ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಅಬ್ಬರ: ಅಲ್ಲಲ್ಲಿ ಮನೆ ಕುಸಿತ

Last Updated 3 ಸೆಪ್ಟೆಂಬರ್ 2011, 5:55 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಟ್ಟು ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಗೋಡೆ ಬಿದ್ದು ಮೈಮೇಲೆ ಬಿದ್ದು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

ಭಟ್ಕಳ ಮತ್ತು ಹೊನ್ನಾವರದಲ್ಲಿ ತಲಾ ಎರಡು ಹಾಗೂ ಹಳಿಯಾಳದಲ್ಲಿ ಒಂದು ಮತ್ತು ಮುಂಡಗೋಡದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ.

ಮೂರು ದಿನಗಳಿಂದ ಬಿರುಸಿನಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಮಧ್ಯಾಹ್ನದ ನಂತರ ಸ್ವಲ್ಪ ಬಿಡುವು ನೀಡಿತು. ಪಶ್ಚಿಮಘಟ್ಟದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಲಾಶಯಗಳ ಒಳಹರಿವು ಹೆಚ್ಚಿದ್ದು ಮಳೆ ಹೀಗೆ ಮುಂದುವರಿದಲ್ಲಿ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಗಳಿವೆ.

ಕದ್ರಾ ಜಲಾಶಯದ ಒಳಹರಿನ ಪ್ರಮಾಣ 30799 ಕ್ಯೂಸೆಕ್ ತಲುಪಿದ್ದು (ಗರಿಷ್ಠ 34.50) ನೀರಿನ ಮಟ್ಟ ಶುಕ್ರವಾರ 33.61 ಮೀಟರ್ ತಲುಪಿದೆ.

ಕೊಡಸಳ್ಳಿ ಜಲಾಶಯದ ಗರಿಷ್ಠ ಮಟ್ಟ 75.50 ಆಗಿದ್ದು ಒಳಹರಿವು 23916 ಕ್ಯೂಸೆಕ್ ತಲುಪಿದ್ದರಿಂದ ಜಲಾಶಯ ಗರಿಷ್ಠಮಟ್ಟ ತಲುಪಲು (ಸದ್ಯ 73 ಮೀಟರ್ ನೀರು ಇದೆ) ಎರಡುವರೆ ಮೀಟರ್ ನೀರಿನ ಅವಶ್ಯಕತೆ ಇದೆ.

ಬೊಮ್ಮನಹಳ್ಳಿ ಜಲಾಶಯದ ಒಳ ಹರಿವು12944 ಕ್ಯೂಸೆಕ್ ಇದ್ದು ಜಲಾಶಯ ಭರ್ತಿಯಾಗಲು (ಗರಿಷ್ಠ ಮಟ್ಟ438.38, ಸದ್ಯ 437.70 ಮೀಟರ್ ನೀರು ಇದೆ) ಒಂದು ಮೀಟರ್ ನೀರಿನ ಅವಶ್ಯಕತೆ ಇದೆ.

ನೀರು ಸಂಗ್ರಹ ಮಾಡುವ ಪ್ರಮುಖ ಜಲಾಯಶ ಸೂಪಾದ ಗರಿಷ್ಠ ನೀರಿನ ಮಟ್ಟ 564 ಮೀಟರ್ ಆಗಿದ್ದು ಒಳಹರಿವಿನ ಪ್ರಮಾಣ 38096 ಕ್ಯೂಸೆಕ್ ತಲುಪಿದ್ದರಿಂದ ಜಲಾಶಯದಲ್ಲಿ ಸದ್ಯ 554.35 ಮೀಟರ್ ನೀರು ಸಂಗ್ರಹವಾಗಿದೆ.

ತಟ್ಟಿಹಳ್ಳ ಜಲಾಶಯದ ಒಳಹರಿವಿನ ಪ್ರಮಾಣ 8677 ಕ್ಯೂಸೆಕ್ ತಲುಪಿದ್ದು ಜಲಾಶಯದಲ್ಲಿ ಸದ್ಯ 466.65 ಮೀಟರ್ (ಗರಿಷ್ಠ ಮಟ್ಟ 468.38) ನೀರು ಸಂಗ್ರಹವಾಗಿದೆ.

ಗೆರುಸೊಪ್ಪ ಜಲಾಶಯದ ಗರಿಷ್ಠ ಮಟ್ಟ 55 ಮೀಟರ್ ಆಗಿದ್ದು ಒಳಹರಿವು 8784 ಕ್ಯೂಸೆಕ್ ಇರುವುದರಿಂದ ಸದ್ಯ ಜಲಾಶಯದಲ್ಲಿ 52.69 ಮೀಟರ್ ನೀರು ಸಂಗ್ರಹವಾಗಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ 741ಮಿಲಿ ಮೀಟರ್ ಮಳೆಯಾಗಿದೆ.  ಅಂಕೋಲಾದಲ್ಲಿ 40 ಮಿ.ಮೀ,  ಭಟ್ಕಳ 26.4, ಹಳಿಯಾಳ 52.4, ಹೊನ್ನಾವರ 60.7, ಕಾರವಾರ 27.2, ಕುಮಟಾ 100, ಮುಂಡಗೋಡ 54.6, ಸಿದ್ದಾಪುರ 76.2, ಶಿರಸಿ 110, ಜೋಯಿಡಾ 62 ಮತ್ತು ಯಲ್ಲಾಪುರದಲ್ಲಿ 132.4 ಮಿಲಿ ಮೀಟರ್ ಮಳೆಯಾಗಿದೆ.

ಹೊನ್ನಾವರ ವರದಿ
ಹೊನ್ನಾವರ: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಸ್ವಲ್ಪ ಕಡಿಮೆಯಾಗಿದೆಯಾದರೂ ಜನರ ಆತಂಕ ಕಡಿಮೆಯಾಗಿಲ್ಲ.

ಆಗಾಗ ಸುರಿದ ಕುಂಭದ್ರೋಣ ಮಳೆ ಹಾಗೂ ಗಾಳಿ ತೋಟಪಟ್ಟಿಗಳಿಗೆ ಸಾಕಷ್ಟು ಹಾನಿಯುಂಟು ಮಾಡಿದ್ದು ನೀರಿನ ರಭಸಕ್ಕೆ ಹಳ್ಳದ ಪಕ್ಕದಲ್ಲಿ ತೀವ್ರ ಕೊರೆತ ಉಂಟಾಗಿ ಹಲವಾರು ಅಡಿಕೆ-ತೆಂಗು ಮರಗಳು ಸೇರಿದಂತೆ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ಗ್ರಾಮೀಣ ಭಾಗಗಳಲ್ಲಿ ತೀವ್ರ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಅನಿಲಗೋಡಿನಲ್ಲಿ ಮನೆಯ ಗೋಡೆ ಕುಸಿದು ಲಕ್ಷ್ಮೀ ಮಾಬ್ಲ ನಾಯ್ಕ ಎಂಬುವವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದೆ. ಹಳದೀಪುರದಲ್ಲಿ ಗಣಪಿ ಮಾಸ್ತಿ ಗೌಡ ಎಂಬವರ ಮನೆ ಭಾಗಶಃ ಕುಸಿದಿದೆ.

ಹಳಿಯಾಳ ವರದಿ
ಹಳಿಯಾಳ: ಮಳೆಯಿಂದಾಗಿ ಹಳಿಯಾಳ ಪಟ್ಟಣದಲ್ಲಿ ಮನೆಯ ಗೋಡೆ ಕುಸಿದು ನಾಲ್ವರಿಗೆ ಗಾಯವಾಗಿದೆ. ಯಡೋಗಾ ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ಒಂದು ಎತ್ತು ಹಾಗೂ ಆಕಳು ಮೃತಪಟ್ಟಿದೆ.

 ಪಟ್ಟಣದ ಖಾಜಿ ಗಲ್ಲಿಯಲ್ಲಿಯ ಮನೆಯ ಹಿಂಭಾಗದ ಗೋಡೆ ಕುಸಿದ ಪರಿಣಾಮ ಮನೆಯಲ್ಲಿ ವಾಸಿಸುತ್ತಿದ್ದ ತನ್ವೀರ್ ಅಹ್ಮದ್ ಮಹಮ್ಮದ್ ಅಲಿ ಶೇಖ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯವಾಗಿದೆ.  ತೌಸಿಫ್ ಅಹ್ಮದ್ ಮಹಮ್ಮದ್ ಅಲಿ ಶೇಖ್, ,ಮಹಮ್ಮದ್  ಯೂಸೂಫ್, ತೌಫಿಕ್ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ತಾಲ್ಲೂಕಿನ ಯಡೋಗಾ ಗ್ರಾಮದ ಕೃಷ್ಣಾ ಗೋವಿಂದ ಗೌಡಾ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆ ಕುಸಿದು ಒಂದು ಎತ್ತು ಹಾಗೂ ಆಕಳು ಮೃತಪಟ್ಟಿದೆ.

ಪರಿಹಾರ: ಮನೆ ಗೋಡೆ ಕುಸಿದು ಗಾಯಗೊಂಡ ಕುಟುಂಬಕ್ಕೆ ಹಾಗೂ ಎತ್ತು ಆಕಳುಗಳ ಮಾಲೀಕರಿಗೆ ಕಂದಾಯ ಇಲಾಖೆಯಿಂದ ತಲಾ ಹತ್ತು ಸಾವಿರ ರೂಪಾಯಿಗಳ ತುರ್ತು ಪರಿಹಾರವನ್ನು ಘೋಷಿಸಲಾಗಿದೆ.

ಸಿದ್ದಾಪುರ ವರದಿ
ಸಿದ್ದಾಪುರ: ಶುಕ್ರವಾರ ಬೆಳಗ್ಗೆ ವರುಣನ ಆರ್ಭಟಿಸಿದರೆ, ಮಧ್ಯಾಹ್ನದ ಕೊಂಚ ಶಾಂತವಾಗಿದ್ದ. ಭಾರಿ ಮಳೆಯ ಕಾರಣದಿಂದ ತಾಲ್ಲೂಕಿನ ಐಸೂರಿನ ರಾಮಾ ನಾಯ್ಕ ಎಂಬವರ ಮನೆ ಕುಸಿದಿರುವುದಾಗಿ ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಮುಂಡಗೋಡ ವರದಿ
ಮುಂಡಗೋಡ: ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಎರಡು ಮನೆ ಕುಸಿದು ಸುಮಾರು 12ಎಕರೆಯಷ್ಟು ಭತ್ತದ ಗದ್ದೆಗೆ ನೀರು ನುಗ್ಗಿದೆ.

ಗುರುವಾರ ಒಂದೇ ದಿನ 54.6 ಮಿ.ಮೀ.ನಷ್ಟು ಮಳೆ ಸುರಿದಿದ್ದು ಸಣ್ಣಪುಟ್ಟ ಕೆರೆಗಳು ಕೋಡಿ ಹರಿದು ಪಕ್ಕದ ಗದ್ದೆಗಳಿಗೆ ನುಗ್ಗಿ ಹಾನಿ ಸಂಭವಿಸಿದೆ. ಇಂದೂರ ಭಾಗದ ಬಾಬುಲಾಲ್ ಎಂಬುವವರ ಮನೆಯು ಮಳೆಯ ರಭಸಕ್ಕೆ ಕುಸಿದಿದೆ. ಬೆಡಸಗಾಂವ ಗ್ರಾಮದ ಮನೆಯ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಯಾಗಿದೆ. ಸಾಲಗಾಂವ ಗ್ರಾಮದಲ್ಲಿ ದೇವಸ್ಥಾನದ ಕಟ್ಟಡ ಮಳೆಯಿಂದ ಕುಸಿದ ವರದಿಯಾಗಿದೆ.

ನಂದಿಗಟ್ಟಾ ಗ್ರಾ.ಪಂ. ವ್ಯಾಪ್ತಿಯ ಹುಲಿಹೊಂಡ ಕೆರೆ ತುಂಬಿದ ಪರಿಣಾಮ ಹೆಚ್ಚಿನ ನೀರು ಪಕ್ಕದ ಗದ್ದೆಗೆ ನುಗ್ಗಿ, 5ಎಕರೆ ಭತ್ತದ ಗದ್ದೆಯು ನೀರಿನಿಂದ ಆವೃತ್ತವಾಗಿದೆ. ಅದೇ ರೀತಿ ಇಂದೂರ ಭಾಗದಲ್ಲಿ 7ಎಕರೆ ಭತ್ತದ ಗದ್ದೆಯು ನೀರಿನಿಂದ ಆವೃತವಾಗಿದೆ. ತಹಸೀಲ್ದಾರ ಎಂ.ವಿ.ಕಲ್ಲೂರಮಠ ಹಾಗೂ ಸಿಬ್ಬಂದಿ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT