ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂತು: ಮೈದಳೆದ ಬಿತ್ತನೆ ಸಂಭ್ರಮ

Last Updated 18 ಜುಲೈ 2012, 6:50 IST
ಅಕ್ಷರ ಗಾತ್ರ

ಕೋಲಾರ: ಹಲವು ದಿನಗಳಿಂದ ಮಳೆಗಾಗಿ ಕಾದಿದ್ದ ಜಿಲ್ಲೆಯ ಬಹಳಷ್ಟು ರೈತರು ಈಗ ಬಿತ್ತನೆ ಸಂಭ್ರಮದಲ್ಲಿದ್ದಾರೆ. ಶನಿವಾರ, ಭಾನುವಾರ ಮತ್ತು ಸೋಮವಾರ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಬಿತ್ತನೆಗೆ ಬೇಕಾದಷ್ಟು ಮಳೆ ಸುರಿದಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.

ಜುಲೈ 14ರ ರಾತ್ರಿಯಿಂದ ಶುರುವಾದ ಮಳೆ ಸೋಮವಾರದವರೆಗೂ ಆಗಾಗ ಬಿಡುವು ನೀಡಿ ಸುರಿದಿತ್ತು. 15ರಂದು ಆದ ಮಳೆಯೇ ಇಲ್ಲಿವರೆಗಿನ ಗಟ್ಟಿ ಮಳೆ. ಕೋಲಾರ ತಾಲ್ಲೂಕಿನಲ್ಲಿ 60 ಮಿ.ಮೀ ಮಳೆ ಸುರಿದಿದ್ದರೆ ಮುಳಬಾಗಲಿನಲ್ಲಿ 44 ಮಿ.ಮೀ ಮಳೆ ಸುರಿದಿದೆ.
 
ಶ್ರೀನಿವಾಸಪುರದಲ್ಲಿ 29 ಮಿ.ಮೀ, ಮಾಲೂರಿನಲ್ಲಿ 33 ಮಿ.ಮೀ ಹಾಗೂ ಬಂಗಾರಪೇಟೆಯಲ್ಲಿ 36 ಮಿ.ಮೀ ಮಳೆ ಸುರಿದಿದೆ. ಜುಲೈ ಮಧ್ಯಭಾಗದವರೆಗೆ ಒಟ್ಟು 95 ಮಿ.ಮೀ ಮಳೆ ಸುರಿದಿದೆ ಎಂಬುದು ಕೃಷಿ ಇಲಾಖೆ ಮೂಲಗಳ ನುಡಿ. ಸೋಮವಾರ ರಾಬರ್ಟ್‌ಸನ್‌ಪೇಟೆಯ ಹೋಬಳಿಯೊಂದರಲ್ಲಿ ಮಾತ್ರ ಅಲ್ಲಲ್ಲಿ ಮಳೆ ಸುರಿದಿದೆ. ಉಳಿದಂತೆ ಮಳೆ ಬಿಡುವು ನೀಡಿದೆ. ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ 286 ಮಿ.ಮೀ ಮಳೆ ಸುರಿದಿದೆ.

ಮಳೆ ಬಂದು ಬಿತ್ತನೆ ಸಂಭ್ರಮ ಮೂಡಿದ್ದರೂ ಬಿತ್ತನೆ ಅಧಿಕ ಪ್ರಮಾಣದಲ್ಲಿ ಇನ್ನೂ ಆರಂಭವಾಗಿಲ್ಲ. 7925 ಹೆಕ್ಟೇರ್‌ನಷ್ಟು ಮಾತ್ರ ಬಿತ್ತನೆಯಾಗಿದೆ. ನೆಲಗಡಲೆ 6900 ಹೆ, ತೊಗರಿ 600 ಹೆ, ಅವರೆ 500 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ರಾಗಿ ಗಮನಾರ್ಹ ಪ್ರಮಾಣದ ಬಿತ್ತನೆ ಆಗಿಲ್ಲ. ಬಿತ್ತನೆಯ ಪ್ರಗತಿ ಇನ್ನು ಶುರು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಇಷ್ಟು ದಿನ ಕಾದ ಬಳಿಕ ಮಳೆ ಬಂದಿದೆ. ಆದರೆ ಭೂಮಿಯಲ್ಲಿ ತೇವಾಂಶ ಹೆಚ್ಚಿದೆ. ಹೀಗಾಗಿ ಸದ್ಯಕ್ಕೆ ಕಳೆಯನ್ನು ಕಿತ್ತು ಭೂಮಿಯನ್ನು ಹದಗೊಳಿಸುವೆ. ಮೂರ‌್ನಾಲ್ಕು ದಿನ ಕಳೆದ ಬಳಿಕ ರಾಗಿ ಬಿತ್ತನೆ ಮಾಡುವ ಬಗ್ಗೆ ಯೋಚಿಸಬೇಕು ಎಂದು ತಾಲ್ಲೂಕಿನ ಹೊಗರಿ ಗ್ರಾಮದ ನಾರಾಯಣಸ್ವಾಮಿ ಮಂಗಳವಾರ `ಪ್ರಜಾವಾಣಿ~ಗೆ ತಿಳಿಸಿದರು.

ಮಳೆ ಬಂದ ಹಿನ್ನೆಲೆಯಲ್ಲಿ ಅವರು, ಈ ಹಿಂದೆಯೇ ಉತ್ತಿದ್ದ ಒಂದೂವರೆ ಎಕರೆ ಜಮೀನಿನಲ್ಲಿ ಕಳೆಯನ್ನು ಕೀಳುತ್ತಿದ್ದರು. ನಾಳೆಯಿಂದ ಸಾಲು ಹೊಡೆಯುವ ಕೆಲಸ ಶುರು ಮಾಡುತ್ತೇನೆ. ನಂತರ ಬಿತ್ತನೆ ಮಾಡುತ್ತೇನೆ ಎಂದು ಅವರು ಹೇಳಿದರು.

ಜಮೀನಿನ ಒಂದು ಭಾಗದಲ್ಲಿ ಅವರು ನಾಟಿ ಪೈರನ್ನು ಸಿದ್ಧಗೊಳಿಸುತ್ತಿದ್ದಾರೆ. ಅವರ ಜಮೀನಿನಲ್ಲಿರುವ ಕೊಳವೆ ಬಾವಿ ಬತ್ತಿದ್ದರಿಂದ ಮಳೆ ಬರುವ ಮುನ್ನ ಜಮೀನಿನ ಬಳಿಯ ಮತ್ತೊಬ್ಬ ರೈತರ ಕೊಳವೆಬಾವಿಯಿಂದ ನೀರು ಪಡೆದು ಪೈರಿಗೆ ಹರಿಸಿದ್ದರು. ಮೂರು ದಿನದ ಹಿಂದೆ ಬಂದ ಮಳೆಗೆ ಭೂಮಿ ಹೆಚ್ಚು ತೇವವಾಗಿದೆ. ಬಿತ್ತನೆ ಮಾಡಲು ಆಗಲ್ಲ. ಇನ್ನಷ್ಟು ದಿನ ಕಾದು ಬಿತ್ತನೆ ಮಾಡುತ್ತೇನೆ.
 
ಅಲ್ಲಿವರೆಗೂ ಸಾಲು ಹೊಡೆದಿರುತ್ತೇನೆ. ಮಳೆ ಬರದಿದ್ದರೆ ಕೊಳವೆಬಾವಿ ನೀರನ್ನೇ ಬಳಸಿ ಜಮೀನಿನಲ್ಲಿ ರಾಗಿ ನಾಟಿ ಮಾಡಬೇಕು ಎಂದು ಅವರು ತಿಳಿಸಿದರು.ಹದವಾಗಿ ಮಳೆ ಸುರಿದಿರುವ ಕಡೆ ಬಿತ್ತನೆ ಸೋಮವಾರದಿಂದಲೇ ಶುರುವಾಗಿದೆ. ಮಳೆ ಹೆಚ್ಚು ಸುರಿದಿರುವ ಪ್ರದೇಶಗಳಲ್ಲಿ ಬುಧವಾರ ಅಥವಾ ಗುರುವಾರದಿಂದ ಬಿತ್ತನೆ ಶುರುವಾಗಲಿದೆ. ಸನ್ನಿವೇಶವನ್ನು ಆಧರಿಸಿ ಬಿತ್ತನೆ ಪ್ರಗತಿ ಕಾಣಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT