ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಗೋಡೆ ಕುಸಿತ,ವಿದ್ಯುತ್ ಸಂಪರ್ಕ ಕಡಿತ, ಬೆಳೆ ನಾಶ

Last Updated 3 ಆಗಸ್ಟ್ 2013, 10:41 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನಾದ್ಯಂತ ಮಳೆ ಹಾಗೂ ಗಾಳಿ ಶುಕ್ರವಾರವೂ ಮುಂದುವರೆದಿದ್ದು, ಅಪಾರ ಬೆಳೆ ಹಾಗೂ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ.

ಜಿಲ್ಲೆಯ ಜೀವನದಿ ಹೇಮಾವತಿ ನದಿ ಪಾತ್ರದ ಉದ್ದಕ್ಕೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಒಳ ಹರಿವು, 32 ಸಾವಿರ ಕ್ಯೂಸೆಕ್‌ನಿಂದ 52 ಸಾವಿರ ಕ್ಯೂಸೆಕ್‌ಗೆ ಏರಿ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹೇಳಿದರು. ಇದರಿಂದಾಗಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳೆಲ್ಲವೂ ಜಲಾವೃತಗೊಂಡಿದ್ದವು. 2004ರ ನಂತರ ಇದೇ ಮೊದಲ ಬಾರಿಗೆ ಪಟ್ಟಣದ ಹೊಳೆ ಮಲ್ಲೇಶ್ವರಸ್ವಾಮಿ ದೇವಸ್ಥಾನದ ಗರ್ಭಗುಡಿ ವರೆಗೆ ನದಿ ಉಕ್ಕಿ ಹರಿಯುತ್ತಿದೆ. ಆಜಾದ್ ರಸ್ತೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಕಟ್ಟಡಗಳು ಕಳೆದ 52 ಗಂಟೆಗಳಿಂದ ಜಲಾವೃತಗೊಂಡಿದ್ದು, ಅಲ್ತಾಪ್ ಮತ್ತು ಅಯೂಬ್ ಎಂಬುವರ ಅಂಗಡಿ ಹಾಗೂ ಹೋಟೆಲ್‌ಗಳು ಸಂಪೂರ್ಣ ನೆಲಸಮಗೊಂಡಿವೆ. ಜಲಾವೃತಗೊಂಡಿರುವ ಸುಮಾರು 40ಕ್ಕೂ ಹೆಚ್ಚು ಕಟ್ಟಡಗಳ ಗೋಡೆಗಳು ಕುಸಿಯುವ ಸಾಧ್ಯತೆ ಇದೆ ಎಂದು ಕಟ್ಟಡದ ಮಾಲೀಕರು ಆತಂಕ ಗೊಂಡಿದ್ದಾರೆ.  ನದಿ ಪಾತ್ರದ ಮಳಲಿ, ಸತ್ತಿಗಾಲ್, ಕೌಡಹಳ್ಳಿ, ಕುದುರಂಗಿ, ವಡೂರು ಸೇರಿದಂತೆ ಹತ್ತಾರು ಗ್ರಾಮಗಳ ಸಾವಿರಾರು ಎಕರೆ ಪ್ರದೇಶದ ಗದ್ದೆಗಳು ನೀರಿನಲ್ಲಿ ಮುಳುಗಿವೆ.

ಸಾವಿರಾರು ಎಕರೆ ಭತ್ತದ ಬೆಳೆ ನಾಶ: ಹಾನುಬಾಳು, ಹೆತ್ತೂರು, ಯಸಳೂರು, ಬೆಳಗೂಡು ಹಾಗೂ ಕಸಬ ಹೋಬಳಿ ಸೇರಿದಂತೆ ಮಲೆನಾಡಿನಾದ್ಯಂತ ಸುರಿದ ದಾಖಲೆ ಪ್ರಮಾಣದ ಕುಂಭದ್ರೋಣ ಮಳೆಗೆ, ರೈತರ ಸಾವಿರಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಸಸಿ ಹಾಗೂ ನಾಟಿ ಮಾಡಲು ಬೆಳೆಸಿದ್ದ ಸಸಿಮಡಿಗಳು ಕೊಚ್ಚಿಹೋಗಿವೆ. ಕೆಲವು ಗದ್ದೆ ಬೈಲುಗಳಲ್ಲಿ ಕಳೆದ ಮೂರು ದಿನಗಳಿಂದ ಭತ್ತದ ಪೈರು  ನೀರಿನಲ್ಲಿ ಮುಳುಗಿರುವುದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಆಗಿದೆ. ರಕ್ಷಿದಿ ಗ್ರಾಮದಲ್ಲಿ ರೈತ ಅರುಣ್ ರಕ್ಷಿದಿ ಅವರ ಸುಮಾರು ಅರ್ಧ ಎಕರೆ ಕಾಫಿ ತೋಟ ಭೂ ಕುಸಿತದಿಂದ ತಗ್ಗು ಪ್ರದೇಶಕ್ಕೆ ಕುಸಿದು ನೂರಾರು ಕಾಫಿ ಗಿಡಗಳು, ಅಡಿಕೆ ಹಾಗೂ ಇತರೆ ಮರಗಳು ಬುಡಮೇಲಾಗಿವೆ. ಹಲವೆಡೆ ಕೆರೆಕಟ್ಟೆಗಳು ಒಡೆದು ತಗ್ಗು ಪ್ರದೇಶಕ್ಕೆ ನುಗ್ಗಿ ಭಾರಿ ಹಾನಿಯಾಗಿದೆ. ಹಲವೆಡೆ ಭಾರಿ ಪ್ರಮಾಣದ ಮಣ್ಣು ಕುಸಿತ ಉಂಟಾಗಿ, ಕಾಫಿ, ಏಲಕ್ಕಿ, ಅಡಿಕೆ, ಮೆಣಸು ಹಾಗೂ ಇತರೆ ಬೆಳೆಗಳು ಮಣ್ಣು ಪಾಲಾಗಿವೆ. ಕೆಲವೆಡೆ ಭಾಗಶಃ ಮನೆ ಕುಸಿದಿದ್ದು, ಬಹುತೇಕ ಕಡೆ ಸರ್ಕಾರಿ ಕಟ್ಟಡಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಕಟ್ಟಡಗಳು ಹಾನಿಯಾಗಿವೆ.

ಹಲವು ರಸ್ತೆ, ಸೇತುವೆ. ಮೋರಿಗಳು ಹಾಗೂ ತಡೆಗೋಡೆಗಳು ಶಿಥಿಲಗೊಂಡಿವೆ. ನೂರಾರು ಮರಗಳು ಬುಡಮೇಲಾಗಿದ್ದು, ಕಾಫಿ, ಏಲಕ್ಕಿ, ಅಡಿಕೆ, ಮೆಣಸು, ಭತ್ತ, ಶುಂಠಿ ಸೇರಿದಂತೆ ಬಹುತೇಕ ಬೆಳೆಗಳು ಶೇ.60 ಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ. 

400 ವಿದ್ಯುತ್ ಕಂಬಗಳು ಧರೆಗುರುಳಿವೆ: ಬುಧವಾರ ಹಾಗೂ ಗುರುವಾರ ಎರಡೇ ದಿನದ ಬಿರುಗಾಳಿ ಹಾಗೂ ಮಳೆಗೆ ತಾಲ್ಲೂಕಿನಾದ್ಯಂತ 250ಕ್ಕೂ ಹೆಚ್ಚು, ವಿದ್ಯುತ್ ಕಂಬಗಳು ಸೇರಿದಂತೆ ಒಟ್ಟು 400 ಕಂಬಗಳು ಮುರಿದು ಬಿದ್ದಿವೆ. 20ಕ್ಕೂ ಹೆಚ್ಚು ಟ್ರ್ಯಾನ್ಸ್‌ಫಾರ‌್ಮರ್‌ಗಳು, ಸಾವಿರಾರು ಮೀಟರ್ ವಿದ್ಯುತ್ ತಂತಿ ಹಾಳಾಗಿವೆ ಎಂದು ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತುಳಸಿಪ್ರಸಾದ್ ಹೇಳಿದರು. ಕೆಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗದ ಹತ್ತಾರು ವಿದ್ಯುತ್ ಕಂಬಗಳು ಬಿದ್ದು ಹೋದ ಹಿನ್ನೆಲೆಯಲ್ಲಿ ಇಡೀ ತಾಲ್ಲೂಕು ಕತ್ತಲೆಯಲ್ಲಿ ಇರಬೇಕಾಗಿದೆ. ಪಟ್ಟಣ ಪ್ರದೇಶದಲ್ಲಿ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಜನರು ಪರದಾಡುವಂತಾಗಿದೆ.

ಪರಿಶೀಲನೆ: ಹೇಮಾವತಿ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಅನ್ಬುಕುಮಾರ್, ಉಪವಿಭಾಗಾಧಿಕಾರಿ ಶ್ರೀವಿದ್ಯಾ, ತಹಸಿಲ್ದಾರ್ ಬಾಬು ದೇವಾಡಿಗ, ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
100 ಕೋಟಿ ಬಿಡುಗಡೆಗೆ ಶಾಸಕರ ಒತ್ತಾಯ: 1994ರ ನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಮಳೆ ಹಾಗೂ ಬಿರುಗಾಳಿಗೆ ತಾಲೂಕಿನಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.  ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಿ.ಮೀ. ರಸ್ತೆಗಳು ದುರಸ್ಥಿ ಮಾಡುವುದಕ್ಕೆ ಸಾಧ್ಯವಾಗದ ಮಟ್ಟಿಗೆ ತೊಳೆದು ಹೋಗಿವೆ. ಈ ರಸ್ತೆಗಳನ್ನು ಪುನಃ ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ. ಹತ್ತಾರು ಸೇತುವೆಗಳು, ಮೋರಿಗಳು, ಕೆರೆ ಕಟ್ಟೆಗಳು, ತಡೆಗೋಡೆಗಳು, ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಕಾಫಿ, ಏಲಕ್ಕಿ, ಶುಂಠಿ, ಭತ್ತ, ಕಾಳು ಮೆಣಸು ಬೆಳೆಗಳು ಶೇ 60ಕ್ಕೂ ಹೆಚ್ಚು ಹಾನಿಯಾಗಿವೆ. ಕೊಡಗು ಜಿಲ್ಲೆಗೆ  ಬಜೆಟ್‌ನಲ್ಲಿ ಘೋಷಿಸಿರುವ ಅನುದಾನದ ಮಾದರಿಯಲ್ಲಿಯೇ ಸಕಲೇಶಪುರಕ್ಕೂ 100 ಕೋಟಿಗೂ ಹೆಚ್ಚು ಹಣ ಬಿಡುಗಡೆಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಹೇಳಿದ್ದು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹೇಳಿದರು. ಹೇಮಾವತಿ ಪ್ರವಾಹದಲ್ಲಿ ಮುಳುಗಿರುವ ಸಂತ್ರಸ್ತರಿಗೆ ತಾಲ್ಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧ ಹಾಗೂ ಪಕ್ಕದ ಸರ್ಕಾರಿ ಶಾಲೆಯ ಕೊಠಡಿಗಳಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.  ಪ್ರವಾಹ ಪರಿಸ್ಥಿತಿ ನಿಬಾಯಿಸಲು ತಾಲೂಕಿನಾದ್ಯಂತ ಅಧಿಕಾರಿ ಹಾಗೂ ಸಿಬ್ಬಂದಿ ಸದಾ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ನಷ್ಟಕ್ಕೆ ಒಳಗಾದವರಿಗೆ ಮುಂದಿನ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಜೂನ್ ಎರಡನೇ ವಾರದಿಂದ ಜುಲೈ ಕೊನೆಯ ವಾರದವರೆಗೆ ಬಿದ್ದ ಮಳೆಯಿಂದ ಸುಮಾರು 28 ಕೋಟಿ ರೂಪಾಯಿ ನಷ್ಟ ಉಂಟಾಗಿರುವುದಾಗಿ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಕಳೆದ ಬುಧವಾರ, ಗುರುವಾರ ಹಾಗೂ ಶುಕ್ರವಾರ ಸುರಿದ ಮಳೆಯಿಂದ ಉಂಟಾಗಿರುವ ಹಾನಿಯ ಪ್ರಮಾಣ ಎಷ್ಟು ಎಂದು ಇನ್ನೂ ಅಂದಾಜು ಮಾಡಿಲ್ಲ. ಈ ಬಗ್ಗೆ ಇಂದೇ ಅಧಿಕಾರಿಗಳ ಸಭೆ ನಡೆಸಿ ಸರ್ಕಾರಕ್ಕೆ ತಕ್ಷಣ ವರದಿ ಸಲ್ಲಿಸಲಾಗುವುದು ಎಂದರು.

ಬೆಳಗೋಡು ಹೋಬಳಿಯಲ್ಲೂ ಭಾರಿ ಮಳೆ: ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ರ ವರೆಗೆ 250 ಮಿ.ಮೀ. ದಾಖಲೆ ಮಳೆಯಾಗಿದ್ದು, ಗ್ರಾಮದ ಸುಮಾರು 150 ಎಕರೆ ಪ್ರದೇಶದ ಭತ್ತದ ಗದ್ದೆಯಲ್ಲಿ ಭಾರೀ ಪ್ರಮಾಣದ ನೀರು ನುಗ್ಗಿ ಕಳೆದ 8 ದಿನಗಳಿಂದ ನಾಟಿ ಮಾಡಿದ್ದ ಸುಮಾರು 80 ಎಕರೆ ಪ್ರದೇಶದ ಭತ್ತದ ಪೈರು ಕೊಚ್ಚಿಹೋಗಿದೆ. ರಭಸವಾಗಿ ಹರಿದ ಮಳೆ ನೀರಿನೊಂದಿಗೆ ಮಣ್ಣು, ಮರಳು, ಕಸ ಕಡ್ಡಿಗಳು ಸುಮಾರು ಒಂದು ಅಡಿ ಎತ್ತರಕ್ಕೆ ನಿಂತು ಪ್ರಸಕ್ತ ಸಾಲಿನಲ್ಲಿ ಈ ಗದ್ದೆ ಬೈಲಿನಲ್ಲಿ ಪುನಃ ಭತ್ತ ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಗ್ರಾಮದ ಇ.ಎಸ್.ಲೋಕೇಶ್ ಕುಮಾರ್ ಪ್ರಜಾವಾಣಿಗೆ ಹೇಳಿದರು.

ಶುಂಠಿ, ಭತ್ತ, ಈರಣ್ಣನ ಕೊಪ್ಪಲು ಗ್ರಾಮದ, ಕುಂಬಾರಕಟ್ಟೆ ಕೆರೆ ನೀರು ಗ್ರಾಮಕ್ಕೆ ನುಗ್ಗಿ ಜಗದೀಶ್, ಮೈಲಾರಿ, ಬೆಲ್ಲಪ್ಪಗೌಡ ಹಾಗೂ ರಾಜು ಎಂಬುವರ ಮನೆಗಳಿಗೆ ನುಗ್ಗಿ ಗೋಡೆಗಳು ಸಂಪೂರ್ಣ ಶಿಥಿಲಗೊಂಡು ಬೀಳುವ ಸ್ಥಿತಿ ತಲುಪಿವೆ, ಬೆಳಗೋಡು ದೊಡ್ಡ ಕೆರೆ ಭರ್ತಿಯಾಗಿ ಕುಸಿತ ಕಂಡು ಬಂದಿದೆ, ಈ ಕೆರೆ ನೀರು ನುಗ್ಗಿ ಭತ್ತದ ಗದ್ದೆಗಳಿಗೆ ಹಾಗೂ ಶುಂಠಿ ಬೆಳೆಗೆ ನೀರು ನುಗ್ಗಿ ಭಾರೀ ನಷ್ಟ ಉಂಟಾಗಿದೆ.  ಈಶ್ವರಳ್ಳಿ ಗ್ರಾಮದಲ್ಲಿ ಸ್ವಾಮಿ, ಷಣ್ಮುಖ, ಈರೇಶ್, ನಾಗೇಶ್ ಹಾಗೂ ನಿಂಗರಾಜು ಎಂಬುವರ ಮನೆ ಗೋಡೆಗಳು ಕುಸಿದಿವೆ.

ದ್ದೆಗಳು ಜಲಾವೃತ
ಕಳೆದ 30 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6ರ ವರೆಗೆ ಅರೆ ಮಲೆನಾಡು ಪ್ರದೇಶವಾದ ಬೆಳಗೋಡು ಹೋಬಳಿ ವ್ಯಾಪ್ತಿಯ ಈಶ್ವರಹಳ್ಳಿ ಸುತ್ತಮತ್ತ 250 ಮಿ.ಮೀ. ದಾಖಲೆ ಮಳೆಯಾಗಿದೆ.

ಗ್ರಾಮದ ಸುಮಾರು 150 ಎಕರೆ ಪ್ರದೇಶದ ಭತ್ತದ ಗದ್ದೆಯಲ್ಲಿ ಭಾರೀ ಪ್ರಮಾಣದ ನೀರು ನುಗ್ಗಿ, ನಾಟಿ ನಾಡಿದ್ದ ಸುಮಾರು 80 ಎಕರೆ ಪ್ರದೇಶದ ಭತ್ತದ ಪೈರು ಸಂಪೂರ್ಣವಾಗಿ ಕೊಚ್ಚಿಹೋಗಿದೆ. ರಭಸವಾಗಿ ಹರಿದ ಮಳೆ ನೀರಿನೊಂದಿಗೆ ಮಣ್ಣು, ಮರಳು, ಕಸಕಡ್ಡಿಗಳು ಸುಮಾರು ಒಂದು ಅಡಿ ಎತ್ತರಕ್ಕೆ ನಿಂತು ಗದ್ದೆಗಳು ಹೊಳೆ ಸಾಲಿನಂತಾಗಿವೆ. ನೀರು ಕಡಿಮೆಯಾದರೂ ಸಹ ಉಳುಮೆ ಮಾಡಿ ಪುನಃ ನಾಟಿ ಮಾಡುವುದಕ್ಕೆ ಪ್ರಸಕ್ತ ಸಾಲಿನಲ್ಲಿ ಸಾಧ್ಯವಾಗುವುದಿಲ್ಲ. ಮುಂದಿನ ವರ್ಷ ಅಂಗಡಿಯಿಂದ ಅಕ್ಕಿಯನ್ನು ಕೊಂಡುತಂದು ತಿನ್ನಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಗ್ರಾಮದ ಇ.ಎಸ್.ಲೋಕೇಶ್ ಕುಮಾರ್ ಪ್ರಜಾವಾಣಿಗೆ ಹೇಳಿದರು.

ಪಕ್ಕದ ಈರಣ್ಣನ ಕೊಪ್ಪಲು ಗ್ರಾಮದ, ಕುಂಬಾರಕಟ್ಟೆ ಕೆರೆ ನೀರು ಗ್ರಾಮಕ್ಕೆ ನುಗ್ಗಿ ಜಗದೀಶ್, ಮೈಲಾರಿ, ಬೆಲ್ಲಪ್ಪಗೌಡ ಹಾಗೂ ರಾಜು ಎಂಬುವವರ ಮನೆಗಳಿಗೆ ನುಗ್ಗಿ ಗೋಡೆಗಳು ಸಂಪೂರ್ಣ ಶಿಥಿಲಗೊಂಡು ಬೀಳು ಸ್ಥಿತಿ ತಲುಪಿವೆ, ಬೆಳಗೋಡು ದೊಡ್ಡ ಕೆರೆ ಭರ್ತಿಯಾಗಿ ಕುಸಿತ ಕಂಡು ಬಂದಿದೆ, ಈ ಕೆರೆ ನೀರು ನುಗ್ಗಿ ಭತ್ತದ ಗದ್ದೆಗಳಿಗೆ ಹಾಗೂ ಶುಂಠಿ ಬೆಳೆಗೆ ನೀರು ನುಗ್ಗಿ ಭಾರೀ ನಷ್ಟ ಉಂಟಾಗಿದೆ.  ಈಶ್ವರಳ್ಳಿ ಗ್ರಾಮದಲ್ಲಿ ಸ್ವಾಮಿ, ಷಣ್ಮುಖ, ಈರೇಶ್, ನಾಗೇಶ್ ಹಾಗೂ ನಿಂಗರಾಜು ಎಂಬುವವರ ಮನೆ ಗೋಡೆಗಳು ಕುಸಿದು ಅಪಾಯದಲ್ಲಿವೆ. ಶುಂಠಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಬೆಳಗೋಡು ಹೋಬಳಿಯಲ್ಲಿ ಸುಮಾರು 20 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿರುವುದಾಗಿದೆ ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹಿದ್ ಅಲಂ ಹೇಳಿದರು.

ಉಕ್ಕುತ್ತಿದೆ ಜಲ
ಜಾನೇಕೆರೆ ಗ್ರಾಮದ ಶಾಪ್ ಗುರುದತ್ ಅವರ ಮನೆಯೊಳಗೆ ಜಲ ಉಕ್ಕುತ್ತಿದ್ದು, ಮನೆಗೆ ಹಾಕಿದ್ದ ಟೈಲ್ಸ್, ಹಾಗೂ ಸಿಮೆಂಟ್ ಕಿತ್ತು ಹೋಗಿದ್ದು, ಮನೆಯೊಳಗೆ ಜಲ ಉಕ್ಕುತ್ತಿರುವ ಹಿನ್ನೆಲೆಯಲ್ಲಿ ಮನೆ ಬಿಟ್ಟು ತವರು ಮನೆಗೆ ಹೋದ ಘಟನೆ ನಡೆದಿದೆ.

ಮರಾದಿಗೆ ಮಾದೇಶ್, ಯತೀಶ್ ಅವರ 6 ಎಕರೆ, ಎಂ.ಬಿ.ನಾಗೇಶ್ ಅವರ 4 ಎಕರೆ ಈ ಗ್ರಾಮದ ಗದ್ದೆ ಬೈಲಿನಲ್ಲಿ ಸುಮಾರು 80 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಪೈರು 3 ದಿನಗಳಿಂದ ನೀರಿನಲ್ಲಿ ಮುಳುಗಿ ಕರಗುತ್ತಿದೆ. ಹಲಸುಲಿಗೆ ಗ್ರಾಮದ ಎಚ್.ಎಂ.ಸದಾಶಿವಾಚಾರ್, ಎಚ್.ಆರ್.ಪಟೇಲ್ ಪ್ರಸಾದ್ ಸೇರಿದಂತೆ ಗ್ರಾಮದ 150 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ನೀರು ಪಾಲಾಗಿದೆ.

ಸಂಚಾರ ಅಸ್ತವ್ಯಸ್ತ; ಧರೆಗುರುಳಿದ ವೃಕ್ಷಗಳು
ಅರಕಲಗೂಡು ವರದಿ: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಸುಮಾರು 20 ಮನೆಗಳು ಕುಸಿದಿದ್ದು,  ಅಪಾರ ಹಾನಿ ಸಂಭವಿಸಿದೆ.

ಕಸಬಾ ಹೋಬಳಿ ಶಂಭುನಾಥಪುರದಲ್ಲಿ ಆರು ಮನೆಗಳು ಹಾನಿಗೊಂಡಿವೆ. ನಿಂಗೇಗೌಡ, ಯೋಗೇಶ್, ಮಂಜೇಗೌಡ, ಸಂಕೇಗೌಡ, ಬಂದಮ್ಮ, ಮಂಜೇಗೌಡ ಅವರಿಗೆ ಸೇರಿದ ಮನೆಗಳ ಗೋಡೆಗಳು ಕುಸಿದಿವೆ. ಮೂಡನಹಳ್ಳಿಯಲ್ಲಿ ಕುಳ್ಳೇಗೌಡ ಅವರ ಮನೆ ಗೋಡೆ ಕುಸಿದಿದೆ. ದೊಡ್ಡಮಗ್ಗೆ ಹೋಬಳಿ ಹುಲಿಕಲ್ ಗ್ರಾಮದಲ್ಲಿ ತೆಂಗಿನ ಮರ ಉರುಳಿ ಮಂಜೇಗೌಡ ಅವರ ಮನೆ ಹಾನಿಗೊಂಡಿದೆ. ದೊಡ್ಡಮಗ್ಗೆ  ಗ್ರಾಮದ ರಂಗೇಗೌಡ ಯಗಟಿ ಗ್ರಾಮದ ಬೀರೇಗೌಡ ಅವರ ಮನೆಯ ಗೊಡೆಗಳು ಕುಸಿದು ಬಿದ್ದಿದೆ.

ಮಲ್ಲಿಪಟ್ಟಣ ಹೋಬಳಿಯ ಹಿಪ್ಪಲಿ ಗ್ರಾಮದ ಮೊಗಣ್ಣಗೌಡ, ಲಿಂಗದಹಳ್ಳಿ ಗ್ರಾಮದ ಬಸವರಾಜ್ ಹಾಗೂ ಶಿರದನಹಳ್ಳಿ ಗ್ರಾಮದಲ್ಲಿ ಮನೆಗಳ ಗೋಡೆ ಕುಸಿದಿವೆ. ಮಲ್ಲಿಪಟ್ಟಣದ ನಾಗೇಶ ಅವರ ಮನೆಯ ಮೇಲ್ಛಾವಣಿ ಕುಸಿದು ಮನೆಯೊಳಗಿದ್ದ ಕಾವೇರಮ್ಮ ಗಾಯಗೊಂಡಿದ್ದಾರೆ. ಮಲ್ಲಿಪಟ್ಟಣ ಕೊಡಲಿಪೇಟೆ ಮಾರ್ಗದಲ್ಲಿ ಗಾಳಿ ರಭಸಕ್ಕೆ ಮರಗಳು ರಸ್ತೆಗೆ ಉರುಳಿದ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೊಣನೂರು ಹೋಬಳಿಯಲ್ಲಿ ಹೊನ್ನಗಾನಹಳ್ಳಿ 3, ಸೀಗೋಡು, ಸಿ.ಅಬ್ಬೂರು ತರಿಗಳಲೆ ಗ್ರಾಮದಲ್ಲಿ ತಲಾ ಒಂದು ಮನೆಯ ಗೋಡೆ ಕುಸಿದಿದೆ. ಮಳೆಯಿಂದಾಗಿ ಹೊಲ,ಗದ್ದೆ, ತೋಟಗಳು ಜಲಾವೃತಗೊಂಡು ಅಪಾರ ಬೆಳೆ ಹಾನಿ ಉಂಟಾಗಿದೆ. ಬಿಡುವು ನೀಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು ರೈತರ ಕೃಷಿ ಕಾರ್ಯಕ್ಕೆ ತೀವ್ರ ತೊಂದರೆಯಾಗಿದೆ. ಜಾನುವಾರುಗಳನ್ನು ಮೇಯಲು ಬಿಡಲು ಸಾಧ್ಯವಾಗದೆ ಮನೆಯಲ್ಲೆ ಕಟ್ಟಿ ಮೇವು ನೀಡುತ್ತಿರುವ ಕಾರಣ ಮೇವಿನ ಕೊರತೆ ಎದುರಾಗಿದೆ. ರಸ್ತೆಗಳು ಹಾಳಾಗಿ  ವಾಹನ ಸಂಚಾರಕ್ಕೆ ಅಡಚಣೆಯಾಗಿದೆ, ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT