ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ.ಶೇ 80ರಷ್ಟು ಹಣ ವೆಚ್ಚ

Last Updated 20 ಫೆಬ್ರುವರಿ 2011, 10:40 IST
ಅಕ್ಷರ ಗಾತ್ರ

ಶಿವಮೊಗ್ಗ: ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಕ್ರಿಯಾ ಯೋಜನೆಯ ಶೇ. 80ರಷ್ಟು ಹಣ ವೆಚ್ಚ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಹನುಮನರಸಯ್ಯ ತಿಳಿಸಿದರು.ಶಿವಮೊಗ್ಗ ತಾಲ್ಲೂಕು ಹಾಗೂ ಹೊಸನಗರ ತಾಲ್ಲೂಕಿನ ವಿವಿಧೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪರಿಶೀಲನೆ ನಂತರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

2010-11ನೇ ಸಾಲಿಗೆ ` 121 ಕೋಟಿಗೆ ಕ್ರಿಯಾ ಯೋಜನೆ ತಯಾರಿಸಿದ್ದು, ` 73.95 ಕೋಟಿ  ಅನುದಾನ ಲಭಿಸಿದೆ. ಇದರಲ್ಲಿ ಈಗಾಗಲೇ ` 53 ಕೋಟಿ  ವೆಚ್ಚವಾಗಿದ್ದು, 1,240 ಕಾಮಗಾರಿ ಪೂರ್ಣಗೊಂಡಿವೆ. ಉಳಿದಂತೆ 8,453 ಕಾಮಗಾರಿಗಳು ಪ್ರಗತಿಯಲ್ಲಿವೆ. ಮಾರ್ಚ್ ಒಳಗೆ ಕ್ರಿಯಾ ಯೋಜನೆಯಲ್ಲಿ ಶೇ. 80ರಷ್ಟು ಹಣ ವೆಚ್ಚ ಮಾಡಲಾಗುವುದು ಎಂದರು.
ಈ ಯೋಜನೆಯಡಿ ಜಿಲ್ಲೆಯಲ್ಲಿ 1,74,614 ಕುಟುಂಬಗಳು ನೋಂದಣಿಯಾಗಿದ್ದು, ಇದರಲ್ಲಿ 34,403 ಪರಿಶಿಷ್ಟ ಜಾತಿ, 7,823 ಪರಿಶಿಷ್ಟ ಪಂಗಡದ, 1,31,388 ಇತರೆ ವರ್ಗಗಳ ಕುಟುಂಬಗಳು ನೋಂದಣಿಯಾಗಿದ್ದು, ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ಜಿಲ್ಲೆಯಲ್ಲಿ 2008-09ನೇ ಸಾಲಿನಿಂದ ಇದುವರೆಗೂ ಈ ಯೋಜನೆಯಡಿ ` 158 ಕೋಟಿ  ವೆಚ್ಚವಾಗಿದೆ ಎಂದು ವಿವರಿಸಿದರು.

ಈ ಯೋಜನೆಯಡಿ ಚೆಕ್‌ಡ್ಯಾಂ ನಿರ್ಮಾಣ, ಕಾಲುಸೇತುವೆ ನಿರ್ಮಾಣ, ಕೆರೆ ಹೂಳೆತ್ತುವುದು, ರೈತರ ಜಮೀನು ಸಮತಟ್ಟು ಮಾಡುವುದು, ತೋಟಗಾರಿಕೆ, ಗ್ರಾಮಗಳಲ್ಲಿ ರಸ್ತೆ, ಚರಂಡಿ, ಶಾಲಾ ಕಾಂಪೌಂಡ್ ನಿರ್ಮಾಣ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ 1.01 ಕೋಟಿ ಸಸಿ ನೆಡಲಾಗಿದೆ. ಅರಣ್ಯಾಭಿವೃದ್ಧಿಗೆ ಮತ್ತು ಪರಿಸರ ಸಂರಕ್ಷಣೆಗೆ ಹೊಸ ಚೈತನ್ಯ ತುಂಬಿದೆ. ಇದಕ್ಕಾಗಿ ` 17.10 ಕೋಟಿ  ವೆಚ್ಚ ಮಾಡಲಾಗಿದೆ ಎಂದರು.

ಶಾಲಾ ಕಾಲೇಜುಗಳ ಆವರಣ ಸಮತಟ್ಟು ಕಾಂಪೌಂಡ್ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದರಲ್ಲಿ 119 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.` 1ಕೋಟಿ ವೆಚ್ಚ ಮಾಡಲಾಗಿದೆ. ಇದಲ್ಲದೇ, ರಸ್ತೆ ದುರಸ್ತಿ, ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ 54 ಪೂರ್ಣಗೊಂಡಿದ್ದು, ` 21.79 ಲಕ್ಷ ವೆಚ್ಚ ಮಾಡಲಾಗಿದ್ದು, 580 ಕಾಮಗಾರಿಗಳು ಪ್ರಗತಿಯಲ್ಲಿವೆ. ಅತಿವೃಷ್ಟಿ ಪರಿಹಾರದ ನಿಮಿತ್ತ ಕೈಗೊಳ್ಳಲಾದ ಹಳ್ಳಿಗಳ ದುರಸ್ತಿ, ತಡೆಗೋಡೆ ನಿರ್ಮಾಣ, ಮಳೆ ನೀರು ತಡೆ, ಕಾಲುವೆಗಳ ನಿರ್ಮಾಣ ಇತ್ಯಾದಿಗಾಗಿ ` 56.12 ಲಕ್ಷ  ವೆಚ್ಚ ಮಾಡಿದೆ.

ಗ್ರಾಮ ಪಂಚಾಯ್ತಿ ಕಟ್ಟಡ ಅವಶ್ಯ ಇರುವ ಕಡೆ ಕಟ್ಟಡ ನಿರ್ಮಾಣಕ್ಕಾಗಿ ರಾಜೀವ್‌ಗಾಂಧಿ ಸೇವಾ ಕೇಂದ್ರ ನಿರ್ಮಾಣ ಯೋಜನೆಯಡಿ ಕಟ್ಟಡಕ್ಕೆ ತಲಾ ` 10 ಲಕ್ಷ ನೀಡಲಾಗುತ್ತಿದ್ದು, 173 ಗ್ರಾಮ ಪಂಚಾಯ್ತಿ ಅನುಮೋದನೆ ಪಡೆದಿವೆ. 61 ಗ್ರಾಮ ಪಂಚಾಯ್ತಿ ಕಟ್ಟಡ ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೋಭಾ ಕೃಷ್ಣಮೂರ್ತಿ, ಜಿ.ಪಂ. ಉಪ ಕಾರ್ಯದರ್ಶಿ (ಆಡಳಿತ) ರಾಜ್‌ಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಶ್ರೀಕಂಠ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಪಿ. ಬ್ಯಾನರ್ಜಿ, ಸಹ ಕಾರ್ಯದರ್ಶಿಗಳಾದ ಗಣಪತಿ, ಸುಬ್ರಮಣ್ಯ, ತಾಲ್ಲೂಕು ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಸ್. ಮಣಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT