ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಮಸ್ತಕಾಭಿಷೇಕ ನಾಳೆಯಿಂದ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ವೇಣೂರು (ಮಂಗಳೂರು): ವೇಣೂರಿನ ಅಜಿಲ ಅರಸರು 407 ವರ್ಷಗಳ ಹಿಂದೆ ಸ್ಥಾಪಿಸಿದ 35 ಅಡಿ ಎತ್ತರದ ಬಾಹುಬಲಿ ವಿಗ್ರಹದ ಮಹಾ ಮಸ್ತಕಾಭಿಷೇಕ ಸಮಾರಂಭ ಶನಿವಾರ ಆರಂಭವಾಗಲಿದೆ. ಫೆ. 5ರವರೆಗೆ ಪ್ರತಿ ಸಂಜೆ ಸೂರ್ಯಾಸ್ತ ಬಳಿಕ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ಫಲ್ಗುಣಿ ನದಿ ತೀರದ ಪುಟ್ಟ ಊರು ಪೂರ್ಣ ಸಜ್ಜಾಗಿದೆ.

ಮಹಾ ಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ವಿ.ಧನಂಜಯ ಕುಮಾರ್ ಅವರು ಸಿದ್ಧತೆಗಳ ಬಗ್ಗೆ ಗುರುವಾರ ಇಲ್ಲಿಗೆ ಭೇಟಿ ನೀಡಿದ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಬಾಹುಬಲಿ ವಿಗ್ರಹದ ಹಿಂಭಾಗ ಅದಾಗಲೇ ಅಟ್ಟಣಿಗೆ ನಿರ್ಮಾಣವಾಗಿದೆ. ಭೋಜನಕ್ಕೆ ಸಮೀಪದಲ್ಲೇ ವ್ಯವಸ್ಥೆ ಮಾಡಲಾಗಿದೆ. 9 ದಿನಗಳಲ್ಲಿ 3ರಿಂದ 4 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ರೂ. 1.5 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದರು.

ಸಂಜೆ ಮಸ್ತಕಾಭಿಷೇಕ: ಪ್ರತಿದಿನ ಬೆಳಿಗ್ಗೆ 3 ಗಂಟೆಯಿಂದಲೇ ಧಾರ್ಮಿಕ ವಿಧಿವಿಧಾನ ಆರಂಭ. ಇತರೆ ಬಾಹುಬಲಿ ಕ್ಷೇತ್ರಗಳಲ್ಲಿ ಹಗಲು ಹೊತ್ತಿನಲ್ಲೇ ಮಹಾ ಮಸ್ತಕಾಭಿಷೇಕ ನಡೆಯುತ್ತದೆ. ಆದರೆ ಉರಿ ಬಿಸಿಲ ವಾತಾವರಣ ಹಿನ್ನೆಲೆಯಲ್ಲಿ ಸಂಜೆ 7ರಿಂದ ರಾತ್ರಿ 10 ಗಂಟೆವರೆಗೆ ಅಭಿಷೇಕ ಸೇವೆ ನಡೆಯಲಿದೆ. ಸೂರ್ಯಾಸ್ತ ಬಳಿಕ ಯಾವುದೇ ಶುಭ ಕಾರ್ಯ ನಿಷಿದ್ಧ ಎಂದು ಶಾಸ್ತ್ರದಲ್ಲಿ ಹೇಳಿಲ್ಲವಾದ ಕಾರಣ ಈ ಸಂಪ್ರದಾಯವನ್ನು ಇಲ್ಲಿ ಅನುಸರಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ದೇಶದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. 28ರ ಸಂಜೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ರಾಜ್ಯದ ಹಲವು ಸಚಿವರು ಆಗಮಿಸುವರು. ರಾಜ್ಯಪಾಲರಿಗೂ ಆಹ್ವಾನ ನೀಡಲಾಗಿದ್ದು, ಅವರು ಬರುವುದು ಖಚಿತವಾಗಿಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಲಾಗಿದೆ ಎಂದರು.

ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಭರವಸೆಯಂತೆ ರೂ. 2 ಕೋಟಿ ಮಂಜೂರಾಗಿದೆ. ರಸ್ತೆ ದುರಸ್ತಿ, ಕಾಂಪೌಂಡ್ ಗೋಡೆ ಸಹಿತ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಮಹಾ ಮಸ್ತಕಾಭಿಷೇಕ ಸ್ಮರಣಾರ್ಥ ವೇಣೂರು ಸುತ್ತಲಿನ 10-12 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ರೂ 24 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ವೇಣೂರು ಸುತ್ತಲ ಶಾಲೆಗಳಿಗೆ 9 ದಿನ ರಜೆ ಘೊಷಿಸಲಾಗಿದೆ. ಅತಿಥಿ ಗಣ್ಯರಿಗೆ ಶಾಲಾ ಆವರಣದಲ್ಲಿ ವಸತಿ ವ್ಯವಸ್ಥೆ ಕಲ್ಲಿಸಲಾಗುವುದು. ಮೂಡುಬಿದಿರೆ, ಧರ್ಮಸ್ಥಳ, ಉಜಿರೆ, ಬೆಳ್ತಂಗಡಿಯಲ್ಲೂ ವಸತಿ ವ್ಯವಸ್ಥೆ ಮಾಡಲಾಗಿದೆ. ಮೊದಲ 4 ದಿನ 108 ಕಲಶ, ನಂತರದ ಮೂರು ದಿನ 216 ಕಲಶಗಳಿಂದ, 8ನೇ ದಿನ 504 ಕಲಶಗಳಿಂದ, ಕೊನೆ ದಿನ 1008 ಕಲಶಗಳಿಂದ ಅಭಿಷೇಕ ನಡೆಯಲಿದೆ ಎಂದು ವಿವರಿಸಿದರು.

ನಿತ್ಯ ಕಣ್ಣಿಗೆ ಹಬ್ಬ: ಬಾಹುಬಲಿಗೆ ಪ್ರತಿದಿನ 480 ಲೀಟರ್ ಹಾಲು, 5 ಕೆ.ಜಿ. ಶ್ರೀಗಂಧದ ಪುಡಿ, 30 ಕೆ.ಜಿ. ಅಕ್ಕಿಹುಡಿ, 250 ಎಂ.ಎಲ್. ಗಂಧದ ಎಣ್ಣೆ, ಅರಶಿನ, ಚಂದನ, ಕಬ್ಬಿನ ಹಾಲು, ಕಲ್ಕ ಚೂರ್ಣ ಸಹಿತ ಹಲವು ವಸ್ತುಗಳಿಂದ ಅಭಿಷೇಕ ನಡೆಸಲಾಗುವುದು. ಮೊದಲ 8 ದಿನ ಎಂಟು ಕುಟುಂಬಗಳ ವತಿಯಿಂದ, ಕೊನೆ ದಿನ ಸಾರ್ವಜನಿಕರ ವತಿಯಿಂದ ಅಭಿಷೇಕ ನಡೆಯಲಿದೆ ಎಂದು ಮಹಾ ಮಸ್ತಕಾಭಿಷೇಕದ ನೇತೃತ್ವ ವಹಿಸಿರುವ ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗಣಧರ ನಂದಿ ಮಹಾಮುನಿ, ಸುದೇಶಸಾಗರ ಮಹಾಮುನಿ, ಪಾವನಕೀರ್ತಿ ಮಹಾಮುನಿ, ಮಾತಾಜಿ ಸುಖದಮತಿ, ಮಾತಾಜಿ ಜಿನವಾಣಿ ಪಾಲ್ಗೊಳ್ಳಲಿದ್ದಾರೆ. ಹಂಪಾ ನಾಗರಾಜಯ್ಯ ಸಹಿತ ಹಲವರು ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಸಮಾಜದಲ್ಲಿ ಧರ್ಮ ಜಾಗೃತಿಯಾಗಬೇಕು ಎಂಬ ಸಂದೇಶದೊಂದಿಗೆ ಈ ಮಹಾ ಮಸ್ತಕಾಭಿಷೇಕ ನಡೆಯುತ್ತದೆ ಎಂದರು.

ವೇಣೂರು ಬಾಹುಬಲಿಯ ಸ್ಥಾಪಕ ವಂಶೀಯ ಅರಸರಾದ ಪದ್ಮಪ್ರಸಾದ್ ಅಜಿಲ, ಮಹಾಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಎರ್ಮೋಡಿ ಗುಣಪಾಲ ಜೈನ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT