ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ದಂಡನಾಯಕ ಪ್ರಣವ್

Last Updated 25 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಣವ್ ಮುಖರ್ಜಿ ಅವರ ನಾಲ್ಕು ದಶಕಗಳ ಸಕ್ರಿಯ ರಾಜಕಾರಣಕ್ಕೆ ವೇದಿಕೆಯಾಗಿದ್ದ ಸಂಸತ್ ಭವನದ `ಸೆಂಟ್ರಲ್ ಹಾಲ್~, ಬುಧವಾರ ಅವರು ದೇಶದ ಪ್ರಥಮ ಪ್ರಜೆಯಾಗಿ, ಮೂರೂ ಸೇನಾ ಪಡೆಗಳ ಮಹಾ ದಂಡನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಮಹತ್ವದ ಸಂದರ್ಭಕ್ಕೂ ಸಾಕ್ಷಿಯಾಯಿತು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ಪ್ರಮಾಣ ವಚನ ಬೋಧಿಸಿದರು.

ಪಶ್ಚಿಮಬಂಗಾಳದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಅತ್ಯುನ್ನತ ಪದವಿ ಅಲಂಕರಿಸಿದ ಪ್ರಣವ್, ದೇವರ ಹೆಸರಿನಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ದೇಶದ ಸಂವಿಧಾನ ಮತ್ತು ಕಾನೂನು ರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳಿದರು.
 
ಬೆಳಿಗ್ಗೆ 11.28ಕ್ಕೆ ಪ್ರಮಾಣ ಸ್ವೀಕರಿಸಿದ ಮುಖರ್ಜಿ ಅಧಿಕಾರ ಹಸ್ತಾಂತರದ ಸಂಕೇತವಾಗಿ ಪ್ರತಿಭಾ ಪಾಟೀಲ್ ಅವರೊಂದಿಗೆ ಕುರ್ಚಿ ವಿನಿಮಯ ಮಾಡಿಕೊಳ್ಳುತ್ತಿದ್ದಂತೆ, 21 ಕುಶಾಲ ತೋಪುಗಳನ್ನು ಹಾರಿಸಿ ಗೌರವ ವಂದನೆ ನೀಡಲಾಯಿತು.

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಲೋಕಸಭೆ ಸ್ಪೀಕರ್ ಮೀರಾ ಕುಮಾರ್, ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ಅವರಿದ್ದರು. ಪ್ರಧಾನಿ ಮನಮೋಹನ್‌ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಂಗ್ ಸಂಪುಟದ ಸಚಿವರು, ಯುಪಿಎ ಮಿತ್ರ ಪಕ್ಷಗಳ ಮುಖಂಡರು, ವಿವಿಧ ರಾಜ್ಯಗಳ ರಾಜ್ಯಪಾಲರು ಮುಖ್ಯಮಂತ್ರಿಗಳು ಒಳಗೊಂಡು ಬಹುತೇಕ ಗಣ್ಯರು ಹಾಜರಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಣವ್ ಮುಖರ್ಜಿ, ಹಸಿವು- ಬಡತನ, ಜಾಗತಿಕ ಭಯೋತ್ಪಾದನೆ, ಭ್ರಷ್ಟಾಚಾರ, ಜಾತ್ಯತೀತತೆ ಮೊದಲಾದ ವಿಷಯ ಕುರಿತು ಪ್ರಸ್ತಾಪಿಸಿದರು. ಪರಮೋಚ್ಚ ಸಂವಿಧಾನದ ಪಾಲಕರಾಗಿ ಅದರ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ವಾಗ್ದಾನ ಮಾಡಿದರು.
 
`ಇದು ಬರೀ ಮಾತಲ್ಲ. ನಿಜವಾದ ಅರ್ಥದಲ್ಲಿ ಸಂವಿಧಾನ ರಕ್ಷಣೆ ಮತ್ತು ಅದರ ಸಮರ್ಥನೆಗೆ ಬದ್ಧ. ಸಂವಿಧಾನದ ರಕ್ಷಣೆ ಮತ್ತು ಸಮರ್ಥನೆ ರಾಷ್ಟ್ರಪತಿ ಭವನದ ಬಹು ದೊಡ್ಡ ಹೊಣೆ.  ದೇಶದ ಒಳಿತಿಗಾಗಿ ವೈಯಕ್ತಿಕ, ಪಕ್ಷಪಾತದ ನೆಲೆ ಮೀರಿ ಕರ್ತವ್ಯ ನಿರ್ವಹಿಸುವೆ~ ಎಂದು ಘೋಷಿಸಿದರು.

`ನಮ್ಮದು ಒಕ್ಕೂಟ ವ್ಯವಸ್ಥೆ. ನಮ್ಮ  ಸಂವಿಧಾನ ಹಲವು ಮಹತ್ವದ ಸಂಗತಿಗಳನ್ನು ಒಳಗೊಂಡಿದೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಪ್ರತಿಯೊಂದು ನಂಬಿಕೆ ಹಾಗೂ ಆಚರಣೆಗಳಿಗೆ ಸಮಾನ ಸ್ವಾತಂತ್ರ್ಯ, ಎಲ್ಲ ಪ್ರದೇಶ ಮತ್ತು ಭಾಷೆಗಳಿಗೆ ಸಮಾನ ಸ್ಥಾನಮಾನ, ಲಿಂಗ ಸಮಾನತೆ ಎಲ್ಲಕ್ಕಿಂತ ಮಿಗಿಲಾಗಿ ಆರ್ಥಿಕ ಸಮಾನತೆ ನೀಡಿದೆ. ಆದರೆ, ದೇಶದ ಅಭಿವೃದ್ಧಿ ಅರ್ಥಪೂರ್ಣ ಆಗಬೇಕಾದರೆ ಕಡು ಬಡವರಿಗೂ ನಾವು ಪ್ರಗತಿಯ ಭಾಗ ಎಂಬ ಭಾವನೆ ಬರಬೇಕು~ ಎಂದರು.

`ಬಂಗಾಳದ ಸಣ್ಣ ಹಳ್ಳಿಯೊಂದರ ಬುಡ್ಡಿ ದೀಪದ ಮನೆಯಿಂದ ದೆಹಲಿಯ ಭವ್ಯ ದೀಪಗುಚ್ಛಗಳ ಅಡಿ ಬರುವವರೆಗೆ ಬದುಕಿನಲ್ಲಿ ಮಹತ್ವದ ಬದಲಾವಣೆ ಕಂಡಿದ್ದೇನೆ, ಬಂಗಾಳದಲ್ಲಿ ಭೀಕರ ಬರಗಾಲ ಬಂದು ಲಕ್ಷಾಂತರ ಜನ ಮೃತಪಟ್ಟಾಗ ನಾನು ಸಣ್ಣ ಹುಡುಗ. ಆ ನೋವು ಇನ್ನೂ ನೆನಪಿನಲ್ಲಿ ಹಸಿರಾಗಿದೆ. ನಾವು ಕೃಷಿ, ಕೈಗಾರಿಕೆ ಹಾಗೂ ಸಾಮಾಜಿಕ ವಲಯದಲ್ಲಿ ಬೇಕಾದಷ್ಟು ಸಾಧಿಸಿದ್ದೇವೆ. ಮುಂದಿನ ದಶಕಗಳಲ್ಲಿ ಆಗಲಿರುವ ಸಾಧನೆಗೆ ಹೋಲಿಸಿದರೆ ಇದು ಏನೇನೂ ಅಲ್ಲ~ ಎಂದು ಅಭಿಪ್ರಾಯಪಟ್ಟರು.

`ಹಸಿವಿಗಿಂತ ದೊಡ್ಡ ಶಾಪ ಮತ್ತೊಂದಿಲ್ಲ. ಸಮಾಜದ ಅತ್ಯಂತ ಕೆಳಸ್ತರದ ಜನರನ್ನು ಮೇಲೆ ತರದ ಹೊರತು ಆಧುನಿಕ ಭಾರತದ ನಿಘಂಟಿನಿಂದ ಬಡತನ ಎಂಬ ಪದವನ್ನು ಅಳಿಸಲು ಸಾಧ್ಯವಿಲ್ಲ. ಮಹಾತ್ಮಗಾಂಧಿ, ನೆಹರೂ, ಸರ್ದಾರ್ ವಲ್ಲಭಾಯ್ ಪಟೇಲ್ ಹಾಗೂ ಅಂಬೇಡ್ಕರ್ ಅವರಂಥ ಮಹಾನ್ ವ್ಯಕ್ತಿಗಳು ಕಂಡಿದ್ದು ಇದೇ ಕನಸನ್ನು. ಆಗಿನ ಯುವ ಪೀಳಿಗೆಗೆ ಅವರು ಕೊಟ್ಟಿದ್ದು ಬಡತನದ ವಿರುದ್ಧ ಹೋರಾಡಿ ಎಂಬ ಕರೆಯನ್ನು~ ಎಂದು ಮುಖರ್ಜಿ ವಿವರಿಸಿದರು.

`ನಮ್ಮನ್ನು ಇಲ್ಲಿವರೆಗೆ ಕರೆದುಕೊಂಡು ಬಂದಿರುವ ಶಕ್ತಿ ಮುಂದಕ್ಕೂ ಕೊಂಡೊಯ್ಯಲಿದೆ. ಜನರ ಸಹಭಾಗಿತ್ವ ನಮ್ಮ ನಿಜವಾದ ಶಕ್ತಿ, ರೈತರು, ಕಾರ್ಮಿಕರು, ಸೈನಿಕರು, ನಾಗರಿಕರು ಮತ್ತು ಉದ್ಯಮಿಗಳು ದೇಶದ ಸಂಪತ್ತು ಸೃಷ್ಟಿಸಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಗುರುದ್ವಾರಗಳು ಸಾಮಾಜಿಕ ಸೌಹಾರ್ದ  ಸಾರುತ್ತಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT