ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಕಾಯುತ್ತಿರುವ ರೈತರು...

Last Updated 29 ಮೇ 2012, 6:25 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಮಳೆಗಾಲವೇ ಇರಲಿ, ಭೀಕರ ಬರಗಾಲವೇ ಇರಲಿ ರೈತ ಮಾತ್ರ ಯಾವುದಕ್ಕೂ ಎದೆಗುಂದದೆ ತನ್ನ ಕೆಲಸ ತಾನು ಮಾಡುತ್ತಲೇ ಇರುತ್ತಾನೆ. ಅಂತೆಯೇ ಈ ವರ್ಷವೂ ಸಹ ರೈತರು ಮಾಗಿ ಉಳುಮೆ ಮುಗಿಸಿ ಬಿತ್ತನೆಗಾಗಿ ಕಾದು ಕುಳಿತ್ತಿದ್ದು ಮುಂಗಾರು ಮಳೆಗಾಗಿ ಮೋಡದತ್ತ ಮುಖ ಮಾಡಿದ್ದಾರೆ.

ತಾಲ್ಲೂಕಿನ ಬಹುತೇಕ ರೈತರು ಮಳೆಯನ್ನೇ ಆಶ್ರಯಿಸಿದ್ದಾರೆ. ಆದರೆ ಇದುವರೆಗೆ ಸರಿಯಾಗಿ ಮಳೆ ಆಗಿಲ್ಲ. ತಾಲ್ಲೂಕಿನ ಶಿರಹಟ್ಟಿ ಹೋಬಳಿಯ ಮಜ್ಜೂರು, ರಣತೂರು, ಛಬ್ಬಿ, ಮಾಗಡಿ, ಬಟ್ಟೂರು, ಪುಟಗಾಂವ್‌ಬಡ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಲ್ಪ ಉತ್ತಮ ಮಳೆಯಾಗಿದ್ದರೆ ಲಕ್ಷ್ಮೇಶ್ವರ ಹೋಬಳಿ ಜನತೆಗೆ ಇನ್ನೂ ಮಳೆರಾಯನ ದರ್ಶನ ಭಾಗ್ಯವೇ ಇಲ್ಲ. ಆದರೆ, ಈಗಾಗಲೇ ರೈತರು ಮಾಗಿ ಉಳುಮೆಯಲ್ಲಿ ನಿರತರಾಗಿದ್ದು ಭೂಮಿಯನ್ನು ರಂಟೆ ಹೊಡೆದು ಹರಗಿ ಬಿತ್ತನೆಗಾಗಿ ಸಿದ್ಧಗೊಳಿಸಿದ್ದಾರೆ.

ಈ ವರ್ಷ ಶಿರಹಟ್ಟಿ ತಾಲ್ಲೂಕಿನಲ್ಲಿ 59 ಸಾವಿರ  ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಲಕ್ಷ್ಮೇಶ್ವರದ ರೈತ ಸಂಪರ್ಕ ಕೇಂದ್ರದಲ್ಲಿ 108 ಕ್ವಿ. ಹೆಸರು, 33 ಕ್ವಿ. ಹೈಬ್ರೀಡ್ ಜೋಳ ಹಾಗೂ 9.5ಕ್ವಿ. ತೊಗರಿ ದಾಸ್ತಾನು ಇದ್ದು ಶಿರಹಟ್ಟಿ ರೈತ ಸಂಪರ್ಕ ಕೇಂದ್ರದಲ್ಲಿ 102 ಕ್ವಿ. ಹೆಸರು, 13 ಕ್ವಿ. ತೊಗರಿ, 34 ಕ್ವಿ. ಹೈಬ್ರೀಡ್ ಜೋಳ ಹಾಗೂ 80 ಕ್ವಿ. ಗೋವಿನಜೋಳದ ಬಿತ್ತನೆ ಬೀಜ ಮಾರಾಟಕ್ಕೆ ಸಿದ್ಧವಿದೆ.

ಇದರ ಜೊತೆಗೆ ತಾಲ್ಲೂಕಿನಲ್ಲಿ ಗೊಬ್ಬರ ಸಹ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ. ಹಿರೇಮಠ ಪ್ರಜಾವಾಣಿಗೆ ತಿಳಿಸಿದ್ದು ರೈತರು ಕಡಿಮೆ ಬೆಲೆಯಲ್ಲಿ ದೊರೆಯತ್ತದೆ ಎಂದು ಇಲಾಖೆಯಿಂದ ಪರವಾನಿಗಿ ಪಡೆಯದ ಕಂಪೆನಿಯ ಗೊಬ್ಬರ ಹಾಗೂ ಬೀಜ ಖರೀದಿಸ ಬಾರದು ಎಂದು ಮನವಿ ಮಾಡಿದ್ದಾರೆ.

ರೈತರು ಬಿಟಿ ಹತ್ತಿ ಬೀಜವನ್ನೂ ಖರೀದಿಸಿ  ಇಟ್ಟುಕೊಂಡಿದ್ದು ಮಳೆ ಬಿದ್ದ ತಕ್ಷಣ ಬಿತ್ತನೆ ಕಾರ್ಯ ಆರಂಭಿಸಲಿದ್ದಾರೆ. ರೈತರು ಹೆಚ್ಚಾಗಿ ಕನಕ ಬಿಟಿ ಬೀಜವನ್ನೇ ಕೇಳುತ್ತಿದ್ದು ಪೇಟೆಯಲ್ಲಿ ಇದರ ಬೆಲೆ ದುಪ್ಪಾಟ್ಟಾಗಿದೆ. ಆದರೂ ಕೂಡ ರೈತರು ಕನಕ ಬೀಜದ ಖರೀದಿ ನಿಲ್ಲಿಸಿಲ್ಲ. ಕಾರಣ ಈಗ ಪೇಟೆಯಲ್ಲಿ ಬರೀ ಕನಕ ಬಿಟಿ ಬೀಜದ ಹೆಸರೇ ತುಂಬಿಕೊಂಡಿದೆ.

ಕಳೆದ ಎರಡು ವಾರಗಳಿಂದ ಮಳೆರಾಯ ಸುಳಿಯುತ್ತಿಲ್ಲ. ಹೀಗಾಗಿ ನೆತ್ತಿ ಸುಡುವ ಬಿಸಿಲಿಗೆ ಜನತೆ  ಹಾಗೂ ರೈತರು ಬಸವಳಿಯುತ್ತಿದ್ದು ಮಳೆರಾಯ ನಿಗಾಗಿ ದಾರಿ ಕಾಯುತ್ತಿದ್ದಾರೆ.
ನಾಗರಾಜ ಹಣಗಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT