ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೆ ತಪ್ಪದ ಗೋಳು!

Last Updated 1 ಅಕ್ಟೋಬರ್ 2012, 5:10 IST
ಅಕ್ಷರ ಗಾತ್ರ

ಗದಗ: ಮಳೆ ಬಂದರೆ ಯಾಕಾದ್ರು ಬಂತು ಎಂದು ಶಪಿಸುತ್ತಾರೆ ಇಲ್ಲಿನ ಜನತೆ. ಇದಕ್ಕೆ ಕಾರಣವೂ ಇದೆ. ಒಂದು ತಾಸು ಜೋರಾಗಿ ಮಳೆ ಬಂದರಂತೂ ಹುಡ್ಕೋ ಕಾಲೋನಿ, ರಾಜೀವ್‌ಗಾಂಧಿ ನಗರ,  ಬೆಟಗೇರಿ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯ.

ಕೇವಲ ಈ ಮೂರು ಬಡಾವಣೆಗಳಲ್ಲದೆ ನಗರದ ಕೆಲ ತಗ್ಗು ಪ್ರದೇಶಗಳಲ್ಲಿ ಮಳೆ ಬಂದರಂತೂ ಸಮಸ್ಯೆ ಹೇಳ ತೀರದು. ಮನೆಗೆ ನೀರು ನುಗ್ಗುತ್ತದೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಜನತೆಯ ಪಾಡು ಅಷ್ಟಿಷ್ಟಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ.

ಓಣಿಯ ಜನರು ಮನೆಯಿಂದ ನೀರನ್ನು ಹೊರ ಹಾಕಲು ಹರಸಾಹಸ ಪಡಬೇಕು. ಕೆಲವೊಮ್ಮೆ ಪಾತ್ರೆಗಳು, ಬಟ್ಟೆಗಳು ನೀರಿನಲ್ಲಿ ತೊಯ್ದು ಹೋಗಿರುವ ನಿದರ್ಶನವೂ ಉಂಟು. ಆಹಾರ ಪದಾರ್ಥಗಳು ಹಾನಿಯಾಗಿವೆ.  ಮನೆಯ ಮಂದಿಯೆಲ್ಲಾ ಸೇರಿಕೊಂಡು ನೀರು ಹೊರ ಹಾಕಬೇಕು. ಕೆಲವರು ನೀರು ಹೊರ ಹಾಕಲು ಮೋಟಾರು ಬಳಸುತ್ತಾರೆ.

ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ.  5-6 ವರ್ಷಗಳಿಂದಲೂ ನಿವಾಸಿಗಳು ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ರಸ್ತೆ ತುಂಬ ನೀರು ನಿಂತು ಓಡಾಡಲು ಆಗುವುದಿಲ್ಲ. ಕಾಲಿಗೆ ಕೆಸರು ಅಂಟಿಕೊಳ್ಳುತ್ತದೆ.
ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಕಾರಣ. ನಗರದ ಬಹುತೇಕ ಕಡೆ ಒಳಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ನಗರದ ಬಹುತೇಕ ವಾರ್ಡ್‌ಗಳಲ್ಲಿ ಅನೈರ್ಮಲ್ಯ ಸೃಷ್ಟಿಯಾಗಿದ್ದು, ಪರಿಸರ ಮಾಲಿನ್ಯವೂ ಹೆಚ್ಚುತ್ತಿದೆ.

ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ನಗರಸಭೆ ಎದುರು ನಿವಾಸಿಗಳು ಒಂದಲ್ಲ ಎರಡಲ್ಲ ಹಲವು ಬಾರಿ ಪ್ರತಿಭಟನೆ, ಉಪವಾಸ, ಧರಣಿ ನಡೆಸಿದರೂ ಪ್ರಯೋಜನವಾಗಿಲ್ಲ. ಕೇವಲ ಭರವಸೆ, ಆಶ್ವಾಸನೆ ಮಾತ್ರ ಸಿಕ್ಕಿದೆ ಹೊರತು ಸೌಲಭ್ಯ ದೊರೆತಿಲ್ಲ.

ನಗರಸಭೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳು, ಕಲ್ಯಾಣಮಂಟಪಗಳು, ದೇವಸ್ಥಾನ, ಕೊಳಚೆ ಪ್ರದೇಶ ಸೇರಿದಂತೆ ಸಾವಿರಾರು ಮನೆಗಳಿವೆ. ಜನಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು. ಕಸದ ಉತ್ಪಾದನೆಯೂ ಹೆಚ್ಚುತ್ತಿದೆ. ಸಮರ್ಪಕ ಕಸ ವಿಲೇವಾರಿ ಮಾಡದೇ ಮಳೆ ಬಂದಾಗ ಕಸದ ರಾಶಿ ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿರುತ್ತದೆ.

`ಮಳೆ ಬಂದ್ರ್ ನಮ್ ಕಷ್ಟ ಯಾರಿಗೆ ಹೇಳೋದ್. ಮನೆಯಾಗೆ ನೀರ್ ತುಂಬಿಕೊಂಡ್ ಬಹಳ ತ್ರಾಸ ಆಗತೈತಿ. ಯಾಕಾದ್ರೂ ಮಳೆ ಬಂತಪ್ಪ ಅನಿಸತೈತಿ. ನೀರ್ ಹೊರಗೆ ಹಾಕೋದೇ ಮನೆ ಮಂದಿ  ಕೆಲ್ಸ್. ನಗರಸಭೆಗೆ ಮನವಿ ಮಾಡಿಕೊಂಡ್ರು ಪ್ರಯೋಜನವಾಗಿಲ್ಲ.~ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಭಾನುವಾರ ಸುರಿದ ಜೋರು ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಸ್ಥಳಕ್ಕೆ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ದೊಡ್ಡಮನಿ ಆಗಮಿಸಿದಾಗ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಜೆಸಿಬಿ ಮೂಲಕ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಯಿತು.

ತಾತ್ಕಾಲಿಕ ಚರಂಡಿ ವ್ಯವಸ್ಥೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧ್ಯಕ್ಷರ ಜತೆ ಚರ್ಚಿಸಲಾಗು ವುದು ಎಂದು ನಿವಾಸಿಗಳಿಗೆ ಭರವಸೆ ನೀಡಿ ಕೈತೊಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT