ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಮ್ಮದ್ ಪೈಗಂಬರರ ತತ್ವ-ಸಂದೇಶ ಪಾಲನೆಗೆ ಗಣ್ಯರ ಸಲಹೆ

Last Updated 6 ಫೆಬ್ರುವರಿ 2012, 6:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಮ್ಮದ್ ಪೈಗಂಬರರ ಜನ್ಮದಿನದ (ಜಶ್ನೆ ಈದ್ ಮಿಲಾದುನ್ನಬಿ) ಅಂಗವಾಗಿ ಭಾನುವಾರ ನಗರದ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಮಿಲಾದ್ ಆಚರಿಸಿದರು.

ಶನಿವಾರದಿಂದಲೇ ನಗರದ ಗಣೇಶಪೇಟೆ, ಮುಲ್ಲಾ ಓಣಿ, ಸ್ಟೇಷನ್ ರಸ್ತೆ, ಭೈರಿದೇವರಕೊಪ್ಪದ ಬಳಿ ಪಿ.ಬಿ.ರಸ್ತೆಯಲ್ಲಿರುವ ದರ್ಗಾ, ಅಸಾರ್ ಮೊಹಲ್ಲಾ ಸೇರಿದಂತೆ ಪ್ರಮುಖ ಮಸೀದಿಗಳನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಬೃಹತ್ ಹಸಿರು ಬ್ಯಾನರ್‌ಗಳನ್ನು ಎತ್ತರದ ಪ್ರದೇಶಗಳಲ್ಲಿ ಕಟ್ಟಲಾಗಿತ್ತು.

ಮುಂಜಾನೆಯಿಂದಲೇ ಈದ್ ಮಿಲಾದ್ ಸಂಭ್ರಮ ಮನೆಮಾಡಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಣೇಶಪೇಟೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಳೆ ಹುಬ್ಬಳ್ಳಿಯ ಅಸಾರ್ ಮೊಹಲ್ಲಾದತ್ತ ಹೊರಟ ಮೆರವಣಿಗೆಯಲ್ಲಿ ಸಾವಿರಾರು ಮುಸ್ಲಿಮರು  ಪಾಲ್ಗೊಂಡರು.

ಪೈಗಂಬರರ ಕುರಿತಾದ ಘೋಷಣೆ, ಕುರಾನ್ ಕುರಿತ ಹಾಡುಗಳು ಮೆರವಣಿಗೆ ಸಂದರ್ಭದಲ್ಲಿ ಅಳವಡಿಸಿದ್ದ ಬೃಹತ್ ಧ್ವನಿವರ್ಧಕಗಳಲ್ಲಿ ಕೇಳಿ ಬಂದವು. ಸಾಂಪ್ರದಾಯಿಕ ಬಿಳಿ ಬಟ್ಟೆ, ಪೈಜಾಮ, ಟೋಪಿ ಧರಿಸಿದ ಹಿರಿ-ಕಿರಿಯ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಗಣೇಶಪೇಟೆಯಿಂದ ಹೊರಟ ಬೃಹತ್ ಮೆರವಣಿಗೆ ಯು ಆಜಾದ್ ರಸ್ತೆ, ಶಾಹ್ ಬಜಾರ್, ದುರ್ಗದ ಬೈಲ್, ಮುಲ್ಲಾ ಓಣಿ, ಪಿ.ಬಿ.ರಸ್ತೆ, ಹಳೆ ಹುಬ್ಬಳ್ಳಿ ಮೂಲಕ ಅಸಾರ್ ಮೊಹಲ್ಲಾದ ದರ್ಗಾ ತಲುಪಿತು. ಈ ಮೆರವಣಿಗೆಯಲ್ಲಿ ವಕ್ಫ್ ಬೋರ್ಡ್‌ನ ಮಾಜಿ ಜಿಲ್ಲಾ ಅಧ್ಯಕ್ಷ  ಹಮೀದ್ ಖೈರಾತಿ, ಬಡೀ ಮಸಜೀದ್‌ನ ಮುತವಲ್ಲಿ, ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ, ಮಾಜಿ ಶಾಸಕ ಇಸ್ಮಾಯಿಲ್ ಕಾಲೇಬುಡ್ಡೆ, ವಜೀರ್‌ಸಾಬ್ ಕುಮಟಾಕರ, ಫಕ್ರುಸಾಬ್ ನೀಲಗಾರ, ಉಸ್ಮಾನ್ ಗನಿ, ಮೆಹಮೂದ್ ಹಾವೇರಿ ಇತರರು ಭಾಗವಹಿಸಿದ್ದರು.

ವಿದ್ಯಾನಗರದ ಮೂಲಕವೂ ಎರಡು ಮೆರವಣಿಗೆ ಗಳು ಅಸಾರ್ ಮೊಹಲ್ಲಾದತ್ತ ಸಾಗಿದವು. ಹಳೆ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿರುವ ಗೌಸಿಯಾ ಮದರಸಾದಿಂದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆಯು ವಿವಿಧ ಮಾರ್ಗಗಳ ಮೂಲಕ ಪ್ರಮುಖ ಪ್ರಾರ್ಥನೆ ನಡೆಯುವ ಅಸಾರ್ ಮೊಹಲ್ಲಾಕ್ಕೆ ತಲುಪಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂಡಸಗೇರಿ, ಮಹಮ್ಮದ್ ಪೈಗಂಬರರು ಮಾನವ ಕುಲಕ್ಕೆ ನೀಡಿದ ಸಂದೇಶವನ್ನು ಎಲ್ಲರೂ ಪಾಲಿಸಿ ಶಾಂತಿ, ನೆಮ್ಮದಿ, ಸಹಬಾಳ್ವೆಯ ಜೀವನ ನಡೆಸಬೇಕು. ಯುವಜನರು ಇಂಥ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಡವರು, ನಿರ್ಗತಿಕರನ್ನು ಆತ್ಮೀಯತೆಯಿಂದ ಕಾಣಬೇಕು ಎಂದರು.
ಈ ಮೆರವಣಿಗೆಯಲ್ಲಿ ಧರ್ಮಗುರು ಮೌಲಾನಾ ನಿಯಾಜ್ ಆಲಂ, ಮೌಲಾನಾ ಖ್ವಾಜಾ ವೈಶ, ಮೌಲಾ ನಾ ಶರೀಫ್ ರೆಹಮಾನ್, ಅನ್ವರ್ ಮುಧೋಳ, ನಜೀರ್ ಅಹ್ಮದ್ ಕೋಲಕಾರ, ಬಾಬಾಜಾನ್ ಮುಧೋಳ, ಶಫಿ ಮುದ್ದೇಬಿಹಾಳ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕೆಪಿಸಿಸಿ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಭಾಗವಹಿಸಿದ್ದರು.

ಪವಿತ್ರ ಕೇಶ ದರ್ಶನ: ಅಸಾರ್ ಮೊಹಲ್ಲಾದಲ್ಲಿರುವ ಮಹಮ್ಮದ್ ಪೈಗಂಬರರ ಪವಿತ್ರ ಕೇಶ ದರ್ಶನವನ್ನು ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರಲ್ಲದೇ ಇತರ ಧರ್ಮೀಯರೂ ಪಡೆದರು. ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರ, ಸದಾನಂದ ಡಂಗನವರ, ರವಿ ಹನುಮಸಾಗರ ಇತರರು ಭೇಟಿ ನೀಡಿದ್ದರು.

ನಗರದಲ್ಲಿ ಮಧ್ಯಾಹ್ನ ಆರಂಭವಾದ ಎಲ್ಲ ಮೆರವಣಿಗೆಗಳು ಒಂದೆಡೆ ಸೇರಿ ಬೃಹತ್ ಮೆರವಣಿಗೆ ಯಾಗಿ ಮಾರ್ಪಟ್ಟಿತು. ನಂತರ ಈ ಮೆರವಣಿಗೆ ಮಧ್ಯರಾತ್ರಿಯ ಹೊತ್ತಿಗೆ ಮುಗಿಯಿತು.

ಧಾರವಾಡದಲ್ಲೂ ಆಚರಣೆ
ಧಾರವಾಡ:
ಮಹಮ್ಮದ್ ಪೈಗಂಬರರ ಜನ್ಮ ದಿನೋ ತ್ಸವದ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಿದರು.

ನಗರದ ಬಹುತೇಕ ರಸ್ತೆಗಳ ಪ್ರಮುಖ ವೃತ್ತಗಳಲ್ಲಿ ಮುಸ್ಲಿಂ ಬಾಂಧವರು ಶರಬತ್ ವಿತರಿಸಿದರು. ಹಬ್ಬದ ಅಂಗವಾಗಿ ಮಧ್ಯಾಹ್ನ 2ಕ್ಕೆ ಅಂಜುಮನ್ ಸಂಸ್ಥೆಯ ಆವರಣದಿಂದ ಮೆರವಣಿಗೆ ಪ್ರಾರಂಭವಾಯಿತು.

ವಿವೇಕಾನಂದ ವೃತ್ತ, ಟಿಕಾರೆ ರಸ್ತೆ, ಭೂಸಪ್ಪ ಚೌಕ್, ಕಾಮನಕಟ್ಟಿ ವೃತ್ತ, ಗಾಂಧಿ ಚೌಕ್, ಕೆಸಿಸಿ ಬ್ಯಾಂಕ್ ವೃತ್ತ, ಸುಭಾಸ ರಸ್ತೆ, ಕಾಮತ್ ವೃತ್ತ, ರೀಗಲ್ ವೃತ್ತ, ವಿಜಯಾ ರಸ್ತೆ ಮೂಲಕ ಹಾಯ್ದು ಮರಳಿ ಅಂಜುಮನ್ ಸಂಸ್ಥೆಯ ಆವರಣಕ್ಕೆ ಆಗಮಿಸಿತು. ಶಾಂತಿಯುತವಾಗಿ ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಜುಮ್ಮಾ ಮಸೀದಿ ಗಲ್ಲಿಯಲ್ಲಿರುವ ಹಿದಾಯತ್- ಉಲ್- ಇಸ್ಲಾಂ ಅರಬ್ಬಿ ಮದರಸಾದಲ್ಲಿ ಈದ್ ಮಿಲಾದ್ ಆಚರಿಸಲಾಯಿತು. ಸುಮಾರು 200 ಮಕ್ಕಳು ಭಾಗವಹಿಸಿದ್ದರು. ಶಹರೆ ಖತೀಬ್, ಸಯ್ಯದ್ ಮೈನುದ್ದೀನ್ ನಾಲಬಂದ್, ಮಹಮ್ಮದ್‌ಹಾಶಮ್ ನವಲಗುಂದ, ಇಮಾಮಸಾಬ ಶೇಖ್, ಅಬ್ದುಲ್ ಮುನಾಫ್ ಸಯ್ಯದ್, ನಮಾಜಿ, ಮಕಾನದಾರ ಮತ್ತಿತರರು ಭಾಗವಹಿಸಿದ್ದರು.

ಭಾವೈಕ್ಯ ಮೆರೆದ ಹಿಂದೂ- ಮುಸ್ಲಿಮ್ ಬಾಂಧವರು
ನವಲಗುಂದ:
ಮಹಮ್ಮದ್ ಪೈಗಂಬರರ ತಾಳ್ಮೆಯ ಗುಣದಿಂದಾಗಿ ಅವರು ವಿಶ್ವದ ಗುರುಗಳಾಗಿದ್ದರು. ಸಾಕಷ್ಟು ಹಿಂಸೆ ಅನುಭವಿಸಿಯೂ ಇಸ್ಲಾಂ ಧರ್ಮ ಸ್ಥಾಪನೆ ಮಾಡಿದ ಮಹಾಪುರುಷರು ಎಂದು ಗವಿಮಠದ ಬಸವಲಿಂಗ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು.

ಭಾನುವಾರ ಇಲ್ಲಿಯ ಆಸಾರ್ ಶರೀಫ್ ದರ್ಗಾದಲ್ಲಿ ಮಹಮ್ಮದ್ ಪೈಗಂಬರರ ಜನ್ಮದಿನಾ ಚರಣೆಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಾವೈಕ್ಯತೆಗೆ ಹೆಸರಾಗಿರುವ ನವಲಗುಂದದಲ್ಲಿ ಹಿಂದೂ-ಮುಸ್ಲಿಂ ಸಮಾಜದ ಗುರು ಹಿರಿಯರು ಜೊತೆಗೂಡಿಕೊಂಡು ಪೈಗಂಬರರ ಜನ್ಮದಿನಾಚರಣೆ ಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ, ಏಕತೆಯ ಸಂದೇಶ ಸಾರಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ನಾವೆಲ್ಲರೂ ಸಹೋದರತ್ವ ಬೆಳೆಸಿಕೊಂಡು ಹೋಗಬೇಕು.

ಇಂತಹ ಸಮಾರಂಭಗಳು ಮೇಲಿಂದ ಮೇಲೆ ನಡೆದು ಸಹೋದರತ್ವ ಬೆಳೆಸಿಕೊಂಡು ರಾಜ್ಯಕ್ಕೆ ಮಾದರಿಯಾ ಗಬೇಕೆಂದು ಕರೆ ನೀಡಿದ ಅವರು ಹಬ್ಬದ ಶುಭಾಶಯ ಕೋರಿದರು.  ಧರ್ಮಗುರುಗಳಾದ ಎಸ್.ಎ.ಪೀರ್‌ಜಾದೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ.ಎನ್.ಗಡ್ಡಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ, ಬಿಜೆಪಿ ಧುರೀಣರಾದ ಡಾ.ಎಂ.ಬಿ. ಮುನೇನಕೊಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ವಿ.ಮಾಡಳ್ಳಿ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ರೆಹಮಾನ್ ಧಾರವಾಡ, ಪುರಸಭೆ ಅಧ್ಯಕ್ಷ ಜೀವನ್ ಪವಾರ, ಅನ್ವರ್‌ಸಾಬ ಜಮಖಾನ, ದಂತ ವೈದ್ಯ ಶಾದಾಬ್ ನಿಂಬಾಳ್ಕರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಹಮ್ಮದ್ ಪೈಗಂಬರರ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಖಲಂದರ್ ಜಿಗಳೂರ, ದಾವಲ್‌ಸಾಬ ಮಸೂತಿ, ಐ.ಡಿ.ಬಾಗವಾನ, ಬಾಷಾಸಾಬ ಹುಗ್ಗಿ, ರಾಜೇಸಾಬ ಅಣ್ಣಿಗೇರಿ, ಎಂ.ಎಂ.ಗದಗ, ಅಲ್ಲಾಬಕ್ಷ್ ಮಕಾನದಾರ ಮತ್ತು ಅಂಜುಮನ್ ಇಸ್ಲಾಂ ಸದಸ್ಯರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT