ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮತ್ತೆ ಮಾಯ: ಒಣಗಿದ ಬೆಳೆ

Last Updated 26 ಮೇ 2012, 9:50 IST
ಅಕ್ಷರ ಗಾತ್ರ

ಹಳೇಬೀಡು: ಆರಂಭದಲ್ಲಿ ಶೂರತ್ವ ತೋರಿದ ಮಳೆರಾಯ ಇದೀಗ ಮುನಿಸಿಕೊಂಡಿದ್ದಾನೆ. ಕಳೆದ ತಿಂಗಳು ಭಾರೀ ಪ್ರಮಾಣದಲ್ಲಿ ಸುರಿದ ಮಳೆ ನಂಬಿಕೊಂಡು ಬಿತ್ತನೆ ಮಾಡಿದ ಹಳೇಬೀಡು ಭಾಗದ ರೈತರು ತಲೆ ಮೇಲೆ ಬಟ್ಟೆಹಾಕಿಕೊಂಡು ಮುಗಿಲಿನತ್ತ ಮುಖಮಾಡಿದ್ದಾರೆ.

ಕಳೆದ ತಿಂಗಳು ನಾಲ್ಕೈದು ದಿನ ಬೀಳುವ ಮಳೆ ಒಂದೆ ದಿನದಲ್ಲಿ ಸುರಿದು ಅರ್ಭಟ ನಡೆಸಿದಾಗ ರೈತರು ತಮ್ಮ ಜಮೀನುಗಳಲ್ಲಿ ಬೇಸಾಯ ಮಾಡಿ ಕೊಂಡು, ತರಾತುರಿಯಲ್ಲಿ ಬಿತ್ತನೆ ಮಾಡಿದರು. ಭೂಮಿ ತಂಪಾಗಿದ್ದರಿಂದ ಬಿತ್ತಿದ ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ. ಹಾಗೂ ದ್ವಿದಳ ಧಾನ್ಯ ಮೊಳೆಕೆಯೊಡೆದು ಮೇಲಕ್ಕೆ ಬಂದವು.

ಬೆಳೆ ಮಾಡಿದ ನಂತರ ಒಂದು ತಿಂಗಳಿನಿಂದಲೂ ಹಳೇಬೀಡು ಭಾಗಕ್ಕೆ ಮೇಘರಾಜ ದರ್ಶನ ನೀಡಲಿಲ್ಲ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಮೊಳೆಕೆ ಒಡೆದ ಬೆಳೆ ಮಳೆಗಾಗಿ ಹಪಹಪಿಸುತ್ತಿವೆ. ಭೂಮಿ ಹದ ಮಾಡಿಕೊಂಡು ಬಿತ್ತನೆಗಾಗಿ ಕಾಯುತ್ತಿರುವ ಹಲವು ರೈತರ ಜಮೀನುಗಳಲ್ಲಿ ಈಗ ಕನಿಷ್ಟ ತೇವಾಂಶವೂ ಇಲ್ಲದಂತಾಗಿದೆ. ಬಿತ್ತನೆ ಮಾಡಿದ ರೈತರಿಗೆ ಬೆಳೆ ಬತ್ತಿ ಬಾಡುತ್ತಿರುವುದು ಸಮಸ್ಯೆಯಾದರೆ, ಬಿತ್ತನೆಗಾಗಿ ಕಾಯುತ್ತಿರುವ ರೈತರಿಗೆ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಒಟ್ಟಾರೆ ಬಿತ್ತನೆ ಕೆಲಸ ಸಂಪೂರ್ಣವಾಗಿ ಸ್ಥಗಿತವಾಗಿದೆ.

ಕಳೆದ ವರ್ಷ ತೀರ್ವ ಬರಗಾಲ ಬಂದು ಮಳೆ ಆಶ್ರಿತ ಜಮೀನು ನಂಬಿಕೊಡ ರೈತರು ಕೈ ಬರಿದಾಗಿದೆ. ನೀರಾವರಿ ಪಂಪ್‌ಸೆಟ್ ಹೊಂದಿದ ರೈತರು ಬೆಳೆದ ಶುಂಠಿ, ಅರಿಸಿನದ ಬೆಲೆ ಕುಸಿತ ಕಂಡಿತು. ಹೀಗಾಗಿ ಎಲ್ಲ ವರ್ಗದ ರೈತರು ನಷ್ಟದಲ್ಲಿ ಮುಳುಗಿದ್ದಾರೆ. `ಕಳೆದ ವರ್ಷ ಮಂಡಿಯಲ್ಲಿ ಮಾಡಿದ ಸಾಲ ತೀರಿಲ್ಲ. ಗಿರಿವಿ ಇಟ್ಟ ಒಡವೆ ಮನೆ ಸೇರದೆ ಬಡ್ಡಿ ಬೆಳೆಯುತ್ತಿದೆ. ಮಳೆ ನಂಬಿದ ನಮ್ಮ ಬದುಕು ಮುರಾಬಟ್ಟೆಯಾಗಿದೆ~ ಎನ್ನುತ್ತಾರೆ ಸಣ್ಣ ಹಾಗೂ ಅತಿಸಣ್ಣ ರೈತರು.

ಮೋಡ ಆಗುತ್ತದೆ ಆದರೆ ಮಳೆರಾಯನ ಆಗಮನ ಇಲ್ಲ. ಭಾರೀ ಮಳೆ ಸುರಿಸುವ ನಿರೀಕ್ಷೆ ಹುಟ್ಟಿಸುವ ಕಪ್ಪಾದ ಮೋಡಗಳು ಹನಿ ಮಳೆಯನ್ನು ಭೂಮಿಗೆ ತಲುಪಿಸದೆ ಚದುರಿ ಹೋಗುತ್ತಿದ್ದು, ರೈತರಿಗೆ ನಿರಾಸೆ ಮೂಡಿಸುತ್ತಿವೆ.

ಬತ್ತುತ್ತಿರುವ ಕೆರೆಗಳು: ಕಳೆದ ತಿಂಗಳು ಗಾಳಿ ಹಾಗೂ ಸಿಡಿಲಿನೊಂದಿಗೆ ಮಳೆ ಸುರಿದಾಗ ಕೆರೆ ಕಟ್ಟೆಗೆ ಹರಿದು ಬಂದ ನೀರು ಕಾದು ನಿಂತ ಭೂಮಿಯನ್ನು ಸೇರುತ್ತಿದೆ. ಹಳೇಬೀಡು ಸುತ್ತಮುತ್ತ ಸುಮಾರು ಐದಾರು ಕಿ.ಮೀ. ಆಚೆ ಆಗಾಗ್ಗೆ ಮಳೆ ಬೀಳುತ್ತಿದೆ. ಆದರೆ, ಹಳೇಬೀಡು ಸಮೀಪದಲ್ಲಿ ಮಾತ್ರ ಮಳೆ ಆಗದೆ ಇರುವುದು ಸ್ಥಳೀಯ ರೈತರು ನಿದ್ದೆಗೆಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT