ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ತತ್ತರಿಸಿದ ಜಿಲ್ಲೆ

Last Updated 2 ಆಗಸ್ಟ್ 2013, 10:09 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಈಬಾರಿ ಉತ್ತಮ ಮಳೆಯಾಗಿದ್ದು, ಕಳೆದ ಹತ್ತು ಹದಿನೈದು ದಿನಗಳಿಂದ ಹೋದ ವರ್ಷದ ಉಳಿಕೆ ಕೋಟಾವನ್ನೂ ಮುಗಿಸುವ ರೀತಿಯಲ್ಲಿ ಮಳೆಯಾಗುತ್ತಿದೆ.

ಸಕಲೇಶಪುರದ ಕೆಲವು ಭಾಗಗಳಲ್ಲಂತೂ ಮೂರು ದಶಕಗಳ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗಿದೆ ಎಂದು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಕೆಲವು ಹಳ್ಳಿಗಳ ಜನರು ಪಟ್ಟಣ ನೋಡದೆ ತಿಂಗಳುಗಳೇ ಕಳೆದಿವೆ.

ಹಾಸನದಲ್ಲೂ ಕಳೆದ ಕೆಲವು ದಿನಗಳಿಂದ ವಿಪರೀತ ಮಳೆಯಾಗಿದ್ದರಿಂದ ಆಲೂಗೆಡ್ಡೆ ಬೆಳೆ ಸಂಪೂರ್ಣ ನಾಶವಾಗುವ ಸ್ಥಿತಿ ಬಂದೊದಗಿದೆ.

ಆದರೆ ಅರಸೀಕೆರೆ ತಾಲ್ಲೂಕಿನಲ್ಲಿ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆ ಭಾಗದಲ್ಲಿ ಈ ಬಾರಿಯೂ ಬರದ ಸ್ಥಿತಿ ನಿರ್ಮಾಣವಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಅಂಕಿ ಅಂಶಗಳ ಪ್ರಕಾರ ಅರಸೀಕೆರೆ ಹಾಗೂ ಬೇಲೂರು ತಾಲ್ಲೂಕಿನ ಕೆಲವು ಭಾಗಗಳನ್ನು ಬಿಟ್ಟರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆ ಮಳೆಗಿಂತ ಸರಾಸರಿ ಶೇ.28ರಷ್ಟು ಅಧಿಕ ಮಳೆಯಾಗಿದೆ. ಜುಲೈ 31ರವರೆಗೆ ಜಿಲ್ಲೆಯ ವಾಡಿಕೆ ಮಳೆ ಸರಾಸರಿ 567.9 ಮಿ.ಮೀ. ಇದ್ದರೆ ಈ ವರ್ಷ 727 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 353.8 ಮಿ.ಮಿ. ಮಾತ್ರ ಮಳೆಯಾಗಿತ್ತು.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರೂ ಅರಸೀಕೆರೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಶೇ.13ರಷ್ಟು ಮಳೆ ಕೊರತೆಯಾಗಿದೆ. ಅದರಂತೆ ಬಾಣಾವರ ಶೇ. 6, ಗಂಡಸಿ ಶೇ. 28, ಜಾವಗಲ್ ಶೇ 13 ಹಾಗೂ ಬೇಲೂರು ತಾಲ್ಲೂಕಿನ ಹಳೇಬೀಡು ಶೇ 37, ಮಾದೀಹಳ್ಳಿ ಶೇ 13, ಹಾಸನ ತಾಲ್ಲೂಕಿನ ದುದ್ದ ಹೋಬಳಿಯಲ್ಲಿ ಶೇ 13ರಷ್ಟು ಮಳೆ ಕೊರತೆಯಾಗಿದೆ.

ಜಿಲ್ಲೆಯಲ್ಲಿ 2,55,000 ಹೆಕ್ಟೇರ್ ಬಿತ್ತನೆ ಗುರಿಹೊಂದಿದ್ದು, ಈ ವೆರೆಗೆ 1,25,795 ಹೆ. (ಶೇ.49)ನಲ್ಲಿ ಬಿತ್ತನೆ ಮಾಡಲಾಗಿದೆ. ಮುಸುಕಿನಜೋಳ, ಹೈ.ಜೋಳ, ಸೇರಿದಂತೆ 83,895 ಹೆ.ನಲ್ಲಿ ಏಕದಳ ಧಾನ್ಯ ಬಿತ್ತನೆಯಾಗಿದೆ.

21,200 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬೆಳೆಗಳಾದ ಹೆಸರು, ಉದ್ದು, ಅಲಸಂದೆ ಮುಂತಾದವು ಬಿತ್ತನೆಯಾಗಿವೆ. ಎಣ್ಣೆಕಾಳು ಬೆಳೆಗಳಾದ ಎಳ್ಳು, ನೆಲಗಡಲೆ, ಹರಳು ಮುಂತಾದವು 4,150 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಉಳಿದಂತೆ 16,550 ಹೆಕ್ಟೇರ್‌ನಲ್ಲಿ  ವಾಣಿಜ್ಯ ಬೆಳೆಗಳ ಬಿತ್ತನೆ ಆಗಿವೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT