ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮುಗಿಲ ನಡುವೆ ಸಂಗೀತವರ್ಷ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಹೊರಗಡೆ ಇನ್ನೇನು ಮಳೆ ಹನಿಯಲು ಆರಂಭವಾಗುತ್ತದೆ ಎನ್ನುವ ಸೂಚನೆಯನ್ನು ಹೆಪ್ಪುಹಟ್ಟಿದ್ದ ಮೋಡಗಳು ಸೂಚನೆ ನೀಡುತ್ತಿದ್ದರೂ, `ಮಳೇನಾ? ಬಂದ್ರೆ ಬರ್ಲಿ ಬಿಡು. ಈ ಕಾರ್ಯಕ್ರಮವನ್ನಂತೂ ತಪ್ಪಿಸಿಕೊಳ್ಳಬಾರದು' ಎನ್ನುವಂತೆ ಒಬ್ಬೊಬ್ಬರೇ ಸಂಗೀತ ರಸಿಕರು ಚೌಡಯ್ಯ ಸ್ಮಾರಕ ಭವನದೊಳಗೆ ಸೇರಿಕೊಳ್ಳುತ್ತಿದ್ದರು.

ವಿಶಾಲವಾದ ಸಭಾಂಗಣದೊಳಗಿದ್ದ ವೇದಿಕೆಯ ಬೃಹತ್ ಪರದೆ ತೆರೆಯುತ್ತಿದ್ದಂತೆ, ಕಾರ್ಯಕ್ರಮಕ್ಕೆ ಸಜ್ಜುಗೊಂಡು ಕುಳಿತಿದ್ದ ಜೋಡಿ ತಂಬೂರಿಗಳು, ಹಾರ್ಮೋನಿಯಂ ಹಾಗೂ ತಬಲಾ ಕಂಡವು. ಕೆಲ ಹೊತ್ತಿನ ಬಳಿಕ ಕಲಾವಿದರು ವೇದಿಕೆಯನ್ನು ಅಲಂಕರಿಸಿ ಕಾರ್ಯಕ್ರಮವನ್ನು ಆರಂಭಿಸಿದರು. ಅಲ್ಲಿದ್ದ ಮೂಕ ಮೈಕಿಗೆ ದನಿ ನೀಡುವ ಮೂಲಕ ಶುಭದಾ ಪರಾಡ್ಕರ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವನ್ನು ಆರಂಭಿಸಿದರು.

ಇದು ನಗರದ ಸಪ್ತಕ ಸಂಸ್ಥೆ ಆಯೋಜಿಸಿದ್ದ `ಸಂಗೀತ ಸಂಭ್ರಮ'ದ ಮರುನೋಟ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಇನ್ನಿತರ ಕಲೆಗಳನ್ನು ಪ್ರಚಾರ ಮಾಡುವಲ್ಲಿ ಸಿದ್ಧಹಸ್ತವಾಗಿರುವ ಸಪ್ತಕ ಸಂಗೀತ ವಲಯಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ಭಾನುವಾರ ತನ್ನ ಏಳನೇ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಿಕೊಂಡಿತು. ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ಪಂಡಿತರಾದ ಶುಭದಾ ಪರಾಡ್ಕರ್ (ಗಾಯನ) ಹಾಗೂ ಪಂ. ಬುಧಾದಿತ್ಯ ಮುಖರ್ಜಿ (ಸಿತಾರ್) ಅವರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಪೂರ್ವಿ (ಪೂರ್ವಿ ಥಾಟ್) ರಾಗದಿಂದ ಆರಂಭಗೊಂಡ ಶುಭದಾ ಅವರ ಗಾಯನ, 6-7 ನಿಮಿಷಗಳ ಕಾಲ ಆಲಾಪ್ ಗಾಯಕಿಯಲ್ಲಿ ತೊಡಗಿಕೊಂಡಿತು. ನಂತರ ಝೂಮ್ರೋ ತಾಳದಲ್ಲಿ ಆರಂಭವಾದ `ಮೈ ತೋ ನ ಜಾವೂ..' ಎಂಬ ಬಂದಿಶ್‌ನಲ್ಲಿ ವಿಸ್ತಾರಗೊಳ್ಳತೊಡಗಿತು. ಪುನರಾವರ್ತನೆಯಾಗುತ್ತಿದ್ದ ಯಿ-ಮುಖಡಾ (ಬಂದಿಶ್‌ನ ಮೊದಲ ಸಾಲು) ಕ್ರಿಯಾಶೀಲವಾದ ಸ್ವರಮಾಲೆಗಳಿಂದ ಕೂಡಿತ್ತು. ರಾಗ ವಿಸ್ತಾರಗೊಳ್ಳುತ್ತಾ, ತಾರ ಸಪ್ತಕವನ್ನು ಮುಟ್ಟಿ ಅಂತರಾದ ಮುಖಡಾದಲ್ಲಿ ಕೊನೆಗೊಂಡಿತು.

ಅಲ್ಲಿಯವರೆಗೂ ನಿಧಾನಗತಿಯಲ್ಲಿ ಸಾಗುತ್ತಿದ್ದ ಗಾಯನ ಧೃತ್ ತೀನ್‌ತಾಳದಲ್ಲಿ ಆರಂಭವಾದ 'ಅರಿಯೇ ಮೇ ತೋ' ಎಂಬ ಚೀಸ್‌ನ ಮೂಲಕ ಉತ್ಸಾಹವನ್ನು ಪಡೆಯಿತು. ಆಗ ಆರಂಭವಾದ ಗಾಯನದಲ್ಲಿ ಸರ್ಗಮ್‌ಗಳ ಸುರಿಮಳೆಯನ್ನೇ ಸುರಿಸಿದರು. ಒಂದಕ್ಕಿಂತ ಒಂದು ಅದ್ಭುತ ಸ್ವರ ಹೆಣೆಗಾರಿಕೆ. ನಂತರದಲ್ಲಿ ಕಾಮೋದ್ ರಾಗದಲ್ಲಿ ಎರಡು ಸಂಯೋಜನೆಗಳನ್ನು ಪ್ರಸ್ತುತಪಡಿಸಿದರು. ಜಪ್ ತಾಳದಲ್ಲಿ `ಸಮಜತನಾಯೀ' ಹಾಗೂ ತೀನ್‌ತಾಳದಲ್ಲಿ `ಜನನದೋಂಗಿ ಮಾಯಿರೇ' ಎಂಬ ಗೀತೆಗಳನ್ನು ಹಾಡಿದರು. ಕೊನೆಯಲ್ಲಿ ಮಿಶ್ರ ಕಾಪಿ ರಾಗದಲ್ಲಿ (ಕಾಪಿ ಥಾಟ್) ಟಪ್ಪಾ ಹಾಗೂ ತರಾನಾವನ್ನು ಹಾಡಿದರು. ತ್ವರಿತವಾಗಿದ್ದ ಟಪ್ಪಾ ಸಂಯೋಜನೆಯ ಗಾಯನದಲ್ಲಿ, ಲಯದ ವೇಗಕ್ಕೆ ಸ್ವರಪುಂಜಗಳನ್ನು ರಚಿಸಿ, ಯಾವುದೇ ಸ್ವರಗಳನ್ನು ತೇಲಿಸದೇ `ಸಮ್'ನಲ್ಲಿ ನಿಲ್ಲುವ ರೀತಿ ಸುಸ್ಪಷ್ಟ.

ಸಮರ್ಥ ಸಾಥಿ
ಇಲ್ಲಿ ವಾದ್ಯ ಸಾಥಿ ನೀಡುವ ಮೂಲಕ ಕೇಳುಗರ ಮನ ಸೆಳೆದ ಸಾಥಿದಾರರ ಬಗ್ಗೆಯೂ ಹೇಳಲೇಬೇಕು. ಟಪ್ಪಾ ಗಾಯಕಿಯ ಮಾರುದ್ದದ ಸ್ವರಮಾಲಿಕೆಯನ್ನು ಅಷ್ಟೇ ಸುಂದರವಾಗಿ ತಮ್ಮ ಹಾರ್ಮೋನಿಯಂನಲ್ಲಿ ಪುನರಾವರ್ತಿಸಿದ ಪಂ. ವ್ಯಾಸಮೂರ್ತಿ ಕಟ್ಟಿಯವರ ಸಾಥಿಯ ಮೋಡಿಗೆ `ವಾಹ್, ಕ್ಯಾ ಬಾತ್ ಹೈ' ಎಂದು ಶುಭದಾ ಉದ್ಗರಿಸಿದರು. ಹಾಗೆಯೇ ತಬಲಾ ಸಾಥ್ ನೀಡಿದ ಉದಯರಾಜ್ ಕರ್ಪೂರ್ ತನಿಯಲ್ಲಿ ಹಾಗೂ ಕಾರ್ಯಕ್ರಮದುದ್ದಕ್ಕೂ ಬಳಸಿದ ವಿಶಿಷ್ಟ ಠೇಕಾಗಳಿಂದ ಶ್ರೋತೃ ವರ್ಗವನ್ನು ತಲೆದೂಗುವಂತೆ ಮಾಡಿದರು. ಪಂ. ಆರ್. ಡಿ. ಪೋತದಾರರಲ್ಲಿ ಕಿರಾನಾ ಘರಾಣಾ ಹಾಗೂ ಗ್ವಾಲಿಯರ್ ಘರಾಣಾವನ್ನು ಪಂ. ಮಧುಸೂದನ್ ಜೋಷಿಯವರಲ್ಲಿ ಕಲಿತವರು. ಹಾಗೂ ಗ್ವಾಲಿಯರ್ ಮತ್ತು ಜೈಪುರ್ ಘರಾಣೆಗಳನ್ನು ಪಂ. ಗಜಾನನ ಬುವಾ ಜೋಷಿಯವರಲ್ಲಿ ಅಭ್ಯಸಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನಾಲ್ಕು ಪ್ರಮುಖ ಘರಾಣೆಗಳನ್ನೂ ಅಭ್ಯಾಸ ಮಾಡುವ ಮೂಲಕ ಅವರ ಸಮಕಾಲೀನ ಕಲಾವಿದರಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಇವರು ಮೂಲತಃ ಸರಳ, ಸಜ್ಜನಿಕೆಯ ಮಾತೃಹೃದಯಿ. ಎಲ್ಲವನ್ನೂ ಮುಗ್ಧವಾಗಿ, ಪ್ರೀತಿಯಿಂದ ಕಾಣುವ ಅವರು ಪ್ರತಿ ಸ್ವರಗಳನ್ನೂ ಅದೇ ಪ್ರೀತಿಯಿಂದ ಉಚ್ಚರಿಸಿ, ಬಂದಿಶ್‌ಗಳಿಗೆ ಬೇಕಾದ ಭಾವ ತುಂಬುವ ರೀತಿ ಅನನ್ಯ.  

ಸಿತಾರ್‌ನಲ್ಲಿ ಸ್ವರಚಿತ್ತಾರ
ನಂತರ ಕಲ್ಕತ್ತಾ ಮೂಲದ ಪಂ. ಬುಧಾದಿತ್ಯ ಮುಖರ್ಜಿ ಅವರ ಸಿತಾರ್ ವಾದನ. ಮೊದಲಿಗೆ ಯಮನ್ ಕಲ್ಯಾಣ್ (ಕಲ್ಯಾಣ್ ಥಾಟ್) ರಾಗದಲ್ಲಿ ಆರಂಭವಾದ ಸಿತಾರ್ ವಾದನ, ಆಲಾಪ್ ನುಡಿಸಾಣಿಕೆಯಿಂದ ಆರಾಮವಾಗಿ ಆರಂಭಗೊಂಡಿತು.

ಲಯಮುಕ್ತ ಸ್ವರಮಾಲಿಕೆಗಳ ವಾದನದಲ್ಲಿ ಹೆಚ್ಚು ಕಾಲ ನಿಲ್ಲದೇ, ವಿಲಂಬಿತ್ ತೀನ್ ತಾಳದಲ್ಲಿ ರಾಗವನ್ನು ವಿಸ್ತರಿಸತೊಡಗಿದರು. ಇದರೊಂದಿಗೆ ತಬಲಾದಲ್ಲಿ ಪಂ. ರವೀಂದ್ರ ಯಾವಗಲ್ಲರ ಸಾಥ್ ಆರಂಭವಾಯಿತು. ನಂತರ ಧೃತ್ ಲಯಗಾರಿಕೆಗೆ ಜಾರಿದ ವಾದನ ಅತೀ ತೀವ್ರಗತಿಯನ್ನು ಪಡೆದುಕೊಂಡ ಸಂದರ್ಭದಲ್ಲಿ ಒಂದೆಡೆ ಇದ್ದಕ್ಕಿದ್ದಂತೆ ಶಾಂತತೆಯ ಮಡಿಲನ್ನು ಹೊಕ್ಕಿದ ಕ್ಷಣ ಒಂದು ಸುಂದರ ಅನುಭವವನ್ನು ನೀಡಿತು.

ಸಿತಾರ್ ವಾದನದಲ್ಲಿ ತಲ್ಲೆನರಾಗಿದ್ದರೂ ಯಾವಗಲ್ಲರ ಸಂವೇದನಾಶೀಲವಾದ ತಬಲಾ ಸಾಥಿಯ ಸಾರವನ್ನು ಅನುಭವಿಸುತ್ತ ಕಣ್ಣಲ್ಲೇ ತಮ್ಮ ಮೆಚ್ಚುಗೆ ಭಾವವನ್ನು ಯಾವಗಲ್ಲರತ್ತ ಸೂಸಿದರು. ಒಂದು ಸ್ವರದಿಂದ ಇನ್ನೊಂದು ಸ್ವರಕ್ಕೆ ಜಾರುವ ಮೂಲಕ ತಂತಿಯಿಂದ ಹೊಮ್ಮುವ ಮೀಂಡ್, ತೀವ್ರಗತಿಯಲ್ಲಿ ಮೂಡಿದ ತಾನ್‌ಗಳ ನುಡಿಸಾಣಿಕೆಯ ಶೈಲಿ, ಪ್ರತೀ ರಾಗದಲ್ಲಿ ವಿಭಿನ್ನವಾಗೇ ಅನಾವರಣಗೊಂಡವು. ಎಲ್ಲಿಯೂ ಪುನಾರಾವರ್ತನೆಗೆ ಅವಕಾಶವೇ ಇರಲಿಲ್ಲ.
ನಂತರ ಮಿಶ್ರ ಖಮಾಜ್ ರಾಗ (ಖಮಾಜ್ ಥಾಟ್)ದಲ್ಲಿ ಠುಮ್ರಿಯೊಂದನ್ನು ನುಡಿಸಿದ ಮೇಲೆ ಕೊನೆಯಲ್ಲಿ ಭೈರವಿ ರಾಗ (ಭೈರವಿ ಥಾಟ್)ದ ನುಡಿಸಾಣಿಕೆಯೊಂದಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಿದರು. ಬೇರೆ ಕಲಾವಿದರುಗಳ ಸಿತಾರ ವಾದನಕ್ಕಿಂತ ಭಿನ್ನ ತಂತ್ರಗಾರಿಕೆಯ ಮೂಲಕ ಸಂಗೀತಾಸಕ್ತರನ್ನು ಬಹುವಾಗಿ ಸೆಳೆದರು.

ಕೋಲ್ಕತ್ತಾ ಮೂಲದ ಬುಧಾದಿತ್ಯರು (ಸಿತಾರ್) ಇಮ್ದೋದ್‌ಖಾನಿ ಘರಾಣೆಯ ಪ್ರಮುಖ ಸಿತಾರ್ ವಾದಕರಾದ ಪಂ. ಬಿಮಲೆಂದು ಮುಖರ್ಜಿಯವರ ಪುತ್ರ. ಐದನೇ ವರ್ಷಕ್ಕೆ ತಂದೆಯವರಲ್ಲಿ ಸಿತಾರ್ ವಾದನವನ್ನು ಕಲಿಯಲಾರಂಭಿಸಿದ ಅವರು ತಂದೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಮ್ದೋದ್‌ಖಾನಿ ಘರಾಣಾವನ್ನು ಜೀವಂತವಾಗಿಡುವುದಲ್ಲದೇ, ಅದನ್ನು ಹಲವು ಮಜಲುಗಳಲ್ಲಿ ಸುಧಾರಿಸಿ ಹಾಗೂ ಉಸ್ತಾದ್ ಇಮ್ದೋದ್ ಖಾನರ ಕ್ರಿಯಾಶೀಲ ಪರಿಕಲ್ಪನೆಯನ್ನು ಮುಂದುವರೆಸುತ್ತಿರುವವರು.

ಸದಾ ಪ್ರಚಲಿತದಲ್ಲಿರುವ ಕಲಾವಿದರಿಗೇ ಮತ್ತೆ ಮತ್ತೆ ಆದ್ಯತೆ ನೀಡುವವರ ನಡುವೆ, ಪ್ರಚಾರ ಬಯಸದೇ ತಮ್ಮದೇ ಸಾಧನೆಯಲ್ಲಿ ತೊಡಗಿರುವ ಈ ಇಬ್ಬರು ಪ್ರಬುದ್ಧ ಕಲಾವಿದರ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಪ್ತಕ ಅಪ್ಪಟ ಕಲಾವಂತಿಕೆಯನ್ನು ಮೆರೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT