ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮವಿವಿ ದಶಮಾನೋತ್ಸವಕ್ಕೆ 17 ಕೋಟಿ ಯೋಜನೆ

Last Updated 18 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ವಿಜಾಪುರ: `ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ದಶಮಾನೋತ್ಸವ ಆಚರಣೆಗೆ ದಶಮಾನೋತ್ಸವ ಭವನ ನಿರ್ಮಾಣವೂ ಸೇರಿದಂತೆ ರೂ.17 ಕೋಟಿ ಯೋಜನೆ ರೂಪಿಸಲಾಗಿದೆ. ಮಹಿಳಾ ಕುಲಪತಿಗಳ ಸಮ್ಮೇಳನ, ಮಹಿಳಾ ವಿವಿಗಳ ಅಥ್ಲೆಟಿಕ್ಸ್ ನಡೆಸಲು ನಿರ್ಧರಿಸಲಾಗಿದೆ~ ಎಂದು ಮಹಿಳಾ ವಿವಿ ಕುಲಪತಿ ಡಾ.ಮೀನಾ ಆರ್. ಚಂದಾವರಕರ ಹೇಳಿದರು.

`ಮಹಿಳಾ ವಿವಿ ದಶಮಾನೋತ್ಸವ ಕುರಿತು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಉಪಸ್ಥಿತಿಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವುದಾಗಿ ಸಚಿವರು ಭರವಸೆ ನೀದ್ದಾರೆ~ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಈಗಾಗಲೇ ನಿರ್ಮಾಣ ಹಂತ ದಲ್ಲಿರುವ ಕಟ್ಟಡಗಳ ಕಾಮಗಾರಿ ಯನ್ನು ಪೂರ್ಣಗೊಳಿಸುವುದು ಹಾಗೂ ದಶಮಾನೋತ್ಸವ ಭವನ ನಿರ್ಮಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಭವನಕ್ಕೆ ಈ ಭಾಗದ ಎಲ್ಲ ಶಾಸಕರು-ಸಂಸದರು ಅನುದಾನ ನೀಡಬೇಕು. ಸಾರ್ವಜನಿಕರು ದೇಣಿಗೆ ನೀಡಬೇಕು~ ಎಂದು ವಿನಂತಿಸಿದರು.

ತೊರವಿಯ ಕ್ಯಾಂಪಸ್‌ನಲ್ಲಿ ರೂ. 2.30 ಕೋಟಿ ವೆಚ್ಚದಲ್ಲಿ ನಿರ್ಮಿಸು ತ್ತಿರುವ ಕ್ರೀಡಾಂಗಣ ಮುಕ್ತಾಯದ ಹಂತ ದಲ್ಲಿದೆ. ಈ ಕ್ರೀಡಾಂಗಣದ ಉದ್ಘಾಟನೆ ಅಂಗವಾಗಿ ಈ ವರ್ಷವೇ ಅಖಿಲ ಭಾರತ ಮಹಿಳಾ ವಿಶ್ವ ವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾ ಕೂಟ ನಡೆಸಲಾಗುವುದು ಎಂದರು.

ವಿಜಾಪುರದ ಸಿದ್ಧೇಶ್ವರ ಜಾತ್ರೆ ಸಂದರ್ಭದಲ್ಲಿ ಬರುವ ಜನವರಿ 13ರಿಂದ ಮೂರು ದಿನಗಳ ಕಾಲ ಮಹಿಳಾ ವಿಶ್ವವಿದ್ಯಾಲಯದಿಂದ ಬೃಹತ್ ವಸ್ತು ಪ್ರದರ್ಶನ ಏರ್ಪಡಿಸ ಲಾಗುವುದು. ಇದರಲ್ಲಿ ಜಿಲ್ಲೆ ಚುನಾಯಿತ ಪ್ರತಿನಿಧಿಗಳು, ಮಹಿಳಾ ಬ್ಯಾಂಕ್‌ಗಳವರು, ಮಹಿಳಾ ಸ್ವಯಂ ಸೇವಾ ಸಂಸ್ಥೆಗಳವರ ಸಹಯೋಗದಲ್ಲಿ ಮಹಿಳೆಯರಿಗೆ ಸಂಬಂಧಿಸಿ ಹಾಗೂ ಮಹಿಳೆಯರು ತಯಾರಿಸಿರುವ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಸಹಯೋಗದಲ್ಲಿ ಸಂಗೀತ, ನೃತ್ಯ, ನಾಟಕಗಳ ಬಗ್ಗೆ ವಿದ್ಯಾರ್ಥಿನಿ ಯರಿಗೆ ಎಂಟು ದಿನಗಳ ತರಬೇತಿ ನೀಡಲಾಗುವುದು ಎಂದರು.

ವಿಜಾಪುರದಲ್ಲಿ ನಡೆಯ ಲಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶ್ವ ವಿದ್ಯಾಲಯ ಸಂಪೂರ್ಣ ಸಹಕಾರ ನೀಡಲಿದೆ. ಕವಿಗೋಷ್ಠಿ ಅಥವಾ ಮತ್ತಾವುದೇ ಒಂದು ಕಾರ್ಯಕ್ರಮವನ್ನು ಮಹಿಳಾ ವಿವಿಯ ತೊರವಿ ಕ್ಯಾಂಪಸ್‌ನಲ್ಲಿ ಸಂಘಟಿಸು ವಂತೆ ಕೋರಿಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಮಹಿಳಾ ವಿವಿಯ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟವನ್ನು ಬಾಗಲಕೋಟೆಯ ಅಕ್ಕಮಹಾದೇವಿ ಕಲಾ ಮತ್ತು ವಿಜ್ಞಾನ ಮಹಿಳಾ ಕಾಲೇಜಿನಲ್ಲಿ  ಇದೇ 19 ಮತ್ತು 20 ರಂದು ಹಮ್ಮಿಕೊಳ್ಳಲಾಗಿದೆ ಎಂದರು.

ಕುಲಸಚಿವ ಪ್ರೊ.ಜಿ.ಆರ್. ನಾಯಕ, ಮೌಲ್ಯಮಾಪನ ಕುಲಸಚಿವೆ ಪ್ರೊ. ಡಿ.ಎಚ್. ತೇಜಾವತಿ, ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ.ಜಿ. ತಡಸದ, ಡಾ.ಜೆ.ಎಂ. ಚಂದುನವರ  ಪತ್ರಿಕಾಗೋಷ್ಠಿ ಯಲ್ಲಿದ್ದರು.

ಪ್ರದರ್ಶನ ಕಲೆಯ ಹೊಸ ಕೋರ್ಸ್
ವಿಜಾಪುರ: ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲೆ ವಿಷಯದಲ್ಲಿ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಸಹಯೋಗದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ನ್ನು ಮುಂದಿನ ವರ್ಷದಿಂದ ಪ್ರಾರಂಭಿಸಲಾಗುವುದು ಎಂದು ಕುಲಪತಿ ಡಾ.ಮೀನಾ ಹೇಳಿದರು.

ಬೆಂಗಳೂರು ವಿವಿಯಲ್ಲಿ ಮಾತ್ರ ಈ ಕೋರ್ಸ್ ಇದೆ. ಈ ಕೋರ್ಸ್ ಆರಂಭಿಸುತ್ತಿರುವ ರಾಜ್ಯದ ಎರಡನೇ ವಿವಿ ತಮ್ಮದು ಎಂದರು.

ಮಹಿಳಾ ವಿಶ್ವವಿದ್ಯಾಲಯದ ಪ್ರವೇಶದಲ್ಲಿ ಗಣನೀಯವಾದ ಪ್ರಗತಿ ಕಂಡು ಬಂದಿದೆ. ಸ್ನಾತಕೋತ್ತರ ವಿಭಾಗದಲ್ಲಿ ಕಳೆದ ವರ್ಷ 875 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಈ ವರ್ಷ 1320 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದು, ಶೇ.58ರಷ್ಟು ಹೆಚ್ಚಳವಾಗಿದೆ.

ವಿವಿ ವ್ಯಾಪ್ತಿಯ 90 ಮಹಿಳಾ ಕಾಲೇಜುಗಳಲ್ಲಿ ಪದವಿ ತರಗತಿಗಳಿಗೆ ಕಳೆದ ವರ್ಷ 18 ಸಾವಿರ ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಈ ವರ್ಷ 23 ಸಾವಿರ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಂಡಿದ್ದು, ಶೇ.23ರಷ್ಟು ಹೆಚ್ಚಳವಾಗಿದೆ ಎಂದರು.

ಮಹಿಳಾ ವಿವಿ ಸ್ನಾತಕೋತ್ತರ ಪ್ರವೇಶದಲ್ಲಿ ಮಹಿಳಾ ವಿವಿ ವ್ಯಾಪ್ತಿಯ ಮಹಿಳಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT