ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೂ ಮುಂಜಾಗ್ರತೆ ಇಲ್ಲ!

Last Updated 11 ಏಪ್ರಿಲ್ 2011, 6:05 IST
ಅಕ್ಷರ ಗಾತ್ರ

ಹಾಸನ:ಒಂದು ಅಡ್ಡ ಮಳೆಗಾಗಿ ಕಾಯುತ್ತಿದ್ದ ಹಾಸನದ ಜನರಿಗೆ ಶನಿವಾರ ರಾತ್ರಿ ವರುಣ ಒಲಿದಿದ್ದಾನೆ. ಈಬಾರಿ ಬೇಸಿಗೆಯ ಬಿಸಿಲು ಉತ್ತುಂಗಕ್ಕೆ ಏರುವುದಕ್ಕೂ ಸ್ವಲ್ಪ ಮುಂಚಿತವಾಗಿಯೇ ಹಾಸನದಲ್ಲಿ ಬಿಸಿಲ ಝಳ ಜನರನ್ನು ಕಾಡಿತ್ತು. ಶನಿವಾರ ರಾತ್ರಿ ಹಾಗೂ ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೆ ಸುರಿದ ಮಳೆ ನಗರಕ್ಕೆ ತಂಪೆರೆದಿದೆ.

ನಗರದ ಜನರಿಗೆ ಮಾತ್ರವಲ್ಲ, ಸುತ್ತಲಿನ ರೈತರಿಗೂ ಮಳೆ ಸಂತಸ ತಂದಿದೆ. ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರೆಲ್ಲರೂ ಸಿದ್ಧತೆ ಮಾಡಿಕೊಂಡಿದ್ದರೆ, ರೈತರು ಗದ್ದೆಗಳನ್ನು ಹದ ಮಾಡಲು ಒಂದೆರಡು ಮಳೆಯಾಗಬೇಕು ಎಂಬ ನಿರೀಕ್ಷೆಯಲ್ಲಿದ್ದರು. ಕಾಫಿ ಗಿಡಗಳೂ ಸಹ ಹೂವು ಬಿಟ್ಟಿದ್ದು ಬೆಳೆಗಾರರು ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಶನಿವಾರ ಹಾಗೂ ಭಾನುವಾರದ ಮಳೆ ಎಲ್ಲರಿಗೂ ಸಾಂತ್ವನ ನೀಡಿದೆ.

ಮಾರ್ಚ್ ಅಂತ್ಯ - ಏಪ್ರಿಲ್ ತಿಂಗಳಲ್ಲಿ ಬೀಳುವ ಅಡ್ಡ ಮಳೆ ಸಾಮಾನ್ಯವಾಗಿ ರೈತರಿಗೆ ಬಿತ್ತನೆಗೆ ಸಿದ್ಧರಾಗಿ ಎಂಬ ಸೂಚನೆಯಾಗಿದ್ದರೆ, ನಗರದ ಜನರಿಗೆ ಒಂದು ರೀತಿಯ ಎಚ್ಚರಿಕೆಯ ಗಂಟೆ. ಸಮರ್ಪಕ ಪೂರ್ವಸಿದ್ಧತೆಗಳಿಲ್ಲದ ಕಾರಣ ಮುಂಗಾರಿನ ಮೊದಲ ಮಳೆಗೆ ಬಹುತೇಕ ಎಲ್ಲ ನಗರದಲ್ಲಿ ಒಂದಿಲ್ಲ ಒಂದು ಅನಾಹುತ ಸಂಭವಿಸುತ್ತದೆ. ಹಾಸನದಲ್ಲಿ ಕಳೆದ ಬಾರಿ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದೆ ಹತ್ತಾರು ಅಂಗಡಿಗಳು, ಹೋಟೆಲ್‌ಗಳೊಳಗೆ ನೀರು ತುಂಬಿಕೊಂಡಿದ್ದನ್ನು ಜನರು ಇನ್ನೂ ಮರೆತಿರಲಾರರು. ಶನಿವಾರ ಮತ್ತು ಭಾನುವಾರಗಳಂದು ಸುರಿದ ಮಳೆ ಈ ಘಟನೆಯನ್ನು ಪುನಃ ನೆನಪಿಗೆ ತಂದುಕೊಟ್ಟಿದೆ.

ನಗರದ ಚರಂಡಿಗಳು ಇನ್ನೂ ಸ್ವಚ್ಛಗೊಂಡಿಲ್ಲ. ಬಡಾವಣೆಯ ರಸ್ತೆಗಳಲ್ಲಿ ಕಳೆದ ಮಳೆಗಾಲದಲ್ಲಿ ಎದ್ದಿರುವ ಗುಂಡಿಗಳು ಈಗಲೂ ಬಾಯಿ ತೆರೆದುಕೊಂಡು ಹಾಗೆಯೇ ನಿಂತಿವೆ.ಗೊರೂರು ರಸ್ತೆ ಹಾಗೂ ಅರಸೀಕೆರೆ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿ ಉಳಿದಿಲ್ಲ. ಮುಂದಿನ ಮಳೆಗಾಲದಲ್ಲಿ ಈ ರಸ್ತೆಗಳು ನರಕಸದೃಶವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಪಿ.ಬಿ. ರಸ್ತೆ ಎನ್.ಆರ್. ಸರ್ಕಲ್‌ನಿಂದ ಬೈಪಾಸ್ ವರೆಗಿನ ದುರಸ್ತಿ ಕಾರ್ಯ ಇನ್ನೂ ಆಗಿಲ್ಲ. ಗುಂಡಿಗಳನ್ನು ಮುಚ್ಚಿರುವುದು ದೊಡ್ಡ ಸಾಧನೆಯಾಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಕೊಚ್ಚಿ ಹೋದ ಗೊರೂರು ರಸ್ತೆಯ ಸೇತುವೆ ಸಿದ್ಧವಾಗಿದ್ದರೂ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ನಗರಸಭೆಯ ಪಕ್ಕದಲ್ಲೇ ಇದ್ದರೂ ಈ ರಸ್ತೆಯ ಸ್ಥಿತಿಯಲ್ಲಿ ಒಂದಿಷ್ಟೂ ಸುಧಾರಣೆಯಾಗಿಲ್ಲ. ಇತ್ತ ಸಿದ್ದಯ್ಯನಗರ, ಸ್ಲಂಬೋರ್ಡ್‌ಗಳನ್ನು ಬೆಸೆಯುವ ಹುಣಸಿನಕೆರೆ ರಸ್ತೆಯ ಸೇತುವೆಯಲ್ಲೂ ಈಗ ಬಿರುಕು ಕಾಣಿಸಿಕೊಂಡಿದೆ.
ಸಮಸ್ಯೆಗಳು ನೂರಾರು ಇವೆ. ಮುಂಗಾರು ಪ್ರವೇಶಿಸಲು ಉಳಿದಿರುವ ಎರಡು ತಿಂಗಳಲ್ಲಿ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಕಷ್ಟ ಅನುಭವಿಸಬೇಕಾಗುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT