ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಾದರೂ ಎಲ್ಲ 14 ಕೆರೆಗಳೂ ಖಾಲಿ

ಬರ ಬದುಕು ಭಾರ ಹಾಸನ ಜಿಲ್ಲೆ 18
Last Updated 27 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಎಂಟು ತಾಲ್ಲೂಕುಗಳೂ ಕಳೆದ ವರ್ಷ ಬರದಿಂದ ನಲುಗಿದ್ದವು. ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುವ ಹೇಮಾವತಿ ಜಲಾಶಯವೂ ಬಹುತೇಕ ಖಾಲಿಯಾಗಿತ್ತು. ಈ ವರ್ಷ ಮಳೆ ಕೈಕೊಡಲಿಲ್ಲ. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸರ್ಕಾರ ಎಲ್ಲ ತಾಲ್ಲೂಕುಗಳನ್ನೂ ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟಿದೆ.

ಅಂಕಿ-–ಅಂಶದ ಆಧಾರದಲ್ಲಿ ನೋಡಿದರೆ ಅರಸೀಕೆರೆ ತಾಲ್ಲೂಕಿನಲ್ಲೂ ಈ ಬಾರಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿದೆ. ಆದರೆ, ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಉದ್ದು, ಹೆಸರು, ಅಲಸಂದೆ ಮುಂತಾದ ಧಾನ್ಯಗಳ ಬೆಳೆ ಕೈಕೊಟ್ಟಿದೆ. ಆ ಜಾಗವನ್ನು ಈಗ ರಾಗಿ, ಜೋಳ ಆವರಿಸಿದ್ದು, ಈಗಿನ ಬೆಳೆ ಉತ್ತಮವಾಗಿದೆ. ಇದೇ ರೀತಿ ಮಳೆಯಾಗುತ್ತಿದ್ದರೆ ರೈತರು ಚೇತರಿಸಿಕೊಳ್ಳಬಹುದು. ತೋಟಗಾರಿಕಾ ಬೆಳೆಗಳಿಗೆ ಈ ಮಾತು ಅನ್ವಯವಾಗುವುದಿಲ್ಲ.

ಸುಮಾರು ಒಂದು ದಶಕದಿಂದ ಅರಸೀಕೆರೆ ತಾಲ್ಲೂಕಿನಲ್ಲಿ ಸರಿಯಾಗಿ ಮಳೆಯಾಗಿಲ್ಲ. ಅರಸೀಕೆರೆ, ಕಣಕಟ್ಟೆ, ಜಾವಗಲ್‌, ಬಾಣಾವರ ಮುಂತಾದ ಹೊೋಬಳಿಗಳಲ್ಲಿ ಕುಡಿಯಲೂ ನೀರಿಲ್ಲದ ಸ್ಥಿತಿ ಈಗಲೂ ಇದೆ. ಸೂರ್ಯಕಾಂತಿ, ಎಳ್ಳು, ಮುಸುಕಿನ ಜೋಳ ಮುಂತಾದ ವಾಣಿಜ್ಯ ಬೆಳೆಯನ್ನು ನಂಬಿದ್ದ ರೈತರು ಪ್ರತಿ ವರ್ಷ ಕೈಸುಟ್ಟುಕೊಳ್ಳುತ್ತಿದ್ದಾರೆ. ಜಾವಗಲ್‌ ಹೋಬಳಿಯ 14 ಕೆರೆಗಳಲ್ಲಿ ಒಂದರಲ್ಲೂ ಒಂದು ಹನಿ ನೀರಿಲ್ಲ. ಈ ಹೋಬಳಿಯಲ್ಲಿ ಹಿಂದೆ ಸುಮಾರು ಐದು ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿತ್ತು. ಈಗ ಅದರ ಪ್ರಮಾಣ 500 ಹೆಕ್ಟೇರ್‌ಗೆ ಇಳಿದಿದೆ. ಬಾಣಾವರದ ಸ್ಥಿತಿ ಬೇರೆಯಾಗಿಲ್ಲ.

ಸತತ ಬರಗಾಲದಿಂದಾಗಿ ಅರಸೀಕೆರೆ ತಾಲ್ಲೂಕಿನ ರೈತರು ರಾಗಿ–ಜೋಳ ಮುಂತಾದ ಬೆಳೆ ಬಿಟ್ಟು ತೋಟಗಾರಿಕಾ ಬೆಳೆಗಳಿಗೆ ಮಾರುಹೋಗಿ ವರ್ಷಗಳೇ ಕಳೆದಿವೆ. ಆದರೆ, ನೀರಿನ ಸಮಸ್ಯೆಯಿಂದ ಈ ವರ್ಷ ಸಾವಿರಾರು ತೆಂಗಿನಮರಗಳು ಸತ್ತಿವೆ. ಇನ್ನೂ ಕೆಲವು ರೋಗಕ್ಕೆ ಬಲಿಯಾಗಿವೆ. ಕಳೆದ ಕೆಲವು ವರ್ಷಗಳಿಂದ ಈ ಭಾಗದ ಜನರು ಬೇಸಿಗೆ ಬಂದಾಗ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡದಿದ್ದರೆ ಮುಂದಿನ ವರ್ಷಗಳಲ್ಲಿ ಎಲ್ಲ ರೈತರೂ ಗುಳೆ ಹೋಗಬೇಕಾಗುತ್ತದೆ ಎಂಬುದು ರೈತರ ಆತಂಕ.

ಜಾವಗಲ್‌ ಹೋಬಳಿಗೆ ಹೊಂದಿಕೊಂಡಂತೆ ಇರುವ ಹಳೇಬೀಡು, ಮಾದಿಹಳ್ಳಿ ಭಾಗದಲ್ಲೂ ಬರದ ಛಾಯೆ ಇದೆ. ಹಳೇಬೀಡು ಹೋಬಳಿಯನ್ನು ಬಿಟ್ಟರೆ ಬೇಲೂರು ತಾಲ್ಲೂಕಿನ ಬಹುತೇಕ ಎಲ್ಲ ಕಡೆ ಮಳೆಯಾಗಿದೆ.

ಹಳೇಬೀಡು ಭಾಗದ ಹಲವು ಗ್ರಾಮಗಳಲ್ಲಿ ಜನ–ಜಾನುವಾರುಗಳಿಗೆ ಕುಡಿಯುವುದಕ್ಕೂ ನೀರಿಲ್ಲ. ಯಗಚಿ ಏತ ನೀರಾವರಿ ಕಾಮಗಾರಿ ಕುಂಟುತ್ತಿರುವುದರಿಂದ ಶಾಶ್ವತ ನೀರಾವರಿ ಯೋಜನೆ ಕನಸಾಗಿಯೇ ಉಳಿದಿದೆ. ಈ ಬಾರಿ ಮುಂಗಾರಿನಲ್ಲಿ ಮಳೆ ಕೈಕೊಟ್ಟಿತು. ಬಿತ್ತಿದ ಬೀಜ ಮೊಳಕೆ ಬಂದು ತಿಂಗಳು ಕಳೆದರೂ ಮಳೆಯಾಗಲಿಲ್ಲ. ಆಗೊಮೆ್ಮ ಈಗೊಮ್ಮೆ ಉದುರಿದ ಮಳೆಗೆ ಕೆಲವೆಡೆ ಬೆಳೆ ಚೇತರಿಸಿದಂತೆ ಕಂಡರೂ ಇಳುವರಿ ಬರಲಿಲ್ಲ.

ತಡವಾಗಿಯಾದರೂ ಆಗಾಗ ಬೀಳುತ್ತಿರುವ ಮಳೆ ವಾತಾವರಣವನ್ನು ತಂಪು ಮಾಡುತ್ತಿದೆಯೇ ವಿನಾ ಅಂತರ್ಜಲ ವೃದ್ಧಿಸುತ್ತಿಲ್ಲ. ಮೋಡ ಮುಸುಕಿದ ವಾತಾವರಣದಿಂದ ಟೊಮೆಟೊ, ಆಲೂಗೆಡ್ಡೆ ಅಂಗಮಾರಿಗೆ ತುತ್ತಾಗಿವೆ. ಮೆಕ್ಕೆಜೊಳ ಬೆಂಕಿರೋಗಕ್ಕೆ ತುತ್ತಾಗಿದೆ.
ತರಕಾರಿ ಬೆಳೆಗಳು ಕಾಯಿ ಕಟ್ಟುವ ಹಂತದಲ್ಲಿ ಸೊರಗುತ್ತಿವೆ. ಈ ಭಾಗದಲ್ಲಿ ನಾಲ್ಕು ವರ್ಷದಿಂದಲೂ ಬರಗಾಲದ ಸ್ಥಿತಿ ಇದೆ.

ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ ತೋಟಗಳು ಒಣಗಿ ನಿಂತಿವೆ. ಬಾಳೆ ಬೆಳೆಗೂ ಬೆಂಕಿ ರೋಗ ಆವರಿಸುತ್ತಿದೆ.
ಜಿಲ್ಲೆಯ ಉಳಿದ ಭಾಗಗಳಲ್ಲಿ ಮಳೆಯೇನೋ ಆಗಿದೆ. ಆದರೆ, ಯಾವ ಕೆರೆಯೂ ತುಂಬಿಲ್ಲ ಎಂಬುದು ಆತಂಕ ಮೂಡಿಸಿದೆ. ದುದ್ದ, ಶಾಂತಿಗ್ರಾಮ ಮುಂತಾದ ಭಾರಿ ಕೆರೆಗಳಲ್ಲಿ ಸದ್ಯ ಅತಿ ಕನಿಷ್ಠ ನೀರಿದೆ. ಅಕ್ಟೋಬರ್‌ ವೇಳೆಗೆ ಇವು ತುಂಬಬಹುದು ಎಂಬುದು ಈ ಭಾಗದ ರೈತರ ನಿರೀಕ್ಷೆಯಾಗಿದೆ.

ಅತಿವೃಷ್ಟಿ–ಅನಾವೃಷ್ಟಿಯ ಆಟ
ಜಿಲ್ಲೆಯನ್ನು ಈ ವರ್ಷ ಅತಿವೃಷ್ಟಿ, ಅನಾವೃಷ್ಟಿ ಎರಡೂ ಕಾಡಿವೆ.

ಅನಾವೃಷ್ಟಿಯಿಂದ ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಬೇಲೂರು ತಾಲ್ಲೂಕಿನ ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿಗಳಲ್ಲಿ 30,403 ಹೆಕ್ಟೇರ್‌ನಲ್ಲಿ ಶೇ. 50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ.

ಅದೇ ರೀತಿ ಅತಿವೃಷ್ಟಿಯಿಂದ ಅರಕಲಗೂಡು ಹಾಗೂ ಆಲೂರು ತಾಲ್ಲೂಕಿನಲ್ಲಿ 6,310 ಹೆಕ್ಟೇರ್‌ನಲ್ಲಿ  ಶೇ. 50ಕ್ಕಿಂತ ಹೆಚ್ಚು ಬೆಳೆಹಾನಿಯಾಗಿದೆ.

ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲ್ಲೂಕುಗಳಲ್ಲಿ ನೆರೆಯಿಂದಾಗಿ 2,500 ಹೆಕ್ಟೇರ್‌ನಲ್ಲಿ ಶೇ. 50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿವೆ.

‘ಈ ವರ್ಷ ಸಕಾ ಲಕ್ಕೆ ಸಮರ್ಪಕ ಮಳೆ ಯಾಗದೆ ರೈತರು ಬೆಳೆ ಉಳಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ತಡವಾಗಿ ಉದು ರುತ್ತಿರುವ ಮಳೆ ಸ್ವಲ್ಪ ಜೋರಾಗಿ, ಕೆರೆ ಕಟ್ಟೆಗಳಾದರೂ ತುಂಬಿದರೆ ಜಾನು ವಾರುಗಳಿಗೆ,ಗ್ರಾಮದ ರೈತ ಕುಡಿ ಯುವ ನೀರು ದೊರಕುತ್ತದೆ. ಜತೆಗೆ, ಅಂತರ್ಜಲ ವೃದ್ಧಿಯಾಗುತ್ತದೆ. ಇಲ್ಲ ದಿದ್ದರೆ ರೈತರು ಜಾನುವಾರುಗ ಳೊಂದಿಗೆ ಗುಳೆ ಹೋಗಬೇ ಕಾಗುತ್ತದೆ’
 -ಷಣ್ಮುಖಪ್ಪ, ತಟ್ಟೆಹಳ್ಳಿಯ ರೈತ
 

‘ಹತ್ತು ಎಕರೆ ಜಮೀನು ಇದೆ. ಆದರೆ, ಕೃಷಿಯಿಂದ ಜೀವನ ಸಾಗಿಸಲು ಆಗುತ್ತಿಲ್ಲ. ಇದ್ದ ದನಕರುಗಳನ್ನು ಮಾರಿದ್ದೇನೆ. ಎಲ್ಲ ವನ್ನೂ ಬಿಟ್ಟು ಬೆಂಗಳೂರಿಗೆ ಕೂಲಿ ಅರಸಿಕೊಂಡು ಹೋಗುವ ಸ್ಥಿತಿ ಬಂದಿದೆ. 71 ವಯಸ್ಸಿನ ನಾನು ಕೂಲಿ ಮಾಡ ಲಾಗುತ್ತದೆಯೇ? ನಮ್ಮೂರಿನ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ವ್ಯವಸ್ಥೆ ಮಾಡದಿದ್ದರೆ ನಾವೆಲ್ಲರೂ ಗುಳೆ ಹೋಗಲೇಬೇಕು’
– ಎಂ.ಸಿ. ಶಿವಲಿಂಗಪ್ಪ, ಮಾಡಾಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT