ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ... ಮಂಜು... ಚಳಿಗೆ ನಡುಗುತ್ತಿದೆ ಕೊಡಗು!

Last Updated 4 ಜೂನ್ 2011, 6:40 IST
ಅಕ್ಷರ ಗಾತ್ರ

ಮಡಿಕೇರಿ: ಮುಂಗಾರಿನ ತುಂತುರು ಮಳೆ ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಸುರಿದಿದೆ. ಸುಮಾರು 37.96 ಮಿಲಿ ಮೀಟರ್ ಮಳೆ ದಿನವಿಡೀ ಸುರಿಯಿತು. ಮಳೆಯ ಜೊತೆ ಮಂಜು, ಚಳಿಯೂ ಜಿಲ್ಲೆಯನ್ನು ಆವರಿಸಿತ್ತು.

ಆಕಾಶದಲ್ಲಿ ದಟ್ಟೈಸಿರುವ ಕಾರ್ಮೋಡಗಳು ರಾತ್ರಿ ಯಿಡೀ ಮಳೆಯ ಮುನ್ಸೂಚನೆ ನೀಡಿವೆ. ಮಳೆಯ ಜೊತೆ ಮಂಜು ಹಾಗೂ ಚಳಿಯೂ ಯಥೇಚ್ಛವಾಗಿತ್ತು. ದಿನದಲ್ಲಿ ತಾಪಮಾನವು ಅತ್ಯಂತ ಕಡಿಮೆ 17.9ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಗರಿಷ್ಠ ತಾಪಮಾನ 22.1 ಡಿಗ್ರಿಸೆಲ್ಸಿಯಸ್‌ನಷ್ಟಿತ್ತು. 

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 42.45ಮಿ.ಮೀ. ಕಳೆದ ವರ್ಷ ಇದೇ ದಿನ 7.15ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 378.25 ಮಿ.ಮೀ ಕಳೆದ ವರ್ಷ ಇದೇ ಅವಧಿಯಲ್ಲಿ 279.84 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.28 ಮಿ.ಮೀ. ಕಳೆದ ವರ್ಷ ಇದೇ ದಿನ 17.38 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 324.79 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 176.72 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 11.15ಮಿ.ಮೀ. ಕಳೆದ ವರ್ಷ ಇದೇ ದಿನ 16.07 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 216.36ಮಿ.ಮೀ.  ಕಳೆದ ವರ್ಷ ಇದೇ ಅವಧಿಯಲ್ಲಿ 194.35 ಮಿ.ಮೀ. ಮಳೆಯಾಗಿತ್ತು. 

ಹೋಬಳಿವಾರು ವಿವರ: ಮಡಿಕೇರಿ ಕಸಬಾ 26.80, ನಾಪೋಕ್ಲು 37.80, ಸಂಪಾಜೆ 20, ಭಾಗಮಂಡಲ 85.20, ವಿರಾಜಪೇಟೆ ಕಸಬಾ 87.80, ಹುದಿಕೇರಿ 72.50, ಶ್ರೀಮಂಗಲ 38.40, ಪೊನ್ನಂಪೇಟೆ 45.40, ಅಮ್ಮತ್ತಿ 90.10, ಬಾಳಲೆ 27.50, ಸೋಮವಾರಪೇಟೆ ಕಸಬಾ 8.20, ಶನಿವಾರಸಂತೆ 7.30, ಶಾಂತಳ್ಳಿ 16.20, ಕುಶಾಲನಗರ 8ಮಿ.ಮೀ, ಕೊಡ್ಲಿಪೇಟೆ  9.10, ಸುಂಟಿಕೊಪ್ಪ 18.10ಮಿ.ಮೀ. ಮಳೆಯಾಗಿದೆ.

ಕೃಷಿಯತ್ತ ಮುಖ ಮಾಡಿದ ರೈತರು
ಸೋಮವಾರಪೇಟೆ: ಮುಂಗಾರು ಮಳೆಯನ್ನೇ ನಂಬಿ ಕೃಷಿ ಚಟುವಟಿಕೆಗೆ ಮುಂದಾಗುವ ಸೋಮವಾರಪೇಟೆ ತಾಲೂಕಿನ ರೆೃತಾಪಿ ವರ್ಗ, ನಿರೀಕ್ಷೆಯಂತೆ ಜೂನ್ ಮೊದಲ ವಾರದಲ್ಲೇ ಮುಂಗಾರು ಕೊಡಗನ್ನು ಪ್ರವೇಶ ಮಾಡಿರುವುದರಿಂದ ಹರ್ಷಚಿತ್ತರಾಗಿದ್ದಾರೆ. ನೇಗಿಲು ಹೊತ್ತ ರೆೃತರು ಗದ್ದೆ ಕಡೆಗೆ ಹೊರಟಿದ್ದಾರೆ.

ಮಡಿಕೇರಿ ಹಾಗು ವಿರಾಜಪೇಟೆ ತಾಲೂಕಿಗೆ ಗುರುವಾರದಂದೇ ಮುಂಗಾರು ಮಳೆ ಪ್ರಾರಂಭ ವಾಗಿತ್ತು. ಆದರೆ ಸೋಮವಾರಪೇಟೆ ತಾಲೂಕಿನಲ್ಲಿ ಗುರುವಾರ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ಮುಂಗಾರು ಬಿರುಸುಗೊಂಡ ಪರಿಣಾಮ, ರೆೃತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ.

 ಬತ್ತ ಸಸಿಮಡಿ ಮಾಡಲು ಮಳೆಯನ್ನೇ ಕಾಯು ತ್ತಿದ್ದ ರೆೃತರು ಇಂದಿನಿಂದಲೇ ಗದ್ದೆ ಉಳುಮೆ ಕಾರ್ಯ ದಲ್ಲಿ ನಿರತರಾಗಿದ್ದಾರೆ. ಜೂನ್ ಎರಡನೇ ವಾರದಲ್ಲಿ ಸಸಿ ಬಿತ್ತನೆಯಾದರೆ, ಜುಲೈ ಮೊದಲ ವಾರದಲ್ಲೆ ನಾಟಿ ಕೆಲಸ ಮುಗಿಸಬಹುದು. ಕಳೆದ ಸಾಲಿನಲ್ಲಿ ಮುಂಗಾರು ವಿಳಂಬ ಹಾಗು ಅಕಾಲಿಕ ಮಳೆಯಿಂದ ಬತ್ತದ ಫಸಲು ನಷ್ಟ ನಾಶವಾಯಿತು ಎಂದು ಕೃಷಿಕ ಮುತ್ತಣ್ಣ ಹೇಳುತ್ತಾರೆ.

ತಾಲೂಕಿನ ಸುಂಟಿಕೊಪ್ಪ, ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಗಳಲ್ಲಿ ಮುಂಗಾರು ಶುಕ್ರವಾರ ದಿಂದ ಬಿರುಸುಗೊಂಡಿದೆ. ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ತಪ್ಪಲಿನಲ್ಲಿರುವ ಹೆಗ್ಗಡಮನೆ, ನಾಡ್ನಳ್ಳಿ, ಬೀದಳ್ಳಿ, ಕೊತ್ತನಳ್ಳಿ, ಕುಡಿಗಾಣ, ಕುಮಾರಳ್ಳಿ, ಬಾಚಳ್ಳಿ, ಇನಕನಹಳ್ಳಿ ಮುಂತಾದ ಗ್ರಾಮಗಳಲ್ಲಿ ಮಳೆ ಸುರಿಯಲಾರಂಭಿಸಿದೆ. ಒಂದೆರಡು ವಾರ ಮಳೆ ಹೀಗೆ ಮುಂದುವರಿದರೆ, ಶುಂಠಿ ಕೃಷಿಗೆ ದೊಡ್ಡ ಪೆಟ್ಟು ಬೀಳಲಿದೆ. ಅಲ್ಲದೆ ಶುಂಠಿ ರೋಗಬಾಧೆಗೆ ತುತ್ತಾಗುವ ಸಂಭವವಿದೆ ಎಂದು ಅಲ್ಲಿನ ಶುಂಠಿ ಕೃಷಿಕರೊಬ್ಬರು ಹೇಳುತ್ತಾರೆ. ತಾಲೂಕಿನ ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

 ದಕ್ಷಿಣ ಕೊಡಗಿನಲ್ಲಿ ಮುಂದುವರಿದ ಮುಂಗಾರು
 ಗೋಣಿಕೊಪ್ಪಲು :  ದಕ್ಷಿಣ ಕೊಡಗಿನಾದ್ಯಂತ ಕಳೆ ಮೂರು ದಿನಗಳಿಂದ ಮುಂಗಾರು ಮಳೆ ನಿರಂತರವಾಗಿ ಬೀಳುತ್ತಿದೆ. ಈ ಬಾರಿ ಜೂನ್ ಒಂದರಂದೇ ಮಾನ್ಸೂನ್ ಆರಂಭಗೊಂಡು ಕೊಡಗಿನ ಹಿಂದಿನ ಮಳೆಗಾಲವನ್ನು ನೆನಪಿಸಿದೆ.

  ಮೇ  ತಿಂಗಳ ಅಂತ್ಯದವರೆಗೂ  ಬಿಸಿಲಿನ ತಾಪ ದಿಂದ ಒಣಗಿದ್ದ ಭೂಮಿ ತಟ್ಟನೆ ಆರಂಭಗೊಂಡ ಮಳೆ ಯಿಂದ  ಒದ್ದೆಯಾಗಿ ವಾತಾವರಣವನ್ನು ದಿಢೀರನೆ ಬದಲು ಮಾಡಿದೆ. ಮಳೆಯ ಕೇಂದ್ರವಾದ ದಕ್ಷಿಣ ಕೊಡಗಿನ  ಬಿರುನಾಣಿ, ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ ಮೊದಲಾದ ಭಾಗಗಳಿಗೆ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಬೀಳುತ್ತಿದೆ. 

 ಗೋಣಿಕೊಪ್ಪಲು, ಪಾಲಿಬೆಟ್ಟ, ಬಿ.ಶೆಟ್ಟಿಗೇರಿ, ಕಾನೂರು, ತಿತಿಮತಿ ಮೊದಲಾದ ಭಾಗಗಳಿಗೂ  ಮಳೆಯಾಗುತ್ತಿದೆ. ಬೇಸಿಗೆಯ ಬಿಸಿಲಿನಲ್ಲಿ ಒಣಗಿದ್ದ ಭತ್ತದ ಗದ್ದೆಯಲ್ಲಿ ನಿಧಾನವಾಗಿ ನೀರಿನ ಒರತೆ ತುಂಬುತ್ತಿದೆ.

  ಆದರೆ ದಿಢೀರನೆ ಹಿಡಿದ ಮಳೆ ಕಾಫಿ ತೋಟದ ಕೆಲಸಕ್ಕೆ ಅಡ್ಡಿಪಡಿಸಿದೆ. ಮಳೆ ನಿಂತರೆ ಕಾಫಿ ತೋಟಕ್ಕೆ ಗೊಬ್ಬರ ಹಾಕಲು ಬೆಳೆಗಾರರು ಕಾತರರಾಗಿದ್ದಾರೆ. ಶುಕ್ರವಾರ ಮಳೆಯ ರಭಸ  ಸ್ವಲ್ಪ  ಕಡಿಮೆಯಾಗಿತ್ತು. ದಕ್ಷಿಣ ಕೊಡಗಿನ ಕೆಲವೆಡೆ  ಮಧ್ಯಾಹ್ನ ಸ್ವಲ್ಪ ಬಿರುಸಿನಿಂದ ಬಿದ್ದು ಆನಂತರ ತುಂತುರು ಮಳೆ ಸುರಿಯಿತು.

 ಈಬಾರಿ  ಬೇಸಿಗೆಯಲ್ಲಿ ಉತ್ತಮ ಮಳೆಯಾದ್ದರಿಂದ ನೀರಿಗೆ ಸಮಸ್ಯೆ ಎದುರಾಗಲಿಲ್ಲ. ಅಂತೆಯೇ ಇದೀಗ  ಸಕಾಲಕ್ಕೆ ಮಾನ್ಸೂನ್ ಆರಂಭಗೊಂಡು ಕೃಷಿಕರಿಗೂ ಸಂತಸ ಮೂಡಿಸಿದೆ.  ಮುಂದೆಯೂ ಉತ್ತಮ ಮಳೆ ಬೀಳುವ ನಿರೀಕ್ಷೆಯಲ್ಲಿ  ಕೃಷಿಕರಿದ್ದಾರೆ.

 ಮುಂಗಾರು ಮಳೆಯ ಆರ್ಭಟ
ವಿರಾಜಪೇಟೆ: ವಿರಾಜಪೇಟೆ ವಿಭಾಗಕ್ಕೆ ಗುರುವಾರ ರಾತ್ರಿ ಗುಡುಗು ಸಹಿತ ಮಳೆ ಸುರಿದಿದ್ದು, ಶುಕ್ರವಾರವೂ ಮಳೆಯ ಆರ್ಭಟ ಜೋರಾಗಿತ್ತು.

 ದಕ್ಷಿಣ ಕೊಡಗಿನಾದ್ಯಂತ ಮಳೆಯಾಗುತ್ತಿದ್ದು, ಬೇಸಿಗೆಯ ಬೇಗೆಯಿಂದ ಬತ್ತಿದ್ದ ಕೆರೆ, ತೋಡು ನದಿಗಳ ನೀರಿನ ಮಟ್ಟ ಮೇಲಕ್ಕೆ ಏರುತ್ತಿದೆ.

ಬೇತರಿ ಗ್ರಾಮದ ಕಾವೇರಿ ಹೊಳೆ, ನೆಲ್ಲಿ ಹುದಿಕೇರಿಯ ಕಾವೇರಿ ಹೊಳೆ, ಸಿದ್ದಾಪುರ ಬಳಿಯ ಕರಡಿಗೋಡಿನ ಹೊಳೆಯ ನೀರಿನ ಮಟ್ಟ ಏರುತ್ತಿದ್ದು, ಮಳೆ ಇದೇ ರೀತಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಕಾವೇರಿ ಹೊಳೆ ಭರ್ತಿಯಾಗಲಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ವಿರಾಜಪೇಟೆಗೆ ನಿರಂತರ ಮಳೆಯ ಪರಿಣಾಮ ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ. ಗುರುವಾರ ರಾತ್ರಿ ಭಾರೀ ಮಳೆಯ ಕಾರಣ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ವಿರಾಜಪೇಟೆ ವಿಭಾಗಕ್ಕೆ ಶುಕ್ರವಾರ 87.6ಮಿ.ಮೀ (3.4ಇಂಚು) ಮಳೆ ಸುರಿದಿದ್ದು, ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ಒಟ್ಟು 333ಮಿ.ಮೀ (13.1ಇಂಚು) ಮಳೆ ಸುರಿದಿದೆ.

ಮನೆಗಳು ಜಖಂ:
ವಿರಾಜಪೇಟೆ ವಿಭಾಗಕ್ಕೆ ಗುರುವಾರ ಹಾಗೂ ಶುಕ್ರವಾರ ಬಿದ್ದ ಮಳೆಗೆ ಆರ್ಜಿ ಗ್ರಾಮದ ಮೋಹನ್ ಎಂಬುವರ ಮನೆ ಜಖಂಗೊಂಡು ರೂ.25ಸಾವಿರ ಹಾಗೂ ಕದನೂರು ಗ್ರಾಮದ ಅಯ್ಯಪ್ಪ ಎಂಬುವರ ಮನೆ ಜಖಂಗೊಂಡು ರೂ 15ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮಳೆ ಹಾನಿ ಪರಿಹಾರದ ಕಾರ್ಯ ನಿರ್ವಾಹಕ ರವಿ ತಿಳಿಸಿದ್ದಾರೆ.

ಅಧಿಕಾರಿಗಳ ಮೊಕ್ಕಾಂಗೆ ಆದೇಶ
ವಿರಾಜಪೇಟೆ: ಜೂನ್ 1ರಿಂದಲೇ ದಕ್ಷಿಣ ಕೊಡಗಿನಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು, ಮಳೆಯ ಆರ್ಭಟ ನಿರಂತರವಾಗಿ ಮುಂದುವರೆಯುತ್ತಿ ರುವುದರಿಂದ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಿಬ್ಬಂದಿ ಸ್ಥಳದಲ್ಲೇ ಹೂಡುವಂತೆ ಉಪವಿ ಭಾಗಾಧಿಕಾರಿ ಡಾ.ಎಂ.ಆರ್.ರವಿ ಆದೇಶಿಸಿದರು.

ವಿರಾಜಪೇಟೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಳೆಯ ಕುರಿತು ಮುನ್ನೆಚ್ಚರಿಕೆ ವಹಿಸಲು ಶುಕ್ರವಾರ ಪ್ರಭಾರ ಜಿಲ್ಲಾಧಿಕಾರಿ ಚಂದ್ರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
 ತಾಲ್ಲೂಕಿನಾದ್ಯಂತ ಮಳೆಯಿಂದ ಉಂಟಾಗುವ ಅನಾಹುತಗಳ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು.

ಮಳೆಯ ಬಗ್ಗೆ ತಾಲ್ಲೂಕು ಕಚೇರಿಗೆ ದಿನಂಪ್ರತಿ ವರದಿ ಸಲ್ಲಿಸಬೇಕು. ಮಳೆಯಿಂದ ಆಕಸ್ಮಿಕ ದುರಂತ ಸಂಭವಿಸುವ ಸ್ಥಳಕ್ಕೆ ಕಂದಾಯ ಪರೀವೀಕ್ಷಕರು ಖುದ್ದು ಪರಿಶೀಲಿಸಿ ಪರಿಹಾರಕ್ಕಾಗಿ ವರದಿ ಸಲ್ಲಿಸಬೇಕು. ಮಳೆ ಮುಗಿಯುವ ತನಕ ತಾಲ್ಲೂಕಿನ ಯಾವುದೇ ಅಧಿಕಾರಿಗಳು ಸಹಾಯಕರು ಹಾಗೂ ಸಿಬ್ಬಂದಿ ರಜೆ ಪಡೆಯಲು ನಿರ್ಬಂಧ ವಿಧಿಸಿರುವುದಾಗಿ ಹೇಳಿದರು.

ಸಭೆಯಲ್ಲಿ ತಹಶೀಲ್ದಾರ್ ವಿ.ಹನುಂತರಾಯಪ್ಪ. ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT