ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಅಬ್ಬರ: ಪರದಾಡಿದ ಪ್ರಯಾಣಿಕರು

Last Updated 28 ಜುಲೈ 2012, 9:40 IST
ಅಕ್ಷರ ಗಾತ್ರ

ಸಕಲೇಶಪುರ: ಮಲೆನಾಡಿನಲ್ಲಿ ಹಲವು ದಿನ ಗಳಿಂದ ಮುನಿಸಿಕೊಂಡಿದ್ದ ಮಂಗಾರು ಮಳೆ, ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನ ದವರೆಗೆ ಒಂದೇ ಸಮನೆ ಸುರಿದು ವ್ಯಕ್ತಿಯೊಬ್ಬರ ಪ್ರಾಣ ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿ ಮಾಡಿದೆ.

ಕಳೆದ ಒಂದು ವಾರದಿಂದ ದಿನ ಬಿಟ್ಟು ದಿನ ಬರುತ್ತಿದ್ದ ಮಳೆ, ಒಂದೇ ರಾತ್ರಿಯಲ್ಲಿ ಜನರು ತತ್ತರಿಸುವಂತೆ ಮನಸೋ ಇಚ್ಛೆ ಸುರಿದು ಸದ್ದು ಮಾಡಿದೆ.

ಪರದಾಡಿದ ಪ್ರಯಾಣಿಕರು: ಶಿರಾಡಿಘಾಟ್‌ನ ಬೆಂಗ ಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹಲವೆಡೆ ಭೂಕುಸಿತ ಉಂಟಾಗಿದೆ. ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಬೇಕಾದ ಪ್ರಯಾಣಿಕರು ಶುಕ್ರವಾರ ಬೆಳಿಗ್ಗೆ 5ರಿಂದ ಮಧ್ಯಾಹ್ನ 12ರ ವರೆಗೆ ಸುರಿಯುತ್ತಲೇ ಇದ್ದ ಮಳೆ ಹಾಗೂ ಕಾಡು ನೋಡಿಕೊಂಡು ಹಸಿದ ಹೊಟ್ಟೆಯಲ್ಲಿ ಕುಳಿತಲ್ಲೇ ಕುಳಿತುಕೊಳ್ಳಬೇಕಾಯಿತು. 12 ಗಂಟೆಯ ನಂತರ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ, ಸಾಲುಗಟ್ಟಿ ನಿಂತಿದ್ದ ಸಾವಿರಾರು ಲಾರಿಗಳ ಚಾಲಕರು ಹಾಗೂ ಕ್ಲೀನರ್‌ಗಳು ಊಟವಿಲ್ಲದೆ ಪರದಾಡುತ್ತಿದ್ದರು.

ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಮಣ್ಣು ಕುಸಿತ ಉಂಟಾಗಿದ್ದ ಸ್ಥಳಕ್ಕೆ ಜೆಸಿಬಿ ಯಂತ್ರಗಳನ್ನು ಸಾಗಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ರಸ್ತೆಗೆ ಉರುಳಿದ್ದ ಮರಗಳನ್ನು ಕಡಿದು, ಮಣ್ಣು ತೆಗೆದು ಸಂಚಾರಕ್ಕೆ ವ್ಯವಸ್ಥೆ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಬಿದ್ದಿರುವ ಮಣ್ಣನ್ನು ಪೂರ್ತಿ ತೆಗೆಯುವುದಕ್ಕೆ ಸಾಧ್ಯವಾಗದೆ ಇದ್ದ ಕಾರಣ ಒಂದು ವಾಹನ ಹೋಗುವಷ್ಟು ಮಾತ್ರ ಮಣ್ಣು ತೆಗೆಯಲಾಗಿದೆ. ಪುನಃ ಅದೇ ರೀತಿ ಮಳೆಯಾದರೆ ಇನ್ನೂ ಹೆಚ್ಚಿನ ಮಣ್ಣು ರಸ್ತೆಗೆ ಬಿದ್ದು ಸಂಚಾರ ಮತ್ತೆ ಕಡಿತವಾಗುವ ಸಾಧ್ಯತೆ ಕಂಡು ಬಂದಿದೆ. ಹೆದ್ದಾರಿ ಸಂಚಾರ ಸ್ಥಗಿತ ಆಗಿದ್ದರಿಂದ ಮಂಗಳೂರು ಕಡೆಗೆ ಹೋಗುವ ಬಸ್ಸುಗಳು, ವಾಹನಗಳನ್ನು ಮೂಡಿಗೆರೆ, ಚಾರ್ಮುಡಿ ಘಾಟ್ ಮಾರ್ಗವಾಗಿ ಹೋಗುವ ವ್ಯವಸ್ಥೆ ಮಾಡಲಾಗಿತ್ತು.  

ಆಲವಳ್ಳಿ ರಸ್ತೆ ಬಂದ್: ತಾಲ್ಲೂಕಿನ ಹೆಗ್ಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಸಮೀಪ ಹಳ್ಳವೊಂದು ತುಂಡಾಗಿ ಆಲವಳ್ಳಿ ಹಾಗೂ ಕಡಗರವಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ವಾಹನಗಳ ಸಂಚಾರ ನಿಲ್ಲಿಸಲಾಗಿದ್ದು, ಶುಕ್ರವಾರ ಶಾಲಾ ಕಾಲೇಜುಗಳಿಗೆ ತೆರಳಿದ್ದ ವಿದ್ಯಾರ್ಥಿಗಳನ್ನು ಗ್ರಾಮದ ಯುವಕರು ರಸ್ತೆ ದಾಟಿಸುತ್ತಿದ್ದರು.

ಜಾನೇಕೆರೆ ಸೇತುವೆ ಮೇಲೆ ಬೆಳಿಗ್ಗೆ 10ರಿಂದ 11 ಗಂಟೆಯವರೆಗೂ ನೀರು ಹರಿದಿದೆ. ತಾಲ್ಲೂಕಿನಾದ್ಯಂತ ಅತಿಯಾಗಿ ಸುರಿದ ಮಳೆಯಿಂದ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಾವಿರಾರು ಮರಗಳು ಉರುಳಿ ಬಿದ್ದಿವೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಉಂಟಾಗಿದೆ.

ಕಾರ್ಮಿಕರಿಗೆ ರಜೆ: ಭಾರೀ ಮಳೆಯಾಗುತ್ತಿರುವುದರಿಂದ ಶುಕ್ರವಾರ ಹಲವು ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡಲಾಗಿತ್ತು.
ಮಳೆಯಿಲ್ಲದ ಕಾರಣ ನೀರಿನ ಸಮಸ್ಯೆಯಿಂದ ತಡವಾಗಿದ್ದ ಭತ್ತದ ಪೈರು ನಾಟಿ ಚುರುಕು ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT