ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಂಬಿದ ರೈತರಿಗೆ `ಬರದ ಬರೆ'!

ಬೆಳಗಾವಿ 7
Last Updated 8 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ: `ಹೊಲಕ್ಕ ಬಂದ ನಿಂತ್ರ ಹೊಟ್ಯಾಗ ಬೆಂಕಿ ಬಿದ್ದಂಗ ಆಗತೈತ್ರಿ. ಬಂಗಾರದಾಂಗ ಬರಬೇಕಿದ್ದ ಬೆಳಿ ಒಣಗಿ ನಿಂತೈತ್ರಿ, ನೋಡ್ರಿ...' ಎಂದು ರಾಮದುರ್ಗ ತಾಲ್ಲೂಕಿನ ಕಟಕೋಳ ಗ್ರಾಮದ ರೈತ ಮಹಿಳೆ ದ್ಯಾಮವ್ವ ಹರನಾಳಗಿ ಮರುಗುವುದನ್ನು ಕೇಳುವವರ ಕಣ್ಣಲ್ಲೂ ನೀರು ಬರುತ್ತದೆ.

`ಆಳೆತ್ತರಕ್ಕ ಬೆಳಿಬೇಕಿದ್ದ ಗಿಡ, ಮಳಿ ಇಲ್ಲಾಂತ ಮೂರ ಮೊಣಕ್ಕೇ ಒಣಗೈತ್ರಿ. ಇದ್ನ ದನಕರುನೂ ಸರಿಯಾಗ ತಿನ್ನಾಂಗಿಲ್ರೀ. 30 ಸಾವಿರ ಖರ್ಚು ಮಾಡಿ ಕಾಳ ಬಿತ್ತಿದೆನ್ರಿ. ಒಂದ ರೂಪಾಯಿಯೂ ಕೈಗೆ ಹತ್ತಾಂಗಿಲ್ಲ. ಇದು ಸಾಲದಂತ ಗಿಡಾ ಕೀಳಸಾಕ ಆಳಿಗೆ ರೊಕ್ಕ ಕೊಡಬೇಕಲ್ರೀ. ಹೀಂಗಾದ್ರೆ ಇನ್ನ ರೈತರ ಬಾಳ್ವೆ ಮಾಡಿದಾಂಗೆ...' ಎಂದ ದ್ಯಾಮವ್ವ ತಮ್ಮ ಐದು ಎಕರೆಯಲ್ಲಿ ಒಣಗಿರುವ ಗೋವಿನಜೋಳದ ಬೆಳೆಯನ್ನು ತೋರಿಸಿದರು.

ದ್ಯಾಮವ್ವರ ಮಾತು, ಜಿಲ್ಲೆಯಲ್ಲಿ ಮಳೆ ನೀರನ್ನೇ ನೆಚ್ಚಿಕೊಂಡು ಕೃಷಿಯಲ್ಲಿ ತೊಡಗಿಕೊಂಡ ರೈತರ ಒಡಲಾಳದ ನೋವಿನ ಕಥೆಯನ್ನು ಬಿಂಬಿಸುತ್ತಿದೆ. ಸತತ ಮೂರನೇ ವರ್ಷವೂ ಬರಗಾಲದ ಕಾರ್ಮೋಡ ಜಿಲ್ಲೆಯ ಹಲವು ಹೋಬಳಿಗಳಲ್ಲಿ ಆವರಿಸಿರುವುದರಿಂದ ಮಳೆಯನ್ನೇ ನಂಬಿದ ರೈತರಿಗೆ `ಗಾಯದ ಮೇಲೆ ಬರೆ' ಎಳೆದಂತಾಗಿದೆ.

ಇನ್ನೊಂದೆಡೆ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ನದಿಗಳು ತುಂಬಿ ಹರಿದಿರುವುದರಿಂದ ಚಿಕ್ಕೋಡಿ, ರಾಯಬಾಗ, ಅಥಣಿ, ಗೋಕಾಕ, ಬೈಲಹೊಂಗಲ, ಖಾನಾಪುರ ತಾಲ್ಲೂಕಿನಲ್ಲಿ ನದಿ ಪಾತ್ರದ ರೈತರ ಜಮೀನು ಹಸಿರಿನಿಂದ ಕಂಗೊಳಿಸುತ್ತಿದೆ. ಘಟಪ್ರಭಾ ಹಾಗೂ ಮಲಪ್ರಭಾ ಜಲಾಶಯಗಳ ಕಾಲುವೆಗಳಿಗೆ ನೀರು ಹರಿಸುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಉಳಿದೆಡೆ ಮಳೆಯ ಕೊರತೆಯಿಂದಾಗಿ ಸಾಲು ಸಾಲಾಗಿ ಬೆಳೆ ಒಣಗಿ ನಿಂತಿರುವ ಹೊಲಗಳು ಕಂಡು ಬರುತ್ತಿವೆ. ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕುಗಳಲ್ಲಿ ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿ, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳು ಕಮರುತ್ತಿವೆ. ಕೆಲವೆಡೆ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡದೇ ಇರುವ ರೈತರು, ಉತ್ತರಾ- ಹಸ್ತ ನಕ್ಷತ್ರದಲ್ಲಿ ಉತ್ತಮ ಮಳೆಯಾದರೆ ಹಿಂಗಾರಿನಲ್ಲಾದರೂ ಬೆಳೆ ಕೈಗೆಟಕೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ರಾಮದುರ್ಗ- ಸವದತ್ತಿ ತಾಲ್ಲೂಕಿನ ರೈತರು ಕೆಲಸ ಹುಡುಕಿಕೊಂಡು ಕೊಲ್ಲಾಪುರ, ಗೋವಾ, ಮಂಗಳೂರು ಕಡೆಗೆ ವಲಸೆ ಹೋಗಲು ಆರಂಭಿಸಿದ್ದಾರೆ. ಗ್ರಾಮಗಳ ಕೊಳವೆ ಬಾವಿಗಳು ಬತ್ತಿರುವುದರಿಂದ ಕುಡಿಯುವ ನೀರಿಗೂ ಕೆಲವೆಡೆ ಜನರು ಪರದಾಡುತ್ತಿದ್ದಾರೆ. ರಾಯಬಾಗ ತಾಲ್ಲೂಕಿನಲ್ಲಿ 20, ಚಿಕ್ಕೋಡಿ ತಾಲ್ಲೂಕಿನಲ್ಲಿ 14, ಅಥಣಿಯಲ್ಲಿ 3, ಸವದತ್ತಿಯಲ್ಲಿ 1 ಹಾಗೂ ಹುಕ್ಕೇರಿಯಲ್ಲಿ 2 ಗ್ರಾಮಗಳಿಗೆ ಜಿಲ್ಲಾಡಳಿತವು ಈಗಲೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ.

`ಜೂ

ನ್‌ನಲ್ಲಿ ಎರಡು ದೊಡ್ಡ ಮಳೆ ಬಿದ್ದಾಗ ಉದ್ದು ಬಿತ್ತಿದ್ದೆ. ಎಕರೆಗೆ ಎರಡು ಕ್ವಿಂಟಲ್ ಫಸಲು ಬರಬೇಕಿತ್ತು. ಆದರೆ ಈ ಸಲ ಒಂದು ಕ್ವಿಂಟಲ್ ಬರುವುದೂ ಕಷ್ಟ. ಗಿಡ ಒಣಗಿ, ಕಾಳು ಸಣ್ಣದಾಗಿದೆ. ಇಂಥ  ಉದ್ದನ್ನು ಯಾರಾದರೂ ಖರೀದಿಸಿದರೆ ನಮ್ಮ ಅದೃಷ್ಟ' ಎಂದು ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಪರಪ್ಪ ಸೊಪ್ಪಡಲ ಅವರು ತಮ್ಮ ಎರಡು ಎಕರೆಯಲ್ಲಿ ಒಣಗಿರುವ ಬೆಳೆಯನ್ನು ತೋರಿಸುತ್ತಾರೆ.

ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕು ಹೊರತು ಪಡಿಸಿದರೆ, ರಾಮದುರ್ಗ, ಸವದತ್ತಿ, ರಾಯಬಾಗ, ಅಥಣಿ, ಗೋಕಾಕ, ಹುಕ್ಕೇರಿ, ಬೈಲಹೊಂಗಲ, ಚಿಕ್ಕೋಡಿ ತಾಲ್ಲೂಕುಗಳ ಕೆಲವು ಹೋಬಳಿಗಳಲ್ಲಿ ಮಳೆಯ ಕೊರತೆ ಪ್ರಮಾಣ ಹೆಚ್ಚಿದೆ. ಈ ಭಾಗಗಳಲ್ಲಿ ಮುಂಗಾರಿಗೆ ಬಿತ್ತಿದ್ದ ಹೆಸರು, ಉದ್ದು, ಗೋವಿನಜೋಳ, ಉಳ್ಳಾಗಡ್ಡೆ, ಹತ್ತಿ, ಸೋಯಾಬೀನ್ ಬೆಳೆಗಳು ಕಮರುತ್ತಿವೆ.

ಕೊಳವೆಬಾವಿ ನಂಬಿಕೊಂಡು ಕಬ್ಬು ಬೆಳೆದ ರೈತರಿಗೂ ಬಿಸಿ ತಟ್ಟುತ್ತಿದೆ. ಕೆಲವು ರೈತರು ಮುಂಗಾರಿಗೆ ಬಿತ್ತಿದ್ದ ಬೆಳೆಯನ್ನು ಹರಗಿ, ಹಿಂಗಾರಿನಲ್ಲಿ `ಅದೃಷ್ಟ ಪರೀಕ್ಷೆ'ಗೆ ಸಜ್ಜಾಗುತ್ತಿದ್ದಾರೆ. ಮುಂದಿನ ಮಳೆಯಾದರೂ ಉತ್ತಮವಾಗಿ ಆಗಲಿ ಎಂದು ರೈತರು ಮುಗಿಲಿನತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಶೇ. 88ರಷ್ಟು ಬಿತ್ತನೆ: ಬೆಳಗಾವಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 6.65 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬೆಳೆಯುವ ಗುರಿ ಇದೆ/ ಆದರೆ ಇದುವರೆಗೆ ಬಿತ್ತನೆಯಾಗಿರುವುದು 5.85 ಲಕ್ಷ ಹೆಕ್ಟೇರ್‌ನಲ್ಲಿ (ಶೇ 88) ಮಾತ್ರ. ಮಳೆಯಾಶ್ರಿತ ಪ್ರದೇಶ 3.11 ಲಕ್ಷ ಹೆಕ್ಟೇರ್. ಈ ಪೈಕಿ 2.67 ಲಕ್ಷ ಹೆಕ್ಟೇರ್‌ನಲ್ಲಿ (ಶೇ 86) ಬಿತ್ತನೆಯಾಗಿದೆ. ನೀರಾವರಿ ಪ್ರದೇಶ 3.53 ಲಕ್ಷ ಹೆಕ್ಟೇರ್. ಈ ಪೈಕಿ 3.17 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

`ಶೀಘ್ರ ಸಮೀಕ್ಷೆ'

`ಮಳೆಯ ತೀವ್ರ ಕೊರತೆಯಿಂದಾಗಿ ರಾಮದುರ್ಗ ತಾಲ್ಲೂಕಿನಲ್ಲಿ 16,606 ಹೆಕ್ಟೇರ್ ಹಾಗೂ ಸವದತ್ತಿ ತಾಲ್ಲೂಕಿನಲ್ಲಿ 13,556 ಹೆಕ್ಟೇರ್ ಬೆಳೆ ಹಾನಿ ಅಂದಾಜು ಮಾಡಲಾಗಿದೆ. ನಿಖರವಾಗಿ ಬೆಳೆ ಹಾನಿ ಬಗ್ಗೆ ವರದಿ ಸಿದ್ಧಪಡಿಸಲು ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು' ಎಂದು ಕೃಷಿ ಜಂಟಿ ನಿರ್ದೇಶಕ ವೆಂಕಟರಾಮರೆಡ್ಡಿ ಪಾಟೀಲ `ಪ್ರಜಾವಾಣಿ'ಗೆ  ತಿಳಿಸಿದರು.

`ಜಿಲ್ಲೆಯ ಹಲವೆಡೆ ಮಳೆ ಸಮರ್ಪಕವಾಗಿ ಆಗಿಲ್ಲ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆಯಾಗಿದ್ದರೂ ತೇವಾಂಶದ ಕೊರತೆಯಿಂದಾಗಿ ಇಳುವರಿ ಗಣನೀಯವಾಗಿ ಕುಸಿಯಲಿದೆ' ಎಂದು ಅವರು ಅಭಿಪ್ರಾಯಪಟ್ಟರು. `ಬೈಲಹೊಂಗಲ, ಕಿತ್ತೂರು, ನೇಸರಗಿ, ಬೆಳಗಾವಿ, ಹಿರೇಬಾಗೇವಾಡಿ, ಕಾಕತಿ, ಗೋಕಾಕ, ಹುಕ್ಕೇರಿ, ಖಾನಾಪುರ, ಬೀಡಿ, ರಾಮದುರ್ಗ, ಕಟಕೋಳ, ರಾಯಬಾಗ, ಮುರಗೋಡ ಹೋಬಳಿಗಳಲ್ಲಿ ಜುಲೈ- ಆಗಸ್ಟ್ ತಿಂಗಳ ಅವಧಿಯಲ್ಲಿ ಸತತ ನಾಲ್ಕು ವಾರಗಳ ಕಾಲ ಮಳೆಯಾಗಿರಲಿಲ್ಲ. ಇದರಿಂದಾಗಿ ಬೆಳೆ ಸಮೃದ್ಧವಾಗಿ ಬೆಳೆದಿಲ್ಲ' ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT