ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಜೋರು-ಸಿಮೆಂಟ್ ಬೇಡಿಕೆ ಇಳಿಕೆ

2ನೇ ತ್ರೈಮಾಸಿಕ ಸಿಮೆಂಟ್ ಕಂಪೆನಿಗೆ ಕಷ್ಟ: ಐಸಿಆರ್‌ಎ
Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಮುಂಗಾರು ಮಳೆಗೂ, ಸಿಮೆಂಟಿಗೂ ಏನು ನಂಟು?. ದೇಶದ ಹಲವೆಡೆ ಮಳೆ ಜೋರಾಗಿರುವುದರಿಂದ ಸಿಮೆಂಟ್ ಬೇಡಿಕೆ ಕುಗ್ಗಿದೆ. ಪರಿಣಾಮ ಪ್ರಸಕ್ತ ಹಣಕಾಸು ವರ್ಷದ ಎರಡನೆ ತ್ರೈಮಾಸಿಕದಲ್ಲಿ ಸಿಮೆಂಟ್ ಕಂಪೆನಿಗಳ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ.

ಈ ಬಾರಿ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತಲೂ ಅಧಿಕ ಪ್ರಮಾಣದ ಮಳೆಯಾಗಿದೆ. ಪರಿಣಾಮ ಕಟ್ಟಡ ನಿರ್ಮಾಣ ಚಟುವಟಿಕೆ ಕಡಿಮೆ ಆಗಿದೆ. ಹಾಗಾಗಿ ಸಿಮೆಂಟ್‌ಗೆ ಬೇಡಿಕೆಯೂ ತಗ್ಗಿದೆ ಎಂದು ಗಮನ ಸೆಳೆದಿದೆ `ಇಂಡಿಯನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ'ಯ (ಐಸಿಆರ್‌ಎ) ಇತ್ತೀಚಿನ ಮಾರುಕಟ್ಟೆ ಅಧ್ಯಯನ ವರದಿ.

ಏಪ್ರಿಲ್-ಮೇ ತಿಂಗಳಿಗೆ ಹೋಲಿಸಿದಲ್ಲಿ ಮೇ-ಜೂನ್‌ನಲ್ಲಿಯೇನೋ ಸಿಮೆಂಟ್ ಮಾರಾಟ ಹೆಚ್ಚೇ ಇದ್ದಿತು. ಅದು ಮುಂಗಾರು ಮುಂಚಿನ ಅವಧಿಯ ಬೇಡಿಕೆ. ಆದರೆ, ಮಳೆಗಾಲ ಈ ಬಾರಿ ಜೋರಾಗಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಹೊಸದಾಗಿ ಆರಂಭಗೊಳ್ಳುವ ಪ್ರಮಾಣ ಕಡಿಮೆಯಾಗಿದೆ.

ಇದು ಸಿಮೆಂಟ್ ಮಾರಾಟದ ಮೇಲೂ ಪರಿಣಾಮ ಬೀರಿದೆ. ಇದೇ ಪರಿಸ್ಥಿತಿ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ(ಜುಲೈ-ಸೆಪ್ಟೆಂಬರ್) ಅವಧಿಯಲ್ಲಿಯೂ ಮುಂದುವರಿಯಲಿದೆ ಎಂದು `ಐಸಿಆರ್‌ಎ' ವರದಿ ತಿಳಿಸಿದೆ.

ದರ ಏರಿಳಿತ
ಬೇಡಿಕೆ ಮತ್ತು ಪೂರೈಕೆಯ ಅನುಪಾತವನ್ನು ಅವಲಂಬಿಸಿಯೇ ಧಾರಣೆಯಲ್ಲಿನ ಏರಿಳಿತ ನಿರ್ಧಾರವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಅದೇ ರೀತಿಯಲ್ಲಿ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಬೇಡಿಕೆ ಕಡಿಮೆ ಇದ್ದಿದ್ದರಿಂದ ಸಿಮೆಂಟ್ ದರದಲ್ಲೂ ಇಳಿಕೆ ಆಗಿತ್ತು. ಆದರೆ, ಮೇ ಮಧ್ಯಾವಧಿಯಲ್ಲಿ ಸಿಮೆಂಟ್‌ಗೆ ಸ್ವಲ್ಪ ಮಟ್ಟಿಗೆ ಬೇಡಿಕೆ ಹೆಚ್ಚಿದ್ದರಿಂದ ಧಾರಣೆಯಲ್ಲೂ ಅಲ್ಪ ಪ್ರಮಾಣದ ಹೆಚ್ಚಳವಾಗಿತ್ತು.

ಕಲ್ಲಿದ್ದಲು ಪರಿಣಾಮ
ಇದೇ ವೇಳೆ `ಕೋಲ್ ಇಂಡಿಯಾ ಲಿ.' ಕಂಪೆನಿ ಕಲ್ಲಿದ್ದಲು ದರವನ್ನು ಏರಿಸಿತು. ಇದು ಸಿಮೆಂಟ್ ಉತ್ಪಾದನೆ ವೆಚ್ಚವನ್ನು ಹೆಚ್ಚಿಸಿತು. ಪರಿಣಾಮ ಏಪ್ರಿಲ್-ಜೂನ್‌ನಲ್ಲಿ ಸಿಮೆಂಟ್ ಸಗಟು ಧಾರಣೆಯಲ್ಲೂ ತುಸು ಏರಿಕೆಯಾಯಿತು. ದೆಹಲಿ ಮತ್ತು ಬೆಂಗಳೂರಿನಲ್ಲಿ ಪ್ರತಿ ಸಿಮೆಂಟ್ ಚೀಲ ರೂ10ರಷ್ಟು ತುಟ್ಟಿಯಾಯಿತು.

ಚಂಡೀಗಡದಲ್ಲಿ ರೂ17, ಚೆನ್ನೈನಲ್ಲಿ ರೂ 15 ಮತ್ತು ಕೋಲ್ಕತ್ತದಲ್ಲಿ ರೂ 5ರಷ್ಟು ದರ ಏರಿತು.  ಎರಡನೇ ತ್ರೈಮಾಸಿಕದಲ್ಲಿ ಬೇಡಿಕೆ ತಗ್ಗುವುದರಿಂದ ಸಿಮೆಂಟ್ ದರವೂ ಇಳಿಮುಖವಾಗಬಹುದು ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT