ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮಲ್ಲೇಶ್ವರನ ಬಳಿಯ ಕಲ್ಲಿಗೂ ಕುತ್ತು

Last Updated 24 ಸೆಪ್ಟೆಂಬರ್ 2013, 6:59 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಹೊರವಲಯದ ಬೆಟ್ಟಗಳಲ್ಲಿ ಅಕ್ರಮವಾಗಿ ಕಲ್ಲು ತೆಗೆಯುತ್ತಿರುವ ದಂಧೆ ನಿರಾತಂಕವಾಗಿ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸ್ಥಳೀಯರಿಗೆ ಇದು ಗೊತ್ತಿದ್ದರೂ ದಂಧೆ ಎಗ್ಗಿಲ್ಲದೇ ಸಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಐತಿಹಾಸಿಕ ಮಳೆ ಮಲ್ಲೇಶ್ವರ ದೇವಸ್ಥಾನದ ಇಂದ್ರಕೀಲ ಪರ್ವತದ ಇನ್ನೊಂದು ಪಾರ್ಶ್ವ, ಅದರ ಆಸುಪಾಸಿನ ಬೆಟ್ಟಗಳಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ನಗರಕ್ಕೆ ಕೋಟೆಯ ರೂಪದಲ್ಲಿ ಸುತ್ತುವರಿದಿರುವ ಸುಂದರ ಆಕಾರದ ನೈಸರ್ಗಿಕ ಗುಲಾಬಿ ಕಲ್ಲುಗಳನ್ನು ಅಡ್ಡಾದಿಡ್ಡಿಯಾಗಿ ಒಡೆದುಹಾಕಿ ಅಂದ ಆಕಾರ ಕೆಡಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು 25ಕ್ಕೂ ಹೆಚ್ಚು ತಂಡಗಳು ಅಲ್ಲಲ್ಲಿ ಕಲ್ಲು ಒಡೆದು ರಾಶಿ ಹಾಕಿರುವುದನ್ನು ಕಾಣಬಹುದು.

ಇದರಿಂದ ಒಂದೆಡೆ ನಿಸರ್ಗ ಸಹಜ ಸೌಂದರ್ಯಕ್ಕೆ ಕುತ್ತು, ಅಪರೂಪದ ಜೀವ ವೈವಿಧ್ಯಕ್ಕೆ (ಅಪರೂಪದ ತಳಿಯ ಕೋತಿ, ಸಸ್ಯಸಂಕುಲ ಇಲ್ಲಿವೆ) ಹಾನಿಯಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿದೆ. ಇಲ್ಲಿನ ದಂಧೆಕೋರರಿಂದ ಅಪಾರ ಪ್ರಮಾಣದ ‘ಮೊತ್ತ’ ಇಲಾಖೆಗಳ ‘ಹೊಟ’್ಟೆ ಸೇರುತ್ತಿದೆ ಎಂದು ಇಲ್ಲಿನ ಪರಿಸರ ಪ್ರೇಮಿಗಳು ದೂರಿದ್ದಾರೆ.

ಇಂದ್ರಕೀಲ ಪರ್ವತ ಸೇರಿದಂತೆ ಆಸುಪಾಸಿನಲ್ಲಿ ಮೌರ್ಯರ ಕಾಲದ ಅಪರೂಪದ ಶಿಲಾ ಶಾಸನಗಳಿವೆ (ಪಾಲ್ಕಿಗುಂಡು ಶಾಸನ) ಕಲ್ಲು ಒಡೆಯುವವರಿಗೆ ಅರಿವಿಲ್ಲದೇ  ಅಮೂಲ್ಯ ಶಾಸನವೂ ಕಾಣೆಯಾಗುವ ಸಾಧ್ಯತೆಯಿದೆ. ನಗರದ ಗವಿಮಠ ಸೇರಿದಂತೆ ವಿವಿಧ ಸಂಘಟನೆಗಳು, ಅರಣ್ಯ ಇಲಾಖೆ ನೆರವಿನಿಂದ ಇಲ್ಲಿ ಅಪರೂಪದ ಸಸ್ಯ ಸಂಕುಲವನ್ನು ಬೆಳೆಸಿವೆ. ಇಲ್ಲಿ ನಿರಂತರ ಕಲ್ಲು ಸಾಗಿಸುವ ಟ್ರ್ಯಾಕ್ಟರ್‌ಗಳು ಸಂಚರಿಸಿ ಆ ಗಿಡಗಳಿಗೂ ಹಾನಿ ಉಂಟು ಮಾಡುತ್ತಿವೆ. 

ಹೊಟ್ಟೆ ಪಾಡಿನ ಮಂದಿ
ಕಲ್ಲು ಒಡೆಯುವವರನ್ನು ಪ್ರಶ್ನಿಸಿದರೆ, ಇದಕ್ಕೆ ನಾವು ಅನುಮತಿ ಪಡೆದಿಲ್ಲ. ಕೈಯಿಂದ ಕಲ್ಲು ಒಡೆದು ಬದುಕುವ ಮಂದಿ ನಾವು. ನಾವು ಹೇಗೆ ಅನುಮತಿ ಪಡೆಯಲಿ? ಇಲ್ಲಿ ಸ್ಫೋಟಕ ಬಳಸುತ್ತಿಲ್ಲ. ಹೊಟ್ಟೆಪಾಡಿಗೆ ಕಾಯಕ ಮಾಡುತ್ತೇವೆ ಎಂದರು.

ಇಲಾಖೆ ದಾಳಿ: ಇತ್ತೀಚೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜೀಪಿನಲ್ಲಿ ಬಂದು ದಾಳಿ ಮಾಡಿ ನಮ್ಮ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡರು. ಕೊನೆಗೆ ನಮ್ಮ ಬದುಕಿನ  ಪರಿಸ್ಥಿತಿ ವಿವರಿಸಿದೆವು. ಜನಪ್ರತಿನಿಧಿಯೊಬ್ಬರ ನೇತೃತ್ವದಲ್ಲಿ ಮಾತುಕತೆ ನಡೆಯಿತು. ಕಲ್ಲು ಒಡೆಯುವ ಪ್ರತಿ ತಂಡದವರು ಇಲಾಖೆಗೆ ರೂ 500 ಕೊಡುವಂತೆ ತೀರ್ಮಾನಿಸಲಾಯಿತು. ಆ ಬಳಿಕ ನಿರಾತಂಕದಿಂದ ಕಲ್ಲು ಒಡೆಯುತ್ತಿದ್ದೇವೆ ಎಂದು ಅಲ್ಲಿನ ಕಾರ್ಮಿಕರು ಮತ್ತು ಆ ತಂಡದ ಮುಖಂಡರೊಬ್ಬರು ಹೇಳಿದರು.

ಸ್ಫೋಟಕ ಬಳಕೆ: ಒಂದೆಡೆ ಕೈಯಿಂದ ಕಲ್ಲು ಒಡೆಯುವವರು ಇದ್ದರೆ ಇದೇ ಬೆಟ್ಟದ ತಪ್ಪಲಿನಲ್ಲಿ ಸಂಚರಿಸಿದಾಗ ಈ ರಸ್ತೆ ಕೊನೆಗೊಳ್ಳುವಲ್ಲಿ ಸ್ಫೋಟಕ ಬಳಸಿ ವ್ಯಾಪಕವಾಗಿ ಬಂಡೆಗಳನ್ನು ಸಿಡಿಸಲಾಗಿದೆ. ಭೂಗರ್ಭದಲ್ಲಿ ಸೀಳು ಸೀಳಾಗಿ ಹಲವು ಹಂತಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿಟ್ಟ ರಚನೆ ಹೊಂದಿದ ಕಲ್ಲುಗಳು ದಂಧೆಕೋರರ ಪಾಲಾಗಿವೆ.

ಅಲ್ಲಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಮಂಗಳಾಪುರ, ವರ್ತಟ್ನಾಳ್‌ ಆಸುಪಾಸಿನ ದಂಧೆಕೋರರು ಇದರಲ್ಲಿ ಶಾಮೀಲಾಗಿದ್ದಾರೆ. ಇಲ್ಲಿಂದ ಮುಂದೆ ಹುಲಿಕೆರೆ ಪ್ರದೇಶಕ್ಕೆ ಕಾಲುದಾರಿಯಿದೆ. ದಂಧೆಕೋರರು ಇದೇ ರೀತಿ ಮುಂದುವರಿದರೆ ಮುಂದೆ ಇಲ್ಲಿನ ನಿಸರ್ಗ ಸಹಜ ಕಲ್ಲುಗಳು ಮಾಯವಾಗಲಿವೆ. ಮಾತ್ರವಲ್ಲ ಅನತಿದೂರದಲ್ಲಿರುವ ಕೃಷಿ ಭೂಮಿಗೂ ಹಾನಿಯಾಗಲಿದೆ ಎಂದು ಸ್ಥಳೀಯ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.

‘ಇಲಾಖೆಗಳು ಕ್ರಮ ಜರುಗಿಸಲಿ’
ಈ ಹಿಂದಿನ ಇಬ್ಬರು ಜಿಲ್ಲಾಧಿಕಾರಿಗಳಿಗೆ ಇಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಬಗ್ಗೆ ದೂರು ನೀಡಲಾಗಿತ್ತು. ಆದರೆ, ಯಾವುದೇ ಕ್ರಮ ಜರುಗಿಲ್ಲ. ಈ ಬೆಟ್ಟದಲ್ಲಿ ಅಶೋಕನ ಕಾಲದ ಹಲವಾರು ಶಿಲಾಶಾಸನಗಳಿವೆ. ಅರ್ಜುನ ತಪಸ್ಸು ಮಾಡಿದ, ಹಿಂದಿನ ಸಾಧು ಸಂತರೂ ಧ್ಯಾನ ಮಾಡಿದ ಸ್ಥಳವಿದು. ಇಲ್ಲಿ ಯಾವುದೇ ತರಹದ ಗಣಿಗಾರಿಕೆ ಮಾಡಬಾರದು. ಕ್ಷೇತ್ರದ ಪಾವಿತ್ರ್ಯ, ಸೌಂದರ್ಯಕ್ಕೆ ಧಕ್ಕೆ ಬರುತ್ತದೆ. ಈ ಬಗ್ಗೆ ಇನ್ನೊಮ್ಮೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡುತ್ತೇನೆ.
–ಶಿವಕುಮಾರ ಕೋನಂಗಿ, ಕಾರ್ಯದರ್ಶಿ, ಮಳೆಮಲ್ಲೇಶ್ವರ ದೇವಸ್ಥಾನ

ಕಲ್ಲು ತೆಗೆಯಲು ಅನುಮತಿ ಇಲ್ಲ’
ಇಂದ್ರಕೀಲ ಪರ್ವತದ ಹಿಂಭಾಗ, ಅದರ ಸುತ್ತಮುತ್ತ ಯಾವುದೇ ರೀತಿಯ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ಗುತ್ತಿಗೆಗೆ ಅನುಮತಿ ನೀಡದ ಹೊರತು ಯಾವುದೇ ರೀತಿಯ  ಶುಲ್ಕ ವಸೂಲಿಗೆ ಅವಕಾಶವಿಲ್ಲ. ಕಲ್ಲು ತೆಗೆಯುವವರು ಹಾಗೇನಾದರೂ ಹೇಳಿದ್ದರೆ ಅದರ ರಸೀದಿ ತೋರಿಸಲಿ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೆ ಖಂಡಿತವಾಗಿಯೂ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ.
–ಎಸ್‌.ಆರ್‌. ರಾವಳ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT