ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಮುಸಲಧಾರೆ

ರಾಜ್ಯದ ಕೆಲವೆಡೆ ಜನಜೀವನ ಅಸ್ತವ್ಯಸ್ತ
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶುಕ್ರವಾರ ರಾತ್ರಿ ಮತ್ತು ಶನಿವಾರವೂ ವ್ಯಾಪಕವಾಗಿ ಭಾರಿ ಮಳೆಯಾಗಿದ್ದು ಆಸ್ತಿಪಾಸ್ತಿ, ಜೀವ ಹಾನಿ ಪ್ರಕರಣಗಳು ವರದಿಯಾಗಿವೆ.

ರಾಯಚೂರು ಜಿಲ್ಲೆಯ  ಹಳ್ಳಗಳಲ್ಲಿ ದಿಢೀರ್ ಬಂದ ಪ್ರವಾಹಕ್ಕೆ ಒಟ್ಟು ಸುಮಾರು 170 ಕುರಿಗಳು ಕೊಚ್ಚಿಹೋಗಿವೆ. 50ಕ್ಕೂ ಹೆಚ್ಚು ಶೆಡ್‌ಗಳಿಗೆ ನೀರು ನುಗ್ಗಿದೆ. ಸಿಂಧನೂರು ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ನಾಲೆ ಒಡೆದು 50 ಎಕರೆ ಬೆಳೆ ಹಾನಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಬೆಣ್ಣೆ ಹಳ್ಳ ತುಂಬಿ ಹರಿಯತೊಡಗಿದೆ. 

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಮಸ್ಕಿ ಸಮೀಪದ ಜಂಗಮರಹಳ್ಳಿಯ ಹಳ್ಳ ಶನಿವಾರ ಬೆಳಗಿನ ಜಾವ ತುಂಬಿ ಹರಿದು 120 ಕುರಿಗಳು ಕೊಚ್ಚಿಕೊಂಡು ಹೋಗಿವೆ. ಇವು ಲಿಂಗಸುಗೂರು ತಾಲ್ಲೂಕಿನ ದೇವರಬೂಪುರ ಗ್ರಾಮದ ದುರಗಪ್ಪ ಕುರಬರ ಹಾಗೂ ಯಲ್ಲಪ್ಪ ಕುರಬರ ಎಂಬುವರಿಗೆ  ಸೇರಿದ್ದು, ಇವರು ಕುರಿ ಮೇಯಿಸಲು ಈ ಗ್ರಾಮಕ್ಕೆ ಬಂದಿದ್ದರು. ಸತ್ತ ಕುರಿಗಳ ಮೌಲ್ಯ ್ಙ5 ರಿಂದ 6 ಲಕ್ಷ  ಎಂದು ಅಂದಾಜಿಸಲಾಗಿದೆ.

ಜಲಾವೃತ: ಮಸ್ಕಿಯ ಸೋಮನಾಥ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಇದ್ದ ಅಡುಗೆ ಸಾಮಾನುಗಳು, ಬಟ್ಟೆ ಇನ್ನಿತರ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ವಾಲ್ಮೀಕಿ ನಗರ, ಜಾಲಗಾರ ಓಣಿ, ಗಾಂಧಿನಗರಕ್ಕೂ ನೀರು ನುಗ್ಗಿದೆ.

ಮಸ್ಕಿ ತಾಂಡಾ ಸಮೀಪದ ಸೇತುವೆಯು ಮಳೆ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದೆ. ಮಸ್ಕಿ ಸಮೀಪದ ಹಿರೇದಿನ್ನಿಗೆ ಸಂಪರ್ಕ ಕಲ್ಪಿಸುವ ಸೇತುವೆಯು ನೀರಿನಿಂದ ಸಂಪೂರ್ಣ ಮುಳಗಿದ್ದರಿಂದ ಸುಮಾರು 6 ಗಂಟೆಗಳ ಕಾಲ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಸರಾಸರಿ 58.90 ಮಿ.ಮೀ ಮಳೆ ಬಿದ್ದಿದೆ. ತಾಲ್ಲೂಕಿನ ಹಿರೇಸಿಂದೋಗಿ ಬಳಿಯ ಹಳ್ಳ ತುಂಬಿ ಹರಿದ ಪರಿಣಾಮ ಹಿರೇಸಿಂದೋಗಿ ಮತ್ತು ಕೊಪ್ಪಳ ನಡುವಿನ ಸಂಪರ್ಕ ಕಡಿದು ಹೋಗಿತ್ತು. ಇದರಿಂದ, ನಿತ್ಯ ನಗರಕ್ಕೆ ಹಾಲು ಮಾರಲು ಬರುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಮಧ್ಯಾಹ್ನದ ಹೊತ್ತಿಗೆ ಹಳ್ಳದಲ್ಲಿ ಪ್ರವಾಹ ಕಡಿಮೆಯಾಗಿ ಸಂಚಾರ ಪುನರಾಂಭಗೊಂಡಿತು.

ನಗರ ಹಾಗೂ ಗ್ರಾಮೀಣ ಪ್ರದೇಶದ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ಇಂದು ಸಂಜೆ ವರೆಗೆ ವಿದ್ಯುತ್ ಪೂರೈಕೆ ಇಲ್ಲದೇ ನಗರದ ಜನತೆ ತೊಂದರೆ ಅನುಭವಿಸಬೇಕಾಯಿತು. ಹೊಲ ಮತ್ತು ತೋಟಗಳಲ್ಲಿ ನೀರು ನುಗ್ಗಿ ಬೆಳೆ ಹಾನಿ ಸಹ ಸಂಭವಿಸಿದೆ.

ಜನಜೀವನ ಅಸ್ತವ್ಯಸ್ತ: ಸಿಂಧನೂರು ಪಟ್ಟಣ ಮತ್ತು ತಾಲ್ಲೂಕಿನಾದ್ಯಂತ ಬಿದ್ದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶದಲ್ಲಿನ ಮನೆ ಮತ್ತು ಶೆಡ್ಡುಗಳಿಗೆ ಕೊಳಚೆ ನೀರು ನುಗ್ಗಿ ಜನರು ಅಹೋರಾತ್ರಿ ಜಾಗರಣೆ ಮಾಡುವಂತಾಯಿತು.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿನ ಚರಂಡಿಗಳಲ್ಲಿ ನೀರಿನ ಹರಿವು ಹೆಚ್ಚಿ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿತು. ಜನತಾ ಕಾಲೋನಿಯಲ್ಲಿನ ಶಾದಿಮಹಲ್ ಹಿಂದುಗಡೆ ಇರುವ  20ಕ್ಕೂ ಹೆಚ್ಚು ಶೆಡ್‌ಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ತೊಂದರೆ ಅನುಭವಿಸಿದರು.

ಕೊಚ್ಚಿಹೋದ ರಸ್ತೆ : ದಿದ್ದಗಿ ಗ್ರಾಮದ ಬಳಿ ಬಳಗಾನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಇದರಿಂದ ಜಾಲವಾಡಗಿ, ಬುದ್ದಿನ್ನಿ, ಬೆಳಗಿನೂರು, ಸಾಗರಕ್ಯಾಂಪ್, ರಾಮತ್ನಾಳ, ಬನ್ನಿಗನೂರು ಸೇರಿದಂತೆ ಸುತ್ತಮುತ್ತಲಿನ ಇನ್ನಿತರ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಈ ಮಾರ್ಗದಲ್ಲಿ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕಾಲೇಜುಗಳಿಗೆ ಪರೀಕ್ಷೆ ಬರೆಯಲು ತೆರಳಬೇಕಿದ್ದ ವಿದ್ಯಾರ್ಥಿಗಳು ಹಾಗೂ ಚಿಕಿತ್ಸೆಗಾಗಿ ಹೊರಟಿದ್ದ ಬಾಣಂತಿಯರು ಕೆಲಕಾಲ ಪರದಾಡಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಹಿರೇಹಳ್ಳ ಮತ್ತು ಒಡೆಹಳ್ಳ ಎರಡೂ ತುಂಬಿ ಹರಿಯುತ್ತಿವೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಹೊಲದ ಒಡ್ಡುಗಳು, ನಾಲೆಗಳು ಒಡೆದಿರುವ ಬಗ್ಗೆ ವರದಿಯಾಗಿದೆ. ಕೆರೆಗಳು ತುಂಬತೊಡಗಿವೆ.

ಸಿಂಧನೂರು ತಾಲ್ಲೂಕಿನ ಮುದ್ದಾಪುರ ಬಳಿ ಇರುವ ಹಳ್ಳದ ಪಕ್ಕದ ಹೊಲದಲ್ಲಿ ಹಟ್ಟಿಹಾಕಿದ್ದ ಲಿಂಗಸುಗೂರು ತಾಲ್ಲೂಕಿನ ಉಪ್ಪಾರ ನಂದಿಹಾಳ ಗ್ರಾಮದ ಹುಸೇನ್‌ಸಾಬ ಎನ್ನುವವರಿಗೆ ಸೇರಿದ  350 ಕುರಿಗಳಲ್ಲಿ 50 ಕುರಿಗಳು ಹಳ್ಳದ ದಂಡೆಯಲ್ಲಿ ಮಲಗಿದ್ದಾಗ ನೀರಿನಲ್ಲಿ ಕೊಚ್ಚಿಹೋಗಿವೆ.

ಮೈಸೂರು ಜಿಲ್ಲೆಯಲ್ಲಿ ಮಳೆ ಶನಿವಾರವೂ ಮುಂದುವರಿದಿದೆ. ಮೈಸೂರು, ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ನಂಜನಗೂಡು ತಾಲ್ಲೂಕುಗಳಲ್ಲಿ ಮಳೆಯಾಗಿದೆ.

ಒಡೆದ ನಾಲೆ: ಮಳೆಯಿಂದಾಗಿ ಹುಣಸೂರು ತಾಲ್ಲೂಕಿನ ದಾಸನಪುರ ನಾಲೆ ಒಡೆದು ಸುಮಾರು 50 ಎಕರೆ ಪ್ರದೇಶದಲ್ಲಿನ ಅರಿಶಿಣ, ಬಾಳೆ, ಹಲಸಂದೆ, ಮುಸುಕಿನಜೋಳ ಮತ್ತು ಕಬ್ಬು ಬೆಳೆಗಳಿಗೆ ಹಾನಿಯಾಗಿದೆ. ಈ ನಾಲೆಯನ್ನು ಕಳೆದ ವರ್ಷವಷ್ಟೇ ದುರಸ್ತಿ ಮಾಡಲಾಗಿತ್ತು.

ಬೆಳಿಗ್ಗೆಯಿಂದ ಬಿಸಿಲಿನ ತಾಪ ಇರಲಿಲ್ಲ. ಹೀಗಾಗಿ, ನಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ನಗರದ ಹೊರವಲಯದಲ್ಲಿ ತುಂತುರು ಮಳೆಯಾಯಿತು. ಮಳೆಯಿಂದಾಗಿ ಸಿದ್ಧಾರ್ಥ ಬಡಾವಣೆಯಲ್ಲಿ ಮರವೊಂದು ಶುಕ್ರವಾರ ರಾತ್ರಿ ಬುಡಸಹಿತ ನೆಲಕ್ಕೆ ಉರುಳಿದೆ. ಆದರೆ, ಯಾವುದೇ ಹಾನಿಯಾಗಿಲ್ಲ. ಜಯಪುರ ಹೋಬಳಿ ವ್ಯಾಪ್ತಿಯಲ್ಲಿ 0.5 ಮಿ.ಮೀ.ನಷ್ಟು ಮಳೆಯಾಗಿದೆ. 

ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ 17.5 ಮಿ.ಮೀ., (ಅತಿ ಹೆಚ್ಚು) ಮಳೆಯಾಗಿದ್ದರೆ, ನಂಜನಗೂಡು ತಾಲ್ಲೂಕಿನಲ್ಲಿ 12 ಮಿ.ಮೀ., ಪಿರಿಯಾಪಟ್ಟಣದಲ್ಲಿ 5 ಮಿ.ಮೀ., ಹುಣಸೂರು ತಾಲ್ಲೂಕಿನಲ್ಲಿ 10 ಮಿ.ಮೀ. ನಷ್ಟು ಮಳೆಯಾಗಿರುವುದು ದಾಖಲಾಗಿದೆ.

ಮಳೆ ಬಿರುಸು: ಕೊಡಗು ಜಿಲ್ಲೆಯ ಕೆಲವಡೆ ಮಳೆ ಶನಿವಾರ ಬಿರುಸಗೊಂಡಿದೆ. ಮುಂಗಾರು ಆಗಮಿಸುವ ಮುನ್ಸೂಚನೆ ನೀಡಿದೆ. ಮಡಿಕೇರಿ ನಗರ ಮತ್ತು ಕೊಡಗಿನ ಕೆಲವೆಡೆ  ಬೆಳಿಗ್ಗೆಯಿಂದಲೇ ತುಂತುರು ಮಳೆ ಆರಂಭವಾಯಿತು. ಆಗೊಮ್ಮೆ ಈಗೊಮ್ಮೆ ಬಿರುಸಾಗಿ ಸುರಿದಿದೆ.

ವ್ಯಾಪಕ ಮಳೆ: ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಾಪುರ, ಧಾರವಾಡ, ಉತ್ತರಕನ್ನಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದ ವ್ಯಾಪಕವಾಗಿ ಮಳೆಯಾಗಿದೆ.

ಶನಿವಾರ ನಸುಕಿನಲ್ಲಿ ಹುಬ್ಬಳ್ಳಿ, ವಿಜಾಪುರ, ಬೆಳಗಾವಿ ನಗರಗಳಲ್ಲಿ ಮಳೆ ಸುರಿಯಿತು. ನಂತರವೂ ಮೋಡ ಕವಿದ ವಾತಾವರಣವಿತ್ತು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಸಣ್ಣಗೆ ಮಳೆಯಾಗಿದೆ.

ಬೆಂಗಳೂರಿನಲ್ಲಿ ದಾಖಲೆ
ಶುಕ್ರವಾರ ಬೆಂಗಳೂರಿನಲ್ಲಿ ದಾಖಲೆ ಮಳೆಯಾಗಿದೆ. 122 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಿನದ ಮಟ್ಟಿಗೆ ರಾಜಧಾನಿಯಲ್ಲಿ 100.6 ಮಿ.ಮೀ ಮಳೆ ಬಿದ್ದಿರುವುದು ದಾಖಲೆ. 1891 ಜೂ. 16ರಂದು 101.6 ಮಿ.ಮೀ ಮಳೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT