ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಮುಂದುವರಿದ ಪ್ರವಾಹ ಭೀತಿ

ಸಮುದ್ರದಲ್ಲಿ ಅಲೆಗಳ ಅಬ್ಬರ: ಮೀನುಗಾರಿಕೆಗೆ ಹಿನ್ನಡೆ
Last Updated 3 ಆಗಸ್ಟ್ 2013, 7:02 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಸಿದ್ಧಾಪುರ ಹಾಗೂ ಮುಂಡಗೋಡದಲ್ಲಿ ಶುಕ್ರವಾರ ದಿನವಿಡೀ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಹೊನ್ನಾವರದಲ್ಲಿ ಶರಾವತಿಯ ಬಲ, ಎಡದಂಡೆಯ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ ಹಾಗೂ ಕುಮಟಾದ ಅಘನಾಶಿನಿ ನದಿಯಲ್ಲಿ ಪ್ರವಾಹ ಮುಂದುವರಿದಿದೆ.

ಮುಂಡಗೋಡದಲ್ಲಿ ಸುರಿದ ಧಾರಾಕಾರ ಮಳೆಗೆ ಮೂರು ವಿದ್ಯುತ್ ಕಂಬ ಧರೆಗುರುಳಿದ್ದು, ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಗುರುವಾರ ಸಂಚಾರ ಸ್ಥಗಿತಗೊಂಡಿದ್ದ ಯಲ್ಲಾಪುರ-ಮುಂಡಗೋಡ ರಸ್ತೆ ಈಗ ಮುಕ್ತವಾಗಿದೆ.

ಕರಾವಳಿಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಮಳೆ ಕಡಿಮೆ ಇದೆ. ಅರೆಬಯಲುಸೀಮೆ ಪ್ರದೇಶಗಳಾದ ಹಳಿಯಾಳ, ದಾಂಡೇಲಿ ಹಾಗೂ ಮಲೆನಾಡಿನ ಯಲ್ಲಾಪುರ ಹಾಗೂ ಶಿರಸಿಯಲ್ಲಿ ಸಾಧಾರಣ ಮಳೆಯಾಗಿದೆ.

ಸಮುದ್ರದಲ್ಲಿ ಶುಕ್ರವಾರ ಅಲೆಗಳ ಅಬ್ಬರ ಜೋರಾಗಿದ್ದರಿಂದ ಸಮುದ್ರಕ್ಕೆ ತೆರಳಿದ್ದ ಕಾರವಾರದ ಬಹುತೇಕ ಯಾಂತ್ರಿಕ ದೋಣಿಗಳು ವಾಪಸ್ ಬಂದರು ಸೇರಿತು. ಕೆಲ ದೋಣಿಗಳು ಮಾತ್ರ ಮೀನುಗಾರಿಕೆ ನಡೆಸಿವೆ. ಇದರಿಂದ ಮೀನುಗಾರಿಕೆಗೆ ಹಿನ್ನಡೆಯಾಗಿ ಅನೇಕ ಮೀನುಗಾರರು ನಷ್ಟಗೊಂಡಿದ್ದಾರೆ.  ಜಿಲ್ಲೆಯ ಸಿದ್ಧಾಪುರ ಹಾಗೂ ಮುಂಡಗೋಡದಲ್ಲಿ ದಿನವಿಡೀ ಮಳೆಯಾಗಿದೆ.

47.3 ಮಿ.ಮೀ. ಮಳೆ
ಆಗಸ್ಟ್ 2ರಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 47.3 ಮಿ.ಮೀ ಮಳೆಯಾಗಿದೆ. ಅಂಕೋಲಾ 33.8 ಮಿ.ಮೀ, ಭಟ್ಕಳ 10 ಮಿ.ಮೀ, ಹಳಿಯಾಳ 15.7 ಮಿ.ಮೀ, ಹೊನ್ನಾವರ 60.3 ಮಿ.ಮೀ, ಕಾರವಾರ 29.6 ಮಿ.ಮೀ, ಕುಮಟಾ 17.1ಮಿ.ಮೀ, ಮುಂಡಗೋಡ 34.2ಮಿ.ಮೀ, ಸಿದ್ಧಾಪುರ 121.2 ಮಿ.ಮೀ, ಶಿರಸಿ 58.5 ಮಿ.ಮೀ, ಜೋಯಿಡಾ 45 ಮಿ.ಮೀ, ಯಲ್ಲಾಪುರ 95.4 ಮಿ.ಮೀ ಮಳೆಯಾಗಿದೆ. ಆಗಸ್ಟ್ 1 ರಿಂದ ಇಂದಿನವರೆಗೆ 109.6 ಮಿ.ಮೀ. ಮಳೆಯಾಗಿದೆ.    
      
ಶರಾವತಿಯಲ್ಲಿ ಪ್ರವಾಹದ ಭೀತಿ
ಹೊನ್ನಾವರ: ಲಿಂಗನಮಕ್ಕಿ ಜಲಾಶಯದಿಂದ ಶುಕ್ರವಾರ 43 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು ಜಲಾಶಯದ ಕೆಳ ಭಾಗದ ಶರಾವತಿ ನದಿ ದಂಡೆಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

`ನದಿ ದಂಡೆಗಳ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆದೆ. ಇನ್ನೂ ಪೂರ್ಣ ಪ್ರಮಾಣದ ಪ್ರವಾಹದ ಸ್ಥಿತಿ ತಲೆದೋರಿಲ್ಲ. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಸ್ಥಳದಲ್ಲಿ ಮುಕ್ಕಾಂ ನಡೆಸಿದ್ದು ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ತಹಶೀಲ್ದಾರ್ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

ಶಾಸಕ ಮಂಕಾಳ ಎಸ್.ವೈದ್ಯ, ಉಪವಿಭಾಗಾಧಿಕಾರಿ ವಿ.ಆರ್.ಪಿ. ಮನೋಹರ, ತಹಶೀಲ್ದಾರ್ ಎಸ್.ಎಸ್. ಪೂಜಾರಿ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಡಿಮೆಯಾದ ಅಬ್ಬರ
ಸಿದ್ದಾಪುರ
: ತಾಲ್ಲೂಕಿನಲ್ಲಿ  ಶುಕ್ರವಾರ ಇಡೀ ದಿನ ಮಳೆ ಸುರಿದಿದ್ದು, ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು.

   ಶುಕ್ರವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ  121.2 ಮಿ.ಮೀ. ಮಳೆ ದಾಖಲಾಗಿದ್ದು, ಒಟ್ಟು 2710.8 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯವರೆಗೆ ಒಟ್ಟು 1137 ಮಿ.ಮೀ. ಬಿದ್ದಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಸಂಚಾರಕ್ಕೆ ವ್ಯತ್ಯಯ
ಯಲ್ಲಾಪುರ: ತಾಲ್ಲೂಕಿನ  ವಜ್ರಳ್ಳಿ ಬೀಗಾರ ಕ್ರಾಸ್ ಬಳಿ ದೊಡ್ಡದೊಂದು ಮರ ಉರುಳಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಮರ ಬಿದ್ದಿದ್ದರಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಪ್ರಯಾಣಿಕರ ಸಮಸ್ಯೆ ಗಮನಿಸಿದ ಸ್ಥಳೀಯ ಶಾಲೆ ಶಿಕ್ಷಕರಾದ ಡಿ.ಜಿ.ಭಟ್ಟ, ಜಿ.ಎಸ್. ಗಾಂವ್ಕರ ಮಾರ್ಗದರ್ಶನದಲ್ಲಿ ಸರ್ವೋದಯ ಪ್ರೌಢ ಶಾಲಾ ವಿದ್ಯಾರ್ಥಿಗಳು ಮರದ ಟೊಂಗೆಗಳನ್ನು ಕತ್ತರಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ವಿದ್ಯಾರ್ಥಿಗಳ ಜೊತೆಗೆ ಸ್ಥಳೀಯರು ನೆರವಾಗಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT