ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯ ‘ದಾಖಲೆ' ಬೆಳೆಯಲ್ಲಿ ಬರಲಿಲ್ಲ!

ದಾವಣಗೆರೆ ಜಿಲ್ಲೆ: ಜಗಳೂರು ತಾಲ್ಲೂಕಿನಲ್ಲಿ ವರುಣನ ಜೂಜಾಟ
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಯ ಲೆಕ್ಕ ಹಾಕಿದರೆ ‘ಎಂಥಾ ಸಮೃದ್ಧಿ’ ಎಂದು ಯಾರಾದರೂ ಹುಬ್ಬೇರಿಸುತ್ತಾರೆ. ಆದರೆ, ವಾಸ್ತವದಲ್ಲಿ ಇದು ‘ಹೊಟ್ಟೆ ತುಂಬಿದಾಗ ಹೋಳಿಗೆ, ಹಸಿದಾಗ ಗಂಜಿಗೂ ಇಲ್ಲ ಗತಿ' ಎನ್ನುವಂತಹ ಸ್ಥಿತಿ.

ಜಿಲ್ಲೆಯಲ್ಲಿ ಈ ಬಾರಿ ಆಗಸ್ಟ್ ಪೂರ್ಣಗೊಳ್ಳುವ ಮೊದಲೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ, ಈ ಮಳೆ ಬೆಳೆಗೆ ಅಗತ್ಯವಿದ್ದಾಗ ಕೈಕೊಟ್ಟು, ಅಗತ್ಯ ಇಲ್ಲದಿದ್ದಾಗ ಧೋ... ಎಂದು ಸುರಿದು ದಾಖಲೆ ಮಾಡಿದೆ.

ಇದರ ಪರಿಣಾಮ ಬಿತ್ತಿದ ಬೀಜಗಳು ಸಮೃದ್ಧವಾಗಿ ಮೊಳಕೆ ಒಡೆದು ತೆನೆಗಟ್ಟುವ ಹಂತದಲ್ಲಿ ಒಣಗಿ ಹೋಗುತ್ತಿವೆ. ಜಗಳೂರು ತಾಲ್ಲೂಕಿನ ಕಸಬಾ, ಸೊಕ್ಕೆ ಹೋಬಳಿಗಳಲ್ಲಿ ಸಂಚರಿಸಿದರೆ, ಮಳೆಯ ‘ಜೂಜಾಟ'ದ ಇಂತಹ ಅನುಭವ ಆಗುತ್ತದೆ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 493 ಮಿ.ಮೀ. ಆಗಸ್ಟ್ ಅಂತ್ಯದ ವೇಳೆಗಾಗಲೇ ಈ ಪ್ರಮಾಣದ ಮಳೆ ಸುರಿದಿದೆ (488 ಮಿ.ಮೀ). ದಾವಣಗೆರೆ, ಹರಿಹರ, ಹೊನ್ನಾಳಿ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ನೂರು ಮಿ.ಮೀ. ಹೆಚ್ಚು ಮಳೆಯಾಗಿದೆ. ಚನ್ನಗಿರಿ, ಹರಪನಹಳ್ಳಿ ಹಾಗೂ ಜಗಳೂರಿನಲ್ಲಿ ಹೆಚ್ಚು ಕಡಿಮೆ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಿದೆ.

ಮಳೆ ತಂದ ಸಮೃದ್ಧತೆ ಜಗಳೂರು ಹೊರತುಪಡಿಸಿದರೆ ಉಳಿದ ತಾಲ್ಲೂಕುಗಳಲ್ಲಿ ಕಣ್ಣು ಕುಕ್ಕುವಂತಿದೆ. ಆದರೆ, ಜಗಳೂರು ತಾಲ್ಲೂಕಿನ ಸೊಕ್ಕೆ ಹಾಗೂ ಕಸಬಾ ಹೋಬಳಿ ಇದಕ್ಕೆ ಅಪವಾದ. ಈ ತಾಲ್ಲೂಕಿನಲ್ಲಿ ವಾರ್ಷಿಕ ವಾಡಿಕೆಯ ಮಳೆ ಪ್ರಮಾಣ 376 ಮಿ.ಮೀ. ಆಗಸ್ಟ್ ಅಂತ್ಯದ ವೇಳೆಗೆ ತಾಲ್ಲೂಕಿನಲ್ಲಿ 372 ಮಿ.ಮೀ. ಆಗಿದ್ದರೂ, ತೆನೆಕಟ್ಟುವ ವೇಳೆಗೆ ಅಗತ್ಯವಿದ್ದಾಗ ಮಳೆ ಕೈಕೊಟ್ಟ ಕಾರಣ ಇಲ್ಲಿನ ರೈತರಿಗೆ ‘ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ' ಆಗಿದೆ.

ತಾಲ್ಲೂಕಿನಲ್ಲಿ ಮಳೆಯಾಶ್ರಿತ 56 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಮುಂಗಾರು ಉತ್ತಮವಾಗಿ ಸುರಿದ ಪರಿಣಾಮ ಸಕಾಲದಲ್ಲಿ ಶೇ 100ರಷ್ಟು ಬಿತ್ತನೆಯಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ಬಿತ್ತನೆಯಾಗಿದ್ದು ಹಲವು ವರ್ಷಗಳ ಬಳಿಕ ಇದೇ ಮೊದಲು. ಮೆಕ್ಕೆಜೋಳ, ಹತ್ತಿ, ಶೇಂಗಾ ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದ್ದು, ಬೆಳೆ ಕಾಳುಗಟ್ಟುವಾಗ ಮಳೆ ಕೊರತೆಯಾದ ಕಾರಣ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.

ಮೆಕ್ಕೆಜೋಳ ಸೂಲಂಗಿ ಹಂತದಲ್ಲಿ, ಶೇಂಗಾ ಹೂ ಕಟ್ಟಿ ಹೂಡು ಇಳಿಯುವ ಹಂತದಲ್ಲಿ ಮುರುಟಿಹೋಗಿವೆ. ‘ನನಗೆ 12 ಎಕರೆ ಜಮೀನಿದೆ. 5 ಎಕರೆಯಲ್ಲಿ ಮೆಕ್ಕೆಜೋಳ, 2 ಎಕರೆಯಲ್ಲಿ ಹತ್ತಿ, ಉಳಿದ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದೆ. ಆರಂಭದಲ್ಲಿ ಮಳೆ ಬಂದರೂ, ಮಹತ್ವದ ಹಂತದಲ್ಲಿ ಮಳೆ ಕೈಕೊಟ್ಟ ಕಾರಣ ಏನೂ ಉಪಯೋಗ ಆಗಿಲ್ಲ. ಈ ಬಾರಿ 50–-60 ಸಾವಿರ ರೂಪಾಯಿ ಖರ್ಚು  ಮಾಡಿದ್ದು, 10-– 15 ಸಾವಿರ ಬರುವ ನಿರೀಕ್ಷೆಯೂ ಇಲ್ಲ' ಎನ್ನುತ್ತಾರೆ ರೈತ ಬಾಬೇಶ್.

ಹಿರೇಮಲ್ಲನಹೊಳೆ, ಮುಸ್ಟೂರು, ದೊಣೆಹಳ್ಳಿ, ಕಲ್ಲೆದೇವಪುರ ಹಾಗೂ ಅಣಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಬೆಳೆ ನಷ್ಟವಾಗಿದೆ. ‘7 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತಿದ್ದೇನೆ. ಶೇ 80ರಷ್ಟು ಬೆಳೆ ಒಣಗಿದೆ. ಹೂಕಟ್ಟುವ ಸಮಯದಲ್ಲಿ ಬೆಳೆ ಉಳಿಸಿಕೊಳ್ಳಲು ಪರದಾಡಿದೆ.

ಕೊಳವೆಬಾವಿ ಕೊರೆಸಲು ಶಕ್ತಿ ಇಲ್ಲ. ದಿಕ್ಕು ತೋಚದಂತಾಗಿದೆ' ಎಂದು ನೋವು ತೋಡಿಕೊಂಡರು ತಾಯಿಟೊಣೆ ಗ್ರಾಮದ ರೈತ ತಿಪ್ಪೇಸ್ವಾಮಿ.
ಸೆಪ್ಟೆಂಬರ್ ಮೊದಲ ವಾರ ಸುರಿದು ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ರೈತರ ಕೈಹಿಡಿದ ‘ಹುಬ್ಬೆ' ಮಳೆಯೂ ಈ  ರೈತರ ನೆರವಿಗೆ ಬಾರದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಯೂರಿಯಾ ಅತಿ ಬಳಕೆ ಸಲ್ಲದು
ಜಿಲ್ಲೆಯಲ್ಲಿ 3.40 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಶೇ 100 ಬಿತ್ತನೆ ಮಾಡುವ ಮೂಲಕ ದಾಖಲೆ ನಿರ್ಮಾಣವಾಗಿತ್ತು. ಶೇ 60ರಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ, ಹತ್ತಿ ಬಿತ್ತನೆ ಮಾಡಲಾಗಿತ್ತು. ಮಳೆ ಜಾಸ್ತಿ ಎಂದು ಹೆಚ್ಚು ಯೂರಿಯಾ ಬಳಸಿದ ಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯ .ದಿಂದ ಸ್ವಲ್ಪ ಪ್ರಮಾಣದ ಬೆಳೆ ಒಣಗಿವೆ. ಉಳಿದಂತೆ ಜಿಲ್ಲೆಯ ಎಲ್ಲೆಡೆ ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆ ಇದೆ.
- – ಡಾ.ಆರ್.ಜಿ.ಗೊಲ್ಲರ್. ಜಂಟಿ ಕೃಷಿ ನಿರ್ದೇಶಕರು.‌

ಬೆಲೆ ಕುಸಿತ ಬರಕ್ಕಿಂತ ಘೋರ
ಮಳೆ ಆಶ್ರಿತ ರೈತರು ಒಮ್ಮೆ ಬರದ ದವಡೆಗೆ ಸಿಲುಕಿದರೆ, ಅದರಿಂದ ಆಗುವ ನಷ್ಟ ಭರಿಸಲು ಕನಿಷ್ಠ ಮೂರು ವರ್ಷ ಸಮೃದ್ಧ ಬೆಳೆ ತೆಗೆಯಬೇಕು. ಮರು ವರ್ಷ ಉತ್ತಮ ಫಸಲು ಬಂದರೂ, ನಿರೀಕ್ಷಿತ ಬೆಲೆ ಸಿಗದಿದ್ದರೆ ಹಾಕಿದ ಬಂಡವಾಳವೂ ಬರುವುದಿಲ್ಲ. ಹಾಗಾಗಿ, ಸರ್ಕಾರ ಮೊದಲು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಬರದ ದವಡೆಗೆ ಸಿಲುಕಿದ ರೈತರಿಗೆ ಭಿಕ್ಷೆಯ ರೀತಿ ಪರಿಹಾರ ನೀಡದೇ ಪ್ರತಿ ಎಕರೆಯ ಸರಾಸರಿ ಇಳುವರಿಯ ಆಧಾರದಲ್ಲಿ ಪರಿಹಾರ ನೀಡಿದರೆ ಮಾತ್ರ ಮತ್ತೆ ಕೃಷಿ ಮಾಡಲು ಸಾಧ್ಯವಾಗುತ್ತದೆ.
- – ತೇಜಸ್ವಿ ವಿ.ಪಟೇಲ್, ರೈತ ಮುಖಂಡ, ಕಾರಿಗನೂರು.

ರೂ 2 ಸಾವಿರ ಸಾಲದ ನೆರವು
ಸರ್ಕಾರ ರೈತರ ನೆರವಿಗೆ ಹಲವು ಮಹತ್ವದ ಯೋಜನೆ ರೂಪಿಸಿದೆ. ಅದರಲ್ಲಿ ಸಾಲಸೌಲಭ್ಯ ಬಹುಮುಖ್ಯವಾದುದು. ಕೃಷಿ ಸಹಕಾರ ಬ್ಯಾಂಕ್ ಮೂಲಕ ರೂ 2 ಲಕ್ಷದವರೆಗೆ ಬಡ್ಡಿರಹಿತ ಸಾಲ ಪಡೆಯಲು ಅವಕಾಶ ಇದ್ದರೂ, ಬಿತ್ತನೆ ಸಮಯದಲ್ಲಿ ರೂ 2 ಸಾವಿರ ಪಡೆದದ್ದೇ ದೊಡ್ಡ ಸಾಧನೆ. ಗ್ರಾಮದ ಬಹುತೇಕ ರೈತರು ಪಡೆದ ಗರಿಷ್ಠ ಕೃಷಿ ಸಾಲ ನೆರವು ರೂ 2 ಸಾವಿರ ಮಾತ್ರ. ಇದು ನಮ್ಮ ಸರ್ಕಾರಗಳ ಘೋಷಣೆಗೂ, ವಾಸ್ತವಕ್ಕೂ ಇರುವ ವ್ಯತ್ಯಾಸಕ್ಕೆ ಉದಾಹರಣೆ. ಕೃಷಿ ಸಾಲ ಎಂದರೆ ಸರ್ಕಾರ ರೈತರಿಗೆ ನೀಡುವ ಭಿಕ್ಷೆಯಂತಾಗಿದೆ.
-–- ಬಾಬೇಶ್, ಜಗಳೂರು ತಾಲ್ಲೂಕು ಹುಚ್ಚವ್ವನಹಳ್ಳಿ ಕೊರಚರಹಟ್ಟಿಯ ರೈತ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ
(ಮಿ.ಮೀ.ಗಳಲ್ಲಿ)

ತಾಲ್ಲೂಕು ವಾಡಿಕೆ ಮಳೆ ಸೆ.3ವರೆಗೆ
ದಾವಣಗೆರೆ 658.1 583.4
ಹೊನ್ನಾಳಿ 625.5 482.3
ಹರಿಹರ 632.5 514.0
ಚನ್ನಗಿರಿ 767.0 563.3
ಜಗಳೂರು 506.0 372.7
ಹರಪನಹಳ್ಳಿ 752.1 412.5
ಒಟ್ಟು ಸರಾಸರಿ 656.9 488.0

ಬಿತ್ತನೆಯ ಮಾಹಿತಿ
ಜಿಲ್ಲೆಯ ವಾಡಿಕೆ ಮುಂಗಾರು ಬೆಳೆ ಕ್ಷೇತ್ರ 3,40,000 ಹೆಕ್ಟೇರ್ ಇದ್ದು, 3,46,584 ಹೆಕ್ಟೇರ್ ಒಟ್ಟಾರೆ ಬಿತ್ತನೆಯಾಗಿದೆ. (ಸೆ.3ರವರೆಗೆ)
ಬೆಳೆ             ಗುರಿ             ಸಾಧನೆ
ಮೆಕ್ಕೆಜೋಳ  1,60,000    1,94,500
ಜೋಳ         20,000           9,200
ರಾಗಿ           18,000           9,200
ಸಜ್ಜೆ            800                  550
ತೊಗರಿ       10,000            9,200
ಅವರೆ           3,000            1,400
ಶೇಂಗಾ         14,00         18,700
ಸೂರ್ಯ ಕಾಂತಿ 6,000            1,200
ಹತ್ತಿ              3,400          24,200
ಕಬ್ಬು              3,100          5,400
ಭತ್ತ                60,000      68,000.

ಬೆಳೆವಾರು ಬಿತ್ತನೆ ಪ್ರಗತಿ (ಹೆಕ್ಟೇರ್‌ಗಳಲ್ಲಿ, ಸೆ.3ರವರೆಗೆ)
ಬೆಳೆ        ಬಿತ್ತನೆ      ಪ್ರಮಾಣ
ಏಕದಳ    ಧಾನ್ಯ     2,77,623
ಬೆಳೆಕಾಳು ಬೆಳೆ       12,558
ಎಣ್ಣೆಕಾಳು  ಬೆಳೆ       20,788
ವಾಣಿಜ್ಯ   ಬೆಳೆಗಳು   29,973
ಒಟ್ಟು                  3,40,942

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT