ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹ: ಮಾ. 31ರವರೆಗೆ ಅವಕಾಶ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 60x40 ಚದರ ಅಡಿ ಹಾಗೂ ಅದಕ್ಕಿಂತಲೂ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾರ್ಚ್ 31ವರೆಗೆ ಕಾಲಾವಕಾಶ ನೀಡಿದೆ.

ಈ ಅವಧಿಯೊಳಗೆ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಕಡಿತಗೊಳಿಸಲು ಜಲಮಂಡಳಿ ನಿರ್ಧರಿಸಿದೆ. ಈ ಹಿಂದೆ ಡಿ. 31ರವರೆಗೆ ನೀಡಿದ್ದ ಗಡುವನ್ನು ಬಿಬಿಎಂಪಿ ಕೋರಿಕೆ ಮೇರೆಗೆ ಜಲಮಂಡಳಿ ಮಾ. 31ರವರೆಗೆ ವಿಸ್ತರಿಸಿದೆ.

ನಗರದಲ್ಲಿ 60x40 ಚದರ ಅಡಿ ಹಾಗೂ ಅದಕ್ಕಿಂತಲೂ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ 55 ಸಾವಿರ ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಇದುವರೆಗೆ 35 ಸಾವಿರ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲಾಗಿದೆ. ಇನ್ನು, 20 ಸಾವಿರ ಕಟ್ಟಡಗಳ ಮಾಲೀಕರು ಮಾ. 31ರೊಳಗಾಗಿ ಮಳೆ ನೀರು ಸಂಗ್ರಹ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

`ಕಟ್ಟಡ ಮಾಲೀಕರು ನಿಗದಿತ ಅವಧಿಯೊಳಗೆ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲು ಬದ್ಧತೆ ಪ್ರಮಾಣ ಪತ್ರವನ್ನು ಜಲಮಂಡಳಿಗೆ ನೀಡಬೇಕಾಗುತ್ತದೆ. ಈಗಾಗಲೇ ಇಂತಹ ಸುಮಾರು 1500 ಅರ್ಜಿಗಳನ್ನು ಮಂಡಳಿ ಸ್ವೀಕರಿಸಿದೆ~ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್ ಟಿ. ವೆಂಕಟರಾಜು `ಪ್ರಜಾವಾಣಿ~ಗೆ ತಿಳಿಸಿದರು.

`ಈ ರೀತಿ ಕಾಲಾವಕಾಶ ವಿಸ್ತರಿಸಲು ಜಲಮಂಡಳಿಗೆ ಕಾಯ್ದೆಯಡಿ ಪರೋಕ್ಷವಾದ ಅಧಿಕಾರವನ್ನು ಸರ್ಕಾರ ನೀಡಿದೆ. ಇದನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ನಂತರವೂ ಈ ವಿಧಾನವನ್ನು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ~ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT