ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಕಾಡಿನೊಳಗೆ ಸಿಡಿಮದ್ದು ಸ್ಫೋಟ: ಕಾಯ್ದೆ ಉಲ್ಲಂಘನೆ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಕಾಗಿನಹರೆ ಹಾಗೂ ಕೆಂಚನಕುಮರಿ ರಕ್ಷಿತ ಅರಣ್ಯದ ಮಳೆಕಾಡಿನಲ್ಲಿ ಬೆಂಗಳೂರಿನ ಮಾರುತಿ ಪವರ್ ಜೆನ್ (ಇಂಡಿಯಾ) ಕಂಪೆನಿಯು ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಕಂಪೆನಿಯು ಭಾರೀ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿ, ಸಿಡಿ ಮದ್ದುಗಳನ್ನು ಸ್ಫೋಟಿಸಿ, ವನ್ಯಜೀವಿಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ಕೆಂಚನಕುಮರಿ ಸರ್ವೆ ನಂಬರ್ 16 ಹಾಗೂ ಕಾಗಿನಹರೆ ಸರ್ವೆ ನಂಬರ್ 1 ಈ ಎರಡೂ ರಕ್ಷಿತ ಅರಣ್ಯಗಳ 8.21 ಹೆಕ್ಟೇರ್ ಪ್ರದೇಶದಲ್ಲಿ ಎರಡು ಕಿರು ಜಲ ವಿದ್ಯುತ್ ಯೋಜನೆಗಳ ಅನುಷ್ಠಾನಗೊಳಿಸಿ 18.9 ಮತ್ತು 19 ಮೆಗಾವಾಟ್ ಸಾಮರ್ಥ್ಯ ವಿದ್ಯುತ್ ಉತ್ಪಾದಿಸಲು ಸರ್ಕಾರ 2010ರ ಏ. 15ರಂದು ಮಂಜೂರಾತಿ ನೀಡಿದೆ.

 ಯೋಜನೆ ಅನುಷ್ಠಾನ ಗೊಳ್ಳುತ್ತಿರುವ ಪ್ರದೇಶ ನಿತ್ಯ ಹರಿದ್ವರ್ಣದ ದಟ್ಟ ಮಳೆಕಾಡು. ಅಪರೂಪ ಜೀವ ವೈವಿಧ್ಯದಿಂದ ಕೂಡಿದ ವನ್ಯಜೀವಿಗಳ ಆವಾಸ ಸ್ಥಳ. ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಷೆಡ್ಯೂಲ್ 1ರಡಿ ಪ್ರಾಣಿಗಳ ಕಲಂ 2ರನ್ವಯ ಹಾಗೂ ಕಾಯ್ದಿರಿಸಿದ ರಕ್ಷಿತ ಅರಣ್ಯ ಕಾಯಿದೆ ಪ್ರಕಾರ ಇಂತಹ ಕಾಡುಗಳ ಒಳಗೆ ಮನುಷ್ಯರ ಪ್ರವೇಶ ಕಾನೂನು ಬಾಹಿರವಾಗುತ್ತದೆ.

~ರಕ್ಷಿತ ಅರಣ್ಯವನ್ನು ನಾಶಗೊಳಿಸುವ ಹಾಗೂ ವನ್ಯಜೀವಿಗಳಿಗೆ ಧಕ್ಕೆ ತರುತ್ತಿರುವ ಕಿರು ಜಲ ವಿದ್ಯುತ್ ಯೋಜನೆಗೆ ಸರ್ಕಾರ ಯಾವ ಆಧಾರದ ಮೇಲೆ ಅನುಮತಿ ನೀಡಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ~ ಎಂದು ಅರಣ್ಯ ಹಾಗೂ ಪರಿಸರ ಸಚಿವ ಸಿ.ಪಿ.ಯೋಗೇಶ್ವರ್ ಕಳೆದ ವಾರ ಯೋಜನೆ  ನಡೆಯುತ್ತಿರುವ ಸ್ಥಳವನ್ನು ಪರಿಶೀಲಿಸಿದ ನಂತರ ~ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ್ದರು.

  ಜೂನ್ 13ರಂದು ಇದೇ ಯೋಜನೆಯ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ~ಮಾರುತಿ ಪವರ್ ಜೆನ್ ಕಂಪೆನಿಯವರು ಕಾಯ್ದಿರಿಸಿದ ಅರಣ್ಯದಲ್ಲಿ ಸ್ಫೋಟಕ ಬಳಸುತ್ತಿರುವುದು ಸ್ಥಳ ಭೇಟಿಯಲ್ಲಿ ಕಂಡು ಬಂದಿದೆ. 

  ವನ್ಯಜೀವಿಗಳ ವಾಸ ಸ್ಥಳದಲ್ಲಿ ಸ್ಫೋಟಕ ಬಳಸುವಿಕೆ ಗುರುತರವಾದ ಪ್ರಮಾದ ಆಗಿರುತ್ತದೆ. ಇಂತಹ ಅರಣ್ಯಗಳನ್ನು ಯಾವುದೇ ಉದ್ದೇಶಕ್ಕೆ ಬಳಸಲು ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ವನ್ಯಜೀವಿಗಳ ಮಂಡಳಿ ಅನುಮೋದನೆ ಪಡೆಯುವುದು ಅವಶ್ಯ ಇರುತ್ತದೆ.
ಆದ್ದರಿಂದ ಅರಣ್ಯದಲ್ಲಿ ಸಿಡಿಮದ್ದುಗಳನ್ನು ಸ್ಫೋಟಿಸುತ್ತಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ~ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ರಾಜ್ಯ ವನ್ಯ ಜೀವಿ ಮಂಡಳಿ ಉಪಾಧ್ಯಕ್ಷರ ಪತ್ರದ ಹಿನ್ನೆಲೆಯಲ್ಲಿ ಮಾರುತಿ ಜೆನ್ ಕಂಪೆನಿ ಕಾಮಗಾರಿ ವೇಳೆ ಸಿಡಿಮದ್ದುಗಳನ್ನು ಸ್ಫೋಟಿಸದಂತೆ ಜಿಲ್ಲಾಧಿಕಾರಿ ಆದೇಶ  ಹೊರಡಿಸಿದ್ದರು.

ಜುಲೈ 28ರಂದು ಇಲ್ಲಿಯ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರೇಗೌಡ ಅವರು ಸದರಿ ಯೋಜನೆಯ ಕಾಮಗಾರಿಯಲ್ಲಿ ವನ್ಯಜೀವಿಗಳ ಸಂರಕ್ಷಣಾ ಕಾಯಿದೆಯ ಯಾವುದೇ ನಿಯಮ ಉಲ್ಲಂಘನೆ ಆಗಿಯೇ ಇಲ್ಲ.
 
ಈ ಕಾಮಗಾರಿಯಿಂದ ವನ್ಯಜೀವಿಗಳಿಗೆ ಹಾನಿಕಾರಕ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ವರದಿ ನೀಡಿದ್ದಾರೆ. ಇವರ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿ ಆ.1ರಂದು ಕಡಿಮೆ ಮಟ್ಟದ ಸ್ಫೋಟಕ ಬಳಸಲು ಅನುಮತಿ ನೀಡಿ ಆದೇಶ  ಹೊರಡಿಸಿದ್ದಾರೆ.

~ಮಾರುತಿ ಪವರ್ ಜೆನ್ ಕಂಪೆನಿ ಒಂದು ವರ್ಷದಿಂದ ಸುರಂಗ ನಿರ್ಮಾಣಕ್ಕೆ ಸ್ಫೋಟಿಸಿರುವ ಸಿಡಿಮದ್ದುಗಳು ಸಾವಿರಾರು. ಮದ್ದುಗಳನ್ನು ತಯಾರು ಮಾಡುವುದಕ್ಕೆ ಒಂದು ತಂಡ ವರ್ಷದಿಂದ ಕಾಡಿನಲ್ಲಿ ಬೀಡುಬಿಟ್ಟಿದೆ.

ಈ ಯೋಜನೆ ಹೆಸರಿನಲ್ಲಿ ಮರ, ಗಿಡ, ಸಸ್ಯ ಸಂಕುಲದ ಮಾರಣ ಹೋಮ ನಡೆದಿದೆ.  ದೊಡ್ಡ ದೊಡ್ಡ ಯಂತ್ರಗಳು, ಜನರೇಟರ್‌ಗಳು, ಜೆಸಿಬಿ ಯಂತ್ರಗಳು, ಟಿಪ್ಪರ್, ಲಾರಿ, ಜೀಪುಗಳು ಕಾಡಿನಲ್ಲಿ ಶಬ್ದ ಮಾಡಿಕೊಂಡು ನಿತ್ಯ ಓಡಾಡುತ್ತಿವೆ.
 
ಈ ಕಾಮಗಾರಿಯಿಂದ ವನ್ಯಜೀವಿಗಳಿಗೆ ಯಾವುದೇ ಧಕ್ಕೆ ಉಂಟಾಗುತ್ತಿಲ್ಲ, ಸಿಡಿಮದ್ದು ಸ್ಫೋಟಕ್ಕೆ ಅನುಮತಿ ನೀಡಬಹುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ಲಿಖಿತ ವರದಿಯ ಬಗ್ಗೆಯೇ ತನಿಖೆ ನಡೆಸುವುದು ಅಗತ್ಯವಿದೆ~ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್. ಎ.ಕಿಶೋರ್‌ಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT