ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಕತ್ತೆಗಳ ಮದುವೆ!

Last Updated 1 ಸೆಪ್ಟೆಂಬರ್ 2013, 19:46 IST
ಅಕ್ಷರ ಗಾತ್ರ

ಮುಳಬಾಗಲು: ವರುಣನಿಗೆ ಕಾದು ಕಾದು ಸುಸ್ತಾದ ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮಸ್ಥರು ಕೊನೆಗೆ ಕತ್ತೆಗಳ ಮದುವೆ ಮಾಡಿದರು. ಭಾನುವಾರ ಗ್ರಾಮದಲ್ಲಿ ನಡೆದ ಕತ್ತೆಗಳ ಮದುವೆಯಲ್ಲಿ ನಾಲ್ಕೈದು ಗ್ರಾಮಗಳ ಜನರು ಮಳೆಗಾಗಿ ಒಂದೆಡೆ ಸೇರಿದ್ದರು. ಮದುವೆಗೂ ಮುನ್ನ ಗ್ರಾಮದಲ್ಲಿ `ವಧು-ವರರ' ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಈ ರೀತಿ ಗ್ರಾಮದಲ್ಲಿ ನಡೆಯುತ್ತಿರುವುದು ಐದನೇ ಬಾರಿ.

ಮುಕ್ಕಾಲು ಗಂಟೆ ನಡೆದ ಮದುವೆಯ ವಿಧಿವಿಧಾನಗಳನ್ನು ಗ್ರಾಮದ ಪುರೋಹಿತರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಹಬ್ಬದಂಥ ಸಂಭ್ರಮವಿತ್ತು.

ಗಂಡಿನ ಪರವಾಗಿ ರತ್ನಪ್ಪ ಮತ್ತು ಪುಷ್ಪಮ್ಮ ಮತ್ತು ಹೆಣ್ಣಿನ ಪರವಾಗಿ ರಾಜಮ್ಮ ವೆಂಕಟರೆಡ್ಡಿ ಹಾಜರಿದ್ದರು. ಮದುವೆ ರಂಗಿನಲ್ಲಿದ್ದ ಕತೆಗಳು ಜನರ ನಂಬಿಕೆಗೆ ಸಾಥ್ ನೀಡಿದವು. ಸರಿಯಾಗಿ 12ಕ್ಕೆ ಮಾಂಗಲ್ಯ ಧಾರಣೆ ಆಯಿತು. ಮದುವೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಮಾಂಸದೂಟ ಬಡಿಸಲಾಯಿತು. ಸಂಜೆ ತನಕ ಊಟ ಸವಿಯಲು ಜನರು ಬರುತ್ತಿದ್ದರು. ಮಾಂಸ ತಿನ್ನದವರಿಗೆ ಸಿಹಿ ಪೊಂಗಲ್ ತಯಾರಿಸಲಾಗಿತ್ತು.

ಮದುವೆಗೆ ಬರೋಬ್ಬರಿ 40 ಸಾವಿರ ರೂಪಾಯಿ ಖರ್ಚಾಯಿತು. ಇದನ್ನು ನಾಲ್ಕು ಗ್ರಾಮಗಳ ಜನರು ಭರಿಸಿದರು. ಸುಮಾರು 200 ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಸನ್ಯಾಸಪಲ್ಲಿ, ದೂಲಪಲ್ಲಿ, ಬೈರಸಂದ್ರದ ಗ್ರಾಮಸ್ಥರು ಪಾಲ್ಗೊಂಡು ಈಗಲಾದರೂ ಮಳೆಯಾಗಲಿ ಎಂದು ಬೇಡಿಕೊಂಡರು.

ಕಂದಾಯ ಇಲಾಖೆ ಪರವಾಗಿ ತಾಯಲೂರು ಹೋಬಳಿ ಉಪ ತಹಶೀಲ್ದಾರ್ ಆನಂದ್, ರಾಜಸ್ವ ನಿರೀಕ್ಷಕ ಬಿ.ಆರ್.ರೆಡ್ಡಪ್ಪಗುಪ್ತ, ಸುಬ್ರಮಣಿ, ಗ್ರಾಮದ ಮುಖಂಡರಾದ ಎನ್.ಮುನಿಯಪ್ಪ,ಮುನಿರೆಡ್ಡಿ, ಲಕ್ಷ್ಮಿನಾರಾಯಣ, ಮುನೆಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕೋಬರಾವ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT