ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ಆರ್ಭಟ: ಶ್ರೀರಾಮುಲು ಪರಿಶೀಲನೆ

Last Updated 5 ಸೆಪ್ಟೆಂಬರ್ 2013, 5:53 IST
ಅಕ್ಷರ ಗಾತ್ರ

ಬಳ್ಳಾರಿ: ಕಳೆದ ಸೋಮವಾರದಿಂದ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಶಾಸಕ ಬಿ.ಶ್ರೀರಾಮುಲು ಬುಧವಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ರೂಪನಗುಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ತಿರುಮಲನಗರ ಕ್ಯಾಂಪ್, ಶಂಕರಬಂಡೆ, ವಿಜಯಪುರ ಕ್ಯಾಂಪ್‌ಗಳಲ್ಲಿ ರಸ್ತೆ, ಸೇತುವೆಗಳು ಹಾಳಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ರಸ್ತೆ ಅಭಿವೃದ್ಧಿಗೆ ಸೂಚಿಸಿದರು.

ರೂಪನಗುಡಿ ಬಳಿ ವೇದಾವತಿ ನದಿಗೆ ಪ್ರವಾಹ ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆ ಕುಸಿದಿದ್ದು, ಆ ಭಾಗದ ಜನರ ಸಂಚಾರಕ್ಕೆ ಇದೇ ಸೇತುವೆಯನ್ನು ಮರು  ನಿರ್ಮಿಸುವಂತೆ ಅವರು ಹೇಳಿದರು.

ಸೇತುವೆ ನಿರ್ಮಾಣಕ್ಕೆ ರೂ 25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಜನರ ಸಮಸ್ಯೆ ಪರಿಹರಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ರೂಪನಗುಡಿ- ರಾಯಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಶ್ರೀರಾಮುಲು ಇದೇ ವೇಳೆ ಭೂಮಿಪೂಜೆ ನೆರವೇರಿಸಿದರು.

ಸುವರ್ಣ ಗ್ರಾಮ ಯೋಜನೆ ಅಡಿ ರೂಪನಗುಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನ ಉದ್ಘಾಟಿಸಿದ ಅವರು ಹೊಸದಾಗಿ ನಿರ್ಮಾಣವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಪರಿಶೀಲಿಸಿದರು.

ಶಾಲೆಗೆ ಭೇಟಿ: ಪಕ್ಕದ ಕಮ್ಮರಚೇಡು ಗ್ರಾಮದಲ್ಲಿ ಮಳೆಯಿಂದ ಹಾನಿಗೆ ಒಳಗಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಖರೀದಿಸಿರುವ ಕಂಪ್ಯೂಟರ್  ಹಾಳಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರಿಗೆ ಆದೇಶ ನೀಡಿದರಲ್ಲದೆ,  ಮಳೆ ನೀರು ನುಗ್ಗದಂತೆ ಶಾಲೆಯ ಸುತ್ತ ತಡೆಗೋಡೆ ನಿರ್ಮಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಎತ್ತಿನಬೂದಿಹಾಳ, ಇಬ್ರಾಹಿಂಪುರ ಗ್ರಾಮಗಳಿಗೂ ಭೇಟಿ ನೀಡಿ, ಮಳೆ ನೀರಿನಿಂದ ಕೊಚ್ಚಿ ಹೋಗಿರುವ ಸೇತುವೆಯ ದುರಸ್ತಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಲ್ಲಿ ಸೂಚಿಸಿದರು.

ಜಿ.ಪಂ. ಸದಸ್ಯರಾದ ರಾಮುಡು, ಮಲ್ಲಿಕಾರ್ಜುನ, ತಾ.ಪಂ. ಅಧ್ಯಕ್ಷ ವಿ.ಗಾದಿಲಿಂಗಪ್ಪ, ಗ್ರಾ.ಪಂ. ಸದಸ್ಯರು, ಉಪಸ್ಥಿತರಿದ್ದರು.

ಭತ್ತದ ಬೆಳೆ ಹಾನಿ
ಸಿರುಗುಪ್ಪ:
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಾಗವಾಡಿ ಕಾಲುವೆಯಲ್ಲಿ ಬೊಂಗಾ ಬಿದ್ದ ಪರಿಣಾಮ ಮಂಗಳವಾರ ಮಧ್ಯರಾತ್ರಿ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಭತ್ತದ ಗದ್ದೆಗಳಿಗೆ ನುಗ್ಗಿದ್ದರಿಂದ ಬೆಳೆ ಹಾನಿಯಾಗಿದೆ.

ತಾಲ್ಲೂಕಿನ ತೆಕ್ಕಲಕೋಟೆ ಸಮೀಪದ ಬೆಟ್ಟದ ಮಧ್ಯದಲ್ಲಿ ಹಾಯ್ದು ಹೋಗಿರುವ ಬಾಗವಾಡಿ ಕಾಲುವೆ ಮಾರೆಮ್ಮನ ದೇವಸ್ಥಾನದ ಹಿಂಬದಿಯಲ್ಲಿ ಹೊಡೆದು ಕಾಲುವೆ ನೀರು ನಾಟಿ ಮಾಡಿದ  ಸುಮಾರು150 ಎಕರೆ ಬತ್ತದ ಗದ್ದೆಗಳಿಗೆ ನುಗ್ಗಿ ಬೆಳೆಯೆಲ್ಲಾ ಜಲಾವೃತಗೊಂಡು ಮುಳುಗಡೆಯಾಗಿದೆ.

ಬೊಂಗಾ ಬಿದ್ದ ಸ್ಥಳದಲ್ಲಿ ಕಾಲುವೆ ಎತ್ತರದಲ್ಲಿದ್ದು ಕೆಲವು ಅನಧಿಕೃತ ಸಾಗುವಳಿ ರೈತರು ಪೈಪುಗಳ ಮೂಲಕ ನೀರು ಹರಿಸಿಕೊಂಡ ಕಾಲಕ್ಕೆ ಆ ಸ್ಥಳದಲ್ಲಿ ಮಣ್ಣು ಕುಸಿದು ಕಾಲುವೆ ಹೊಡೆಯಲು ಕಾರಣ ಇರಬಹುದು ಎನ್ನಲಾಗಿದೆ.

ಕಳೆದ ವರ್ಷವಷ್ಟೇ ಈ ಕಾಲುವೆಯನ್ನು ಆಧುನೀಕರಣಗೊಳಿಸಿದ್ದು ಎರಡೂ ಬದಿ ಮತ್ತು ತಳಪಾಯಕ್ಕೆ ಕಾಂಕ್ರೀಟ್ ಹಾಕಿ ಭದ್ರ ಪಡಿಸಲಾಗಿತ್ತು ಆದರೂ ಕಾಲುವೆ ಬೊಂಗಾ ಬಿದ್ದು ಒಡೆದು ಹೋಗಿರುವುದು ಆಶ್ಚರ್ಯ ತಂದಿದೆ. ತಕ್ಷಣ ಕಾಲುವೆ ದುರಸ್ತಿ ಮಾಡಬೇಕು ಎಂದು ಬೆಳೆಹಾನಿಯಾದ ರೈತರು ನೀರಾವರಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಸಹಾಯಕ ಎಂಜನಿಯರ್ ರವೀಂದ್ರನಾಯ್ಕ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT