲೇ ಗುಡ್ಡಗಾಡು ಪ್ರದೇಶಗಳಲ್ಲಿ ಸಣ್ಣಸಣ್ಣ ಬರೆ ಕುಸಿತಗಳು ಹೆಚ್ಚಾಗತೊಡಗಿವೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8ಗಂಟೆ ಅಂತ್ಯಗೊಂಡಂತೆ ಕಳೆದ 24ಗಂಟೆಯಲ್ಲಿ 38.87 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇದಿನ 3.26 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1479.25 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 694.68 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 50.05 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 16.53 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 50.02 ಮಿ.ಮೀ. ಮಳೆ ಸುರಿದಿದೆ.

ಹೋಬಳಿವಾರು ಮಳೆ ವಿವರ
ಮಡಿಕೇರಿ ಕಸಬಾ 35.04 ಮಿ.ಮೀ., ನಾಪೋಕ್ಲು 21.06 ಮಿ.ಮೀ., ಸಂಪಾಜೆ 80.06 ಮಿ.ಮೀ., ಭಾಗಮಂಡಲ 62.06 ಮಿ.ಮೀ., ವೀರಾಜಪೇಟೆ ಕಸಬಾ 15.08 ಮಿ.ಮೀ., ಹುದಿಕೇರಿ 14 ಮಿ.ಮೀ., ಶ್ರಿಮಂಗಲ 27.02 ಮಿ.ಮೀ., ಪೊನ್ನಂಪೇಟೆ 22.02 ಮಿ.ಮೀ., ಅಮ್ಮತ್ತಿ 13 ಮಿ.ಮೀ., ಬಾಳಲೆ 7 ಮಿ.ಮೀ., ಸೋಮವಾರಪೇಟೆ ಕಸಬಾ 55.2 ಮಿ.ಮೀ., ಶನಿವಾರಸಂತೆ 30.04 ಮಿ.ಮೀ., ಶಾಂತಳ್ಳಿ 109.06 ಮಿ.ಮೀ., ಕೊಡ್ಲಿಪೇಟೆ 72 ಮಿ.ಮೀ., ಕುಶಾಲನಗರ 11 ಮಿ.ಮೀ., ಸುಂಟಿಕೊಪ್ಪ 23 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.15 ಅಡಿಗಳು, ಕಳೆದ ವರ್ಷ ಇದೇ ದಿನ 2823.49 ಅಡಿ ನೀರು ಸಂಗ್ರಹವಾಗಿತ್ತು.

ಹಾರಂಗಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ 19.4 ಮಿ.ಮೀ. ಮಳೆ ಸುರಿದಿದೆ. ಇಂದಿನ ನೀರಿನ ಒಳ ಹರಿವು 11091 ಕ್ಯೂಸೆಕ್ ಆಗಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 573 ಕ್ಯೂಸೆಕ್ ಆಗಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 8769 ಕ್ಯೂಸೆಕ್, ನಾಲೆಗೆ 779 ಕ್ಯೂಸೆಕ್ ಆಗಿದೆ.

ಗೋಣಿಕೊಪ್ಪಲು: ತುಂತುರು ಮಳೆ
ಗೋಣಿಕೊಪ್ಪಲು: ಭೋರ್ಗರೆದು ಹಳ್ಳಕೊಳ್ಳಗಳ ಮೈದುಂಬಿಸಿದ ಮಳೆ ಎರಡು ದಿನಗಳಿಂದ ಸಾಧಾರಣವಾಗಿದೆ.  ಮೋಡ ಕವಿದ ವಾತಾವರಣದಲ್ಲಿ ಕೆಲವೊಮ್ಮೆ ಬಿರುಸು ಮತ್ತೆ ತುಂತುರು ಮಳೆಯಾಗಿ ಬೀಳುತ್ತಿದೆ. ಇದರಿಂದ ಗದ್ದೆ ತೋಟಗಳ ಕೆಲಸಕ್ಕೆ ಸಹಕಾರಿಯಾಗಿದ್ದು, ರೈತರು ಬಿಡುವಿಲ್ಲದೆ ದುಡಿಯುತ್ತಿದ್ದಾರೆ.

ತುಂತುರು ಮಳೆ ನೆಲವನ್ನು ಒದ್ದೆಮಾಡುತ್ತಿದ್ದು, ಕೆಲವು ಕಡೆ ಪಾಚಿಕಟ್ಟಿ ನಡೆದಾಡಲು ಕಷ್ಟವಾಗಿದೆ.    ನಾಗರಹೊಳೆ ಅರಣ್ಯದ ಆನೆ ಚೌಕೂರು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಕೆರೆಗಳು  ಇನ್ನು ಭರ್ತಿಯಾಗಿಲ್ಲ. ಹಳ್ಳದ ಭಾಗದಲ್ಲಿ ಭೂಮಿಹೊಂದಿ ರುವ ರೈತರು ಬತ್ತದ ನಾಟಿಗೆ ಗದ್ದೆ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ತಡೆಗೋಡೆಗೆ ಹಾನಿ
ಸೋಮವಾರಪೇಟೆ: ಶುಕ್ರವಾರ ತಾಲ್ಲೂಕಿನಲ್ಲಿ ಸಾಧಾರಣವಾದ ಮಳೆಯಾಗಿದ್ದು, ತಾಲ್ಲೂಕಿನ ಹೊಸತೋಟದಲ್ಲಿ ುನೆ ಹಾಗೂ ಬಾಣವಾರ ರಸ್ತೆಯ ತಡೆಗೋಡೆ ಕುಸಿದಿದೆ.

ಶುಕ್ರವಾರ ರಾತ್ರಿ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಗಿದ್ದು, ಶಾಂತಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚು 109.6 ಮಿ.ಮೀ ಮಳೆಯಾಗಿದೆ. ಕುಶಾಲ ನಗರ ಹೋಬಳಿಯಲ್ಲಿ ಅತಿ ಕಡಿಮೆ 11 ಮಿ.ಮೀ ಮಳೆಯಾದ ವರದಿಯಾಗಿದೆ. ಸೋಮವಾರಪೇಟೆ ನಗರಕ್ಕೆ 55.2 ಮಿ. ಮೀ. ಕೊಡ್ಲಿಪೇಟೆ ವಿಭಾಗಕ್ಕೆ 72.0, ಶನಿವಾರಸಂತೆಗೆ 30.4 ಹಾಗೂ ಸುಂಟಿಕೊಪ್ಪಕ್ಕೆ 23 ಮಿ. ಮೀ ಮಳೆಯಾಗಿದೆ.

ಶನಿವಾರ ಬೆಳಿಗ್ಗೆ ಹೊಸತೋಟ ಗ್ರಾಮದ ಉಮ್ಮರ್ ಎಂಬವರ ಮನೆ ಗೋಡೆ ಕುಸಿದಿದ್ದು, ಅಪಾರ ನಷ್ಟವಾಗಿದೆ. ಬಾಣವಾರ ರಸ್ತೆಯ ಜಗದೀಶ್ ಅವರ ಮನೆ ಸಮೀಪದ  ತಡೆಗೋಡೆಯೂ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT