ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ತರಿಸುವ ಜಾನಪದ ಸಂಸ್ಕೃತಿಯ ಜೋಕುಮಾರ ಹಬ್ಬ

Last Updated 12 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಹರಪನಹಳ್ಳಿ: `ಅಡ್ಡಡ್ಡ ಮಳೆ ಬಂದ ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ... ಜೋಕುಮಾರ...,. ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡಿದಂತ ಚೆಲುವಿ ತನ್ನ ಮಡಿಯಂದಾ ಜೋಕುಮಾರ....~

-ಹೀಗೆ ತಮ್ಮ ಗಾನಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತಾ ಜೋಕುಮಾರರನ್ನು ಆರಾಧಿಸುವ ಜನಪದಿಯರ ಹಬ್ಬ ಹಳ್ಳಿಗಳಲ್ಲಿ ಆರಂಭವಾಗಿದೆ.

ಜೋಕುಮಾರಸ್ವಾಮಿ ಜನಪದೀಯ ಸಂಸ್ಕೃತಿಯ ವಿಶಿಷ್ಟ ಆಚರಣೆಯ ಹಬ್ಬ. ಜೋಕುಮಾರನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ, ಮಳೆ-ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ ಕೃಷಿ ಪರಂಪರೆಯಲ್ಲಿ ಹಾಸುಹೊಕ್ಕಿದೆ. ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ಪ್ರತೀಕ. ಒಂದು ವಾರಗಳ ಕಾಲ, ಕಾಯಿ-ಕಡುಬಿನ ಭರ್ಜರಿ ಭೂರಿಜೋಜನ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆ-ತಾಯಿ; ಶಿವ-ಪಾರ್ವತಿಗೆ ವರದಿ ಒಪ್ಪಿಸಿದರೆ, ಜಾನಪದ ಸಂಸ್ಕೃತಿಯ ವಾರಸುದಾರನಾದ ಜೋಕುಮಾರ ಸ್ವಾಮಿ `ಭೂಲೋಕದಲ್ಲಿ ಮಳೆ ಇಲ್ಲದೆ, ನರಮನುಷ್ಯ ಸಂಕಷ್ಟದಲ್ಲಿದ್ದಾನೆ. ಹನಿ ನೀರಿಗಾಗಿ ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಮಳೆ ಸುರಿಯದೇ ಹೋದರೆ ಭೂಲೋಕ ನರಕಕೂಪವಾಗುತ್ತದೆ~ ಎಂದು ಜನರ ಕಷ್ಟಕಾರ್ಪಣ್ಯಗಳ ವರದಿ ಒಪ್ಪಿಸಿ ಮಳೆಗಾಗಿ ವಿನಂತಿಸುತ್ತಾನೆ ಎಂಬ ನಂಬಿಕೆ ಇದೆ.

ಜೋಕುಮಾರ ಗಂಗಾಮತ ಸಮುದಾಯದ ಮನೆಯಲ್ಲಿಯೇ ಜನ್ಮ ತಾಳುತ್ತಾನೆ. ಬಾರಿಕರ ದೇವಕ್ಕಾ, ಗಂಗಮ್ಮ, ಚೌಡಮ್ಮ, ರತ್ನಮ್ಮ, ಪಾರ್ವತಿ, ಕಮಲಮ್ಮ, ಜ್ಯೋತಿ ಹಾಗೂ ಇತರರು ಜೋಕುಮಾರನನ್ನು ತಲೆ ಮೇಲೆ ಹೊತ್ತು ಹಾಡು ಹಾಡುತ್ತ ಕಸಬಾ ಹೋಬಳಿಯಲ್ಲಿನ ಊರೂರು ಸುತ್ತುತ್ತಾರೆ.

ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜೋಕುಮಾರ ಹುಟ್ಟುತ್ತಾನೆ. ಮಣ್ಣಿನಿಂದ ತಯಾರಿಸಲಾದ ಮೂರ್ತಿಗೆ ಬೇವಿನ ಎಸಳುಗಳ ಉಡುಗೆಯೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕರ ಮಾಡಲಾಗುತ್ತದೆ. ಅಲಂಕೃತ ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಕತೆ-ಹಾಡುಗಳನ್ನು ಹಾಡುತ್ತ ಸಂಚರಿಸುತ್ತಾರೆ. 7ದಿನಗಳ ಕಾಲ ಸಂಭ್ರಮದಿಂದ ಆಚರಿಸುವ ಜೋಕುಮಾರನನ್ನು, 6ದಿನ 7ಊರುಗಳನ್ನು ಕಾಲ್ನಡಿಗೆಯಲ್ಲಿಯೆ ಸಂಚರಿಸಬೇಕೆಂಬುದು ಆರಾಧಕರು ಹಾಕಿಕೊಂಡಿರುವ ಸಂಪ್ರದಾಯ. ಮನೆಮನೆಗೆ ತೆರಳಿದಾಗ ಭಕ್ತರು ನೀಡುವ ಜೋಳಕ್ಕೆ ಪ್ರತಿಯಾಗಿ ಜೋಕುಮಾರನ ಅರ್ಚಕರು ಕರಿಮಸಿ ಬೆರೆತ ಬೇವಿನ ಸೊಪ್ಪು, ಜೋಳ ಇತ್ಯಾದಿಗಳನ್ನು ಪ್ರತಿಯಾಗಿ ಕೊಡುತ್ತಾರೆ. ಇದನ್ನು ಮಾರನೇ ದಿನ ಬೆಳಗಿನಜಾವ ಜೋಳದ ಪೈರಿಗೆ ಮಜ್ಜಿಗೆಯಲ್ಲಿ ಬೆರಸಿಕೊಂಡು ಚರಗ ಹೊಡೆಯುತ್ತಾರೆ. ಹೀಗೆ ಹೊಡೆಯುವುದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಗ್ರಾಮೀಣರದು.

 ಏಳು ದಿನಗಳ ಸಂಪ್ರದಾಯಿಕ ವಿಧಿ-ವಿಧಾನಗಳು ಮುಗಿದ ನಂತರ, ಪರಿಶಿಷ್ಟರ ಮನೆಯಲ್ಲಿ ಜೋಕುಮಾರನಿಗೆ ಚೂರಿ ಹಾಕುತ್ತಾರೆ. ನಂತರ ಬಟ್ಟೆ ತೊಳೆಯುವ ಅಗಸರ ಬಂಡೆಯ ಅಡಿಯಲ್ಲಿ ಆತನ ಶವ ಹೂತು ಬರುತ್ತಾರೆ. ಏಳು ದಿನಗಳ ಕಾಲ ಊರೂರು ಅಲೆದ ಸಂದರ್ಭದಲ್ಲಿ ಸಂಗ್ರಹವಾದ ದವಸ-ಧಾನ್ಯಗಳಲ್ಲಿ ಅಡುಗೆ ತಯಾರಿಸಿ ಸಾಮೂಹಿಕ ಭೋಜನ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT