ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮ ಗಾಂಧಿ ರಸ್ತೆ ಅಂದ ಇಮ್ಮಡಿಗೊಳಿಸುವ ಯತ್ನ...

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮೆಟ್ರೊ~ ವೀಕ್ಷಣೆಗೆ ಬರುವವರ ಕಣ್ಮನ ಸೆಳೆಯಲು ಎಂ.ಜಿ. ರಸ್ತೆಯ ಗಾಂಧಿ ಉದ್ಯಾನದ ತುದಿಯಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ ಪಾದಚಾರಿ ಕಿರು ಉದ್ಯಾನವು ರೂಪುಗೊಳ್ಳುತ್ತಿದ್ದು, ಇದರಿಂದ ಎಂ.ಜಿ. ರಸ್ತೆಯ ಅಂದ ಇಮ್ಮಡಿಯಾಗಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗವು ಗ್ರೀನ್ ಸಿಟಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪಾದಚಾರಿ ಉದ್ಯಾನ ನಿರ್ಮಾಣ ಕೆಲಸ ಕೈಗೆತ್ತಿಕೊಂಡಿದೆ. ರಸ್ತೆಯನ್ನು ಶುಚಿಯಾಗಿಡುವ ಮತ್ತು ಸುಂದರಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಕುಂಬ್ಳೆ ವೃತ್ತದ ಪಾದಚಾರಿ ಮಾರ್ಗದಲ್ಲಿ ಉದ್ಯಾನದ ಕಾಮಗಾರಿಯು ಈಗಾಗಲೇ ಆರಂಭಗೊಂಡಿದೆ. ಉದ್ಯಾನದ ಆದಿ ಅಂತ್ಯದಲ್ಲಿ ಎರಡು ಕಲ್ಲಿನ ಕಮಾನುಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಬಿಳಿ ಮತ್ತು ಕೆಂಪು ಮಿಶ್ರಿತ ಕಲ್ಲು ಹಾಸುಗಳನ್ನು ಬಳಸಲಾಗಿದೆ. ಇದರೊಂದಿಗೆ ಕುಳಿತುಕೊಳ್ಳಲು ಆರಾಮದಾಯಕ ಕಲ್ಲು ಬೆಂಚುಗಳನ್ನು ನಿರ್ಮಿಸಲಾಗಿದೆ. ಪುಟ್ಟ ಜಲಪಾತವು ಜನರನ್ನು ಆಕರ್ಷಿಸಲು ಸಿದ್ದಗೊಳ್ಳುತ್ತಿದೆ. ಉದ್ಯಾನದ ಮೆರಗು ಹೆಚ್ಚಿಸಲು ವರ್ಣರಂಜಿತ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

ಮಾರ್ಗದಲ್ಲೊಂದು ಉದ್ಯಾನ:  ಈ ಉದ್ಯಾನದಲ್ಲಿ ಅಲಂಕಾರಿಕ ಸಸ್ಯಗಳು ಮಾತ್ರವಲ್ಲದೇ ಔಷಧೀಯ ಸಸ್ಯಗಳನ್ನು ನೆಡಲಾಗುತ್ತಿದೆ. ಕಣಗಲೆ, ನಂದಬಟ್ಟಲು, ಕೇದಾರ, ಚಂಡೆ ಹೂವು, ತೇರು ಹೂವು ಮತ್ತು ತುಳಸಿ, ದಾಲ್‌ಫೀನಿಯಾ, ಗೆಜೆನಿಯಾ ಸೇರಿದಂತೆ ಒಟ್ಟು 25 ಜಾತೀಯ ಸಸ್ಯಗಳನ್ನು ನೆಡಲಾಗುತ್ತಿದೆ. ರಸ್ತೆಯ ಸೌಂದರ್ಯವರ್ಧನೆ ಜತೆಯಲ್ಲಿ ಆರೋಗ್ಯಕರ ಸಸ್ಯಗಳಿಗೂ ಆದ್ಯತೆ ನೀಡಲಾಗಿದೆ. 

`ವಿವಿಧ ಜಾತೀಯ ಸಸ್ಯಗಳನ್ನು ನೆಡುವ ಉದ್ದೇಶದಿಂದ 20 ಟಿಪ್ಪರ್ ಕೆಮ್ಮಣ್ಣನ್ನು ಬಳಸಲಾಗಿದೆ. ಕಮಾನುಗಳಿಗೆ ಕಣಗಾಲ ಹೂವಿನ ಬಳ್ಳಿಯನ್ನು ತೂಗು ಬಿಡಲಾಗುತ್ತದೆ. ಇದು ಉದ್ಯಾನದ ಅಂದವನ್ನು ಇನ್ನಷ್ಟು ಹೆಚ್ಚಿಸಲಿದೆ~ ಎಂದು ಎಂಫಸಿಸ್ ಲ್ಯಾಂಡ್ ಸ್ಕೇಪ್ ಸಂಸ್ಥೆಯ ನಿರ್ವಾಹಕ ಆರ್.ಕೆ.ರವಿ `ಪ್ರಜಾವಾಣಿ~ಗೆ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಪಾಲಿಕೆ ಪೂರ್ವ ವಿಭಾಗದ ಜಂಟಿ ಆಯುಕ್ತ ಶಿವಶಂಕರ್, `ನಗರದ ಬಹುತೇಕ ಸ್ಥಳಗಳಲ್ಲಿರುವ ಕಿರು ಉದ್ಯಾನಗಳು ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗಿವೆ. ಪಾಲಿಕೆಯು ಉದ್ಯಾನ ನಿರ್ವಹಣೆಗೆ ಆಸಕ್ತ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿದೆ. `ಗ್ರೀನ್ ಸಿಟಿ~ ಸಂಸ್ಥೆಯು ಎಂ.ಜಿ. ರಸ್ತೆಯಲ್ಲಿ ಪಾದಚಾರಿ ಕಿರು ಉದ್ಯಾನ ನಿರ್ಮಿಸಿ, ನಿರ್ವಹಣೆ ಮಾಡುವ ಜವಾಬ್ದಾರಿ ನಿರ್ವಹಿಸುವುದಾಗಿ ಪಾಲಿಕೆಯನ್ನು ಕೋರಿತ್ತು. ಅದಕ್ಕೆ ಸ್ಪಂದಿಸಿ ಅನುಮತಿ ನೀಡಲಾಗಿದೆ. ಖಾಸಗಿ ಕಂಪೆನಿಗಳು ಇಂತಹ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾದರೆ ಪಾಲಿಕೆ ಅದನ್ನು ಸ್ವಾಗತಿಸುತ್ತದೆ~ ಎಂದು ಹೇಳಿದರು.

ನಿರ್ವಹಣೆ ಹೇಗೆ?: `ಗ್ರೀನ್ ಸಿಟಿ~ ಸಂಸ್ಥೆಯು ಕಿರು ಉದ್ಯಾನ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ. ಸಸ್ಯಗಳನ್ನು ನೆಡುವ ಮತ್ತು ಅದರ ಪೋಷಣೆಯ ಜವಾಬ್ದಾರಿಯನ್ನು ಎಂಫಸಿಸ್ ಲ್ಯಾಂಡ್ ಸ್ಕೇಪ್ ಸಂಸ್ಥೆಗೆ ವಹಿಸಿಕೊಟ್ಟಿದೆ. ಸಂಸ್ಥೆಯು ಕಿರು ಉದ್ಯಾನದ ಸಸ್ಯಗಳ ಪೋಷಣೆ ಕಾರ್ಯವನ್ನು ಒಂದು ವರ್ಷ ಅವಧಿಯವರೆಗೆ ನಿರ್ವಹಿಸಲಿದೆ.

`ಗ್ರೀನ್ ಸಿಟಿ~ ಸಂಸ್ಥೆಯ ವಾಸ್ತುಶಿಲ್ಪ ತಜ್ಞ ನೀಲಕಂಠ, `ಮೆಟ್ರೊ ನಿರ್ಮಾಣಗೊಳ್ಳುವುದಕ್ಕೆ ಮುಂಚಿತವಾಗಿದ್ದ ಎಂ.ಜಿ. ರಸ್ತೆಯ ಪಾದಚಾರಿ ಮಾರ್ಗದ ಸಸ್ಯ ವೈಭವವನ್ನು ಮತ್ತೆ ನೀಡುವ ಉದ್ದೇಶದಿಂದ ಈ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ. ನಗರದ ವಿವಿಧ ಭಾಗದಲ್ಲಿರುವ ಉದ್ಯಾನಗಳು ಸಮರ್ಪಕ ನಿರ್ವಹಣೆಯಿಲ್ಲದೇ ಸೊರಗುತ್ತಿರುವುದರಿಂದ ಆಸಕ್ತ ಕಂಪೆನಿಗಳು ಉದ್ಯಾನ ನಿರ್ವಹಿಸಬಹುದು ಎಂದು ಬಿಬಿಎಂಪಿಯ ತೋಟಗಾರಿಕಾ ವಿಭಾಗದ ಅಧಿಕಾರಿಗಳು ಸೂಚಿಸಿದ್ದರು. ಇದನ್ನು ಪರಿಗಣಿಸಿ ಈ ಭಾಗದಲ್ಲಿ ಉದ್ಯಾನ ನಿರ್ಮಿಸಲಾಗುತ್ತಿದೆ~ ಎಂದು ಹೇಳಿದರು.

 `ಉದ್ಯಾನ ನಿರ್ಮಿಸಿದ ನಂತರ ಅದರ ನಿರ್ವಹಣೆಗೆ ಸಂಸ್ಥೆ ಒತ್ತು ನೀಡಲಿದೆ. ಇದಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಆಕರ್ಷಕ ಉದ್ಯಾನವು ಕೆಲವೇ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ~ ಎಂದರು.

`ನಗರದ ಹೆಚ್ಚಿನ ಪಾದಚಾರಿ ಮಾರ್ಗಗಳಲ್ಲಿ ಶುಚಿತ್ವವಿಲ್ಲ. ಖಾಸಗಿ ಸಂಸ್ಥೆಗಳು ಪಾದಚಾರಿ ಮಾರ್ಗವನ್ನು ಸುಂದರಗೊಳಿಸುವ ಯೋಜನೆಗೆ ಕೈ ಹಾಕಿರುವುದು ನಿಜಕ್ಕೂ ಒಳ್ಳೆಯ ಸಂಗತಿ. ಇಂತಹ ಉದ್ಯಾನವು ನಗರದ ಇತರೆ ಭಾಗಗಳಲ್ಲಿಯೂ ನಿರ್ಮಾಣಗೊಳ್ಳಬೇಕು~ ಎಂದು ಪಾದಚಾರಿ ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT