ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಹೋಮಕ್ಕೆ ಜಿಲ್ಲಾಡಳಿತದ ಅನುಮತಿ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಮುಜರಾಯಿ ಇಲಾಖೆಗೆ ಸೇರಿದ ಇಲ್ಲಿನ ಚಾಮರಾಜೇಶ್ವರಸ್ವಾಮಿ ದೇಗುಲದಲ್ಲಿ ಎಣ್ಣೆ, ಬತ್ತಿಗೂ ಕಾಸಿಲ್ಲ. ದೇವಸ್ಥಾನ ಜೀರ್ಣೋದ್ಧಾರ ಕೂಡ ಕಂಡಿಲ್ಲ. ರಥ ಶಿಥಿಲಗೊಂಡು ದಶಕಗಳೇ ಉರುಳಿವೆ. ಈಗ ಅಷ್ಟಮಂಗಲ ಪ್ರಶ್ನೆಯ ಹೆಸರಿನಡಿ ಮಹಾಹೋಮಕ್ಕೆ ಸಿದ್ಧತೆ ನಡೆಯುತ್ತಿದ್ದು, ಇದಕ್ಕಾಗಿ ಬರೋಬ್ಬರಿ 20 ಲಕ್ಷ ರೂ ಖರ್ಚು ಮಾಡಲಾಗುತ್ತಿದೆ.

ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಬೇರುಬಿಟ್ಟಿದೆ. ಹೀಗಾಗಿ, ಮುಖ್ಯಮಂತ್ರಿ ಹಾಗೂ ಸಚಿವರು ಇಲ್ಲಿಗೆ ಭೇಟಿ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ 2010ರ ಜುಲೈ 13ರಂದು ದೇಗುಲದಲ್ಲಿ ಕೇರಳದ ಮೂವರು ಜ್ಯೋತಿಷಿಗಳಿಂದ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ನಡೆಸಲಾಗಿತ್ತು. ಆ ವೇಳೆ ಜ್ಯೋತಿಷಿಗಳು ನೀಡಿದ ಸಲಹೆಯಂತೆ ಈಗ ಹೋಮ ಹವನ  ನಡೆಸಲಾಗುತ್ತಿದೆ.

ದೇವಸ್ಥಾನದ ಮುಂಭಾಗ ಮಣ್ಣಿನ್ಲ್ಲಲಿ ಹೂತುಹೋಗಿರುವ ಪುಷ್ಕರಿಣಿಯ ಉತ್ಖನನ ನಡೆಸಬೇಕು. ಹೊಸ ತೇರು ನಿರ್ಮಿಸಬೇಕು. 20 ವರ್ಷಗಳ ಹಿಂದೆ ದೇವಸ್ಥಾನದ ಅಕ್ಕಪಕ್ಕದಲ್ಲಿ ತಂಗಿದ್ದ ಮೂವರು ಅಲೆಮಾರಿ ಕುಟುಂಬದ ಸದಸ್ಯರು ಮೃತಪಟ್ಟಿದ್ದಾರೆ. ಅದಕ್ಕಾಗಿ ಹೋಮಹವನ ನಡೆಸಬೇಕೆಂಬುದು ಅಷ್ಟಮಂಗಲ ಪ್ರಶ್ನೆ ನಡೆಸಿದ ಜ್ಯೋತಿಷಿಗಳು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು ಎನ್ನಲಾಗಿದೆ.

`ಈ ಹಿನ್ನೆಲೆಯಲ್ಲಿ ಪ್ರಭಾವಿ ಸಚಿವರೊಬ್ಬರ ಉಸ್ತುವಾರಿಯಲ್ಲಿ ಮಹಾ ಹೋಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ 20 ಲಕ್ಷ ರೂ ಖರ್ಚು ಮಾಡಲಾಗುತ್ತಿದೆ. ಈ ಕಾರ್ಯಕ್ರಮ ನಡೆಸುವ ಬಗ್ಗೆ ಚಾಮರಾಜೇಶ್ವರ ಪೂಜಾ ಸಮಿತಿಯಿಂದ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ~ ಎಂದು ಅರ್ಚಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ತ್ರಿಕಾಲ ಅರ್ಚನೆ, ಮಹಾಸಂಕಲ್ಪ, ಶಿವಪುರಾಣ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ, ಮಹಾಸುದರ್ಶನ ಯಾಗ, ಅಘೋರ ಮಂತ್ರಹವನ, ವನದುರ್ಗ ಮಂತ್ರ ಹವನ, ಮೃತ್ಯುಂಜಯ ಯಾಗ, ಗಣಪತಿ ಯಾಗ ನಡೆಸಲಾಗುವುದು. ಸೆ. 4ರಿಂದ 7ರವರೆಗೆ ಮಹಾಹೋಮ ನಡೆಸಲು ಜಿಲ್ಲಾಡಳಿತ ಕೂಡ ಅನುಮತಿ ನೀಡಿದೆ~ ಎಂದರು.

`ಪ್ರಸ್ತುತ ಮುಖ್ಯಮಂತ್ರಿ ಅವರನ್ನು ಜಿಲ್ಲಾ ಕೇಂದ್ರಕ್ಕೆ ಕರೆತರುವ ಹಿನ್ನೆಲೆಯಲ್ಲಿ ಮಹಾಹೋಮ ನಡೆಸಲಾಗುತ್ತಿದೆ. ಕಳೆದ ವರ್ಷ ಅಷ್ಟಮಂಗಲ ಪ್ರಶ್ನೆ ನಡೆಸಿದ ಕೇರಳದ ಜ್ಯೋತಿಷಿಗಳ ಸೂಚನೆಯಂತೆ ಹೋಮಹವನ ಹಮ್ಮಿಕೊಳ್ಳಲಾಗಿದೆ~ ಎಂದು ವಿವರಿಸಿದರು.

ಪುಷ್ಕರಿಣಿ ಉತ್ಖನನ:  ದೇವಸ್ಥಾನದ ಮುಂಭಾಗ ಮಣ್ಣಿನಲ್ಲಿ ಹೋತುಹೋಗಿರುವ ಪುಷ್ಕರಿಣಿಯ ಉತ್ಖನನಕ್ಕೆ ಜಿಲ್ಲಾಡಳಿತ ಮುಂದಾಗಿತ್ತು. ಕಳೆದ ಜೂನ್ ತಿಂಗಳ ಆರಂಭದಲ್ಲಿ ಉತ್ಖನನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಇದಕ್ಕಾಗಿ 30 ಲಕ್ಷ ರೂ ವೆಚ್ಚ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಉತ್ಖನನ ನಡೆಸಿದರೆ ಉದ್ಯಾನಕ್ಕೆ ಧಕ್ಕೆಯಾಗಲಿದೆ. ಜತೆಗೆ, ಮೌಢ್ಯಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಪ್ರಗತಿಪರರು ಮತ್ತು ಪರಿಸರವಾದಿಗಳು ಹೋರಾಟ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ಖನನ ಪ್ರಕ್ರಿಯೆ ಆರಂಭಿಸಲು ಜಿಲ್ಲಾಡಳಿತ ಹಿಂದೇಟು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT