ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವಾಕಾಂಕ್ಷಿ ರೇವತಿ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಉದ್ಯೋಗಸ್ಥ ಮಹಿಳೆಯರಿಗಾಗಿ ಎಂದೇ ಹಗುರ ಒಡವೆಗಳ ಎರಡನೇ ಕಂತನ್ನು ತನಿಷ್ಕ್ ಬಿಡುಗಡೆ ಮಾಡಿದೆ. ಚಿಕ್ಕ ಚಿಕ್ಕ ಕಿವಿಯೋಲೆಗಳು, ಬೆರಳ ಬೆಟ್ಟಿಗಿಂತಲೂ ಪುಟ್ಟದಾದ ಪೆಂಡೆಂಟ್, ಚಿನ್ನ ಮತ್ತು ರೋಡಿಯಂ ಮಿಶ್ರಿತವಾದವುಗಳು, ವಜ್ರದಿಂದ ಶ್ರೀಮಂತಗೊಂಡವುಗಳು ಈ ಸಂಗ್ರಹದಲ್ಲಿವೆ.
 
ಹೆಸರು `ಮಿಯಾ~. ಇತ್ತೀಚಿನ ದಿನಗಳಲ್ಲಿ ಹಗುರ ಒಡವೆಗಳು ಎಲ್ಲಾ ಮಳಿಗೆಗಳಲ್ಲೂ ಲಭ್ಯವಿದ್ದರೂ `ಮಿಯಾ~ ಸಂಗ್ರಹ ವಿನ್ಯಾಸಗೊಳ್ಳುವುದಕ್ಕೂ ಮೊದಲು ಹತ್ತಾರು ನಗರ, ಪಟ್ಟಣಗಳ ಹೆಣ್ಣುಮಕ್ಕಳು ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದರು ಎಂಬುದು ವಿಶೇಷ. `ಮಿಯಾ~ ವಿನ್ಯಾಸಕಾರರ ತಂಡದ ಮುಖ್ಯಸ್ಥೆ ರೇವತಿ ಕಾಂತ್ ಈ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

`ದುಡಿಯುವ ಮಹಿಳೆಗಾಗಿ~ ಎಂಬ ಹಣೆಪಟ್ಟಿ ಹಾಕುವ ಮೂಲಕ ದೊಡ್ಡದೊಂದು ಗ್ರಾಹಕವರ್ಗವನ್ನು ಟಾರ್ಗೆಟ್ ಮಾಡಿಕೊಂಡಿದ್ದೀರಾ?
ಅದು ಹಾಗಲ್ಲ. ದುಡಿಯುವ ಮಹಿಳೆ ಬಹು ಆಯಾಮದಲ್ಲಿ ತನ್ನನ್ನು ತಾನು ಪ್ರೆಸೆಂಟ್ ಮಾಡುತ್ತಾ ಇರಬೇಕು. ಮನೆಯಲ್ಲಿ ಪ್ರತಿ ಸೆಕೆಂಡ್‌ಗಳ ಶೆಡ್ಯೂಲ್ ಮೇಲೆ ಕೆಲಸ ಮಾಡುವ ಆಕೆಯ ಮನಸ್ಸಿನ ಮೂಲೆಯಲ್ಲಿ ಕಚೇರಿಯಲ್ಲಿನ ತನ್ನ ಜವಾಬ್ದಾರಿಯ ಪ್ರಜ್ಞೆಯೇ ಕುಟುಕುತ್ತಾ ಇರುತ್ತದೆ.
 
ಈ ತೊಯ್ದಾಟದಲ್ಲಿ ಆಕೆ ತನ್ನನ್ನು ತಾನು ಸಿಂಗರಿಸಿಕೊಳ್ಳುವುದರಲ್ಲೂ ಹಿಂದೆ ಬೀಳಬಾರದಲ್ವೆ? ನಿನ್ನೆಯ ಉಡುಪನ್ನು ಇವತ್ತು ಧರಿಸಲಾಗದು. ಚಪ್ಪಲಿಯೂ ಉಡುಪಿಗೆ ತಕ್ಕಂತೆ ಬದಲಾಗುತ್ತಿರುತ್ತದೆ.

ಇದನ್ನು ಡ್ರೆಸ್‌ಕೋಡ್ ಇಲ್ಲವೇ ಶಿಸ್ತಿನ ಭಾಗವಾಗಿಯೂ ಪರಿಗಣಿಸಬಹುದು. ಇದಕ್ಕೆ ತಕ್ಕುದಾಗಿ ಒಡವೆಯೂ ಬದಲಾಗಬೇಕು ಎಂದು ಅವಳು ಬಯಸಿದರೆ ತಪ್ಪೇನು? ತನ್ನ ಮನಸ್ಸಿಗೊಪ್ಪುವ ಒಡವೆ ಯಾವ ಮಳಿಗೆಯಲ್ಲಿ ಸಿಗುತ್ತದೆ ಎಂದು ಅಲ್ಲಿ ಇಲ್ಲಿ ಸುತ್ತಾಡುವಷ್ಟು ಪುರುಸೊತ್ತು ಅವಳಿಗೆಲ್ಲಿ? ಅದಕ್ಕಾಗಿ ಒಂದೇ ಕಡೆ ನೂರಾರು ಬಗೆಯ ವಿನ್ಯಾಸಗಳು ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ.

ಹಗುರ ಆಭರಣಗಳು ಎಲ್ಲೆಡೆ ಲಭ್ಯವಿರುವಾಗ `ಮಿಯಾ~ ಸಂಗ್ರಹದ ವೈಶಿಷ್ಟ್ಯ ಮತ್ತು ಪ್ರಸ್ತುತತೆ ಏನು?
`ಮಿಯಾ~ ಸಂಗ್ರಹದಲ್ಲಿ 185 ಬಗೆಯ ವಿನ್ಯಾಸಗಳು ಇವೆ. ಕಳೆದ ವರ್ಷ ಈ ಸಂಗ್ರಹಕ್ಕೆ ದೇಶದೆಲ್ಲೆಡೆ  ನಮ್ಮ ಮಳಿಗೆಗಳಲ್ಲಿ ಭಾರೀ ಬೇಡಿಕೆಯಿತ್ತು. ಆಗ ಕೇವಲ 85 ವಿನ್ಯಾಸಗಳಿದ್ದವು. ಈ ಬಾರಿ ಹೊಸದಾಗಿ 100 ವಿನ್ಯಾಸಗಳನ್ನು ಸೇರ್ಪಡೆಗೊಳಿಸಿದ್ದೇವೆ. ಬೆಲೆ ರೂ. 4,999ರಿಂದ 35 ಸಾವಿರದವರೆಗೂ ಇದೆ.

ವಜ್ರ ಅಳವಡಿಸಿದ ಪುಟ್ಟಪುಟ್ಟ ಒಡವೆಗಳನ್ನು ನಿತ್ಯ ಧರಿಸುವ ಮಜವೇ ಬೇರೆ. ಉಡುಗೆ ತೊಡುಗೆಯೆಂದರೆ ಒಡವೆಗಳೂ ಸೇರುತ್ತವಲ್ಲ? ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಒಡವೆ ಬದಲಾಯಿಸುವ ಆಧುನಿಕ ಮಹಿಳೆಯರಿಗೆ ಇವು ಅತ್ಯಂತ ಸೂಕ್ತವಾಗಿವೆ.

ಈ ಸಂಗ್ರಹಕ್ಕಾಗಿ ನಡೆಸಿದ ಸಮೀಕ್ಷೆ ಬಗ್ಗೆ ಹೇಳಿ?

ಹೌದು, `ಮಿಯಾ~ ಸಂಗ್ರಹದಲ್ಲಿರುವ ವಿನ್ಯಾಸಗಳ ಹಿಂದೆ ದೇಶದ ಉದ್ದಗಲದ ದುಡಿಯುವ ಹೆಣ್ಣುಮಕ್ಕಳ ಪರಿಕಲ್ಪನೆಯೂ ಒಳಗೊಂಡಿರುವುದು ವಿಶೇಷ. ನಾವು 2010-11ರಲ್ಲಿ ಒಂದು ಸಮೀಕ್ಷೆ ನಡೆಸಿದೆವು.
 
ಉದ್ಯೋಗಸ್ಥ ಮಹಿಳೆಯರ ಆಭರಣ ವ್ಯಾಮೋಹವನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಈ ಸಮೀಕ್ಷೆಯ್ಲ್ಲಲಿ, ಬಟ್ಟೆಯಂತೆ ಪ್ರತಿದಿನ ಒಡವೆಗಳನ್ನು ಬದಲಾಯಿಸುವ ಮನಸ್ಸಿದ್ದರೂ ಪ್ರತಿದಿನ ದುಬಾರಿ ಮತ್ತು ಭಾರೀ ಒಡವೆಗಳನ್ನು ಧರಿಸುವುದು ಕಷ್ಟ ಎಂಬ ಅಭಿಪ್ರಾಯ ಹೆಚ್ಚಿನವರದಾಗಿತ್ತು. ಇದಕ್ಕಾಗಿ ಹಗುರ, ಕೈಗೆಟಕುವ ಬೆಲೆಯ ಒಡವೆಗಳ ವಿನ್ಯಾಸಕ್ಕೆ ಮುಂದಾದೆವು.

ಚಿಪ್ಪಿನೊಳಗಿನ ಮುತ್ತನ್ನು ನಾವು ಬಳಸುತ್ತೇವೆ. ಆದರೆ ಆ ಚಿಪ್ಪಿನ ಸೌಂದರ್ಯ ಎಲ್ಲೂ ಬೆಳಕು ಕಾಣುವುದಿಲ್ಲ. ಮಿಯಾದಲ್ಲಿರುವ `ಮದರ್ ಆಫ್ ಪರ್ಲ್~ ವಿನ್ಯಾಸ ಈ ಬಾಯಿ ತೆರೆದ ಚಿಪ್ಪಿನೊಳಗಿಟ್ಟ ಮುತ್ತಿನಂತಿದೆ. ವಿಶಿಷ್ಟ ವಿನ್ಯಾಸವಿದು.

ಗ್ರಾಹಕರೇ ಮಾಡಿದ ವಿನ್ಯಾಸಗಳು ಈ ಸಂಗ್ರಹದಲ್ಲಿವೆಯೇ?
ಗ್ರಾಹಕರ ಸಮೀಕ್ಷೆಯೊಂದಿಗೆ, ನಿಮ್ಮ ಕನಸಿನ ವಿನ್ಯಾಸವನ್ನು ಮಾಡಿ ನಮಗೆ ಕಳುಹಿಸಿ ಎಂಬ ಆಹ್ವಾನ ನೀಡಿದ್ದೆವು. ಇದಕ್ಕೆ ಭಾರೀ ಸ್ಪಂದನ ಸಿಕ್ಕಿತ್ತು. ಅತ್ಯುತ್ತಮ ವಿನ್ಯಾಸಗಳೂ ಬಂದವು. ಅವುಗಳನ್ನು ತನಿಷ್ಕ್ ಬಳಸಿಕೊಂಡಿದೆ. ಆದರೆ ಅವು ಈ ಬಾರಿಯ ಮಿಯಾ ಸಂಗ್ರಹದಲ್ಲಿಲ್ಲ.

ಆಭರಣ ವಿನ್ಯಾಸ ಕ್ಷೇತ್ರದ ಬಗ್ಗೆ?
ವಸ್ತ್ರವಿನ್ಯಾಸ ಅಥವಾ ಇತರ ಯಾವುದೇ ವಿನ್ಯಾಸ ಕ್ಷೇತ್ರಕ್ಕಿಂಥ ತೀರಾ ಭಿನ್ನವಾದ ಕ್ಷೇತ್ರವಿದು. ಅಮೂರ್ತ ಕನಸಿಗೆ ಮೂರ್ತ ರೂಪ ನೀಡುವ ಅವಕಾಶ ಇಲ್ಲಿ ಹೆಚ್ಚು. ತಮ್ಮದೇ ಆದ ವಿನ್ಯಾಸದೊಂದಿಗೆ ಆಭರಣ ಕ್ಷೇತ್ರದಲ್ಲೇ ತಮ್ಮ ಛಾಪೊತ್ತಲೂ ಇಲ್ಲಿ ಸಾಧ್ಯ.
 
ಆದರೆ ನಮ್ಮಳಗಿನ ಕ್ರಿಯಾಶೀಲತೆಯನ್ನು ದುಡಿಸಿಕೊಳ್ಳಬೇಕು. ಜತೆಗೆ ಮಹತ್ವಾಕಾಂಕ್ಷೆ ಬೇಕು. ಇದೊಂದು ವೃತ್ತಿಯಾಗುವುದಕ್ಕಿಂತ ಜೀವನಪ್ರೀತಿಯ ಅಂಗವಾಗಬೇಕು. ಆಗ ನಮ್ಮತನವನ್ನು, ವೃತ್ತಿಪರತೆಯನ್ನು ಈ ಕ್ಷೇತ್ರದಲ್ಲಿ ಉಳಿಸಿಬಿಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT