ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೂ ಬದಲಾಗದ ಶೇಂಗಾ ಬೆಳೆ ಸ್ಥಿತಿ

Last Updated 14 ಅಕ್ಟೋಬರ್ 2011, 8:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಒಂದು ತಿಂಗಳಿನಿಂದ ತಾಲ್ಲೂಕಿನಲ್ಲಿ ಮಾಯವಾಗಿದ್ದ ವರುಣ ಮತ್ತೆ ಬಂದರೂ ಸಹ ರೈತರಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಪಷ್ಟವಾಗಿದೆ.

ಒಂದು ತಿಂಗಳಿಗೂ ಹೆಚ್ಚು ಅವಧಿ ಪೂರ್ಣ ಪ್ರಮಾಣದಲ್ಲಿ ಮಳೆ ಕೈಕೊಟ್ಟಿದ್ದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲಾಗಿದ್ದ ಬೆಳೆಗಳು ಒಣಗಿ ರೈತರ ಕೈಸುಟ್ಟಿವೆ. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆ ಮಾಡಿರುವ ರೈತರಿಗೆ ಯಾವುದೇ ಕಾರಣಕ್ಕೂ ಬಿತ್ತನೆಗೆ ಮಾಡಿರುವ ಖರ್ಚು ಸಹ ವಾಪಸ್ ಬರುವುದಿಲ್ಲ ಎಂಬುದು ಖಚಿತ ಎಂದು ಹಿರಿಯ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಕೆಂಗೇಗೌಡ ಗುರುವಾರ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಎರಡು ಹಂತಗಳಲ್ಲಿ ಅಂದಾಜು 23 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ವಾಡಿಕೆಯಂತೆ ಈ ವರ್ಷ ಒಟ್ಟು 350 ಮಿಮೀ ಮಳೆ ಬೀಳ ಬೇಕಾಗಿದ್ದು,ಇದುವರೆಗೆ 250 ಮಿಮೀ ಮಳೆ ಬಿದ್ದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 81.6 ಮಳೆ ಬರಬೇಕಾಗಿದ್ದು (ಉತ್ತರೆ ಮಳೆ) ಕೇವಲ 5.9 ಮಿಮೀ ಮಳೆ ಬಿದ್ದಿದೆ ಎಂದು ಹೇಳಿದರು.

ಉತ್ತರೆ ಮಳೆ ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ ಒಂದನೇ ಹಂತದಲ್ಲಿ ಬಿತ್ತನೆ ಮಾಡಿದ ಗಿಡಗಳಲ್ಲಿ ಹೂಡುಗಳು ಒತ್ತಿ ಹೋಗಿದೆ. ಎರಡನೇ ಹಂತದಲ್ಲಿ ಬಿತ್ತನೆ ಮಾಡಿದ ಗಿಡಗಳಲ್ಲಿನ ಹೂವುಗಳು ಒಣಗುವ ಜತೆಗೆ ನೆಲದೊಳಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಪ್ರಥಮ ಹಂತದಲ್ಲಿ ಬಿತ್ತನೆ ಮಾಡಿದ ರೈತರಿಗಿಂತ ಹೆಚ್ಚಿನ ನಷ್ಟ ದ್ವಿತೀಯ ಹಂತದಲ್ಲಿ ಬಿತ್ತನೆ ಮಾಡಿದ ರೈತರಿಗೆ ಆಗಲಿದೆ ಎಂದು ಕೆಂಗೇಗೌಡ ಮಾಹಿತಿ ನೀಡಿದರು.

ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಯಂತೆ ಒಟ್ಟು 96.3 ಮಿಮೀ ಮಳೆ ಬರಬೇಕಿದ್ದು, ಈವರೆಗೆ 24.7 ಮಿಮೀ ಮಳೆ ಬಿದ್ದಿದೆ. ಇದು ಜಾನುವಾರುಗಳಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಮೇವು ಬೆಳೆಯಲು ಸಹಕಾರಿಯಾಗಿದೆ. ಆದರೆ ಬಿತ್ತನೆ ಮಾಡಿದ ಬೆಳೆಗಳಿಗೆ ಯಾವುದೇ ಲಾಭ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲ್ಲೂಕು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ಸಹ ಗೋಶಾಲೆಗಳು ಆರಂಭವಾಗಿಲ್ಲ. ಗುಳೆ ತಡೆಯಲು ಉದ್ಯೋಗಖಾತ್ರಿ ಯೋಜನೆ ಸ್ಥಗಿತವಾಗಿದೆ. ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ  ಕಂಡುಬಂದಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಮಾಡದೇ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT