ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸುಕಾದ ಗಾಜಿನ ಲೋಕದೊಳಗೆ...

Last Updated 13 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಗಾಜಿನ ಈ ವೈಚಿತ್ರ ವರ್ಣಿಸುವುದರಲ್ಲಿ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಅಣುಗಳ ಏರ್ಪಾಟಿನಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಗಳಿಂದ ಗಾಜು ರೂಪುಗೊಳ್ಳುತ್ತದೆ ಎನ್ನುತಾರೆ ಒಂದು ಗುಂಪಿನ ವಿಜ್ಞಾನಿಗಳು. ಅಣುಗಳ ಕ್ರಿಯಾಶೀಲತೆಯೇ ಗಾಜಿನ ರೂಪುಗೊಳ್ಳುವಿಕೆಗೆ ಮುಖ್ಯ ಕಾರಣ ಹಾಗು ಅಣುಗಳ ಏರ್ಪಾಟಿನಲ್ಲಿ ಯಾವುದೇ ಬದಲಾವಣೆಗಳು ಇರಲಾರದು ಎನ್ನುತ್ತಾರೆ ಇನ್ನೊಂದು ಗುಂಪಿನವರು.

ಗಾಜು ಬಹೂಪಯೋಗಿ. ಅದು ನಮ್ಮ ಮನೆಗಳನ್ನು ಬೆಳಗಿಸುತ್ತದೆ, ನಮ್ಮ ಕಣ್ಣುಗಳ ದೋಷವನ್ನು ಸರಿದೂಗಿಸುತ್ತದೆ, ಸುಂದರವಾದ ಊಟದ ಸಲಕರಣೆಗಳನ್ನು ಒದಗಿಸುತ್ತದೆ ಮತ್ತು ಅದಿಲ್ಲದ ಜಂಗಮ ದೂರವಾಣಿಯಿಲ್ಲ (ಮೊಬೈಲ್). ಒಂದೆಡೆ ಅದು ನಿಮ್ಮ ಚತುರ ಜಂಗಮದ (ಸ್ಮಾರ್ಟ್ ಫೋನ್) ಮೇಲಿನ ಒಡೆಯಲು ಸಾಧ್ಯವಿಲ್ಲದ ಗೊರಿಲ್ಲಾ ಗಾಜಾದರೆ, ಮತ್ತೊಂದೆಡೆ ಒಡೆದರೂ ಚೂರು ಸಿಡಿಯದೆ ಜೇಡರಬಲೆಯ ರೀತಿ ತೋರುವ ನಿಮ್ಮ ಕಾರಿನ ಗಾಜಾಗಿರಬಹುದು.

ದ್ರವಗಳನ್ನು ನಿರ್ದಿಷ್ಟ ಉಷ್ಣತೆಗಿಂತ ಕೆಳಗೆ ತಣಿಸಿದಾಗ ಅವು (ಸ್ಪಟಿಕೀಯ) ಘನವಸ್ತುಗಳಾಗುತ್ತವೆ. ನಮ್ಮ ಫ್ರೀಜರಿನಲ್ಲಿಟ್ಟ ನೀರು ಮಂಜುಗಡ್ಡೆಯಾಗುವುದು ಇದಕ್ಕೊಂದು ಉತ್ತಮ ಉದಾಹರಣೆ. ಇದು ನಮಗೆಲ್ಲ ತಿಳಿದಿರುವ ಸಾಧಾರಣ ರೀತಿಯ ನಿಧಾನವಾದ ತಣಿಸುವಿಕೆ. ಆದರೆ ಕೆಲವು ದ್ರವಗಳನ್ನು ಶೀಘ್ರವಾಗಿ ತಣಿಸಿದಾಗ, ಅವು ಘನವಾಗದೆ ಗಾಜಿನ ಸ್ಥಿತಿಯನ್ನು ತಲುಪುತ್ತವೆ. ಇದೊಂದು ವಿಚಿತ್ರವಾದ ಸ್ಥಿತಿ, ಕಾರಣ ಒಳಗಿನ ಕಣಗಳು ದ್ರವದ ಕಣಗಳಂತೆ ಕಂಡುಬಂದರೆ ಪದಾರ್ಥದ ಒಟ್ಟಾರೆ ಸ್ಥಿತಿ ಘನದಂತೆ ಕಾಣುತ್ತದೆ.

ಗಾಜಿನ ಈ ವೈಚಿತ್ರ ವರ್ಣಿಸುವುದರಲ್ಲಿ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಅಣುಗಳ ಏರ್ಪಾಟಿನಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಗಳಿಂದ ಗಾಜು ರೂಪುಗೊಳ್ಳುತ್ತದೆ ಎನ್ನುತಾರೆ ಒಂದು ಗುಂಪಿನ ವಿಜ್ಞಾನಿಗಳು. ಅಣುಗಳ ಕ್ರಿಯಾಶೀಲತೆಯೇ ಗಾಜಿನ ರೂಪುಗೊಳ್ಳುವಿಕೆಗೆ ಮುಖ್ಯ ಕಾರಣ ಹಾಗು ಅಣುಗಳ ಏರ್ಪಾಟಿನಲ್ಲಿ ಯಾವುದೇ ಬದಲಾವಣೆಗಳು ಇರಲಾರದು ಎನ್ನುತ್ತಾರೆ ಇನ್ನೊಂದು ಗುಂಪಿನವರು.

ಈ ಎರಡನೇ ವಿಧಾನವನ್ನು ‘ಡೈನಾಮಿಕಲ್ ಫ್ಯಾಸಿಲಿಟೇಶನ್’ (ಕ್ರಿಯಾಶೀಲ ಸರಾಗಗೊಳಿಸುವಿಕೆ) ಎನ್ನುತ್ತಾರೆ. ಈ ಎರಡೂ ಪ್ರತಿಪಾದನೆಗಳನ್ನು ಪರೀಕ್ಷಿಸುವುದು ಬಹಳ ಕಷ್ಟ. ಇದಕ್ಕೆ ಕಾರಣ ಗಾಜಿನೊಳಗಿನ ಲೋಕವನ್ನು ಸೂಕ್ಷ್ಮದರ್ಶಕದ ಮೂಲಕ ಹಿಗ್ಗಿಸಿ ಅಣುಗಳ ಸಮಾಚಾರವನ್ನು ಅರಿಯುವುದು ಈಗಿರುವ ಸಾಧನಗಳಿಂದ ಅಸಾಧ್ಯ.

ಗಾಜಿನ ರಚನೆಯ ಒಳಮರ್ಮ ಅರಿಯುವ ಮೂಲಕ ಗಾಜನ್ನು ಹೆಚ್ಚು ವೈಜ್ಞಾನಿಕವಾಗಿ ನಿರ್ಮಿಸಬಹುದು ಎನ್ನುತ್ತಾರೆ ‘ಭಾರತೀಯ ವಿಜ್ಞಾನ ಸಂಸ್ಥೆ’ಯ ಪ್ರೊಫೆಸರ್ ಅಜಯ್  ಸೂದ್. “ಈ ಅಡೆತಡೆಗಳನ್ನು ಮೀರಲು ನೀರಿನಲ್ಲಿ ತೇಲಾಡುತ್ತಿರುವ ಪುಟ್ಟ ಪುಟ್ಟ ಪ್ಲಾಸ್ಟಿಕ್ ಮಣಿಗಳೊಡನೆ ಕೆಲಸಮಾಡಿದೆವು” ಎನ್ನುತ್ತಾರೆ ಸಹ ಲೇಖಕ ಶ್ರೇಯಸ್ ಗೋಖಲೆ.

ಮಿಲಿಮೀಟರಿನ ಸಾವಿರದೊಂದಂಶದಷ್ಟಿರುವ ರಗ್ಬಿ ಚೆಂಡಿನಾಕಾರದ ಈ ಪ್ಲಾಸ್ಟಿಕ್ ತುಣುಕುಗಳೊಡನೆ ‘ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ’ದ ಚಂದನ್ ಮಿಶ್ರಾ ಅವರು ಪ್ರಯೋಗಗಳನ್ನು ಮಾಡಿದರು. ಈ ತುಣುಕುಗಳು ಬರಿಗಣ್ಣಿಗೆ ಕಾಣಿಸದಿದ್ದರೂ, ಸೂಕ್ಷ್ಮದರ್ಶಕದ ಮೂಲಕ ನೋಡಲು ಸುಲಭಸಾಧ್ಯ.

“ಪ್ರತಿಯೊಂದು ಪುಟ್ಟ ರಗ್ಬಿ ಚೆಂಡನ್ನು ಅಣುವೆಂದು ಭಾವಿಸಿಕೊಳ್ಳಬಹುದು ಹಾಗು ಈ ತುಣುಕುಗಳ ಸಾಂದ್ರಣವು ಗಾಜಿನಂತೆ ವರ್ತಿಸುತ್ತದೆ” ಎನ್ನುತ್ತಾರೆ ಗೋಖಲೆ. ಗಾಜಿನ ರೂಪುಗೊಳ್ಳುವಿಕೆಯಲ್ಲಿ ಡೈನಾಮಿಕಲ್ ಫ್ಯಾಸಿಲಿಟೇಶನ್ ನಿರ್ವಹಿಸುವ ಗಮನಾರ್ಹ ಪಾತ್ರವನ್ನು ಜಾಗರೂಕತೆಯಿಂದ ಮಾಡಿದ ಈ ಪ್ರಯೋಗಗಳ ಮೂಲಕ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

“ಇಲ್ಲಿ ಎರಡು ಬಗೆಗಿನ ವಸ್ತುಗಳಿವೆ, ತಿರುಗಬಲ್ಲ ವಸ್ತುಗಳು ಮತ್ತು ಚಲಿಸಬಲ್ಲ ವಸ್ತುಗಳು. ತಿರುಗಬಲ್ಲ ವಸ್ತುಗಳು ಗಾಜಿನ ರೂಪುಗೊಳ್ಳುವಿಕೆಯ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತವೆ. ಇದು ಬಹಳ ಮುಖ್ಯವಾದ ಫಲಿತಾಂಶ. ಕಣಗಳು ಒಂದೇ ಜಾಗದಲ್ಲಿರುವುದಷ್ಟೇ ಅಲ್ಲ, ಅವುಗಳ ತಿರುಗುವಿಕೆಯ ಕೋನವು ಅಷ್ಟೇ ಮುಖ್ಯ” ಎಂದು ಪ್ರೊ. ಸೂದ್ ಈ ಫಲಿತಾಂಶಗಳನ್ನು ಇನ್ನಷ್ಟು ವಿವರಿಸಿದರು.

‘ನೇಚರ್ ಕಮ್ಯುನಿಕೇಷನ್ಸ್’ ಎಂಬ ಪತ್ರಿಕೆಯಲ್ಲಿ ಕಳೆದ ಪ್ರಕಟವಾದ ಲೇಖನವೊಂದರಲ್ಲಿ ‘ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ’ (ಹಿಮಾ ನಾಗಹಂಸ ಮತ್ತು ರಾಜೇಶ್ ಗಣಪತಿ) ಹಾಗು ಭಾರತೀಯ ವಿಜ್ಞಾನ ಮಂದಿರದ (ಶ್ರೇಯಸ್ ಗೋಖಲೆ ಮತ್ತು ಅಜಯ್ ಸೂದ್) ಸಂಶೋಧಕರು ಗಾಜಿನ ನಿರ್ಮಾಣದ ಇನ್ನೂ ಒಂದು ಮುಖವನ್ನು ತೋರಿಸಿಕೊಟ್ಟರು.

“ಕೆಲವು ಕಣಗಳ ಜೋಡಿಗಳನ್ನು ಬಂಧಿಸಲು ಸಾಧ್ಯವಾದಾಗ ನಿರ್ಮಾಣವಾಗುವ ಗಾಜು, ಕಣಗಳ ಈ ರೀತಿಯ ಬಂಧನವಿಲ್ಲದೆ ನಿರ್ಮಿಸಿದ ಗಾಜಿಗಿಂತ ಬಹಳಷ್ಟು ಭಿನ್ನವಾಗಿರುತ್ತದೆ. ಗಾಜಿನ ಕಣಗಳ ಬಂಧನದ ಪ್ರಭಾವವನ್ನು ಪ್ರಯೋಗಗಳ ಮೂಲಕ ಅಧ್ಯಯನ ಮಾಡಿದ್ದೇವೆ” ಎಂದು ಪ್ರೊ. ಸೂದ್ ವಿವರಿಸಿದರು.

ಒಟ್ಟಿನಲ್ಲಿ ಈ ಎರಡೂ ವಿದ್ವತ್ಪ್ರಬಂಧಗಳು ಗಾಜಿನ ನಿಗೂಢ ಲಕ್ಷಣಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಗಾಜಿನ ಉಪಯೋಗಗಳು ಅನೇಕ. ಜಂಗಮ ದೂರವಾಣಿಯ ಪರದೆಯಿಂದ ಹಿಡಿದು ಕಾರುಗಳ ಗಡುಸಾದ ಗಾಜಿನವರೆಗೆ. ಉಪಯೋಗಕ್ಕನುಗುಣವಾಗಿ ವಿವಿಧ ರೀತಿಯ ಗಾಜುಗಳು ದೊರಕುತ್ತವೆ. ಆದರೆ ಈ ಎಲ್ಲಾ ಸಂಧರ್ಭದಲ್ಲಿ ಬಳಸುವ ಮೂಲವಸ್ತು ಒಂದೇ. ಅದೇ ಮರಳು (ಸಿಲಿಕಾ).  ನೀವು ಗಾಜನ್ನು ನಿರ್ಮಿಸುವ ವಿಧಾನವು ಅದರ ಲಕ್ಷಣಗಳ ವೈವಿಧ್ಯತೆಯನ್ನುಂಟು ಮಾಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT