ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಡಿಯಿಂದ ಬಿದ್ದು ಮಗು ಸಾವು

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡದ ಎರಡನೇ ಮಹಡಿಯಲ್ಲಿರುವ ಮನೆಯ ಮುಂದಿನ ಆವರಣದಲ್ಲಿ (ಪ್ಯಾಸೇಜ್) ಆಟವಾಡುತ್ತಿದ್ದ ಒಂದೂವರೆ ವರ್ಷದ ಹೆಣ್ಣು ಮಗುವೊಂದು ಕಬ್ಬಿಣದ ಸರಳುಗಳ (ಗ್ರಿಲ್) ನಡುವಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಸಮೀಪದ ಸಂಪಿಗೆ ಲೇಔಟ್‌ನಲ್ಲಿ ಶನಿವಾರ ನಡೆದಿದೆ.

ಸಂಪಿಗೆ ಲೇಔಟ್ ಒಂದನೇ `ಡಿ~ ಅಡ್ಡರಸ್ತೆ ನಿವಾಸಿ ಚಿದಾನಂದಕುಮಾರ್ ಎಂಬುವರ ಮಗಳು ವಂದನಾ ಮೃತಪಟ್ಟ ಮಗು.ಮೂಲತಃ ಹಾಸನದ ಚಿದಾನಂದಕುಮಾರ್ ಅವರು ಎಂಜಿನಿಯರ್ ಆಗಿದ್ದು, ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಕಟ್ಟಡದ ಎರಡನೇ ಮಹಡಿಯಲ್ಲಿ ಅವರ ಮನೆ ಇದೆ.

ಕೆಲಸದ ನಿಮಿತ್ತ ಚಿದಾನಂದಕುಮಾರ್ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದರು. ಚಿದಾನಂದಕುಮಾರ್ ಅವರ ಪತ್ನಿ ಮನೆಯೊಳಗೆ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ 1.30ರ ಸುಮಾರಿಗೆ ಪ್ಯಾಸೇಜ್‌ನಲ್ಲಿ ಆಟವಾಡುತ್ತಿದ್ದ ವಂದನಾ, ಗ್ರಿಲ್‌ನ ಮಧ್ಯೆ ನುಸುಳಿ ಕೆಳಗೆ ಬಿದ್ದಿದ್ದಾಳೆ.

ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ವಂದನಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರಾತ್ರಿ 11 ಗಂಟೆ ಸುಮಾರಿಗೆ ಮಗು ಮೃತಪಟ್ಟಿತು ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭಾನುವಾರ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಘಟನೆಗಳು: ಜೆ.ಪಿ.ನಗರ ಬಳಿಯ ಪಾಂಡುರಂಗ ನಗರದ ಆದರ್ಶ ರಿದಂ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ 25ರಂದು ನಡೆದಿದ್ದ ಘಟನೆಯಲ್ಲಿ ಅರ್ಮಾನ್ ಕಶ್ಯಪ್ ಎಂಬ ಒಂದೂವರೆ ವರ್ಷದ ಮಗು ತಾಯಿಯ ಕಂಕುಳಿಂದ ಜಾರಿ ಕೆಳಗೆ ಬಿದ್ದು ಮೃತಪಟ್ಟಿತ್ತು.

ಕಶ್ಯಪ್‌ನ ತಾಯಿ ಅಮೃತಾ ಅವರು ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯ ಪ್ಯಾಸೇಜ್‌ನಲ್ಲಿ ನಿಂತುಕೊಂಡು ಮಗನಿಗೆ ಊಟ ಮಾಡಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿತ್ತು.

ಬ್ಯಾಟರಾಯನಪುರ ಸಮೀಪದ ಶಾಮಣ್ಣಗಾರ್ಡನ್‌ನಲ್ಲಿ ಆಗಸ್ಟ್ 2ರಂದು ನಡೆದಿದ್ದ ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಮಹಮ್ಮದ್ ನೂರ್ ಎಂಬ ಎರಡು ವರ್ಷದ ಬಾಲಕ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದ. ಮನೆಯ ಪ್ಯಾಸೇಜ್‌ನಲ್ಲಿ ಆಟವಾಡುತ್ತಿದ್ದ ನೂರ್ ಗ್ರಿಲ್‌ನ ಮಧ್ಯೆ ನುಸುಳಿ ಕೆಳಗೆ ಬಿದ್ದು ಮೃತಪಟ್ಟಿದ್ದ.
 
ಶ್ರೀನಿವಾಸ ನಗರದಲ್ಲಿ ಏಪ್ರಿಲ್ 12ರಂದು ನಡೆದಿದ್ದ ಘಟನೆಯಲ್ಲಿ ನಯನಾ ಎಂಬ ಒಂದು ವರ್ಷದ ಹೆಣ್ಣು ಮಗು ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿತ್ತು. ಸಹೋದರನ ಜತೆ ಮನೆಯ ಪ್ಯಾಸೇಜ್‌ನಲ್ಲಿ ಆಟವಾಡುತ್ತಿದ್ದ ನಯನಾ ಗ್ರಿಲ್‌ಗಳ ಮಧ್ಯೆ ನುಸುಳಿ ಕೆಳಗೆ ಬಿದ್ದಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT