ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆರಾಯ ಕರುಣೆ ತೋರು ಹೊರಟಿತು ಐಪಿಎಲ್ `ತೇರು'!

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಳೆರಾಯ, ನಮಗೆಲ್ಲಾ ಬೆಂಗಳೂರಿನ ಮೇಲೆ ಸಿಟ್ಟು ಬಂದಿದೆ. ನಾವೆಲ್ಲಾ ನಿನಗೆ ಹಿಡಿಶಾಪ ಹಾಕುತ್ತಿದ್ದೇವೆ. ಅದು ಟ್ರಾಫಿಕ್ ಕಿರಿಕಿರಿಗೆ ಅಲ್ಲ. ಏಕೆಂದರೆ, ಈ ಸಮಸ್ಯೆ ಉದ್ಯಾನನಗರಿಗೆ `ಬಿಟ್ಟೆನೆಂದರೂ ಬಿಡದೀ ಮಾಯೆ' ಎಂಬುದು ನಮಗೆ ಗೊತ್ತಾಗಿ ಹೋಗಿದೆ. ಟ್ರಾಫಿಕ್ ಕಿರಿಕಿರಿ ಸಾಮಾನ್ಯ ಎಂಬುದು ತಿಳಿಯಲು ಬಹಳ ದಿನ ಬೇಕಾಗಲಿಲ್ಲ. ಆದರೆ, ಈಗ ನಮಗೆ ಸಿಟ್ಟು ಬಂದಿರುವುದು ಮೂರು ದಿನಗಳಿಂದ ಸುರಿಯುತ್ತಿರುವ ನಿನ್ನ ಮೇಲೆ...!

ಬಾಲ್ಯದಲ್ಲಿ ಮನೆಯ ಅಂಗಳದಲ್ಲಿ ಆಟವಾಡುವಾಗ ಗೆಳೆಯರ, ಪಕ್ಕದ ಮನೆಯವರ ಜೊತೆಗೂಡಿ `ಹುಯ್ಯ್ ಹುಯ್ಯ್ ಮಳೆರಾಯ' ಎನ್ನುತ್ತಿದ್ದೆವು. ಆದರೆ, ಆಗ ನೀನು ಸನಿಹವೇ ಬರುತ್ತಿರಲಿಲ್ಲ. ಈಗ ನೀನು ಬೇಡವೆಂದರೂ ಬರುತ್ತಿದ್ದೀಯಾ. ಇಷ್ಟು ದಿನ ಗುಮ್ಮನಂತೆ ಸುಮ್ಮನಿದ್ದು ಎರಡು ಮೂರು ದಿನಗಳಿಂದ ನೀನೇ `ಆಟ'ವಾಡುತ್ತಿದ್ದೀಯಾ. ಇದು ನಮಗೆ ಬೇಸರ ತರಿಸಿದೆ. ಚುಟುಕು ಕ್ರಿಕೆಟ್‌ನ ಸುಗ್ಗಿಯೇ ಇಲ್ಲದಾಗ ಒಂದಿನಿತೂ ಹಾಯದ ಮಳೆರಾಯ ಈಗ ಧುತ್ತೆಂದು ಭೂಮಿಗೆ ಇಳಿದದ್ದಾದರೂ ಏಕೆ ಮಾರಾಯ?

ನೀನು (ಮಳೆ) ಭೂಮಿಗೆ ಬಂದರೆ ಬಿಸಿಲಿನ ಶಾಖದಿಂದ ಬಸವಳಿದ ದೇಹ ತಂಪಾಗುತ್ತದೆ. ಮನಸ್ಸೂ ಇಂಪಾಗುತ್ತದೆ. ಆದರೆ, ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳನ್ನು ನೋಡಬೇಕೆನ್ನುವ ನಮ್ಮ ಆಸೆ ಕಮರಿ ಹೋಗುತ್ತದಲ್ಲಾ? ನಾನೇನು ಮಾಡಲಿ. ಐಪಿಎಲ್ ಪಂದ್ಯಗಳನ್ನು ನೋಡಲೆಂದೇ ಏನೆಲ್ಲಾ ಸಾಹಸ ಮಾಡಿದ್ದೇನೆ ಗೊತ್ತಾ. ಅಮ್ಮನಿಗೊಂದು ಸುಳ್ಳು ಹೇಳಿ, ಅಪ್ಪನ ಬಳಿ ಹಣ ಪಡೆದು, ಗೆಳೆಯ/ಗೆಳತಿಯರನ್ನೆಲ್ಲಾ ಬಲವಂತವಾಗಿ ಒಪ್ಪಿಸಿದೆ. ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು, ಪೊಲೀಸರ ಬೈಗುಳ ತಿಂದು ಟಿಕೆಟ್ ಪಡೆದೆ. ಕ್ರಿಕೆಟ್ ಪಂದ್ಯಗಳ ಸವಿ ಅನುಭವಿಸಲೆಂದೇ ಕಷ್ಟಪಟ್ಟು ಓದಿ ಪರೀಕ್ಷೆಯನ್ನೂ ಬರೆದು ಮುಗಿಸಿದೆ. ಈಗ ನೀನು ಇಳೆಗೆ ಬಂದರೆ ನಮ್ಮ ಆಸೆ ತೋಯ್ದು ಹೋಗುತ್ತದೆ.

ಮನಸ್ಸೆಂಬುದು ಮಾರುಕಟ್ಟೆಯಲ್ಲಿ ನಿಂತ ಚಿಕ್ಕ ಮಗುವಿನಂತಾಗಿದೆ. ಎದುರಿಗೆ ಕಾಣುವ ಯಾವುದೇ ತಂಪು ಪಾನೀಯವಾಗಲೀ ಬೇಕೆಂದು ಬಯಸುತ್ತಿದೆ. ಏಕೆಂದರೆ, ಬಿಸಿಲು ಬೆಂಕಿಯಾಗುತ್ತಿದೆ. ಆದರೂ ನೀನು ಭೂಮಿಗೆ ಬಂದು, ಪಂದ್ಯ ನೋಡುವ ನಮ್ಮ ಕನಸಿಗೆ ಅಡ್ಡಿಯಾದರೆ ಹೇಗೆ? ದೈತ್ಯ ದೇಹದ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಡಿವಿಲಿಯರ್ಸ್, ರಿಕಿ ಪಾಂಟಿಂಗ್ ಇಡೀ ಕ್ರಿಕೆಟ್ ಜಗತ್ತೇ ಪ್ರೀತಿಯಿಂದ ಕಾಣುವ ಸಚಿನ್ ತೆಂಡೂಲ್ಕರ್ ಕೂಡ ಬೆಂಗಳೂರಿನಲ್ಲಿಯೇ ಇದ್ದಾರೆ. ಅವರೆಲ್ಲಾ ಮೊದಲ ಪಂದ್ಯದಲ್ಲಿ ಆಡುತ್ತಾರಂತೆ. ಅವರನ್ನೆಲ್ಲಾ ನೋಡುವ ಆಸೆ ನಮ್ಮದು. ಅದಕ್ಕಾಗಿ ಎಷ್ಟೊಂದು ಕನಸು ಕಂಡಿದ್ದೇವೆಂಬುದು ನಿನಗೆ ಗೊತ್ತಾ?

ಐಪಿಎಲ್ ಪಂದ್ಯಗಳನ್ನು ನೋಡಬೇಕು ಎನ್ನುವ ಕನಸು ಹುಟ್ಟಿಕೊಂಡ ಕ್ಷಣವೇ ಪಂದ್ಯಕ್ಕೆ ಹೋಗುವಾಗ ಹೇಗೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು, ಯಾವ ಬಟ್ಟೆ ಹಾಕಿಕೊಳ್ಳಬೇಕು, ಮೊಗವನ್ನು ತಿದ್ದಿ ತೀಡಿ ಅಂದಗೊಳಿಸುವ ಚೆಂದಗಾರರಿಗೆ ಏನೆಲ್ಲಾ ಸಲಹೆ ನೀಡಬೇಕು ಅಂತ ಆವತ್ತೇ ಕನಸು ಕಂಡಿದ್ದೆವು. ನಮ್ಮ ನೆಚ್ಚಿನ ಆಟಗಾರರನ್ನು ನೋಡುವ ತುಡಿತದ ಜೊತೆಗೆ ನಾವು ಬೆಂಬಲಿಸುವ ತಂಡವೂ ನಮ್ಮ ಮೊಗದ ಮೇಲೆ ಕಲೆಯಾಗಿ ಅರಳಬೇಕು ಎನ್ನುವ ಬಯಕೆ ನಮ್ಮದು. ಅದಕ್ಕಾಗಿ ಚೌಕಾಸಿ ಮಾಡುವ ಜಾಯಮಾನವೇ ನಮ್ಮದಲ್ಲ. ಒಟ್ಟಿನಲ್ಲಿ ನಮ್ಮ ಮೊಗದ ಮೇಲೆ ನೆಚ್ಚಿನ ತಾರೆಯರು ಅಂದವಾಗಿ ಮೂಡಿಬರಬೇಕಷ್ಟೇ.

ಮೊಗವನ್ನು ಅಂದಗೊಳಿಸುವವರ ಬಗ್ಗೆಯೂ ನಮಗೆ ಕುತೂಹಲವಿದೆ. ಪಂದ್ಯಗಳಿರದ ದಿನಗಳಲ್ಲಿ ಅವರೆಲ್ಲಿರುತ್ತಾರೋ ಏನೋ? ಪಂದ್ಯದ ದಿನ ಕ್ರೀಡಾಂಗಣದ ಬಳಿ ಧುತ್ತೆಂದು ಪ್ರತ್ಯಕ್ಷರಾಗಿ ಬಿಡುತ್ತಾರೆ, ಮಳೆಯ ಹಾಗೆ. ಅದು ಅವರ ಪಾಲಿಗೆ `ಪಾರ್ಟ್ ಟೈಂ' ನೌಕರಿ ಅನ್ನಿಸುತ್ತೆ. ಅವರು ಪಂದ್ಯ ನೋಡಲು ಬರುವ ನಮ್ಮಂತಹ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಲು ಬಂದರೆ, ನೀನು (ವರುಣ) ನಮ್ಮ ಉತ್ಸಾಹವನ್ನು ತಗ್ಗಿಸಲು ಬರುತ್ತೀಯ.

ಕೊಂಚ ಸಮಯದಲ್ಲಿಯೇ ನಮ್ಮಂತಹ ಕ್ರಿಕೆಟ್ ಹುಚ್ಚು ಪ್ರೇಮಿಗಳನ್ನು ಅಂದಗೊಳಿಸಿ, ತಿದ್ದಿ, ತೀಡಿ, ಮೊಗಕ್ಕೆ ಸರಿಹೊಂದುವ ಬಣ್ಣ ಬಳಿದು, ನಾವು ಇಷ್ಟಪಡುವ ತಂಡದ ಬಣ್ಣವನ್ನು ಮೊಗದ ಮೇಲರಳಿಸಿ ಬಿಡುತ್ತಾರೆ. ಇತ್ತ ಬಣ್ಣ ಹಚ್ಚಿದವರ ಜೇಬು ಭರ್ತಿ. ಅದರ ಜೊತೆಗೆ ಬಣ್ಣ ಬಳಸಿಕೊಂಡ ನಮ್ಮ ಮೊಗದ ಮೇಲೂ ರಂಗು. ಅದರ ಜೊತೆಗೆ ಮನದ ತುಂಬಾ ಸಂಭ್ರಮ.

ಮೊಗಕ್ಕೆ ಅಂದ ಹಚ್ಚಿಸಿಕೊಂಡ ನಂತರ ಎದುರಿಗೇ ಕಾಣುವ ವ್ಯಾಪಾರಿಯಿಂದ ಟಿ-ಶರ್ಟ್ ಖರೀದಿ ಮಾಡುತ್ತೇವೆ. ಅಲ್ಲಿಯೂ ಚೌಕಾಸಿ ಮಾಡುವುದಿಲ್ಲ. ಕೇಳುವಷ್ಟು ಹಣವನ್ನು ಉದಾರವಾಗಿ ಕೊಡುವ ಬುದ್ಧಿ ನಮ್ಮದು. ನೀನೇ ನೋಡು. ಐಪಿಎಲ್ ಪಂದ್ಯಗಳನ್ನು ನೋಡಲೆಂದೇ ಎಷ್ಟೆಲ್ಲಾ ಸಾಹಸಗಳನ್ನು ಮಾಡಿದ್ದೇವೆ. ಎಷ್ಟೊಂದು ದುಡ್ಡು ಖರ್ಚು ಮಾಡಿದ್ದೇವೆ. ಕಳೆದ ವರ್ಷ ಕೆಲವು ಪಂದ್ಯಗಳನ್ನು ನೋಡಿದ ನೆನಪು. ಈಗ ಮತ್ತೆ ಪಂದ್ಯಗಳನ್ನು ನೋಡುವ ಅವಕಾಶ ಲಭಿಸಿದೆ. ಈ ಸಲ ಒಟ್ಟು ಎಂಟು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತವಂತೆ. ಆದರೆ, ಮಳೆರಾಯ ನೀನು ದಯವಿಟ್ಟು ಅಡ್ಡಿಪಡಿಸಬೇಡ. ನಮ್ಮ ಕನಸುಗಳನ್ನು ಕೊಲ್ಲಬೇಡ.

ಮಳೆ ಎಂದರೆ ಕನಸಂತೆ, ಮಳೆ ಎಂದರೆ ಬದುಕಂತೆ, ಮಳೆ ಎಂದರೆ ನೆನಪುಗಳ ಸಮ್ಮಿಲನವಂತೆ, ಮಳೆ ಎಂದರೆ ಬಹುತೇಕ ಸಂಭ್ರಮಗಳ ಅವಿಭಾಜ್ಯ ಅಂಗವಂತೆ. ಎಲ್ಲಕ್ಕಿಂತ ಹೆಚ್ಚಾಗಿ ಮಳೆ ಎಂದರೆ ನಮ್ಮೆಲ್ಲಾ ಆಸೆಯನ್ನು ಪ್ರೀತಿಯಿಂದ ಈಡೇರಿಸುವ ಅಮ್ಮನಂತೆ...! ನಮ್ಮ ಆಸೆ, ಖುಷಿ, ಕನಸುಗಳನ್ನು ನನಸು ಮಾಡಲು ನಿನ್ನ ನೆರವು ಬೇಕೇ ಬೇಕು. ನಮ್ಮ ಮನದ ಭಾವನೆಗಳು ವಸಂತ ಮಾಸದಲ್ಲಿ ಚಿಗುರುವ ಮಾವಿನಂತೆ ಮೂಡಲು ನಿನ್ನ ಆಸರೆ ನಮಗಿರಬೇಕು. ಆದರೆ, ಮೇ ತಿಂಗಳು ಮುಗಿಯುವ ತನಕ ಅಪ್ಪಿ ತಪ್ಪಿಯೂ ಇಲ್ಲಿಗೆ ಬರಬೇಡ. ಏಕೆಂದರೆ, ನಿನ್ನನ್ನು ಪ್ರೀತಿಸಿದಷ್ಟೇ ಗಾಢವಾಗಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಪ್ರೀತಿಸಿದ್ದೇವೆ. ಆಟಗಾರರನ್ನು ತುಂಬಾ ಹಚ್ಚಿಕೊಂಡಿದ್ದೇವೆ.

ಪಂದ್ಯಗಳನ್ನು ನೋಡುವ ನಮ್ಮ ಸಂಭ್ರಮ ಮುಗಿದ ಮೇಲೆ ನಾವೇ ನಿನ್ನನ್ನು ಪ್ರೀತಿಯಿಂದ ಕರೆಯುತ್ತೇವೆ `ಹುಯ್ಯ್ ಹುಯ್ಯ್ ಮಳೆರಾಯ' ಎಂದು ಗೆಳೆಯರ ಜೊತೆ, ನೆರೆಹೊರೆಯವರ ಜೊತೆ ಕೈ ಬೀಸಿ ನಿನಗೆ ಕೇಳುವಷ್ಟು ಜೋರಾಗಿ ಹಾಡುತ್ತೇವೆ. ಆದರೆ, ನಮ್ಮ ಬೇಡಿಕೆ ಮಾತ್ರ ಈಡೇರಿಸುವ ಹೊಣೆಗಾರಿಗೆ ನಿನ್ನದು. ಇಲ್ಲವಾದರೆ, ಪಂದ್ಯ ನೋಡುವ ಕನಸು, ಮೊಗಕ್ಕೆ ಹಚ್ಚಿಸಿಕೊಂಡ ಬಣ್ಣದ ಸೊಗಸು ನಿನ್ನ ಅಬ್ಬರದಲ್ಲಿ ತೋಯ್ದು ಹೋಗುತ್ತದೆ. ಆಗ ನಮ್ಮ ಮುನಿಸು ನಿನ್ನ ಮೇಲೆ ಇನ್ನಷ್ಟು ಹೆಚ್ಚಾಗುತ್ತದೆ. ನಮ್ಮ ಬೇಡಿಕೆ ಈಡೇರಿಸುವೆ ಎನ್ನುವ ವಿಶ್ವಾಸದಲ್ಲಿ ನಾವಿರುತ್ತೇವೆ.
-ಇಂತಿ,
ಕ್ರಿಕೆಟ್‌ನ ಪರಮ ಪ್ರೇಮಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT