ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆನಾಡಿನ ತೀರದ ದಾಹ...

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಅಂತರಿಕ್ಷದಲ್ಲಿ ಎಲ್ಲಾದರೂ `ಮನುಜ ವಾಸಯೋಗ್ಯ ತಾಣ~ ಇದೆಯೇ ಎಂಬ ಸಂಶೋಧನೆ ನಡೆದಾಗಲೆಲ್ಲ ಮನುಷ್ಯ ಅರಸುವುದೇ ಅಲ್ಲಿ ಜಲರಾಶಿ ಇದೆಯೇ. ಜೀವಜಲ ಪತ್ತೆಯಾಗಿದೆಯೇ. ನೀರು ಲಭ್ಯವಿದೆಯೇ ಎಂದು.
ಮನುಷ್ಯನ ಜೀವನಕ್ಕೆ ಗಾಳಿಯಷ್ಟೇ ಮಹತ್ವಪೂರ್ಣವಾದ ಇನ್ನೊಂದು ಅಂಶವೆಂದರೆ ನೀರು.

ಭೂಮಿ ಶೇ 70ರಷ್ಟು ಜಲಾವೃತವಾಗಿದ್ದರೂ ಕೇವಲ ಶೇ 3ರಷ್ಟು ಮಾತ್ರ ಬಳಸಲು ಯೋಗ್ಯವಾಗಿದೆ. ಆ ಶೇ 3ರಲ್ಲಿ ಶೇ 70ರಷ್ಟು ನೀರು ಮಂಜುಗಡ್ಡೆಯ ರೂಪದಲ್ಲಿದೆ. ಅಲ್ಲಿಗೆ ಕೇವಲ ಶೇ 1ರಷ್ಟು ನೀರು ಮಾತ್ರ ಬಳಸಲು ಯೋಗ್ಯವಾಗಿದೆ. ಕೇವಲ ಮನುಕೋಟಿಗೆ ಅಷ್ಟೇ ಅಲ್ಲ, ಸಕಲ ಜೀವರಾಶಿಗಳಿಗೂ, ಸಸ್ಯರಾಶಿಗೂ ಈ ಶೇ 1ರಷ್ಟು ಜಲವೇ ಆಧಾರ.

ಭಾರತವು ಸಮೃದ್ಧ ಜಲರಾಶಿ ಹೊಂದಿರುವ ದೇಶ ಎಂದೇ ಪರಿಗಣಿಸಲಾಗಿದೆ. ನಮಗೆ ಅಗತ್ಯವಿರುವಷ್ಟು ನೀರು ನಮಗೆ ಲಭ್ಯ ಎಂದೇ ಅದರರ್ಥ. ಆದರೂ, ದೇಶದ ಬಹುತೇಕ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಸಾಕಷ್ಟು ಮಳೆಬೀಳುವ ಪ್ರದೇಶದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನಗರ ಪ್ರದೇಶಗಳಲ್ಲಿಯೂ ಕುಡಿಯುವ ನೀರು ಕೆಲವೇ ನಿಮಿಷಗಳವರೆಗೆ ನಲ್ಲಿಯಲ್ಲಿ ಹನಿಯುತ್ತದೆ. ನೀರಿಗಾಗಿ ಜಗಳ, ಹಲ್ಲೆ, ಕೊಲೆಗಳೂ ನಡೆದಿವೆ. ನೀರು ತುಂಬಲು ಹೋಗಿ ಸಾವಿಗೀಡಾದ ಉದಾಹರಣೆಗಳೂ ಇವೆ.

ಯಾಕೆ ಹೀಗೆ. ನಮಗಾಗಿ ಬಾನಿಂದ ಸುರಿದ ನೀರು ಎಲ್ಲಿ ಹೋಗುತ್ತದೆ. ಸಾಂಪ್ರದಾಯಿಕವಾಗಿ ನಮ್ಮಲ್ಲಿ ನೀರು ಸಂಗ್ರಹಿಸುವ, ಮಳೆ ನೀರು ಸಂಗ್ರಹದ ವಿಧಾನಗಳೂ ಸಾಕಷ್ಟು ಇವೆ. ಮೊದಲಿನಿಂದಲೂ ಕೆರೆ, ಕೊಳ ಕಟ್ಟಿಸುವುದು, ಬಾವಿಗಳ ನಿರ್ಮಾಣ ಮಾಡುವುದು ಕಲ್ಯಾಣದ ಕೆಲಸ ಎಂದೇ ನಂಬುವ ಸಂಪ್ರದಾಯ ನಮ್ಮದು.
ಮಳೆರೂಪದಲ್ಲಿ ಬರುವ ಬಳಸಲು ಯೋಗ್ಯವಾದ ಅಮೂಲ್ಯ ನೀರೆಲ್ಲವನ್ನೂ ಸಂಗ್ರಹಿಸುವುದು ನಮಗೆ ಗೊತ್ತಿದ್ದ ವಿದ್ಯೆಯಾಗಿತ್ತು. ಕೆರೆಗಳ ನಿರ್ಮಾಣವಷ್ಟೇ ಅಲ್ಲ, ಅವುಗಳ ದೇಖರೇಕಿಯೂ ಸಾಮುದಾಯಿಕ ಹೊಣೆಗಾರಿಕೆಯಾಗಿರುತ್ತಿತ್ತು. ಕೆರೆಗಳ ದುರಸ್ತಿ, ಸ್ವಚ್ಛಗೊಳಿಸುವುದು ಇತ್ಯಾದಿ ಎಲ್ಲವನ್ನೂ ಜನರು ಒಮ್ಮನಸಿನಿಂದ ಮಾಡುತ್ತಿದ್ದರು.

ಗಾಂಧೀಜಿ ಅವರ ಕುಟುಂಬದ ವಾಸಿಸುತ್ತಿದ್ದ ಮನೆಯಲ್ಲಿಯೂ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿತ್ತು. ಪೋರಬಂದರ್‌ನಲ್ಲಿದ್ದ ಪ್ರತಿಯೊಂದು ಮನೆಯಲ್ಲಿಯೂ ಈ ವ್ಯವಸ್ಥೆ ಇತ್ತು. ಮನೆ ಛಾವಣಿಯ ಮೇಲೆ ಸುರಿದ ಮಳೆನೀರು, ಸಂಪಿನಲ್ಲಿ ಸಂಗ್ರಹವಾಗುತ್ತಿತ್ತು. ಅದೇ ನೀರು ವರ್ಷವಿಡಿ  ಕುಡಿಯಲು, ಬಳಕೆಗೆ ಉಪಯುಕ್ತವಾಗಿರುತ್ತಿತ್ತು. ಸೌರಾಷ್ಟ್ರದಲ್ಲಿ ವರ್ಷದುದ್ದಕ್ಕೂ ಕುಡಿಯುವ ನೀರಿಗೆ ಈ ರೀತಿ ಸಂಗ್ರಹಿಸಿದ ಮಳೆಯನ್ನೇ ಅವಲಂಬಿಸಲಾಗುತ್ತಿತ್ತು.

ಆದರೆ, ಈ ಎಲ್ಲ ವಿಷಯವೂ ಈಗ ಹಳತು. ಬ್ರಿಟಿಷ್ ಸರ್ಕಾರ ಆಡಳಿತಕ್ಕೆ ಬಂದೊಡನೆ, ಕೆರೆ, ಸರೋವರ, ಬಾವಿಗಳ ನಿರ್ಮಾಣ ಕಾರ್ಯವೇ ನಿಂತು ಹೋಯಿತು. ಜನರಿಗೆ ನೀರು ಬಳಸುವುದಕ್ಕೆ ಕರ ತೆರಲು ಹೇರಿದರು. ಆಗ ಜನಮಾನಸದಿಂದ ಕೆರೆಗಳ ನಿರ್ಮಾಣ ಅಥವಾ ದುರಸ್ತಿಯ ಬಗ್ಗೆ ಇದ್ದ ಒಲವು ಮಾಯವಾಯಿತು.

ಕೆರೆ ನಮ್ಮದಲ್ಲ, ಬಾವಿ ನಮ್ಮದಲ್ಲ ಎಂಬ ಭಾವ ಬೆಳೆಯಿತು. ಸಾಮುದಾಯಿಕವಾಗಿದ್ದ ಭಾವನೆ ಪ್ರತ್ಯೇಕವಾದದಲ್ಲಿ ಅಂತ್ಯಗೊಂಡಿತು. ಪ್ರತ್ಯೇಕ ಬಾವಿ ತೋಡುವುದು ಸಾಮಾನ್ಯವಾಯಿತು. ನಗರಗಳಿಂದ ಕೆರೆಕಟ್ಟೆಗಳು ಮಾಯವಾಗಿ ಅಲ್ಲಿ ಕಟ್ಟಡಗಳು ತಲೆ ಎತ್ತಿದವು.

ಒಂದು ಕಾಲದಲ್ಲಿ ನವದೆಹಲಿ ಒಂದರಲ್ಲಿಯೇ 800 ಕೆರೆಗಳಿದ್ದವು. ಈಗ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಉಳಿದ ನಗರಗಳಲ್ಲೂ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಮುಂಬೈ ಮಹಾನಗರದಲ್ಲಿ ಪ್ರತಿವರ್ಷವೂ 200 ಸೆಂಟಿಮೀಟರ್‌ಗಳಷ್ಟು ಮಳೆ ಬರುತ್ತದೆ. ಮಳೆ ನೀರು ಧಾರಾಳವಾಗಿ ಹರಿದುಹೋಗುತ್ತದೆ. ಆದರೂ ಪ್ರತಿ ವರ್ಷ ನೀರಿನ ಕೊರತೆಯಿಂದ ಬಳಲುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಮಳೆಗಾಲದಲ್ಲಿ ನಗರದ ಕೆಲವೆಡೆ ನೀರು ಮನೆಗೆ ನುಗ್ಗಿಯೂ ತೊಂದರೆಯಾಗುತ್ತದೆ.

ಸುರಿಯುವ ನೀರು `ಸುಮ್ಮನೆ~ ಹರಿದುಹೋಗುತ್ತದೆ. ಮುಂಬೈನ್ಲ್ಲಲಿ ಮಳೆ ನೀರುಸಂಗ್ರಹ ಆಗುವುದಿಲ್ಲ. ಮಳೆ ನೀರಿನ ಸಮರ್ಪಕ ಸಂಗ್ರಹವೂ ಆಗುವುದಿಲ್ಲ. ಇಡೀ ಮಹಾನಗರಕ್ಕೆ 200 ಕಿ.ಮೀ. ದೂರದ ಊರಿನಿಂದ ನೀರು ಪೂರೈಕೆ ಮಾಡಲಾಗುತ್ತದೆ. ಇದು ಕೇವಲ ಮುಂಬೈ ಮಹಾನಗರಿಯ ಕತೆಯಲ್ಲ... ದೇಶದ ಎಲ್ಲ ಮಹಾ ನಗರಗಳಿಗೂ ನೂರಾರು ಕಿ.ಮೀ. ದೂರದ ನದಿ, ಸರೋವರಗಳಿಂದ ನೀರನ್ನು ಪೂರೈಸಲಾಗುತ್ತದೆ.

ಮುಂಬೈಗೆ ವೈತರಣ ಮತ್ತು ಭಾತ್ಸಾ ನದಿ ನೀರನ್ನು ಪೂರೈಸಲಾಗುತ್ತದೆ. ಠಾಣೆ ಜಿಲ್ಲೆಯ ಭಾತ್ಸಾ ನದಿದಡದ ಮೇಲಿರುವ ಶಾಹಪುರ ಗ್ರಾಮದಿಂದ ನೀರನ್ನು ಮಹಾನಗರಕ್ಕೆ ಪೂರೈಸಲಾಗುತ್ತದೆ. ಶಾಹಪುರದ ಗ್ರಾಮೀಣ ಮಹಿಳೆಯರು ನೀರು ತರಲು ಪ್ರತಿದಿನ ನಾಲ್ಕಾರು ಕಿ.ಮೀ. ನಡೆಯಬೇಕಾಗುತ್ತದೆ. ಅವರ ಪ್ರದೇಶದ ನೀರಿನ ಮೇಲೆಯೇ ಅವರಿಗೆ ಹಕ್ಕಿಲ್ಲ! ಗ್ರಾಮೀಣ ಭಾರತೀಯ ಮಹಿಳೆಯರು ಕೇವಲ ನೀರು ತರಲೆಂದೇ ಪ್ರತಿ ವರ್ಷ ಅಜಮಾಸು 1400 ಕಿ.ಮೀ.  ಕ್ರಮಿಸುತ್ತಾರೆ.

ಗ್ರಾಮೀಣ ಭಾರತದಲ್ಲಿ ನೀರಿನ ಪೂರೈಕೆಗಾಗಿ ಕೊಳವೆಬಾವಿ ಕೊರೆಯುವುದನ್ನೇ ಪರಿಹಾರ ಎಂಬಂತೆ ಬಿಂಬಿಸಲಾಯಿತು. ಪರಿಣಾಮ ಅಂತರ್ಜಲ ಮಟ್ಟ ಆಘಾತಕಾರಿ ಎಂಬಷ್ಟು ಕಡಿಮೆಯಾಗಿದೆ. ಆಂಧ್ರಪ್ರದೇಶದ ಒಂದು ಹಳ್ಳಿಯಲ್ಲಿ ವಾಸವಾಗಿರುವ ಜನರ ಸಂಖ್ಯೆಗಿಂತಲೂ ಕೊಳವೆಬಾವಿಗಳ ಸಂಖ್ಯೆಗಳೇ ಹೆಚ್ಚಾಗಿವೆ. ಒಂದು ಹಳ್ಳಿಯಲ್ಲಂತೂ ಒಬ್ಬರು 60ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಿದ್ದು, ಅವರ ಹೆಸರೇ ಬೋರ್‌ವೆಲ್ ರೆಡ್ಡಿ ಎಂದಾಗಿದೆ. ಆದರೆ ಯಾವ ಬಾವಿಯಲ್ಲಿಯೂ ನೀರಿಲ್ಲದಿರುವುದೇ ದುರಂತ!

ನಮ್ಮ ಸೂರಿನ ಮೇಲೆ ಬೀಳುವ ಮಳೆ ನೀರು ಹಿಡಿಯದ ನಾವು, ಟ್ಯಾಂಕರ್ ಬಂದಾಗ ಜೀವವನ್ನೇ ಪಣಕ್ಕಿಟ್ಟವರಂತೆ ಹೊಡೆದಾಡಿ ನೀರು ಸಂಗ್ರಹಿಸುತ್ತೇವೆ. ಈ ಟ್ಯಾಂಕರ್ ನೀರು ಪೂರೈಕೆಯೇ ಒಂದು ಹೊಸ `ಸಂಸ್ಕೃತಿ~ ಹುಟ್ಟುಹಾಕಿದೆ.

ಇದು, ಕೇವಲ ಮಳೆ ನೀರು ಸಂಗ್ರಹದ ಬಗ್ಗೆ ನಮ್ಮ ನಿರ್ಲಕ್ಷ್ಯದಿಂದ ಉದ್ಭವಿಸಿರುವ ಸಮಸ್ಯೆಯಾಗಿದೆ. ಇನ್ನೊಂದು ನದಿಗಳೆಡೆಗೆ ಅಪಾರವಾದ ಗೌರವ, ಪೂಜೆಯ ಭಾವವಿದ್ದರೂ ಅಕ್ಕರೆ ಆರೈಕೆ ಇಲ್ಲದಿರುವುದೂ ಕಾರಣವಾಗಿದೆ. ದೇಶದ ಬಹುತೇಕ ನದಿಗಳು ಇಂದು `ಸತ್ತ~ ನದಿಗಳೆಂದು ಪರಿಗಣಿಸಲಾಗಿದೆ.
ಮಥುರಾ, ಆಗ್ರಾ, ಈಟಾವಾವರೆಗೆ ಹರಿಯುವ ಈ ನದಿಯಲ್ಲಿ ಆಮ್ಲಜನಕದ ಅಂಶವೇ ಇರುವುದಿಲ್ಲ. ಇಲ್ಲಿರುವುದೆಲ್ಲ ದೆಹಲಿಯ ಕಶ್ಮಲ ನೀರೇ ಆಗಿದೆ.
 
ದೆಹಲಿಯಿಂದ ಹರಿಯುವ ಮಲಮೂತ್ರ ಒಳಗೊಂಡ ನೀರು ಬೃಂದಾವನದಲ್ಲಿ ಪೂಜಿಸಲಾಗುವ ಯಮುನಾ ಆಗಿದೆ! ಪವಿತ್ರ ಗಂಗೆಯೂ ಕಾನ್ಪುರ್‌ಗೆ ಬಂದಾಗ ಪತಿತೆಯಾಗಿರುತ್ತಾಳೆ. ಗಂಗೆ ಮತ್ತು ಯಮುನೆಯರೀಗ ನಿರ್ಮಲೆಯರಾಗದಷ್ಟು ಮಲಿನಗೊಂಡಿದ್ದಾರೆ. ನಗರದ ತ್ಯಾಜ್ಯ ನೀರು ಹಾಗೂ ಕೈಗಾರಿಕೆಗಳ ತ್ಯಾಜ್ಯ ಈ ನದಿ ನೀರನ್ನು ವಿಷಯುಕ್ತಗೊಳಿಸಿವೆ.

ಕೈಗಾರಿಕೆಗಳು ಹರಿಬಿಡುವ ತ್ಯಾಜ್ಯದಿಂದಾಗಿ ನೀರಿನಲ್ಲಿ ಸೀಸ ಹಾಗೂ ಪಾದರಸದ ಪ್ರಮಾಣ ಅತಿ ಹೆಚ್ಚು ಎನ್ನಿಸುವಷ್ಟು ಕಂಡು ಬರುತ್ತಿದೆ.  ಇದೇ ನೀರನ್ನು ಕೃಷಿಗೆ ಬಳಸಿದಾಗ ಕೃಷಿ ಉತ್ಪನ್ನದಲ್ಲೂ ಈ ವಿಷದ ಅಂಶ ಸೇರಿರುತ್ತದೆ. ನಾವು ವಿಸರ್ಜಿಸುವ ವಿಷವನ್ನು ಮತ್ತೆ ನಾವೇ ಸೇವಿಸುವಂತಾಗುತ್ತಿದೆ. ಇದಕ್ಕೆಲ್ಲ ನಮ್ಮ ನಿರ್ಲಕ್ಷ್ಯವೇ ಕಾರಣ.

ಪಾಶ್ಚಿಮಾತ್ಯ ದೇಶಗಳಲ್ಲಿಯೂ ನದಿಗಳನ್ನು ಸಂರಕ್ಷಿಸಲಾಗುತ್ತಿದೆ. ನದಿಯನ್ನು ತಾಯಿಯಂತೆ ಪೂಜಿಸುವ ನಮ್ಮ ದೇಶದಲ್ಲಿ ಏನಾಗುತ್ತಿದೆ. ಯಾವುದೇ ನದಿಗಳಲ್ಲಿ ತ್ಯಾಜ್ಯ ಅಥವಾ ಕಸ ವಿಸರ್ಜಿಸುವುದು ನೀರಿಗೆ ಅನ್ವಯವಾಗುವ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದೆ. ಈ ಕಾನೂನಿನ ಪ್ರಕಾರ ಇಂದು ಪ್ರತಿ ಸರ್ಕಾರ ಹಾಗೂ ಮಹಾನಗರ ಪಾಲಿಕೆಗಳೂ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಸ್ಥಿತಿಯಲ್ಲಿವೆ. ಆದರೆ ಕೇಳುವವರು ಯಾರು.

ಸದ್ಯದ ತುರ್ತು ಎಂದರೆ, ಜಲಮಾಲಿನ್ಯ  ತಡೆಯುವಲ್ಲಿ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು. ರಾಳೆಗಣಸಿದ್ಧಿಯಲ್ಲಿ ಅಣ್ಣಾ ಹಜಾರೆ ಸಂಸ್ಥೆ, ರಾಜಸ್ತಾನದ ತರುಣ್‌ಭಾರತ್ ಸಂಘ್‌ನಂತ ಸಂಸ್ಥೆಗಳು ಮಳೆ ನೀರು ಸಂಗ್ರಹದ ಇಂಗುಗುಂಡಿ  ನಿರ್ಮಾಣದ ಮೂಲಕ ಗ್ರಾಮಗಳನ್ನು ಜಲಮೂಲಗಳ ವಿಷಯದಲ್ಲಿ ಸ್ವಾವಲಂಬಿ ಮಾಡುತ್ತಿವೆ.
 
ಈ ಮೂಲಕ ಗ್ರಾಮಗಳೂ ಅಭಿವೃದ್ಧಿಯತ್ತ ಸಾಗುತ್ತಿವೆ. ಸಾಂಪ್ರದಾಯಿಕ ಜ್ಞಾನವನ್ನೇ ಅಳವಡಿಸಿಕೊಂಡು ಈ ಬದಲಾವಣೆ ತರಲಾಗಿದೆ. ಹಿವಾರೆ ಬಜಾರ್‌ನಂಥ ಗ್ರಾಮಗಳಲ್ಲಿ ಕೊಳವೆ ಬಾವಿಯನ್ನೇ ನಿಷೇಧಿಸಲಾಗಿದೆ. ಮಳೆ ನೀರು ಸಂಗ್ರಹಕ್ಕೆ ಹೆಚ್ಚು ಪ್ರೋತ್ಸಾಹಿಸಲಾಗುತ್ತಿದೆ.

ಚೆನ್ನೈನಲ್ಲಿಯೂ ಮಳೆ ನೀರು ಸಂಗ್ರಹ ಕಡ್ಡಾಯಗೊಳಿಸಲಾಗಿದೆ. ಐಎಎಸ್ ಅಧಿಕಾರಿ ಶೀಲಾನಾಯರ್ ಅವರ ಪ್ರಯತ್ನದಿಂದಾಗಿ ಇದೀಗ ಚೆನ್ನೈನಲ್ಲಿ ಮಳೆ ನೀರು ಸಂಗ್ರಹ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಈ ಎಲ್ಲ ಉದಾಹರಣೆಗಳು ಜಲಮೂಲ  ಸಂರಕ್ಷಿಸುವುದನ್ನೇ ಹೇಳುತ್ತವೆ. ನೀರಿಲ್ಲದ ಸಮಸ್ಯೆ ಗಂಭೀರವಾಗಿದೆ. ಪರಿಹಾರ ಸರಳವಾಗಿದೆ. ಈ ಸರಳ ಪರಿಹಾರವನ್ನು ನಿರ್ಲಕ್ಷಿಸದೆ ಒಪ್ಪಿಕೊಳ್ಳುವುದು ಅಗತ್ಯವಾಗಿದೆ. ನೀರನ್ನು ಗೌರವಿಸುವುದು ಮಾತ್ರವಲ್ಲ ಅದರ ಸಂರಕ್ಷಣೆ ಮತ್ತು ಸಂವರ್ಧನೆಯತ್ತಲೂ ನಾವು ಗಮನಹರಿಸಬೇಕಿದೆ.
   ಜೈ ಹಿಂದ್, ಸತ್ಯಮೇವ ಜಯತೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT