ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಸುರಿದರೂ ಇಳುವರಿ ಕುಸಿತ ನಿಶ್ಚಿತ

Last Updated 18 ಅಕ್ಟೋಬರ್ 2011, 9:45 IST
ಅಕ್ಷರ ಗಾತ್ರ

ಮಂಡ್ಯ: ಬರಪೀಡಿತ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿರುವ ಜಿಲ್ಲೆಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ವಾಡಿಕೆಗಿಂತಲೂ ಕಡಿಮೆ ಮಳೆ ಬಂದಿದ್ದು, ಶೇ 41ರಷ್ಟು ಕೊರತೆ ಉಂಟಾಗಿದ್ದು, ಅಕ್ಟೋಬರ್ ಆರಂಭದಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೂ ಒಟ್ಟಾರೆ ಬೆಳೆಯ ಇಳುವರಿ ಕುಸಿಯುವ ಭೀತಿ ಇದೆ.

ಅಕ್ಟೋಬರ್ ಮೊದಲ ವಾರದಲ್ಲಿ ಜಿಲ್ಲೆಯಾದ್ಯಂತ ವಿವಿಧೆಡೆ ಮಳೆ ಸುರಿದಿರುವುದು ಸ್ವಲ್ಪಮಟ್ಟಿಗೆ ನಷ್ಟದ ಪ್ರಮಾಣ ಕುಗ್ಗಿಸಬಹುದು. ಮಳೆಯಾಗಿದ್ದರೂ ಬೆಳೆ ನಷ್ಟ ಖಚಿತ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಮಳೆ ಕೊರತೆ ಇದ್ದು, ಬೆಳೆಯ ಮೇಲೆ ಪ್ರತಿಕೂಲ ಪರಿಣಾಮವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಕೆ.ಆರ್.ಪೇಟೆಯ ಸಂತೆಬಾಚನಹಳ್ಳಿ ಹೋಬಳಿ, ಮಳವಳ್ಳಿ, ಪಾಂಡವಪುರ ತಾಲ್ಲೂಕಿನ ಕೆಲ ಭಾಗ, ಮಂಡ್ಯ ತಾಲ್ಲೂಕಿನ ದುದ್ದ, ಬಸರಾಳು ಹೋಬಳಿಯ ಕೆಲವೆಡೆ ಮಳೆ ಕೊರತೆಯಿಂದ ಬೆಳೆ ಹಾನಿ ಭೀತಿ ಇದೆ. ಅಕ್ಟೋಬರ್‌ನಲಿ ಬಿದ್ದ ಮಳೆಯಿಂದ ಬತ್ತದ ಬೆಳೆ ಚೇತರಿಸಿಕೊಳ್ಳಬಹುದು. ಆದರೆ, ರಾಗಿ ಬೆಳೆ ನಷ್ಟ ಆಗುವುದು ನಿಶ್ಚಿತ ಎನ್ನುತ್ತಾರೆ.

ಕೃಷಿ ಇಲಾಖೆಯ ವರದಿಗಳ ಪ್ರಕಾರ, ಸೆಪ್ಟೆಂಬರ್ 10ರಂದು ಇದ್ದಂತೆ ಜಿಲ್ಲೆಯಲ್ಲಿ ಒಟ್ಟಾರೆ 55,128 ಹೆಕ್ಟೆರ್ ಭೂಮಿಯಲ್ಲಿ ಕೃಷಿ ಬೆಳೆ ಹಾನಿಯಾಗಿದ್ದು, 42,872 ಹೆಕ್ಟೇಬರ್ ಪ್ರದೇಶದಲ್ಲಿ ಶೇ 50ಕ್ಕಿಂತಲೂ ಕಡಿಮೆ ಬಳೆ ಹಾನಿಯಾಗಿದೆ ಎಂಂದು ಅಂದಾಜು ಮಾಡಲಾಗಿದೆ.

ಮಳೆ ಕೊರತೆ ಮತ್ತು ಬೆಳೆ ಹಾನಿ ಅಂದಾಜಿನ ಹಿನ್ನೆಲೆಯಲ್ಲಿ ಬರಪೀಡಿತ ಎಂದು ಘೋಷಿಸಲಾಗಿರುವ ಜಿಲ್ಲೆಗೆ ಪರಿಹಾರ ಕಾರ್ಯಗಳಿಗಾಗಿ ಒಟ್ಟಾರೆ 857 ಲಕ್ಷ ರೂಪಾಯಿ ನೆರವು ನೀಡಬೇಕು ಎಂದು ಇಲಾಖೆಯ ಕೋರಿದೆ.

ಮಳೆ ವಿವರ: ಸೆಪ್ಟೆಂಬರ್ ಮೊದಲ ವಾರ ಇದ್ದಂತೆ ಜಿಲ್ಲೆಯಲ್ಲಿ ವಾಡಿಕೆ ಮಳೆ 307.2 ಮಿ.ಮೀ. ಆಗಬೇಕಿತ್ತು. ಆದರೆ, ಈ ಅವಧಿಯಲ್ಲಿ ಕೇವಲ 182.4 ಮಿ.ಮೀ. ಆಗಿದ್ದು, ಶೇ 41ರಷ್ಟು ಕೊರತೆ ಉಂಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟಾರೆ 418.3 ಮಿ.ಮೀ. ಮಳೆಯಾಗಿತ್ತು.

ತಾಲ್ಲೂಕುವಾರು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 153.7 ಮಿ.ಮೀ., ಮದ್ದೂರು 143.4 ಮಿ.ಮೀ., ಮಳವಳ್ಳಿ 83.6 ಮಿ.ಮೀ., ಮಂಡ್ಯ 156.5 ಮಿ.ಮೀ., ನಾಗಮಂಗಲ 150.6 ಮಿ.ಮೀ., ಪಾಂಡವಪುರ 116.8 ಮಿ.ಮೀ., ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಶೇ 68.9 ಮಿ.ಮೀ. ಮಳೆ ಕೊರತೆ ಇದೆ.

ಆದರೆ, ಈ ತಾಲ್ಲೂಕುಗಳಲ್ಲಿ ಅಕ್ಟೋಬರ್ 1 ರಿಂದ 17ರವರೆಗಿನ ಅವಧಿಯಲ್ಲಿ ಸುರಿದಿರುವ ಮಳೆಯು ಸ್ವಲ್ಪಮಟ್ಟಿಗೆ ಸಮಾಧಾನವನ್ನು ನೀಡಿದೆ. ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಈ ಅವಧಿಯಲ್ಲಿ 194.6 ಮಿ.ಮೀ., ಮಳೆಯಾಗಿದ್ದರೆ ಮದ್ದೂರಿನಲ್ಲಿ 166.1 ಮಿ.ಮೀ., ಮಳವಳ್ಳಿ,  103.9 ಮಿ.ಮೀ., ಮಂಡ್ಯ 144.6 ಮಿ.ಮೀ., ನಾಗಮಂಗಲ 143.2 ಮಿ.ಮೀ., ಪಾಂಡವಪುರ 96.9 ಮಿ.ಮೀ., ಮತ್ತು ಶ್ರೀರಂಗಪಟ್ಟಣದಲ್ಲಿ 101.7 ಮಿ.ಮೀ. ಮಳೆಯಾಗಿದೆ.
ನೆರವು ಬಂದಿಲ್ಲ: ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನೂ ಬರ ಎಂದು ಸರ್ಕಾರ ಘೋಷಿಸಿದ್ದರೂ ಇನ್ನು ಪರಿಹಾರ ಕಾರ್ಯಗಳಿಗಾಗಿ ಯಾವುದೇ ನೆರವು ಬಂದಿಲ್ಲ ಎಂಬುದು ಅಧಿಕಾರಿಗಳ ವಿವರಣೆ.

ವಾರದ ಹಿಂದೆ ಜಿಲ್ಲಾಧಿಕಾರಿಗಳು ಸಭೆ ಕರೆದು ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ತಾಲ್ಲೂಕುವಾರು ಸಭೆ ನಡೆಯುತ್ತಿದೆ. ಪರಿಸ್ಥಿತಿ, ನೆರವಿನ ಪ್ರಮಾಣ ಕುರಿತು ವರದಿ ಕೇಳಿದ್ದು, ಆ ನಂತರವೇ ಬರ ಪರಿಸ್ಥಿತಿ ಎದುರಿಸಲು ಪರಿಹಾರ ನಿಟ್ಟಿನಲ್ಲಿ ಕಾರ್ಯಕ್ರಮಗಳು ಆರಂಭವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT