ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಿನ ನೈಸರ್ಗಿಕ ನಿಂಬೆ

ಅಮೃತ ಭೂಮಿ 56
Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇವರ ತೋಟದಲ್ಲಿರುವ 120 ನಿಂಬೆ ಗಿಡಗಳು ಎಂಟು ವರ್ಷಗಳಿಂದ ಕೇವಲ ಮಳೆ ನೀರನ್ನೇ ಕುಡಿದು ನಳನಳಿಸುತ್ತಿವೆ. ಬೇರೆ ನೀರಿನ ವ್ಯವಸ್ಥೆ ಬೇಡದ ಈ ಗಿಡಗಳು ಲಕ್ಷ ಲಕ್ಷ ರೂಪಾಯಿಗಳನ್ನು ತನ್ನ ಒಡೆಯನಿಗೆ ನೀಡುತ್ತಿವೆ!

ಇದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ರಾಜಶೇಖರ ನಿಂಬರಗಿ ಅವರ ತೋಟದ ಗಿಡಗಳ ಚಮತ್ಕಾರ. ಇದಕ್ಕೆ ಕಾರಣ ನೈಸರ್ಗಿಕ ಕೃಷಿ. ರಾಸಾಯನಿಕದ ಲವಶೇಷವೂ ಇಲ್ಲದೇ ಅವರ ಜಮೀನಿನಲ್ಲಿರುವ ತೊಗರಿ, ಕಡಲೆ ಬೇಳೆಗಳೂ ಇದೇ ಚಮತ್ಕಾರ ತೋರಿಸಿವೆ. ನೈಸರ್ಗಿಕ ವಿಧಾನದಲ್ಲಿಯೇ ಬೆಳೆದ ಕಡಲೆ ಎಕರೆಗೆ 8 ರಿಂದ 10 ಕ್ವಿಂಟಲ್‌ ಬೆಳೆ ನೀಡಿದ್ದರೆ, ತೊಗರಿ 5ರಿಂದ 6 ಕ್ವಿಂಟಲ್‌ನಷ್ಟು ಫಸಲು ದೊರಕಿಸಿಕೊಟ್ಟಿದೆ

‘ಆರಂಭದ 3-–4 ವರ್ಷ ಬೇಸಾಯದ ಕಡೆ ಹೆಚ್ಚಿನ ಲಕ್ಷ್ಯ ವಹಿಸಿ. ಆ ನಂತರ ಆ ಬೇಸಾಯವೇ ನಿಮ್ಮ ಬದುಕನ್ನು ಬದಲಿಸುತ್ತದೆ. ದಿಢೀರ್‌ ದುಡ್ಡು ಮಾಡುವ ಆಸೆಗೆ ಒಳಗಾಗದೆ ಕೆಲ ವರ್ಷ ಕಾದರೆ ಜೀವನಪೂರ್ತಿ ಹರ್ಷ ನಿಮ್ಮದಾಗುತ್ತದೆ’ ಎನ್ನುವ  ರಾಜಶೇಖರ ಶೂನ್ಯ ಬಂಡವಾಳದಿಂದ ನಿಮಗೆ ಬೇಕಾದ್ದನ್ನು ಪಡೆಯಬಹುದು ಎನ್ನುತ್ತಾರೆ, ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ.

‘ನೈಸರ್ಗಿಕ ಕೃಷಿ ಭೂಮಿಯನ್ನು ಫಲವತ್ತಾಗಿಡುತ್ತದೆ. ಪರಿಸರವನ್ನು ಸ್ವಚ್ಛವಾಗಿಡುತ್ತದೆ. ಆರಂಭದಲ್ಲಿ ತುಸು ಕಷ್ಟಪಟ್ಟರೆ ನಂತರ ನಿಗದಿತ ಆದಾಯ, ಉತ್ತಮ ಬೆಳೆ, ಉತ್ತಮ ಆರೋಗ್ಯ ನೀಡುವುದಲ್ಲದೇ ಮನಸ್ಸಿಗೆ ಆನಂದ ನೀಡುತ್ತದೆ. ಸ್ವಲ್ಪ ಜಮೀನಿನಲ್ಲಿಯೇ ಕುಟುಂಬಕ್ಕೆ ಅಗತ್ಯವಿರುವ ದವಸ ಧಾನ್ಯ ಬೆಳೆದುಕೊಳ್ಳಬಹುದು’ ಎನ್ನುತ್ತಾರೆ ಅವರು.

ಜೀವಾಮೃತವೇ ಜೀವಾಳ
ನೈಸರ್ಗಿಕ ಕೃಷಿಯ ಜೀವವೇ ಜೀವಾಮೃತ ಎನ್ನುವ ರಾಜಶೇಖರ್‌, ಅದನ್ನು ಸಿದ್ಧಗೊಳಿಸುವ ಬಗೆ ವಿವರಿಸುತ್ತಾರೆ: 10 ಲೀಟರ್‌ ದೇಸಿ ಆಕಳ ಮೂತ್ರ, 10 ಕೆ.ಜಿ ಸಗಣಿ, 2 ಕಿಲೋ ದ್ವಿದಳ ಧಾನ್ಯದ ಹಿಟ್ಟು, 2 ಕೆ.ಜಿ ನೈಸರ್ಗಿಕ  ಬೆಲ್ಲ, ಒಂದು ಮುಟ್ಟಿಗೆ ಜೀವಾಣುಯುಕ್ತ ಮಣ್ಣು (ಬೇಲಿಯೊಳಗಿನ ಮಣ್ಣು) ಇದೆಲ್ಲವನ್ನು ಸಂಗ್ರಹಿಸಿ 200 ಲೀಟರ್‌ (ಒಂದು ಬ್ಯಾರೆಲ್‌) ನೀರಿನಲ್ಲಿ ಚೆನ್ನಾಗಿ ಬೆರೆಸಿ, ನೆರಳಲ್ಲಿ ಇಟ್ಟು ದಿನಕ್ಕೆ ಮೂರು ಬಾರಿಯಂತೆ 2 ದಿವಸಗಳ ಕಾಲ ಎಡದಿಂದ ಬಲಕ್ಕೆ ಚೆನ್ನಾಗಿ ಮಿಶ್ರಣ ಮಾಡಬೇಕು. ಆಗ ಜೀವಾಮೃತ ಸಿದ್ಧವಾಗುತ್ತದೆ. ಇದನ್ನು 5 ದಿವಸಗಳ ಒಳಗಡೆ ಒಂದು ಎಕರೆಗೆ ಸಿಂಪಡಿಸಬಹುದು.

ಇದರಲ್ಲಿದ್ದ ಸಗಣಿಯ ಪೈಕಿ ಒಂದು ಗ್ರಾಂ ಸಗಣಿಯಲ್ಲಿ 500 ಕೋಟಿ ಬಾಸಲಸ್‌ ಬ್ಯಾಕ್ಟೀರಿಯಾಗಳಿರುತ್ತವೆ. ಇವು ಪ್ರತಿ 20 ನಿಮಿಷಕ್ಕೆ ಒಂದು ಸಲ ದ್ವಿಗುಣಗೊಳ್ಳುತ್ತವೆ. ಇವು ಬೆಳೆಗಳಿಗೆ ಅಗತ್ಯವಿರುವ ರಂಜಕ, ಸಾರಜನಕ, ಪೊಟ್ಯಾಷ್‌ ಅಲ್ಲದೇ ಬೆಳೆಗೆ ಅಗತ್ಯವಾಗಿರುವ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಪದ್ಧತಿಯನ್ನು ಎಲ್ಲಾ ಬೆಳೆಗಳಿಗೂ ಪ್ರಯೋಗ ಮಾಡಬಹುದು.

ಕೀಟಗಳ ನಾಶಕ್ಕೆ ಈ ‘ಅಸ್ತ್ರ’
ಕೀಟಬಾಧೆ ತಪ್ಪಿಸಲು ನೈಸರ್ಗಿಕ ವಿಧಾನ ಹೀಗಿದೆ:

ನೀಮಾಸ್ತ್ರ: 5 ಕೆ.ಜಿ ಬೇವಿನಕಾಯಿ ಚೆನ್ನಾಗಿ ಕುಟ್ಟಿ ಪುಡಿ ಮಾಡಬೇಕು. ಇದನ್ನು 100 ಲೀಟರ್‌ ನೀರಿನಲ್ಲಿ ಬೆರೆಸಿ ಬೆಳೆಗಳಿಗೆ ಸಿಂಪರಣೆ (ಸ್ಪ್ರೇ) ಮಾಡಬೇಕು.

ಅಗ್ನಿಅಸ್ತ್ರ: 18 ಲೀಟರ್‌ ಗೋಮೂತ್ರದಲ್ಲಿ 2 ಕೆ.ಜಿ ಖಾರವಿರುವ ಹಸಿ ಮೆಣಸಿನಕಾಯಿಯನ್ನು ಚೆನ್ನಾಗಿ ಕುಟ್ಟಿ ಚಟ್ನಿ ಮಾಡಬೇಕು. ಇದರ ಜೊತೆಗೆ 1 ಕೆ.ಜಿ ಬೆಳ್ಳುಳ್ಳಿ ಕುಟ್ಟಿ ಚಟ್ನಿ ಮಾಡಿ ಬೆರೆಸಬೇಕು. 3 ಕೆ.ಜಿ ಬೇವಿನ ತಪ್ಪಲು ಕುಟ್ಟಿ ಬೆರೆಸಿ ಹರವಿಯಲ್ಲಿ (ಮಣ್ಣಿನ ಗಡಿಗೆ) ಯಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. 4 ಸಲ ಉಕ್ಕು ಬರುವಂತೆ ಕುದಿಸಬೇಕು. ಇದನ್ನು ಒಂದು ದಿವಸ ಮುಚ್ಚಿಡಬೇಕು. ಸಂಪೂರ್ಣ ಆರಿದ ನಂತರ ಅದನ್ನು ಸೋಸಿ ಉಪಯೋಗಿಸಬೇಕು. ಎಲ್ಲಾ ಬೆಳೆಗಳಿಗೆ ಸಿಂಪರಣೆ ಮಾಡಬಹುದು. ಇದರಿಂದ ಯಾವುದೇ ಜಾತಿಯ ಕೀಟಗಳಿರಲಿ, ಹುಳಗಳಿರಲಿ ಕ್ಷಣಾರ್ಧದಲ್ಲಿ ಸಾಯುತ್ತವೆ. ಮತ್ತೆ ಬೆಳೆಗಳ ಸಹವಾಸಕ್ಕೆ ಬರುವುದಿಲ್ಲ ಎನ್ನುತ್ತಾರೆ ನಿಂಬರಗಿ.

ಈ ಪ್ರಯೋಗದ ಜೊತೆಗೆ ಹಣ್ಣಿನ ಗಿಡಗಳಿದ್ದರೆ, ಇಲ್ಲವೇ ದೀರ್ಘಕಾಲದ ಬೆಳೆಗಳಿದ್ದರೆ, ಅಂತಹ ಬೆಳೆಗಳಲ್ಲಿಯ ಭೂಮಿಗೆ ಮಲ್ಚಿಂಗ್‌ (ಹೊದಿಕೆ) ಮಾಡಬೇಕು. ಈ ಮಾದರಿ ಅತಿ ಸರಳವಾದದ್ದು. ಜಮೀನಿನಲ್ಲಿ ಸಿಗುವ ಕೃಷಿ ತ್ಯಾಜ್ಯ ವಸ್ತುಗಳಿಂದ ಭೂಮಿಯನ್ನು ಮುಚ್ಚಬೇಕು. ಇದರಿಂದ ತೇವಾಂಶ ಕಾಪಾಡಬಹುದು. ಭೂಮಿ ಬಿರುಕು ಬಿಡುವುದಿಲ್ಲ, ಮಳೆಯ ನೀರು ಒಂದು ಹನಿ ಕೂಡಾ ಹೊರಗೆ ಹೋಗುವುದಿಲ್ಲ. ಕಳೆಗಳು ಏಳುವುದಿಲ್ಲ, ಪೋಷಕಾಂಶಗಳು ಆವಿಯಾಗಿ ಹೋಗುವುದಿಲ್ಲ, ಅನಂತಕೋಟಿ ಸೂಕ್ಷ್ಮಾಣುಗಳು ಮತ್ತು ಎರೆಹುಳಗಳು ಅಲ್ಲಿ ವಾಸ ಮಾಡುತ್ತವೆ. ಇದರಿಂದ ಬೆಳೆಗೆ ಎಲ್ಲಾರೀತಿಯ ಪೋಷಕಾಂಶಗಳು ಸಿಗುತ್ತವೆ.

ಇಷ್ಟೇ ಅಲ್ಲದೇ, ಮಲ್ಚಿಂಗ್‌ ಮಾಡಿದ ಜಮೀನಿನಲ್ಲಿ ಮಡಿ ಮಾಡುವ ಅಗತ್ಯವಿಲ್ಲ, ಕಳೆ ತೆಗೆಯುವ ಅಗತ್ಯವಿಲ್ಲ, ಇದರಿಂದ ರೈತನ ಶ್ರಮ ಉಳಿಯುತ್ತದೆ. ನೀರಿನ ಅಗತ್ಯವೂ ಇಲ್ಲ . ಇದನ್ನು ನಿಂಬರಗಿ ಅವರು ಸಿದ್ಧಮಾಡಿ ತೋರಿಸಿದ್ದಾರೆ.

ಕೃಷಿ ತ್ಯಾಜ್ಯ ವಸ್ತುಗಳಿಂದ ಸಿದ್ಧಗೊಳಿಸಿದ ನೈಸರ್ಗಿಕ  ಗೊಬ್ಬರವನ್ನು ಸಿದ್ಧಗೊಳಿಸಿ, ಒಣಗಿಸಿ ಜಮೀನಿನಲ್ಲಿ ಬಿತ್ತಬೇಕು. ಇದರಿಂದ ಜಮೀನು ಹದವಾಗುವುದಲ್ಲದೇ ಮೃದುವಾಗಿ ಉಳಿಯುತ್ತದೆ. ದೀರ್ಘಕಾಲದವರೆಗೆ ಯಾವುದೇ ಕೀಟ ನಾಶಕಗಳಾಗಲಿ, ರೋಗಗಳಾಗಲಿ ಬರುವುದಿಲ್ಲ. ಈ ಬೇಸಾಯ ಪದ್ಧತಿ ಖುಷ್ಕಿಯಲ್ಲಿ ಮತ್ತು ನೀರಾವರಿ ಎರಡರಲ್ಲಿಯೂ ಉಪಯೋಗಿಸಬಹುದು.

ಆರೋಗ್ಯಕ್ಕೆ ಉತ್ತಮ
‘ಈ ರೀತಿಯ ಬೇಸಾಯದಿಂದ ಬೆಳೆದ ದವಸ ಧಾನ್ಯಗಳನ್ನು ಉಪಯೋಗಿಸಿದರೆ ರೋಗಗಳು ಬರುವುದಿಲ್ಲ. ಇಂತಹ ಜಮೀನಿನಲ್ಲಿ ಬೆಳೆದ ತೆಂಗಿನ ಕಾಯಿಗಳಿಂದ ತೆಗೆದ ಎಣ್ಣೆ ಉಪಯೋಗಿಸಿದರೆ ಕೂದಲು ಉದುರುವುದಿಲ್ಲ. ಚರ್ಮರೋಗಗಳು ಬರುವುದಿಲ್ಲ. ಇದನ್ನು ನಾನು ಕಳೆದ 12 ವರ್ಷಗಳಿಂದಲೂ ಪ್ರಯೋಗ ಮಾಡಿದ್ದೇನೆ. ನನ್ನ ಕುಟುಂಬದ ಯಾವೊಬ್ಬ ಸದಸ್ಯರೂ ಇಲ್ಲಿಯವರೆಗೆ ಆಸ್ಪತ್ರೆಗೆ ಹೋಗಿಲ್ಲ’ ಎನ್ನುತ್ತಾರೆ ರೈತ ರಾಜಶೇಖರ ನಿಂಬರಗಿ. ಅವರ ಮಗಳು ದಾಕ್ಷಾಯಣಿ ಕೂಡಾ ಇದನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ಸಂಪರ್ಕ ಸಂಖ್ಯೆ 9972612756.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT