ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹನೀಯರ ಸ್ಮರಣೆ, ಆದರ್ಶ ಪಾಲನೆಗೆ ಸಲಹೆ

Last Updated 3 ಅಕ್ಟೋಬರ್ 2012, 6:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನ್ ಚೇತನಗಳಾದ ಮಹಾತ್ಮ ಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿಯವರನ್ನು ಸದಾ ಕಾಲ ನೆನಪಿಸಿಕೊಳ್ಳಬೇಕಿದೆ. ಅವರು ಪಾಲಿಸಿದ ತತ್ವ, ನಿಷ್ಠೆ. ಶ್ರದ್ಧೆ ಮತ್ತು ಬದ್ಧತೆ ಪ್ರತಿಯೊಬ್ಬರು ಅನುಸರಿಸಬೇಕಿದೆ~ ಎಂದು ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.

ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿ ಪ್ರಯುಕ್ತ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಅಹಿಂಸಾ ಹೋರಾಟದ ಮೂಲಕ ಅವರು ಜನರನ್ನು ಜಾಗೃತಗೊಳಿಸಿದರು. ದೇಶವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಿದರು~ ಎಂದರು.

`ಎಷ್ಟೇ ಅಡತಡೆಗಳು ಮತ್ತು ಅಡ್ಡಿಆತಂಕಗಳು ಎದುರಾದರೂ ಗಾಂಧೀಜಿ ಮತ್ತು ಶಾಸ್ತ್ರಿಯವರು ಎಂದಿಗೂ ಹೋರಾಟದ ಹಾದಿಯಿಂದ ವಿಮುಖರಾಗಲಿಲ್ಲ. ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಮುನ್ನಡೆದ ಅವರು ಬ್ರಿಟಿಷರು ದೇಶವನ್ನು ತೊರೆಯುವಂತಹ ಸ್ಥಿತಿ ನಿರ್ಮಿಸಿದರು~ ಎಂದು ಅವರು ತಿಳಿಸಿದರು.

`ಗಾಂಧೀಜಿಯವರು ಕುಟುಂಬಕ್ಕಿಂತ ದೇಶದ ಸ್ವಾತಂತ್ರ್ಯ ಮತ್ತು ಐಕ್ಯತೆಗೆ ಹೆಚ್ಚಿನ ಮಹತ್ವ ನೀಡಿದರು. ಅನಾರೋಗ್ಯ ಮತ್ತು ಇನ್ನಿತರ ಸಮಸ್ಯೆಗಳಿದ್ದರೂ ಅವರು ದೃತಿಗೆಡದೇ ಹೋರಾಟ ಮುನ್ನಡೆಸಿದರು. ಜನರಲ್ಲಿ ಕನಸಾಗಿದ್ದ ಸ್ವಾತಂತ್ರ್ಯವನ್ನು ನನಸಾಗಸಿದರು~ ಎಂದು ವಕೀಲ ವಿಜಯಶಂಕರ್ ಹೇಳಿದರು.

`ಲಾಲ್ ಬಹದ್ದೂರ ಶಾಸ್ತ್ರಿಯವರು ದೇಶದ ಅತ್ಯುನ್ನತ ಪ್ರಧಾನಿ ಸ್ಥಾನದಲ್ಲಿದ್ದರೂ ಸರಳ ಜೀವನ ನಡೆಸಿದರು. ಅವರು ತಮ್ಮ ಸ್ಥಾನಕ್ಕೆ ಗೌರವ ಸಲ್ಲಿಸಿ ಪ್ರಾಮಾಣಿಕತೆಯಿಂದ ಜೀವನ ಮಾಡಿದರೆ ಹೊರತು ಯಾವುದಕ್ಕೂ ದುರಾಸೆ ಪಡಲಿಲ್ಲ. ದೇಶದ ಅಭಿವೃದ್ಧಿಯೇ ಅವರ ಪರಮ ಗುರಿಯಾಗಿತ್ತು~ ಎಂದು ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ತಿಳಿಸಿದರು.

ಗಾಯಕ ಮಹಾಲಿಂಗಪ್ಪ ಮಠದ ಮತ್ತು ತಂಡದ ಸದಸ್ಯರು ಭಜನೆಪದಗಳನ್ನು ಹಾಡಿದರು. ಹಿಂದೂ, ಮುಸ್ಲಿಂ, ಕ್ರೈಸ್ತ ಮತ್ತು ಇತರ ಸಮುದಾಯದ ಮುಖಂಡರಿಂದ ಧಾರ್ಮಿಕ ಪಠಣ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಡಿ.ಮಾರಪ್ಪ, ನಾರಾಯಣಪ್ಪ, ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ.ಪವಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಮುಖ್ಯಕಾರ್ಯನಿರ್ವಹಣಾಧಿಕಾರಿ  ಬಿ.ಎಸ್.ಶೇಖರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಭಿವೃದ್ಧಿ ಕುಂಠಿತ: ವಿಷಾದ
ಶಿಡ್ಲಘಟ್ಟ: ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಸರ್ಕಾರಗಳು ಭವಿಷ್ಯದ ದೃಷ್ಟಿಯಿಂದ ಪೂರಕ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಈ ಕಾರಣದಿಂದಲೇ ದೇಶ ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಶಾಸಕ ವಿ.ಮುನಿಯಪ್ಪ ವಿಷಾದಿಸಿದರು.

ಪಟ್ಟಣದ ಕೋಟೆ ವೃತ್ತದಲ್ಲಿ ತಾಲ್ಲೂಕು ಎಂಪಿಸಿಎಸ್ ನೌಕರರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, `ನಮ್ಮ ಭಾಗದ ಯುವಜನರಿಗೆ ಫ್ಲೋರೈಡ್‌ಯುಕ್ತ ನೀರನ್ನು ಕುಡಿಯುತ್ತಿರ‌್ದುವ ಅರಿವಿದೆ. ಆದರೆ ಅವರ‌್ಯಾರೂ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸುತ್ತಿಲ್ಲ. ಜನಪ್ರತಿನಿಧಿಗಳು, ಸಂಘಟನೆಗಳು, ಸಾರ್ವಜನಿಕರು ಒಗ್ಗೂಡಿ ನೀರು ತರಲು ಶ್ರಮಿಸಬೇಕು~ ಎಂದರು.

ಕೋಚಿಮುಲ್ ನಿರ್ದೇಶಕ ಗುಡಿಯಪ್ಪ, ತಾಲ್ಲೂಕು ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ರಾಮೇಗೌಡ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಉಪಾಧ್ಯಕ್ಷ ಅಶ್ವತ್ಥನಾರಾಯಣ, ಸದಸ್ಯ ಗೋಪಾಲ್, ಮಾಜಿ ಪುರಸಭಾ ಅಧ್ಯಕ್ಷ ಮುನಿಕೃಷ್ಣಪ್ಪ, ಸದಸ್ಯ ಚಿಕ್ಕಮುನಿಯಪ್ಪ, ಡಾ.ಸತ್ಯನಾರಾಯಣ್, ಎಂ.ಪಿ.ಸಿ.ಎಸ್ ನೌಕರರ ಸಂಘದ ಕಾರ್ಯದರ್ಶಿ ಗೋವಿಂದರಾಜು, ಶ್ರೀನಿವಾಸ್, ಆಂಜಿನಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೇಲೂರಿನಲ್ಲಿ ಗಾಂಧಿ ಜಯಂತಿ
ಶಿಡ್ಲಘಟ್ಟ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತತ್ವ ಸಿದ್ಧಾಂತಗಳನ್ನು ಇಂದಿನ ಯುವಜನತೆ ಅಳವಡಿಸುಕೊಳ್ಳಬೇಕೆಂದು ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಗ್ರಾ.ಪಂ. ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. `ಹಳ್ಳಿಗಳು ಅಭಿವೃದ್ಧಿಯಾಗದಿದ್ದರೆ ದೇಶ ಅಭಿವೃದ್ಧಿಯಾಗುವುದಿಲ್ಲ ಎಂದು ಗಾಂಧೀಜಿ ಹೇಳಿದ್ದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಅವರ ಹೆಸರಿನಲ್ಲಿ ಆರಂಭಿಸಲಾಗಿರುವ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆಯಾಗಬೇಕು~ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಮಮತ, ಗ್ರಾ.ಪಂ. ಉಪಾಧ್ಯಕ್ಷ ಎಂ.ಮುನಿಕೃಷ್ಣಪ್ಪ, ಸದಸ್ಯರಾದ ರೂಪೇಶ್, ಜಿ.ಎಂ.ಜನಾರ್ಧನ, ಶ್ರೀನಿವಾಸಮೂರ್ತಿ ಮತ್ತಿತರರು ಹಾಜರಿದ್ದರು.

ಬಾಗೇಪಲ್ಲಿ: ಸಸಿನೆಟ್ಟುಆಚರಣೆ
ಬಾಗೇಪಲ್ಲಿ: ಕಿರಿಯ ವಯಸ್ಸಿನಲ್ಲೇ ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆ ಮತ್ತು ಬದ್ಧತೆ ರೂಢಿಸಿಕೊಳ್ಳಬೇಕು. ದೇಶದ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು~ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ತಿಳಿಸಿದರು.

ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಗಾಂಧಿ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿ, `ಗಾಂಧೀಜಿ ಅಪ್ರತಿಮ ನಾಯಕ, ಮಹಾತ್ಮರಾಗಿದ್ದವರು. ಸ್ವಾತಂತ್ರ್ಯದ ದಿನಗಳಲ್ಲಿ ಹೋರಾಟಗಾರರನ್ನು ಒಗ್ಗೂಡಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು~ ಎಂದರು.

`ಶಿಸ್ತು, ಸಮಯಪಾಲನೆ ಬೆಳೆಸಿಕೊಂಡ ಗಾಂಧೀಜಿಯವರ ಆದರ್ಶಗಳು ಇಂದಿನ ಯುವಕರಿಗೆ ಆದರ್ಶವಾಗಬೇಕು. ಗ್ರಾಮಗಳ ಉದ್ದಾರವೇ ದೇಶ ಬೆಳವಣಿಗೆ ಆಗಲು ಸಾಧ್ಯ. ಪಂಚಾಯಿತಿಗಳ ನಿರ್ಲಕ್ಷ್ಯತನದಿಂದ ಗ್ರಾಮಗಳಲ್ಲಿ ಸ್ವಚ್ಚತೆ, ಕುಡಿಯುವ ನೀರು, ವಿದ್ಯುತ್, ಸ್ವಂತ ಮನೆಗಳು ಇಲ್ಲದಂತೆ ಆಗಿದೆ~ ಎಂದು ಅವರು ವಿಷಾದಿಸಿದರು.

ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಶಾಲೆಯ 41 ವಿದ್ಯಾರ್ಥಿಗಳಿಗೆ ಉಚಿತವಾಗಿ ಸೈಕಲ್‌ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿ ಸಂದೀಪ್ ತಂಡದ ಸದಸ್ಯರು ಭಜನೆ ಗೀತೆಗಳನ್ನು ಹಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಂಜುನಾಥ್, ಸದಸ್ಯ ನರಸಿಂಹಮೂರ್ತಿ, ಮುಖ್ಯಶಿಕ್ಷಕ ಶ್ರೀಧರಮೂರ್ತಿ, ಶಿಕ್ಷಕರಾದ ಎನ್.ಶ್ರೀನಿವಾಸ್, ನಾರಾಯಣಸ್ವಾಮಿ, ರಾಮಸುಬ್ಬಮ್ಮ ಮತ್ತಿತರರು ಉಪಸ್ಥಿತರಿದ್ದರು.

ಗಾಂಧೀಜಿ ವಿಚಾರ ಈಗಲೂ ಪ್ರಸ್ತುತ
ಗೌರಿಬಿದನೂರು: ಗಾಂಧೀಜಿಯವರು ಸಾರಿದ ಅಹಿಂಸ ತತ್ವ ಮತ್ತು ಜೀವನಾದರ್ಶನ ಈಗಲೂ ಪ್ರಸ್ತುತವಾಗಿವೆ. ಗಾಂಧೀಜಿಯವರ ವಿಚಾರಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಯುವಜನರು ಆಸಕ್ತಿ ತೋರಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ಗಾಂಧಿ ಜಯಂತಿ ಅಂಗವಾಗಿ ಪಟ್ಟಣದ ಗಾಂಧೀಜಿ ವೃತ್ತದಲ್ಲಿರುವ ಗಾಂಧೀಜಿ ಸ್ಥೂಪಕ್ಕೆ ಮಾಲಾರ್ಪಣೆ ಮಾಡಿದ ಅವರು, `ಗಾಂಧೀಜಿಯವರು ಅಂದು ಹತರಾದರು. ಇಂದು ನಾವೇ ಅವರ ವಿಚಾರಗಳನ್ನು ಸಾಯಿಸುತ್ತಿದ್ದೇವೆ. ಅವರ ವಿಚಾರಧಾರೆ, ಚಿಂತನೆಗಳತ್ತ ನಿರಾಸಕ್ತಿ ತೋರುತ್ತಿದ್ದೇವೆ~ ಎಂದರು.

ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ ಮಾತನಾಡಿ, `ಗಾಂಧೀಜಿ  ಸಾರಿರುವ  ಅಹಿಂಸಾ ತತ್ವ, ಹೋರಾಟ, ಧರಣಿ  ಎಲ್ಲಾ ಕಾಲಕ್ಕೂ ಅನ್ವಯವಾಗುತ್ತವೆ. ಹಿಂಸೆಯಿಂದ ನಾವು ಏನನ್ನೂ ಗಳಿಸಲು ಆಗುವುದಿಲ್ಲ. ಏನನ್ನೂ ಸಾಧಿಸಲು ಕೂಡ ಆಗುವುದಿಲ್ಲ~ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಉಪಾಧ್ಯಕ್ಷೆ ಅನಿತಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರೆಡ್ಡಪ್ಪ, ಪುರಸಭೆ ಅಧ್ಯಕ್ಷೆ ಹಜಿರಾತರನೂಮ್, ಉಪಾಧ್ಯಕ್ಷೆ ವಿ.ರಮೇಶ್, ಸದಸ್ಯರಾದ ನಾಗಮಣಿ, ಪದ್ಮಾವತಮ್ಮ, ಮಾತಣ್ಣ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.  

`ಯುವಜನರ ಮೇಲೆ ದೇಶದ ಜವಾಬ್ದಾರಿ~
ಗುಡಿಬಂಡೆ: ದೇಶ ಮುನ್ನಡೆಸುವ ಮತ್ತು ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಜವಾಬ್ದಾರಿ ಇಂದಿನ ಯುವಜನರ ಮೇಲಿದ್ದು, ಅವರು ಜಾಗೃತರಾಗಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ.ಈರಣ್ಣನವರ್ ತಿಳಿಸಿದರು.

 ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅಂಗವಾಗಿ ಗುಡಿಬಂಡೆ ತಾಲ್ಲೂಕಿನ ಬೊಮ್ಮಗಾನಹಳ್ಳಿ ಅಚ್ಯುತ ಎಂಜಿನೀಯರಿಂಗ್ ಕಾಲೇಜಿನಲ್ಲಿ ಮಂಗಳವಾರ  ನಡೆದ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, `ಪ್ರತಿಯೊಬ್ಬರು ದೇಶಾಭಿಮಾನ ಮೂಡಿಸಿಕೊಳ್ಳಬೇಕು~ ಎಂದರು.

ವಕೀಲ ಇ.ಎಸ್.ಇಂದ್ರೇಶ್ ಮಾತನಾಡಿ, `ದೇಶದಲ್ಲಿ ನ್ಯಾಯಾಂಗವು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಜನರ ದೂರು ಮತ್ತು ಅಹವಾಲುಗಳಿಗೆ ಸ್ಪಂದಿಸುತ್ತಿದೆ. ಬಹುತೇಕ ಪ್ರಕರಣಗಳನ್ನು ರಾಜಿ ಮತ್ತು ಸಂಧಾನಗಳ ಮೂಲಕ ಪರಿಹರಿಸುತ್ತಿದೆ. ಈ ಸಂಗತಿಯನ್ನು ಜನರು ಅರಿಯಬೇಕು~ ಎಂದರು.

ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ, ಪ್ರಧಾನ ಸಿವಿಲ್ ನ್ಯಾಯಧೀಶ ಬಿ.ಕೆ.ರವಿಕಾಂತ್, ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ, ಅಚ್ಯುತ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ಎನ್.ನಾಗಿರೆಡ್ಡಿ,  ನಾರಾಯಣರೆಡ್ಡಿ, ಸರ್ಕಲ್ ಇನ್ಸ್‌ಪೆಕ್ಟರ್ ಶಾಶಿಬ್ ಪ್ರಾಂಶುಪಾಲ ಡಾ.ಎ.ಶಶಿಶಂಕರ್, ಸುದರ್ಶನ್, ವಿಶ್ವನಾಥ್ ಹಾಜರಿದ್ದರು.

ಗ್ರಾ.ಪಂ ಕಚೇರಿಯಲ್ಲಿ ಧ್ವಜಾರೋಹಣ!
ಬಾಗೇಪಲ್ಲಿ: ಮಹಾತ್ಮಾ ಗಾಂಧೀಜಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಘಟನೆ ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ನಡೆದಿದೆ.

`ಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳನ್ನು ಇರಿಸಿ ಅವರನ್ನು ಸ್ಮರಿಸುವ ಬದಲು ನಮ್ಮ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಗಿದೆ. ಧ್ವಜವನ್ನು ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಹಾರಿಸಿದ್ದಾರೋ ಎಂಬುದು ಗೊತ್ತಿಲ್ಲ. ಮಾರ್ಗದರ್ಶನ ಪಡೆದಿದ್ದರೆ ಒಳ್ಳೆಯದಿತ್ತು~ ಎಂದು ಗ್ರಾಮಸ್ಥರೊಬ್ಬರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT